ಆರ್​ಸಿಬಿಗೆ ಇಬ್ಬರು ಕೋಚ್​: ಗ್ಯಾರಿ ಕರ್ಸ್ಟನ್​ ಜತೆ ಕೈಜೋಡಿಸಿದ ಆಶಿಶ್​ ನೆಹ್ರಾ

ನವದೆಹಲಿ: ಇದುವೆರಗೂ ನಡೆದ ಐಪಿಎಲ್​ನ 11 ಆವೃತ್ತಿಯಲ್ಲೂ ಟ್ರೋಫಿಯನ್ನು ಎತ್ತಿಹಿಡಿಯದೇ ಬೆಂಗಳೂರಿಗರನ್ನು ನಿರಾಶೆಗೊಳಿಸಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಬಾರಿ ಶತಯಗತಾಯ ಟೂರ್ನಿಯನ್ನು ಗೆಲ್ಲಲ್ಲೇಬೇಕೆಂಬ ನಿರ್ಧಾರ ಮಾಡಿದಂತಿದೆ.

ಹೌದು, ಈ ಬಾರಿಯ ವಿಶೇಷವೆಂದರೆ ಆರ್​ಸಿಬಿ ತಂಡಕ್ಕೆ ಇಬ್ಬರು ಕೋಚ್​​. ಮುಖ್ಯ ಕೋಚ್​ ಆಗಿ ಈಗಾಗಲೇ ಟೀಂ ಇಂಡಿಯಾದ ವಿಶ್ವಕಪ್​ ವಿಜೇತ ಕೋಚ್​ ಗ್ಯಾರಿ ಕರ್ಸ್ಟನ್ ಇದ್ದು, ಅವರೊಂದಿಗೆ ಈಗಾಗಲೇ ಆರ್​ಸಿಬಿ ಬೌಲಿಂಗ್​ ಕೋಚ್​ ಆಗಿರುವ ಆಶಿಶ್ ನೆಹ್ರಾ ಅವರನ್ನು ಮುಖ್ಯ ಕೋಚ್​ರನ್ನಾಗಿ ಆಯ್ಕೆ ಮಾಡಿದ್ದಾರೆ.

ಕಳೆದ ಆವೃತ್ತಿಯಿಂದಲೇ ಆಶಿಸ್​ ನೆಹ್ರಾ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ.

ಕಳೆದ ಬಾರಿಯೇ ಉತ್ಸಾಹದಿಂದ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದೆ. ಈ ಬಾಗಿ ಕೋಚ್​ ಆಗಿ ತಂಡವನ್ನು ಮುನ್ನಡೆಸುತ್ತಿರುವುದು ನನ್ನ ಸೌಭಾಗ್ಯ. ನನ್ನನ್ನು ಕೋಚ್​ ಆಗಿ ಪರಿಗಣಿಸಿದ ತಂಡದ ನಿರ್ವಾಹಕರಿಗೆ ನಾನು ಧನ್ಯವಾದ ತಿಳಿಸಲು ಬಯಸುತ್ತೇನೆ. ಮುಂದಿನ ಆವೃತ್ತಿ ಯಶಸ್ವಿಯಾಗಿರಲು ಎದುರು ನೋಡುತ್ತಿದ್ದೇನೆ ಎಂದು ನೆಹ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಮಾದರಿಯ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿರುವ ನೆಹ್ರಾ ಅವರು ಎರಡು ಯಶಸ್ವಿ ವಿಶ್ವಕಪ್, ಎರಡು ಏಷ್ಯಾ ಕಪ್​ ಹಾಗೂ ಮೂರು ಚಾಂಪಿಯನ್ಸ್​ ಟ್ರೋಫಿಯ ಗೆಲುವಿನಲ್ಲಿ ಭಾಗಿಯಾಗಿದ್ದಾರೆ.​

ನೆಹ್ರಾ ಅವರು ಐಪಿಎಲ್​ನಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಡೆಲ್ಲಿ ಡೇರ್​ ಡೆವಿಲ್ಸ್​, ಮುಂಬೈ ಇಂಡಿಯನ್ಸ್​, ಪುಣೆ ವಾರಿಯರ್ಸ್​​, ಚೆನ್ನೈ ಸೂಪರ್​ ಕಿಂಗ್ಸ್​ ಹಾಗೂ ಸನ್​ ರೈಸರ್ಸ್​ ತಂಡಗಳಲ್ಲಿ ತಮ್ಮ ಬೌಲಿಂಗ್​ ಸಾಮರ್ಥ್ಯವನ್ನು ತೋರಿದ್ದಾರೆ. (ಏಜೆನ್ಸೀಸ್​)