Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ದಾವಣಗೆರೆ ಬೆಣ್ಣೆದೋಸೆ ಸವಿ ಯಾರ ಪಾಲಿಗೆ?

Monday, 19.02.2018, 3:05 AM       No Comments

| ರಮೇಶ ಜಹಗೀರದಾರ್

ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆ ರಾಜಕಾರಣ ಬೆಣ್ಣೆದೋಸೆಯಂತೆ ಮೃದುವಾಗಿರದೆ ಘಟಾನುಘಟಿಗಳ ಜಟಾಪಟಿಯಿಂದಾಗಿ ರಾಜ್ಯದ ಗಮನ ಸೆಳೆಯುತ್ತ ಬಂದಿದೆ. ಮೊದಲಿನಿಂದ ಕಾಂಗ್ರೆಸ್ ಹಿಡಿತದಲ್ಲಿದ್ದ ಜಿಲ್ಲೆ, ನಂತರ ಜನತಾ ಪರಿವಾರದ ಪಾಲಾಗಿತ್ತು. ಒಂದೂವರೆ ದಶಕದಿಂದೀಚೆಗೆ ಬಿಜೆಪಿ ಬೇರುಗಳು ಬಲಗೊಂಡಿವೆ. ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. 2008ರಲ್ಲಿ ನಡೆದ ಚುನಾವಣೆಯಲ್ಲಿ 6ರಲ್ಲಿ ಗೆದ್ದಿದ್ದ ಬಿಜೆಪಿ ನಂತರ ‘ಆಪರೇಷನ್ ಕಮಲ’ದ ಮೂಲಕ ಜಗಳೂರು ಕ್ಷೇತ್ರವನ್ನೂ ಬುಟ್ಟಿಗೆ ಹಾಕಿಕೊಂಡು ಬಲ 7ಕ್ಕೆ ಹೆಚ್ಚಿಸಿಕೊಂಡಿತ್ತು. ಆಗ ಕಾಂಗ್ರೆಸ್​ಗೆ ಇದ್ದದ್ದು ಕೇವಲ 1 ಸ್ಥಾನ. 2013ರಲ್ಲಿ ಕಾಂಗ್ರೆಸ್ 7 ಕ್ಷೇತ್ರಗಳಲ್ಲಿ ಗೆದ್ದು ತಿರುಗೇಟು ನೀಡಿತು. ಆಶ್ಚರ್ಯವೆಂದರೆ ಬಿಜೆಪಿ ಖಾತೆಯನ್ನೇ ತೆರೆಯಲಿಲ್ಲ. ಜೆಡಿಎಸ್ ಹರಿಹರದಲ್ಲಿ ಗೆದ್ದು ಅಸ್ತಿತ್ವ ತೋರಿಸಿತು. 5 ವರ್ಷ ವನವಾಸದ ನಂತರ ಬಿಜೆಪಿ ರಣೋತ್ಸಾಹದಲ್ಲಿದೆ. ಸರ್ಕಾರದ ಸಾಧನೆಯೇ ‘ಕೈ’ ಹಿಡಿಯುತ್ತದೆ ಎನ್ನುವ ಆತ್ಮವಿಶ್ವಾಸ ಕಾಂಗ್ರೆಸ್ ಪಾಳಯದಲ್ಲಿದೆ. ಇರುವ ಏಕೈಕ ಕ್ಷೇತ್ರ ಉಳಿಸಿಕೊಳ್ಳುವ ಜತೆಗೆ ಇತರ ಕ್ಷೇತ್ರಗಳಲ್ಲೂ ಸಾಧನೆ ಉತ್ತಮ ಪಡಿಸಿಕೊಳ್ಳುವ ಉಮೇದಿನಲ್ಲಿ ಜೆಡಿಎಸ್ ನಾಯಕರಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯ ಆಮೆ ನಡಿಗೆ, ಭದ್ರಾ ಅಚ್ಚುಕಟ್ಟಿನ ಕೊನೇ ಭಾಗದ ರೈತರ ಸಮಸ್ಯೆ, ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಅಭಾವ ಪ್ರಸ್ತುತ ಚರ್ಚೆಯಲ್ಲಿರುವ ವಿಷಯಗಳು.

ದಾವಣಗೆರೆ ‘ದಕ್ಷಿಣೆ’ಯಾರಿಗೆ?

ಕಾಂಗ್ರೆಸ್​ನ ಶಾಮನೂರು ಶಿವಶಂಕರಪ್ಪ 4 ಬಾರಿ ಪ್ರತಿನಿಧಿಸಿರುವ ಕ್ಷೇತ್ರ ದಾವಣಗೆರೆ ದಕ್ಷಿಣ. 2004ರಿಂದ ಸತತ 3 ಚುನಾವಣೆಗಳಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿರುವ ಇವರು, 86ರ ಇಳಿವಯಸ್ಸಿನಲ್ಲೂ ಮತ್ತೆ ಕಣಕ್ಕಿಳಿಯುವುದಾಗಿ ಅನೇಕ ಬಾರಿ ಹೇಳಿದ್ದಾರೆ. ಪಕ್ಷ ಯಾವ ತೀರ್ವನಕ್ಕೆ ಬರುತ್ತದೆ ಎನ್ನುವ ಕುತೂಹಲವೂ ಇದೆ. ಬಿಜೆಪಿಯಿಂದ ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಅಭ್ಯರ್ಥಿಯಾಗುವ ಸುಳಿವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪರಿವರ್ತನಾ ಯಾತ್ರೆ ಸಂದರ್ಭ ನೀಡಿದ್ದಾರೆ. ಪಕ್ಷದ ಮುಖಂಡ ಎಚ್.ಎಸ್. ನಾಗರಾಜ್ ತಾವೂ ಪ್ರಬಲ ಆಕಾಂಕ್ಷಿ ಎಂದಿದ್ದಾರೆ. ಜೆಡಿಎಸ್​ನಿಂದ ಅಮಾನುಲ್ಲಾ ಖಾನ್ ಕಣಕ್ಕಿಳಿಯಬಹುದು.


ಜಗಳೂರಲ್ಲಿ ಯಾರಿಗೆ ಜಯ?

ಜಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಎಚ್.ಪಿ. ರಾಜೇಶ್​ಗೆ ಟಿಕೆಟ್ ತರುವಲ್ಲಿ ಪೈಪೋಟಿಯಿದೆ. ಪಕ್ಷದ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಮುಖಂಡ ಅರಸೀಕೆರೆ ದೇವೇಂದ್ರಪ್ಪ, ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ ಪ್ರಬಲ ಆಕಾಂಕ್ಷಿಗಳು. ಬಿಜೆಪಿಯಲ್ಲಿ ಎಸ್.ವಿ. ರಾಮಚಂದ್ರ ಅವರಿಗೆ ಪ್ರತಿಸ್ಪರ್ಧಿ ಇಲ್ಲ. ಮಾಜಿ ಸಿಎಂ ಯಡಿಯೂರಪ್ಪ ಆಪ್ತರಲ್ಲಿ ಇವರೂ ಒಬ್ಬರು. 2008ರಲ್ಲಿ ಕಾಂಗ್ರೆಸ್​ನಿಂದ ಗೆದ್ದಿದ್ದ ರಾಮಚಂದ್ರ, ನಂತರದ ಬೆಳವಣಿಗೆಯಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದರು.


 ಮಾಯಕೊಂಡ ನಿಗಿನಿಗಿ ಕೆಂಡ

ಎಸ್​ಸಿ ಮೀಸಲು ಕ್ಷೇತ್ರ ಮಾಯಕೊಂಡದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಡೆ ದೊಡ್ಡದಿದ್ದು, ಹಾಲಿ ಶಾಸಕ ಶಿವಮೂರ್ತಿ ನಾಯ್ಕ ಮತ್ತೆ ಟಿಕೆಟ್ ಗಿಟ್ಟಿಸುವುದು ಕಷ್ಟ. ಜಿ.ಪಂ. ಮಾಜಿ ಅಧ್ಯಕ್ಷ ಡಾ.ವೈ. ರಾಮಪ್ಪ, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್, ಎಸ್ಸಿ ಘಟಕದ ಮುಖಂಡ ಬಿ.ಎಚ್. ವೀರಭದ್ರಪ್ಪ, ಜಿ.ಪಂ. ಸದಸ್ಯ ಕೆ.ಎಸ್. ಬಸವರಾಜ್ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳು. ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಮಾಜಿ ಶಾಸಕ ಬಸವರಾಜ ನಾಯ್ಕ, ಮುಖಂಡರಾದ ಪ್ರೊ. ಲಿಂಗಣ್ಣ, ಎಚ್. ಆನಂದಪ್ಪ, ಎಚ್.ಕೆ. ಬಸವರಾಜ್, ವಿ. ವೆಂಕಟಪ್ಪ, ಆಲೂರು ಹನುಮಂತ ನಾಯ್ಕ ಟಿಕೆಟ್​ಗಾಗಿ ಪ್ರಯತ್ನಿಸುತ್ತಿದ್ದಾರೆ. ಜೆಡಿಎಸ್​ನಿಂದ ಶೀಲಾ ನಾಯ್್ಕ ಅಭ್ಯರ್ಥಿ ಎಂದು ಪಕ್ಷ ಹೇಳಿದೆ.


 ಯಾರು ‘ಉತ್ತರಾ’ಧಿಕಾರಿ?

ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿಟ್ಟರೆ ಬೇರೆ ಹೆಸರಿಲ್ಲ. ಮಲ್ಲಿಕಾರ್ಜುನ 4ನೇ ಬಾರಿಗೆ ವಿಧಾನಸಭೆ ಮೆಟ್ಟಿಲು ಏರುವ ತಯಾರಿಯಲ್ಲಿದ್ದಾರೆ. ಅಭಿವೃದ್ಧಿ ಕಾರ್ಯಗಳ ಅಸ್ತ್ರ ಬತ್ತಳಿಕೆಯಲ್ಲಿ ಇಟ್ಟುಕೊಂಡಿದ್ದಾರೆ. ಅವರಿಗೆ ಬಿಜೆಪಿಯಿಂದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಪ್ರತಿಸ್ಪರ್ಧಿಯಾಗುವುದು ಬಹುತೇಕ ಖಚಿತ. 2013ರಲ್ಲಿ ರವೀಂದ್ರನಾಥ್​ರನ್ನು ಸೋಲಿಸಿ ಮಲ್ಲಿಕಾರ್ಜುನ್ ಶಾಸಕರಾಗಿದ್ದರಿಂದ ಈ ಬಾರಿ ಹಣಾಹಣಿ ಕುತೂಹಲ ಮೂಡಿಸಿದೆ.


ಹರಿಹರದಲ್ಲಿ ಶಿವತಾಂಡವ

ಜೆಡಿಎಸ್​ನ ನೆಚ್ಚಿನ ಕ್ಷೇತ್ರ ಹರಿಹರ. 2013ರಲ್ಲಿ ಇತರ ಏಳೂ ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ ಜಾರಿದ್ದರೂ, ಹರಿಹರದಲ್ಲಿ ಜೆಡಿಎಸ್ ಗೆದ್ದಿತ್ತು. ಈ ಸಲವೂ ಶಾಸಕ ಎಚ್.ಎಸ್. ಶಿವಶಂಕರ್ ಅವರೇ ಜೆಡಿಎಸ್ ಅಭ್ಯರ್ಥಿ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕಾಂಗ್ರೆಸ್​ನಲ್ಲಿ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಎಸ್. ರಾಮಪ್ಪ, ವಿಟಿಯು ಮಾಜಿ ಕುಲಪತಿ, ಕಾಂಗ್ರೆಸ್​ನ ಐಟಿ ಸೆಲ್​ನ ಡಾ.ಎಚ್. ಮಹೇಶಪ್ಪ, ಡಾ.ಬಿ.ಎಸ್. ಶೈಲೇಶ್ ಕುಮಾರ್, ಎಂ. ನಾಗೇಂದ್ರಪ್ಪ, ಬೆಣ್ಣೆಹಳ್ಳಿ ಹಾಲೇಶಪ್ಪ ಪ್ರಬಲ ಆಕಾಂಕ್ಷಿಗಳು. ಇನ್ನು ಬಿಜೆಪಿಯಿಂದ ಮಾಜಿ ಶಾಸಕ ಬಿ.ಪಿ. ಹರೀಶ್ ಅಭ್ಯರ್ಥಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಘೊಷಿಸಿದ್ದಾರೆ. ಆದರೆ ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಪ್ರವೇಶಿಸಿರುವ, ಬಳ್ಳಾರಿ ರೆಡ್ಡಿಗಳ ಆಪ್ತ ಕೆ. ದೇವೇಂದ್ರಪ್ಪ ತಾವೂ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.


 ಚನ್ನಗಿರಿ ಚೆಲುವ ಯಾರು?

ಚನ್ನಗಿರಿ ಕ್ಷೇತ್ರದಲ್ಲಿ ಶಾಸಕ ವಡ್ನಾಳ್ ರಾಜಣ್ಣ ಅವರಿಗೆ ಕಾಂಗ್ರೆಸ್​ನಲ್ಲಿ ಪ್ರತಿಸ್ಪರ್ಧಿಗಳಿಲ್ಲ. ಹಾಗಾಗಿ ಅವರು ಈಗಾಗಲೇ ಚುನಾವಣೆ ತಯಾರಿಯಲ್ಲಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರೇ ಅಭ್ಯರ್ಥಿ ಎಂದು ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಘೊಷಿಸಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ತುಮ್ೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಕೂಡ ಆಕಾಂಕ್ಷಿ. ಜೆಡಿಎಸ್​ನಿಂದ ಪಕ್ಷದ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಹೊದಿಗೆರೆ ರಮೇಶ್​ಗೆ ಟಿಕೆಟ್ ಘೊಷಣೆ ಆಗಿದೆ. ಮಾಜಿ ಸಿಎಂ ಜೆ.ಎಚ್. ಪಟೇಲರ ಪುತ್ರ ಮಹಿಮಾ ಪಟೇಲ್ ಜೆಡಿಯುನಿಂದ ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್​ನಲ್ಲಿದ್ದು ಬಂದಿರುವ ಮಹಿಮಾ ಪಟೇಲ್ ಈಗ ಜೆಡಿಯು ರಾಜ್ಯಾಧ್ಯಕ್ಷ.


ಹರಪನಹಳ್ಳಿ ಗೊಂದಲದ ಗೂಡು

ಹರಪನಹಳ್ಳಿಯ ಸ್ಥಿತಿ ಗೋಜಲಾಗಿದೆ. ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್​ನ ಶಾಸಕ ಎಂ.ಪಿ. ರವೀಂದ್ರ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದರು. ಬಳಿಕ ಸಿಎಂ ಅವರ ಮನವೊಲಿಸಿದ್ದರು. ಎಲ್ಲವೂ ಸರಿಹೋಗಿದೆ ಅನ್ನುವಷ್ಟರಲ್ಲಿ ರವೀಂದ್ರ ಅವರ ಆರೋಗ್ಯ ಕೈಕೊಟ್ಟು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವೇಳೆ ರವೀಂದ್ರ ಸ್ಪರ್ಧಿಸದಿದ್ದರೆ ಪರ್ಯಾಯ ಯಾರು ಎಂಬುದು ಅಸ್ಪಷ್ಟ. ಪಕ್ಷದ ಯುವ ಮುಖಂಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಟಿ. ಸುಭಾಷ್​ಚಂದ್ರ ಆಕಾಂಕ್ಷಿ, ಬಳ್ಳಾರಿಯ ಉದ್ಯಮಿ ಸೂರ್ಯನಾರಾಯಣ ರೆಡ್ಡಿ ಹರಪನಹಳ್ಳಿಯತ್ತ ಮುಖ ಮಾಡಿದ್ದಾರೆ ಎಂಬ ಮಾತು ಕಾಂಗ್ರೆಸ್​ನಲ್ಲಿದೆ. ಬಿಜೆಪಿ ಪಾಳಯದಲ್ಲಿ ಸ್ಥಳೀಯರು, ವಲಸಿಗರು ಎಂಬ ವ್ಯತ್ಯಾಸಗಳಿವೆ. ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ವಿರುದ್ಧ ಸ್ಥಳೀಯ ಮುಖಂಡರ ಗುಂಪೊಂದು ತಿರುಗಿ ಬಿದ್ದಿರುವುದು ಗೊಂದಲಕ್ಕೆ ಕಾರಣ. ಹೀಗಾಗಿ ಹರಪನಹಳ್ಳಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ರದ್ದಾಗಿತ್ತು. ಕೆಲದಿನಗಳ ಬಳಿಕ ಇತ್ತೀಚೆಗಷ್ಟೇ ಅಲ್ಲಿ ಪರಿವರ್ತನಾ ಯಾತ್ರೆ ನಡೆಸಿದಾಗ ಬಿಎಸ್​ವೈ ಸಮ್ಮುಖದಲ್ಲೇ ಭಿನ್ನಾಭಿಪ್ರಾಯ ಬಯಲಾಗಿತ್ತು. ಸ್ಥಳೀಯರ ಗುಂಪಿನಿಂದ ಎನ್. ಕೊಟ್ರೇಶ್, ಆರುಂಡಿ ನಾಗರಾಜ್, ಮಹಾಬಲೇಶ್ವರಗೌಡ ಹಾಗೂ ಜಿ. ನಂಜನಗೌಡರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.


ಹೊನ್ನಾಳಿ ಹೊಡೆತ ಯಾರಿಗೆ?

ಹೊನ್ನಾಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಡಿ.ಜಿ. ಶಾಂತನಗೌಡರಿಗೆ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಪ್ರಬಲ ಪೈಪೋಟಿ ನೀಡಿದ್ದಾರೆ. ಇಬ್ಬರೂ ಟಿಕೆಟ್ ಆಕಾಂಕ್ಷಿ ಆಗಿರುವುದರಿಂದ ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುವುದು ಎಂದು ಕಾದು ನೋಡಬೇಕಿದೆ. ಬಿಜೆಪಿಯಿಂದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೆಸರು ಮುಂಚೂಣಿಯಲ್ಲಿದೆ. ಮುಖಂಡರಾದ ಎ.ಬಿ. ಹನುಮಂತಪ್ಪ, ಬಿಸಾಟಿ ಸುರೇಶ್ ಅವರೂ ಆಕಾಂಕ್ಷಿಗಳು. ಈ ಕ್ಷೇತ್ರವನ್ನು ಜೆಡಿಎಸ್ ಬಿಎಸ್ಪಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

Back To Top