ಮಗಳನ್ನು ಕಳೆದುಕೊಂಡ ಪಾಕ್​ ಬ್ಯಾಟ್ಸ್​ಮನ್​ ಆಸಿಫ್​ ಅಲಿ: ಇಂಗ್ಲೆಂಡ್​ನಿಂದ ಮರಳುವುದು ಅನಿವಾರ್ಯ

ನಾಟಿಂಗ್​ಹ್ಯಾಂ: ಇಂಗ್ಲೆಂಡ್​ ವಿರುದ್ಧದ ಏಕದಿನ ಪಂದ್ಯಾವಳಿಯಲ್ಲಿ ಆಡುತ್ತಿರುವ ಪಾಕಿಸ್ತಾನ ಬ್ಯಾಟ್ಸ್​ಮನ್​ ಆಸಿಫ್​ ಅಲಿ ಅವರಿಗೆ ಅತಿದೊಡ್ಡ ಆಘಾತ ಉಂಟಾಗಿದ್ದು ಅವರು ಕೂಡಲೇ ಇಂಗ್ಲೆಂಡ್​ ಪ್ರವಾಸದಿಂದ ಮರಳಲಿದ್ದಾರೆ.

ಅಸಿಫ್​ ಅಲಿಯವರ ಎರಡು ವರ್ಷದ ಹೆಣ್ಣು ಮಗು ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾಳೆ. ನಾಲ್ಕನೇ ಹಂತದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಆ ಪುಟ್ಟ ಮಗುವಿಗೆ ಅಮೆರಿಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಪಾಕಿಸ್ತಾನ ಹಾಗೂ ಇಂಗ್ಲೆಂಡ್​ ನಡುವೆ ನಡೆಯುತ್ತಿರುವ ಏಕದಿನ ಪಂದ್ಯಾವಳಿಯ ತಂಡದಲ್ಲಿ ಆಸಿಫ್​ ಅಲಿ ಸದ್ಯ ಆಟವಾಡುತ್ತಿದ್ದು ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿವೆ. ಇನ್ನೊಂದು ಪಂದ್ಯ ಭಾನುವಾರ ನಡೆಯುವುದಿದೆ.

ಪಾಕಿಸ್ತಾನದ ಕ್ರಿಕೆಟ್​ ತಂಡದ ಮ್ಯಾನೇಜರ್​ ಆಸಿಫ್​ ಅಲಿ ಮಗುವಿನ ಸಾವನ್ನು ದೃಢಪಡಿಸಿದ್ದು, ತಂಡದ ಹಲವು ಆಟಗಾರರು ಕೂಡ ಟ್ವೀಟರ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಆಸಿಫ್​ ಅಲಿ ಈ ಹಿಂದೆ ಟ್ವೀಟ್​ ಮಾಡಿ ತಮ್ಮ ಮಗು ಕ್ಯಾನ್ಸರ್​ನಿಂದ ಬಳಲುತ್ತಿದೆ. ಆಕೆಯ ಉಳಿವಿಗಾಗಿ ಪ್ರಾರ್ಥನೆ ಮಾಡಿ ಎಂದು ತನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

ಪಾಕಿಸ್ತಾನ ಸೂಪರ್​ ಲೀಗ್​ ಇಸ್ಲಾಮಾಬಾದ್​ ಯುನಿಟ್​ ಟ್ವೀಟ್​ ಮಾಡಿದ್ದು, ಆಸಿಫ್​ ಅಲಿ ತಮ್ಮ ಮಗಳನ್ನು ಕಳೆದುಕೊಂಡಿದ್ದರ ಬಗ್ಗೆ ನಮಗೆಲ್ಲ ಅಪಾರ ನೋವು ಉಂಟಾಗಿದೆ. ಆಸಿಫ್​ ಅಲಿ ಅವರು ಧೈರ್ಯ ಮತ್ತು ಶಕ್ತಿಗೆ ಉತ್ತಮ ಉದಾಹರಣೆ. ಅವರು ನಮಗೆಲ್ಲ ತುಂಬ ಸ್ಫೂರ್ತಿ. ಅಸಿಫ್​ ಅಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ತನ್ನ ಸಂತಾಪ ವ್ಯಕ್ತಪಡಿಸಿದೆ.

ಆಸಿಫ್​ ಅಲಿ ಇಂಗ್ಲೆಂಡ್​ ವಿರುದ್ಧದ ಸರಣಿಯ ಹಿಂದಿನ ನಾಲ್ಕೂ ಪಂದ್ಯಗಳಲ್ಲಿ ಆಟವಾಡಿದ್ದು ಒಟ್ಟು 142 ರನ್​ ಗಳಿಸಿದ್ದಾರೆ. ಆದರೆ ಈಗಾಗಲೇ ಸರಣಿಯನ್ನು ಇಂಗ್ಲೆಂಡ್​ ಜಯಿಸಿದೆ.

Leave a Reply

Your email address will not be published. Required fields are marked *