ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚು

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ತರೀಕೆರೆ ಹೊರತುಪಡಿಸಿ ಮಿಕ್ಕ ಏಳು ಕ್ಷೇತ್ರಗಳ ಸಂಖ್ಯಾಬಲದಲ್ಲಿ ಪುರುಷರಿಗಿಂತ ವನಿತೆಯರೇ ಮೇಲುಗೈ ಸಾಧಿಸಿದ್ದಾರೆ. ವಿಶೇಷವೆಂದರೆ ಉಡುಪಿಯ ಎಲ್ಲ 4 ಕ್ಷೇತ್ರಗಳಲ್ಲಿ ಮಹಿಳೆಯರೇ ಪುರುಷರಿಗಿಂತ ಮುಂದಿರುವುದು.

ಕ್ಷೇತ್ರದಲ್ಲಿ ಒಟ್ಟು 14,94,444 ಮತದಾರರಿದ್ದು, ಇವರಲ್ಲಿ ಪುರುಷರ ಸಂಖ್ಯೆ 7,30,289 ಆಗಿದ್ದರೆ, 7,64,105 ಮಹಿಳೆಯರಿದ್ದು, ಪುರುಷರಿಗಿಂತ 33,816 ಮಹಿಳೆಯರು ಹೆಚ್ಚಿದ್ದಾರೆ. ಬುಧವಾರ ಜಿಲ್ಲಾ ಚುನಾವಣಾಧಿಕಾರಿ ಡಾ. ಬಗಾದಿ ಗೌತಮ್ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಮಾಹಿತಿ ಈ ಅಂಶವನ್ನು ಸ್ಪಷ್ಟಪಡಿಸಿದೆ.

ಕುಂದಾಪುರದಲ್ಲಿ 2,00,101 ಮತದಾರರಿದ್ದು, ಇವರಲ್ಲಿ 96,164 ಪುರುಷರು, 1,03,937 ಮಹಿಳೆಯರಿದ್ದರೆ, ಪುರುಷರಿಗಿಂತ 7773 ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉಡುಪಿಯಲ್ಲಿ 1,05,966 ಮಹಿಳೆಯರಿದ್ದರೆ, 99,598 ಪುರುಷರಿದ್ದಾರೆ. ಪುರುಷರಿಗಿಂತ ಮಹಿಳೆಯರು 6,368 ಮಂದಿ ಅಧಿಕ ಪ್ರಮಾಣದಲ್ಲಿದ್ದಾರೆ.

ಕಾಪುವಿನಲ್ಲಿ 94,858 ಮಹಿಳಾ ಮತದಾರರಿದ್ದರೆ, 86,308 ಪುರುಷ ಮತದಾರರಿದ್ದು, ಒಟ್ಟು 1,81,178 ಮತದಾರರಿದ್ದಾರೆ. ಇಲ್ಲಿ ಪುರುಷರಿಗಿಂತ 8550 ಮಹಿಳೆಯರು ಹೆಚ್ಚಾಗಿದ್ದಾರೆ. ಕಾರ್ಕಳದಲ್ಲಿ ಪುರುಷರಿಗಿಂತ 7543 ಪುರುಷರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಒಟ್ಟು 1,81,386 ಮತದಾರರಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಸಹ ಈ ಸಂಖ್ಯಾ ಬಲದಲ್ಲಿ ಮಹಿಳೆಯರನ್ನೇ ಹೆಚ್ಚಾಗಿ ಹೊಂದಿದೆ.