Friday, 16th November 2018  

Vijayavani

Breaking News

ಅಳತೆಗೆ ಸಿಗದ ಗಣಿನಾಡಿನ ರಾಜಕೀಯ ಲೆಕ್ಕಾಚಾರ

Wednesday, 31.01.2018, 3:05 AM       No Comments

ಬಳ್ಳಾರಿ: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ರಾಜಕೀಯ ಪರಿವರ್ತನೆಗೆ ಕಾರಣವಾಗಿದ್ದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ಅದಿರು ಗಣಿಗಾರಿಕೆ. 1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಎದುರಾಳಿಯಾಗಿ ಸ್ಪರ್ಧಿಸಿದ್ದ ಸುಷ್ಮಾ ಸ್ವರಾಜ್ ಸೋತರೂ ಗಣಿನಾಡಿನಲ್ಲಿ ಬಿಜೆಪಿ ಬೀಜವನ್ನು ಬಿತ್ತಿದರು. ಬಳಿಕ ಗಣಿಗಾರಿಕೆಯ ಪಾಲನೆಯಲ್ಲಿ ಕಮಲ ಅರಳಿತು. ಅಕ್ರಮ ಅದಿರು ಗಣಿಗಾರಿಕೆ ಪ್ರಕರಣಗಳಿಂದ ಕಮರಿದ್ದ ಕಮಲ ಮತ್ತೆ ಅರಳುತ್ತಿದೆ. ಇನ್ನೊಂದೆಡೆ ಬಿಜೆಪಿಗೆ ಪ್ರತಿಯಾಗಿ ಕೈಪಡೆ ಕಾರ್ಯತಂತ್ರ ರೂಪಿಸುತ್ತಿದೆ.

 ಜಿಲ್ಲೆಯಲ್ಲಿ 2004ರಿಂದ ಗಣಿಗಾರಿಕೆಯ ನೆರಳಲ್ಲೇ ಚುನಾವಣೆಗಳು ನಡೆಯುತ್ತಿವೆ. ಇಲ್ಲಿ ‘ಗಣಿಗಾರಿಕೆ’ ಬಿಜೆಪಿಯನ್ನು ಎಷ್ಟು ಉತ್ತುಂಗಕ್ಕೆ ಕೊಂಡೊಯ್ದಿತ್ತೋ ಅಷ್ಟೇ ಪಾತಾಳಕ್ಕೂ ತಳ್ಳಿತ್ತು. ಇದರ ಲಾಭ ಪಡೆದ ಕಾಂಗ್ರೆಸ್ ಚೇತರಿಕೆ ಕಂಡಿತ್ತು.

ಕಳೆದ ಎರಡು ಚುನಾವಣೆಯಲ್ಲಿ ಏರಿಳಿತ ಕಂಡಿದ್ದ ಬಿಜೆಪಿ ಮತ್ತೆ ಪ್ರಾಬಲ್ಯ ಸ್ಥಾಪಿಸಿದೆ. ಇದನ್ನು ಕುಗ್ಗಿಸಲು ಕಾಂಗ್ರೆಸ್ ಬಿಜೆಪಿ ಕೋಟೆಗೆ ‘ಗಣಿಬಾಂಬ್’ ಇಡಲು ಹೊರಟಿದೆ. ಇದಕ್ಕೆ ಪ್ರತಿತಂತ್ರ ಹೆಣೆಯಲು ಬಿಜೆಪಿ ಸಜ್ಜಾಗುತ್ತಿದ್ದರೂ ಆಂತರಿಕ ಬೆಳವಣಿಗೆಗಳು ಸ್ವಲ್ಪಮಟ್ಟಿಗೆ ತೊಡಕಾಗುವ ಸಾಧ್ಯತೆಗಳಿವೆ. ಜೆಡಿಎಸ್ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದ್ದು, ಕೆಲ ಕಡೆ ಈ ಎರಡೂ ಪಕ್ಷಗಳ ಅತೃಪ್ತರತ್ತ ಕಣ್ಣಿಟ್ಟಿದೆ.

ಎಸ್​ಐಟಿ, ಸಿಬಿಐ ಪ್ರಕರಣಗಳಲ್ಲಿ ಸಿಲುಕಿ ಪರದಾಡುತ್ತಿರುವ ಆನಂದ್​ಸಿಂಗ್, ಬಿ.ನಾಗೇಂದ್ರರನ್ನು ಕಾಂಗ್ರೆಸ್ಸಿಗೆ ಸೆಳೆಯುವ ಪ್ರಯತ್ನಗಳು ನಡೆದಿವೆ. ಇದಕ್ಕೆ ಇಂಬು ನೀಡುವಂತೆ ಆನಂದ್​ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಒಂಭತ್ತು ಕ್ಷೇತ್ರಗಳ ಪೈಕಿ ಬಳ್ಳಾರಿ ಹಾಗೂ ಹೊಸಪೇಟೆ ಸಾಮಾನ್ಯ ಕ್ಷೇತ್ರಗಳಾಗಿವೆ. ಹಗರಿಬೊಮ್ಮನಹಳ್ಳಿ ಹಾಗೂ ಹೂವಿನಹಡಗಲಿ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರಗಳಾದರೆ, ಇನ್ನುಳಿದ ಐದು ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ.

ಬಲಾಢ್ಯರ ಬಲಾಬಲಕ್ಕೆ ಬಳ್ಳಾರಿ ಸಜ್ಜು

ಬಳ್ಳಾರಿ ನಗರ ಕ್ಷೇತ್ರದ ಮತದಾರರು ಬಲಾಢ್ಯರನ್ನೇ ಆಯ್ಕೆ ಮಾಡುತ್ತಾ ಬಂದಿದ್ದಾರೆ. ಶಾಸಕ ಅನಿಲ್ ಲಾಡ್ ಕೂಡ ಅದಕ್ಕೆ ಹೊರತಾಗಿಲ್ಲ. ಸಚಿವರಾಗಬೇಕೆಂಬ ಅನಿಲ್ ಲಾಡ್ ಆಸೆ ಈಡೇರಿರಲಿಲ್ಲ. ಇದೀಗ ಲಾಡ್​ಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ. ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ ತೀವ್ರ ಪೈಪೋಟಿ ಒಡ್ಡಿದ್ದಾರೆ. ಎಂಎಲ್ಸಿ ಕೆ.ಸಿ.ಕೊಂಡಯ್ಯ, ಕೆಪಿಸಿಸಿ ಸದಸ್ಯ ಕಲ್ಲುಕಂಭ ಪಂಪಾಪತಿ, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು ಸಹ ಟಿಕೆಟ್ ರೇಸ್​ನಲ್ಲಿದ್ದಾರೆ. ಮೂರು ಪಕ್ಷಗಳಿಂದ ಆಫರ್ ಇದೆ ಎಂದು ಹೇಳುವ ಮೂಲಕ ಶಾಸಕ ಅನಿಲ್ ಲಾಡ್, ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಪಕ್ಷಾಂತರದ ಮುನ್ಸೂಚನೆ ನೀಡಿದ್ದಾರೆ. ಕಾಂಗ್ರೆಸ್​ನಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಆಂತರಿಕ ಅಸಮಾಧಾನಗಳು ಕಾಣಿಸಿಕೊಳ್ಳಲಿವೆ. ಬಿಜೆಪಿಯಿಂದ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಸ್ಪರ್ಧೆ ಖಚಿತ. ಜೆಡಿಎಸ್, ಕಾಂಗ್ರೆಸ್ ಮುಖಂಡ ಮೊಹಮ್ಮದ್ ಇಕ್ಬಾಲ್​ರನ್ನು ಸೆಳೆಯಲು ಮುಂದಾಗಿದೆ.


 ಕೂಡ್ಲಿಗಿಯಲ್ಲಿ ನಾಗೇಂದ್ರನೇ ಕೇಂದ್ರಬಿಂದು

ನಾಯಕನಾಗಬೇಕೆಂಬ ಆಸೆಗಳನ್ನು ಕಟ್ಟಿಕೊಂಡಿರುವ ಕೂಡ್ಲಿಗಿಯ ಪಕ್ಷೇತರ ಶಾಸಕ ಬಿ.ನಾಗೇಂದ್ರ ರಾಜಕೀಯವಾಗಿ ಗೊಂದಲ ದಲ್ಲಿದ್ದಾರೆ. ತಲಾ ಒಂದು ಬಾರಿ ಬಿಜೆಪಿ ಹಾಗೂ ಪಕ್ಷೇತರರಾಗಿ ಆಯ್ಕೆಯಾಗಿರುವ ನಾಗೇಂದ್ರ ಇದೀಗ ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರೂ ಬಿಜೆಪಿ ಜತೆ ಗುರುತಿಸಿಕೊಂಡಿದ್ದ ನಾಗೇಂದ್ರ, ಬಿಜೆಪಿಯಲ್ಲಿ ಭವಿಷ್ಯವಿಲ್ಲ ಎಂಬ ಕಾರಣಕ್ಕೆ ಪರ್ಯಾಯ ರಾಜಕೀಯದ ಚಿಂತನೆಯಲ್ಲಿದ್ದಾರೆ. ಬಿಜೆಪಿಯಿಂದ ಮಾಜಿ ಸಂಸದೆ ಜೆ. ಶಾಂತಾ, ನಿವೃತ್ತ ಅರಣ್ಯಾಧಿಕಾರಿ ಮುತ್ತಯ್ಯ ಹೆಸರು ಬಲವಾಗಿ ಕೇಳಿಬರುತ್ತಿದೆ. ಜಿಪಂ ಸದಸ್ಯ ಎಸ್.ವೆಂಕಟೇಶ್, ಜಿ.ನಾಗಮಣಿ, ಕೋಡಿಹಳ್ಳಿ ಭೀಮಪ್ಪ, ಲೋಕೇಶ್ ನಾಯಕ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್​ನಿಂದ ಪಕ್ಷದ ತಾಲೂಕು ಅಧ್ಯಕ್ಷ ಕಾರಪ್ಪ ಹಾಗೂ ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಸ್ಪರ್ಧೆಗೆ ಉತ್ಸುಕರಾಗಿದ್ದಾರೆ.


ಕಾಂಗ್ರೆಸ್ಸಿಗೆ ಭೀಮ ಬಲ

ಹಗರಿಬೊಮ್ಮನಹಳ್ಳಿಯಲ್ಲಿ ಕಳೆದ ಎರಡೂ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿ ಸಮಸ್ಯೆ ಎದುರಿಸಿದ್ದ ಕಾಂಗ್ರೆಸ್ಸಿಗೆ ಈ ಬಾರಿ ‘ಭೀಮ’ ಬಲ ಬಂದಿದೆ. ಜೆಡಿಎಸ್​ನಿಂದ ಆಯ್ಕೆಯಾಗಿದ್ದ ಶಾಸಕ ಭೀಮಾನಾಯ್ಕ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದ ಪರಿಣಾಮ ಪಕ್ಷದಿಂದ ಅಮಾನತುಗೊಂಡು ಕಾಂಗ್ರೆಸ್ಸಿನತ್ತ ವಾಲಿದ್ದಾರೆ. ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಉದ್ದವಾಗಿದ್ದರೂ ಪರಿವರ್ತನಾ ಯಾತ್ರೆ ವೇಳೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾಜಿ ಶಾಸಕ ನೇಮಿರಾಜ ನಾಯ್ಕರನ್ನು ಗೆಲ್ಲಿಸಲು ಕರೆ ನೀಡಿದ್ದು ಇತರೆ ಆಕಾಂಕ್ಷಿಗಳ ನಿರಾಸೆಗೆ ಕಾರಣವಾಗಿದೆ. ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ವಿ.ತಿಪ್ಪೇಸ್ವಾಮಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.


ಹಡಗಲಿ ಹೂವು ಯಾರ ಪಾಲಿಗೆ?

ಮಾಜಿ ಸಚಿವ, ಹಡಗಲಿಯ ಕಾಂಗ್ರೆಸ್ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿವಾದಗಳು ಹಾಗೂ ಹರಪನಹಳ್ಳಿಯ ಶಾಸಕ ಎಂ.ಪಿ.ರವೀಂದ್ರ ಜತೆಗಿನ ಭಿನ್ನಾಭಿಪ್ರಾಯಗಳಿಂದಲೇ ಹೆಚ್ಚು ಸುದ್ದಿಯಾದವರು. ದಿ.ಎಂ.ಪಿ. ಪ್ರಕಾಶ್ ಪ್ರಭಾವಳಿ ಇರುವ ಹೂವಿನಹಡಗಲಿಯಲ್ಲಿ ಈ ಬಾರಿ ಪಕ್ಷ ಹಾಗೂ ವ್ಯಕ್ತಿಗತ ವರ್ಚಸ್ಸಿನಿಂದ ಪುನರಾಯ್ಕೆಯಾಗುವ ಸವಾಲು ಎದುರಿಸುತ್ತಿದ್ದಾರೆ. ಬಿಜೆಪಿಯಲ್ಲಿ ಮಾಜಿ ಶಾಸಕ ಚಂದ್ರಾನಾಯ್ಕ, ನಿವೃತ್ತ ಅಧಿಕಾರಿಗಳಾದ ಓದೋ ಗಂಗಪ್ಪ, ಮಧುನಾಯ್ಕ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಮಧು ನಾಯ್ಕ ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಚಂದ್ರಾನಾಯ್ಕರಷ್ಟೇ ಮತ ಪಡೆದಿದ್ದರು.


ಗ್ರಾಮೀಣದಲ್ಲಿ ಕ್ಷೇತ್ರ ವಲಸೆ ಲೆಕ್ಕಾಚಾರ!

ಬಳ್ಳಾರಿ (ಗ್ರಾಮೀಣ) ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ಮೂಲ ಕ್ಷೇತ್ರ ಮೊಳಕಾಲ್ಮೂರಿನತ್ತ ಗಮನಹರಿಸಿದ್ದಾರೆ ಎಂಬ ಮಾತುಗಳು ಚಾಲ್ತಿಯಲ್ಲಿವೆ. 2013ರಲ್ಲಿ ಮೊಳಕಾಲ್ಮೂರಿನಲ್ಲಿ ಸೋತಿದ್ದ ಗೋಪಾಲಕೃಷ್ಣ, 2014ರಲ್ಲಿ ಶ್ರೀರಾಮುಲು ರಾಜೀನಾಮೆಯಿಂದ ತೆರವಾಗಿದ್ದ ಬಳ್ಳಾರಿ (ಗ್ರಾಮೀಣ) ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ಈ ಬಾರಿ ಗ್ರಾಮೀಣ ಕ್ಷೇತ್ರ ಅಷ್ಟು ಸುಲಭವಾಗಿಲ್ಲದ್ದರಿಂದ ಮತ್ತೆ ಮೊಳಕಾಲ್ಮೂರಿಗೆ ತೆರಳಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಕೂಡ್ಲಿಗಿ ಪಕ್ಷೇತರ ಶಾಸಕ ಬಿ.ನಾಗೇಂದ್ರರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಂಸದರಿಗೆ ಟಿಕೆಟ್ ನೀಡುವುದಾದರೆ ಬಿಜೆಪಿಯಿಂದ ಬಿ.ಶ್ರೀರಾಮುಲು ಅಭ್ಯರ್ಥಿಯಾಗಲಿದ್ದಾರೆ. ಇಲ್ಲದಿದ್ದರೆ ಉಪಚುನಾವಣೆಯಲ್ಲಿ ಸೋತಿದ್ದ ಓಬಳೇಶ, ಮಾಜಿ ಸಂಸದರಾದ ಜೆ.ಶಾಂತಾ, ಸಣ್ಣ ಫಕೀರಪ್ಪರ ಪೈಕಿ ಒಬ್ಬರು ಬಿಜೆಪಿ ಅಭ್ಯರ್ಥಿಯಾಗುವ ಸಂಭವಗಳಿವೆ. ಜೆಡಿಎಸ್​ನಿಂದ ಮೀನಹಳ್ಳಿ ತಾಯಣ್ಣ ಪ್ರಚಾರ ನಿರತರಾಗಿದ್ದಾರೆ.


ಸಂಡೂರಲ್ಲಿ ಕುಟುಂಬ ರಾಜಕೀಯ

ಘೊರ್ಪಡೆ, ಲಾಡ್ ಕುಟುಂಬಗಳ ಪ್ರಾಬಲ್ಯ ಇರುವ ಸಂಡೂರಿನಲ್ಲಿ ಬಿಜೆಪಿ ಪ್ರಭಾವ ಹೆಚ್ಚಿದೆ. ಕಾಂಗ್ರೆಸ್ಸಿನಿಂದ ಶಾಸಕ ಇ.ತುಕಾರಾಂ ಸ್ಪರ್ಧೆ ನಿಶ್ಚಿತವಾಗಿದೆ. ಮಾಜಿ ಸಚಿವ ಎಂ.ವೈ.ಘೊರ್ಪಡೆ ಪುತ್ರ ಕಾರ್ತಿಕೇಯ ಘೊರ್ಪಡೆ ಬಿಜೆಪಿ ಸೇರ್ಪಡೆಯಾಗುವ ಮಾತುಗಳು ಕೇಳಿಬರುತ್ತಿವೆ. ಕಾರ್ತಿಕೇಯ ಘೊರ್ಪಡೆ ಕಮಲ ಹಿಡಿದರೆ ಬಿಜೆಪಿ ಗೆಲ್ಲುವ ಕನಸು ಸುಲಭವಾಗುವ ಸಾಧ್ಯತೆಗಳಿವೆ. ಕೆ.ಎಸ್.ದಿವಾಕರ, ಬಂಗಾರು ಹನುಮಂತು, ಡಾ.ಶ್ರೀನಿವಾಸ, ಡಿ.ರಾಘವೇಂದ್ರ ಬಿಜೆಪಿ ಟಿಕೆಟಿನ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್​ನಿಂದ ಪಕ್ಷದ ತಾಲೂಕು ಅಧ್ಯಕ್ಷ ವಸಂತಕುಮಾರ ಹಾಗೂ ಕುರೇಕುಪ್ಪ ಸೋಮಪ್ಪ ಆಕಾಂಕ್ಷಿಗಳಾಗಿದ್ದಾರೆ.


ಭತ್ತದ ನಾಡಲ್ಲಿ ಯಾರ ಬೆಳೆ?

ಭತ್ತದ ನಾಡು ಸಿರಗುಪ್ಪ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆಯೇ ಕದನ ನಡೆಯುವುದು ಖಚಿತ. ಕೆಲವು ತಿಂಗಳ ಹಿಂದೆ ಶಾಸಕ ಬಿ.ಎಂ.ನಾಗರಾಜ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂಜರಿಕೆ ತೋರಿದ್ದರಿಂದ ಕಾಂಗ್ರೆಸ್ ನಾಯಕರು ಅವರ ಮನವೊಲಿಸ ಬೇಕಾಯಿತು. ಬಿಜೆಪಿಯಿಂದ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಸ್ಪರ್ಧೆ ನಿಶ್ಚಿತವಾಗಿದೆ. ಜಿಪಂ ಸದಸ್ಯೆ ರಾಧಾ ಧರೆಪ್ಪ ನಾಯಕ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಪಕ್ಷ ಅವರ ಹೆಸರನ್ನು ಪರಿಗಣಿಸಿದಂತೆ ಕಂಡುಬರುತ್ತಿಲ್ಲ.


ವಿಜಯನಗರದಲ್ಲಿ ಬಿಜೆಪಿಗಿಲ್ಲ ಆನಂದ

ವಿಜಯನಗರ(ಹೊಸಪೇಟೆ) ಕ್ಷೇತ್ರದ ಮತದಾರರು ಪಕ್ಷಕ್ಕೆ ವ್ಯಕ್ತಿಗತ ವರ್ಚಸ್ಸಿಗೆ ಮುದ್ರೆ ಹಾಕುತ್ತಾ ಬಂದಿದ್ದಾರೆ. ವ್ಯಕ್ತಿಗತ ವರ್ಚಸ್ಸಿನಿಂದಲೇ ಎರಡು ಬಾರಿ ಆಯ್ಕೆಯಾಗಿದ್ದ ಆನಂದ್​ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಹೊರನಡೆದಿದ್ದಾರೆ. ಆನಂದ್​ಸಿಂಗ್ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತ. ಆನಂದ್​ಸಿಂಗ್ ನಡೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ರಾಜಕೀಯವಾಗಿ ಗೊಂದಲಕ್ಕೆ ಸಿಲುಕಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲೇ ಬೇಕೆಂದು ನಿರ್ಧರಿಸಿರುವ ಎಚ್.ಆರ್.ಗವಿಯಪ್ಪ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ. ಗವಿಯಪ್ಪ ಬಿಜೆಪಿಗೆ ಬರದಿದ್ದರೆ ಪತ್ತಿಕೊಂಡ ಕಿಶೋರ್ ಅಭ್ಯರ್ಥಿಯಾಗಬಹುದು. ಜಿಪಂ ಮಾಜಿ ಸದಸ್ಯ ಗೋನಾಳ ರಾಜಶೇಖರಗೌಡ ಕೂಡ ಸ್ಪರ್ಧೆಯಲ್ಲಿದ್ದಾರೆ.


ಕಂಪ್ಲಿಯಲ್ಲಿ ಹ್ಯಾಟ್ರಿಕ್ ಯತ್ನ!

2008ರಲ್ಲಿ ಅಸ್ತಿತ್ವಕ್ಕೆ ಬಂದ ಕಂಪ್ಲಿ ಕ್ಷೇತ್ರದಲ್ಲಿ ಎರಡೂ ಚುನಾವಣೆಗಳಲ್ಲಿ ಪ್ರಮುಖ ಪಕ್ಷಗಳೇ ಶಾಸಕ ಟಿ.ಎಚ್.ಸುರೇಶಬಾಬುಗೆ ಗೆಲುವಿನ ಬಾಗಿನ ಅರ್ಪಿಸಿವೆ ಎಂದು ಹೇಳಬಹುದು. ತಲಾ ಒಂದು ಬಾರಿ ಬಿಜೆಪಿ ಹಾಗೂ ಬಿಎಸ್​ಆರ್ ಕಾಂಗ್ರೆಸ್ಸಿನಿಂದ ಆಯ್ಕೆ ಯಾಗಿರುವ ಸುರೇಶ್​ಬಾಬುಗೆ ಪ್ರಮುಖ ಎದುರಾಳಿ ಗಳಿಲ್ಲ. ಕಳೆದ ಚುನಾವಣೆ ಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುರೇಶ್​ಬಾಬುಗೆ ತೀವ್ರ ಪೈಪೋಟಿ ನೀಡಿದ್ದ ಜೆ.ಎನ್.ಗಣೇಶ್ ಮತ್ತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

Leave a Reply

Your email address will not be published. Required fields are marked *

Back To Top