ಚಿಕ್ಕಬಳ್ಳಾಪುರ: ಮಹಿಳೆ ಸೇರಿದಂತೆ ಇಬ್ಬರ ಮೇಲೆ ಹಲ್ಲೆ ನಡೆಸಿದ ಐವರಿಗೆ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿದೆ.
ಶಿಡ್ಲಘಟ್ಟ ತಾಲೂಕಿನ ಮಲ್ಲಿಶೆಟ್ಟಿಪುರದ ಶಿವ (30), ಚಂದ್ರು (33), ಮಂಜುನಾಥ್ (32), ರವಿ (19) ಮತ್ತು ನಾಗಪ್ಪ (55) ಶಿಕ್ಷೆಗೊಳಗಾದವರು. 2014 ರಲ್ಲಿ ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿದ್ದ ಮಲ್ಲಿಶೆಟ್ಟಿಪುರದ ವೆಂಕಟಲಕ್ಷಮ್ಮ ಮತ್ತು ಟಿ.ಕೆ.ನಾಗರಾಜ್ ಮೇಲೆ ಜಮೀನು ವಿವಾದದ ಹಿನ್ನೆಲೆಯಲ್ಲಿ ಐವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕತ್ತಿಯ ಹೊಡೆತಕ್ಕೆ ಮಹಿಳೆಯ ಕೈಗೆ ಗಂಭೀರವಾಗಿ ಗಾಯವಾಗಿತ್ತು. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ಥರ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಸುರೇಶ್ ಬಾಬು ವಾದ ಮಂಡಿಸಿದ್ದು ಸಾಕ್ಷಿ ಸಮೇತ ಹಲ್ಲೆ, ನಿಂದನೆ ಸೇರಿದಂತೆ ನಾನಾ ಅಪರಾಧವನ್ನು ನಿರೂಪಿಸಿದ್ದಾರೆ.
*ಸಂತ್ರಸ್ಥೆಗೆ ಪರಿಹಾರ*
ಪ್ರಕರಣದ ವಿಚಾರಣೆ ನಡೆಸಿದ ಶಿಡ್ಲಘಟ್ಟ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಜೆ.ಪೂಜಾ, ಐವರು ಅಪರಾಧಿಗಳಿಗೆ ಐಪಿಸಿ ಕಲಂ 143 ರೆ/ವಿ 149 ಕ್ಕೆ ತಲಾ 5 ಸಾವಿರ ರೂ ದಂಡ ಇಲ್ಲವೇ 3 ತಿಂಗಳ ಸಾದಾ ಜೈಲು ಶಿಕ್ಷೆ, ಐಪಿಸಿ ಕಲಂ 144, ರೆ/ವಿ 149 ಕ್ಕೆ ತಲಾ 5 ಸಾವಿರ ರೂ ದಂಡ, ಐಪಿಸಿ ಕಲಂ 504 ರೆ/ವಿ 149 ಕ್ಕೆ ತಲಾ 5 ಸಾವಿರ ರೂ ದಂಡ ಇಲ್ಲವೇ 3 ತಿಂಗಳ ಸಾದಾ ಜೈಲು ಶಿಕ್ಷೆ, ಆರೋಪಿ ಚಂದ್ರು, ಮಂಜುನಾಥ್ ಮತ್ತು ನಾಗಪ್ಪಗೆ ಐಪಿಸಿ ಕಲಂ 323 ಕ್ಕೆ ತಲಾ 1 ಸಾವಿರ ರೂ ದಂಡ ಇಲ್ಲವೇ 15 ದಿನಗಳ ಸಾದಾ ಶಿಕ್ಷೆ ವಿಧಿಸಿದ್ದು ಒಟ್ಟು 2,03,000 ದಂಡ ವಿಧಿಸಿದ್ದಾರೆ. ಸಂತ್ರಸ್ಥರಿಗೆ 50 ಸಾವಿರ ರೂ ಪರಿಹಾರ ನೀಡಲು ಆದೇಶಿಸಿದ್ದಾರೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಸುರೇಶ್ ಬಾಬು ತಿಳಿಸಿದ್ದಾರೆ