ಉಪಸಮರ: ಪ್ರಚಾರಕ್ಕೆ ಕಾಂಗ್ರೆಸ್​ನ ಕಿರಿಯ ನಾಯಕರ ನಿರುತ್ಸಾಹ

ಬೆಂಗಳೂರು: ಮೂರು ಲೋಕಸಭೆ ಮತ್ತು 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರು ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ. ಆದರೆ ಪಕ್ಷದ ಕಿರಿಯ ನಾಯಕರು ಪ್ರಚಾರಕ್ಕೆ ಉತ್ಸಾಹ ತೋರುತ್ತಿಲ್ಲ ಎಂಬುದು ಬಯಲಾಗಿದೆ.

ಹಿರಿಯ ಮುಖಂಡರು ಪ್ರಚಾರಕ್ಕೆ ಹೋದಾಗ ಮಾತ್ರ ವೇದಿಕೆಯಲ್ಲಿ ಕಿರಿಯ ಮುಖಂಡರು ಮತ್ತು ಶಾಸಕರು ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಆಭ್ಯರ್ಥಿ ಪರ ಪ್ರಚಾರಕ್ಕೆ ಕಿರಿಯ ಮುಖಂಡರು ಮತ್ತು ಶಾಸಕರು ಗೈರಾಗುತ್ತಿದ್ದಾರೆ. ಬಳ್ಳಾರಿ, ಜಮಖಂಡಿ ಹಾಗೂ ಶಿವಮೊಗ್ಗ ಕ್ಷೇತ್ರಗಳ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಸ್ಥಳೀಯ ಕಾಂಗ್ರೆಸ್​ ಶಾಸಕರು ಉತ್ಸಾಹ ತೋರುತ್ತಿಲ್ಲ. ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್​ ಆರು ಶಾಸಕರ ಪೈಕಿ ಇಬ್ಬರು ಮಾತ್ರ ಅಲ್ಪಸ್ವಲ್ಪ ಪ್ರಚಾರ ಮಾಡುತ್ತಿದ್ದಾರೆ. ಉಳಿದಂತೆ ಶಾಸಕರಾದ ನಾಗೇಂದ್ರ, ಆನಂದ್​ ಸಿಂಗ್​, ಗಣೇಶ್​, ಭೀಮಾನಾಯ್ಕ್​ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ ಎನ್ನಲಾಗಿದೆ.

ಜಮಖಂಡಿ ಕ್ಷೇತ್ರದಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆ ವ್ಯಾಪ್ತಿಯ ಕಾಂಗ್ರೆಸ್​ ಶಾಸಕರು ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ. ಶಿವಮೊಗ್ಗ ಕ್ಷೇತ್ರದಲ್ಲಿ ಮೈತ್ರಿ ಪರ ಭದ್ರಾವತಿ ಶಾಸಕ ಸಂಗಮೇಶ್​ ಪ್ರಚಾರ ನಡೆಸುತ್ತಿಲ್ಲ. ಉಪ ಚುನಾವಣೆ ಕಾಂಗ್ರೆಸ್​ ನಲ್ಲಿ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಪರಮೇಶ್ವರ್ ಹಾಗೂ ಡಿಕೆಶಿಗೆ ಮಾತ್ರ ಪ್ರತಿಷ್ಠೆ ಕಣವಾಗಿದೆ ಉಳಿದ ನಾಯಕರು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದೆ.