ಕೆ.ಆರ್.ಪೇಟೆ : ‘ನೀವು ಬರುತ್ತೀರಾ ಎಂದು ನಮ್ಮ ಮನೆ ಮುಂದೆ ಸ್ವಚ್ಛಗೊಳಿಸಿದ್ದೇನೆ; ನಮ್ಮ ಗ್ರಾಮವನ್ನು ಸ್ವಚ್ಛ ಮಾಡುವವರು ಯಾರು?’
-ಹೀಗೆಂದು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸಾರಂಗಿ ಗ್ರಾಮದ ಮಹಿಳೆಯೊಬ್ಬರು ಪ್ರಶ್ನಿಸಿದರು.
ಮತಯಾಚನೆಗೆ ಗ್ರಾಮಕ್ಕೆ ತೆರಳಿದ ಅವರಿಗೆ ಸಮಸ್ಯೆಗಳ ಬಗ್ಗೆ ತಮ್ಮ ಅಳಲು ತೋಡಿಕೊಂಡರು. ನಿಮ್ಮ ಪಕ್ಷಕ್ಕೆ ಮತ್ತು ನಿಮಗೆ ವೋಟು ಕೇಳುವವರಲ್ಲಿ ನಾನು ಒಬ್ಬಳು. ಆದರೆ, ನಮ್ಮ ಊರಿನ ಚರಂಡಿ, ರಸ್ತೆ ನೋಡಿ, ರಸ್ತೆ ಕಿತ್ತುಹೋಗಿದೆ. ಚರಂಡಿ ಸಮರ್ಪಕವಾಗಿ ಇಲ್ಲ. ನಮ್ಮ ಊರಿನ ಪರಿಸ್ಥಿತಿ ತಿಳಿಯಬೇಕು ಎಂದು ಹೇಳಿದರು.
ಮಹಿಳೆಯನ್ನು ಗ್ರಾಮದ ಮುಖಂಡರು ಸಮಾಧಾನಪಡಿಸಲು ಮುಂದಾದರು. ಆಗ ನಿಖಿಲ್ ಸಮಸ್ಯೆಗಳನ್ನು ಹೇಳಲಿ ಬಿಡಿ ಅಂದಾಗ, ಆಕೆ ಗ್ರಾಮದ ಸಮಸ್ಯೆಗಳನ್ನು ತೆರೆದಿಟ್ಟಳು. ಕೆಲಸ ಮಾಡಿಸುವುದಾಗಿ ಭರವಸೆ ನೀಡಿ ಅಲ್ಲಿಂದ ತೆರಳಿದರು.
ನನ್ನ ಮಕ್ಕಳು ನೋಡಿಕೊಳ್ಳುತ್ತಿಲ್ಲ, ನನಗೆ ವಾಸಿಸಲು ಮನೆಯಿಲ್ಲ, ನನಗೊಂದು ಮನೆ ಕಟ್ಟಿಸಿಕೊಡಿ ಎಂದು ಅಜ್ಜಿಯೊಬ್ಬರು ಕೇಳಿದಾಗ ಅದಕ್ಕೆ ನಾನು ಬಂದಿದ್ದೇನೆ, ಯೋಚಿಸಬೇಡಿ, ಕಟ್ಟಿಸಿಕೊಡುತ್ತೇನೆ ಎಂದು ಭರವಸೆ ನೀಡಿ ತೆರಳಿದರು.
ಗ್ರಾಮದ ಹನುಮಂತನ ದೇವಸ್ಥಾನದಲ್ಲಿ ಕುಟುಂಬ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.
ತೆರೆದ ವಾಹನದಲ್ಲಿ ನಿಖಿಲ್ ಕುಮಾರಸ್ವಾಮಿ, ಶಾಸಕ ನಾರಾಯಣಗೌಡ, ಜಿಪಂ ಸದಸ್ಯ ಎಚ್.ಟಿ.ಮಂಜು ಹಾಗೂ ಮುಖಂಡರು ರೋಡ್ ಷೋ ನಡೆಸಿದರು.
ಜಿಪಂ ಮಾಜಿ ಅಧ್ಯಕ್ಷೆ ಪ್ರೇಮಾಕುಮಾರಿ, ಉಪಾಧ್ಯಕ್ಷೆ ಗಾಯತ್ರಿ, ಜಿಪಂ ಸದಸ್ಯರಾದ ದೇವರಾಜು, ರಾಮದಾಸ್, ಹಾಸನ ಜಿಪಂ ಸದಸ್ಯ ಚೋಳನಹಳ್ಳಿ ಪುಟ್ಟಸ್ವಾಮಿಗೌಡ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾಜು, ಸದಸ್ಯರಾದ ಜಾನಕೀರಾಂ, ಮೋಹನ್, ಪುರಸಭೆ ಸದಸ್ಯ ಸಂತೋಷ್ ಇದ್ದರು.
ಕೈಗೊನಹಳ್ಳಿ ಗ್ರಾಮದಲ್ಲಿ ನಿಖಿಲ್ ರೋಡ್ ಷೋ ನಡೆಸಿದರು. ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರು ಜೆಸಿಬಿ ಮೂಲಕ ಹೂಗಳನ್ನು ನಿಖಿಲ್ ಮೇಲೆ ಸುರಿಸಿದರು. ವೀರಭದ್ರೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.