ಪ್ಯಾರಾ ಏಷ್ಯಾಡ್​ನಲ್ಲಿ ಭಾರತ ಭರ್ಜರಿ ಪದಕ ಬೇಟೆ

ಜಕಾರ್ತ: ಹಾಲಿ ವರ್ಷದ ಹೆಚ್ಚಿನ ಎಲ್ಲ ಕ್ರೀಡಾಕೂಟಗಳಲ್ಲಿ ಭಾರತದ ಕ್ರೀಡಾಪಟುಗಳು ಹಿಂದಿನ ಎಲ್ಲ ಕೂಟದ ದಾಖಲೆಗಳನ್ನು ಮುರಿದಂತೆ, ಏಷ್ಯನ್ ಪ್ಯಾರಾ ಗೇಮ್ಸ್​ನಲ್ಲೂ ಭಾರತದ ಐತಿಹಾಸಿಕ ನಿರ್ವಹಣೆ ದಾಖಲಾಗಿದೆ. ಮಂಗಳವಾರ ನಡೆದ 4ನೇ ದಿನದ ಸ್ಪರ್ಧೆಯಲ್ಲಿ ಭಾರತ 3 ಚಿನ್ನದೊಂದಿಗೆ 11 ಪದಕ ಗೆದ್ದಿದೆ. 2014ರ ಏಷ್ಯನ್ ಪ್ಯಾರಾ ಗೇಮ್ಸ್​ನಲ್ಲಿ ಭಾರತ ತಂಡ 3 ಚಿನ್ನದೊಂದಿಗೆ ಒಟ್ಟು 33 ಪದಕ ಗೆದ್ದಿರುವುದೇ ಈವರೆಗಿನ ಸಾಧನೆಯಾಗಿತ್ತು. ಸದ್ಯ ಕೂಟದಲ್ಲಿ ಭಾರತ 28 ಪದಕ ಗೆದ್ದಿದ್ದು, ಇನ್ನೂ ನಾಲ್ಕು ದಿನಗಳ ಸ್ಪರ್ಧೆ ಇರುವ ಕಾರಣ ಈ ದಾಖಲೆಯನ್ನೂ ಮುರಿಯಲಿದೆ.

3ನೇ ದಿನದ ಸ್ಪರ್ಧೆಯಲ್ಲಿ ಗರಿಷ್ಠ ಪದಕ ಗೆದ್ದುಕೊಟ್ಟಿದ್ದ ಪ್ಯಾರಾ ಅಥ್ಲೆಟಿಕ್ಸ್​ನಲ್ಲಿಯೇ ಮಂಗಳವಾರವೂ ಹೆಚ್ಚಿನ ಪದಕ ಬಂದವು. ಕ್ಲಬ್ ಥ್ರೋ ವಿಭಾಗದಲ್ಲಿ ಹರಿಯಾಣದ ಎಕ್ತಾ ಭ್ಯಾನ್, ಪುರುಷರ 100 ಮೀಟರ್ ವಿಭಾಗದಲ್ಲಿ ನಾರಾಯಣ್​ಠಾಕೂರ್ ಸ್ವರ್ಣ ಜಯಿಸಿದರೆ, ಪುರುಷರ ಶೂಟಿಂಗ್ 10 ಮೀ. ಏರ್​ಪಿಸ್ತೂಲ್ ವಿಭಾಗದಲ್ಲಿ ಮನೀಷ್ ನರ್ವಾಲ್ ಚಿನ್ನದ ಸಾಧನೆ ಮಾಡಿದರು. ಉಳಿದಂತೆ ಪ್ಯಾರಾ ಅಥ್ಲೆಟಿಕ್ಸ್​ನಲ್ಲಿಯೇ ಭಾರತ 3 ಬೆಳ್ಳಿ ಹಾಗೂ 5 ಕಂಚಿನ ಸಾಧನೆ ಮಾಡಿತು.

33 ವರ್ಷದ ಎಕ್ತಾ ಭ್ಯಾನ್ ದಿನದ ಮೊದಲ ಸ್ವರ್ಣ ಗೆಲ್ಲಿಸಿಕೊಟ್ಟರು. ಮಹಿಳೆಯರ ಕ್ಲಬ್​ಥ್ರೋ ವಿಭಾಗದ ಎಫ್ 32/51 ಸ್ಪರ್ಧೆಯಲ್ಲಿ ಕಟ್ಟಿಗೆಯ ದಂಡವನ್ನು ನಾಲ್ಕನೇ ಯತ್ನದಲ್ಲಿ 16.02 ಮೀಟರ್ ದೂರ ಎಸೆದ ಎಕ್ತಾ ಸ್ವರ್ಣ ಗೆದ್ದರು. ಯುಎಇಯ ಅಲ್ಕಾಬಿ ಥೇಕ್ರಾ 15.75ಮೀಟರ್ ಎಸೆದು ಬೆಳ್ಳಿ ಪದಕ ಜಯಿಸಿದರು. ಈ ವರ್ಷದ ಆರಂಭದಲ್ಲಿ ನಡೆದ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಪದಕ ಗೆಲ್ಲುವ ಮೂಲಕ ಏಷ್ಯನ್ ಪ್ಯಾರಾ ಗೇಮ್ಸ್​ಗೆ ತೆರಳಿದ್ದರು. ಕ್ಲಬ್ ಥ್ರೋನ ಈ ವಿಭಾಗದ ಕ್ಲಾಸ್​ನಲ್ಲಿ ಎರಡೂ ಕೈಗಳ ವಿಕಲಾಂಗವಾಗಿರುವ ಸ್ಪರ್ಧಿಗಳು ಮಾತ್ರವೇ ಕಣಕ್ಕಿಳಿಯುತ್ತಾರೆ. ವೀಲ್​ಚೇರ್​ನಲ್ಲಿ ಕುಳಿತು ಲೋಹದ ಹಿಡಿಕೆ ಹೊಂದಿರುವ 397 ಗ್ರಾಮ್ ಕಟ್ಟಿಗೆಯ ದಂಡವನ್ನು ಎಸೆಯಬೇಕಿರುತ್ತದೆ. -ಏಜೆನ್ಸೀಸ್

ನಾರಾಯಣ್ ಠಾಕೂರ್​ಗೆ ಸ್ವರ್ಣ

ಬೆಂಗಳೂರಿನಲ್ಲಿ ನಡೆದ ಇಂಡಿಯಾ ಓಪನ್ ಪ್ಯಾರಾ ಅಥ್ಲೆಟಿಕ್ಸ್​ನ 100 ಮೀ ಹಾಗೂ 200ಮೀ ವಿಭಾಗದಲ್ಲಿ ಸ್ವರ್ಣ ಗೆದ್ದಿದ್ದ ನಾರಾಯಣ್ ಠಾಕೂರ್, ಟಿ35 ಕ್ಲಾಸ್​ನ ಪುರುಷರ 100 ಮೀ ವಿಭಾಗದಲ್ಲಿ 14 ನಿಮಿಷ.02 ಸೆಕೆಂಡ್​ನಲ್ಲಿ ಗುರಿ ಮುಟ್ಟಿ ಸ್ವರ್ಣ ಜಯಿಸಿದರು. ಈ ವಿಭಾಗದ ಬೆಳ್ಳಿಯನ್ನು ಸೌದಿ ಅರೇಬಿಯಾದ ಅದ್ವಾಯಿ ಅಹ್ಮದ್ ಜಯಿಸಿದರೆ, ಕಂಚಿನ ಪದಕವನ್ನು ಹಾಂಕಾಂಗ್​ನ ಬಾವೋ ಚಿ ಯು ಗೆದ್ದರು.

ಐದು ಕಂಚಿನ ಗರಿ

ಪುರುಷರ ಶಾಟ್​ಪುಟ್ ಕ್ಲಾಸ್ ಎಫ್11 ವಿಭಾಗದಲ್ಲಿ ಮೋನು ಚಾಂಗಾಸ್ 11.38 ಮೀಟರ್ ದೂರ ಎಸೆಯುವ ಮೂಲಕ ಭಾರತಕ್ಕೆ ಫೀಲ್ಡ್ ವಿಭಾಗದಲ್ಲಿ ದಿನದ ಮೊದಲ ಪದಕ ಗೆದ್ದುಕೊಟ್ಟರು. ಈ ಸಾಧನೆಗೆ ಅವರು ಕಂಚಿನ ಪದಕ ಜಯಿಸಿದರು. ಆ ಬಳಿಕ ನಡೆದ ಪುರುಷರ 200ಮೀ ಟಿ44, ಟಿ62/64 ವಿಭಾಗದಲ್ಲಿ ಆನಂದನ್ ಗುಣಶೇಖರನ್ 24.45 ಸೆಕೆಂಡ್​ನಲ್ಲಿ ಗುರಿ ಮುಟ್ಟಿ 3ನೇ ಸ್ಥಾನ ಪಡೆದರು. ಮಹಿಳೆಯರ 200 ಮೀ ಟಿ45/46/47 ಕ್ಲಾಸ್ ವಿಭಾಗದಲ್ಲಿ ಜಯಂತಿ ಬೆಹರಾ 27.45 ಸೆಕೆಂಡ್​ನಲ್ಲಿ ಗುರಿ ಮುಟ್ಟಿ ಕಂಚು ಗೆದ್ದರು. ಪುರುಷರ ಡಿಸ್ಕಸ್ ಥ್ರೋ ಎಫ್ 46 ಕ್ಲಾಸ್ ವಿಭಾಗದಲ್ಲಿ ಸುಂದರ್ ಸಿಂಗ್ ಗುರ್ಜರ್ 47.10 ಸೆಕೆಮಢ್ ನಿರ್ವಹಣೆಯೊಂದಿಗೆ ಕಂಚು ಗೆದ್ದರು. ತಮ್ಮ 2ನೇ ಯತ್ನದಲ್ಲಿ ಸುಂದರ್ ಸಿಂಗ್ ಪದಕದ ನಿರ್ವಹಣೆ ದಾಖಲಿಸಿದ್ದರು.

ಮನೀಷ್ ನರ್ವಾಲ್​ಗೆ ಎರಡನೇ ಪದಕ

ಮಿಶ್ರ ತಂಡದ 50ಮೀ ಫ್ರೀ ಪಿಸ್ತೂಲ್​ನಲ್ಲಿ (ಎಸ್​ಎಚ್1) ಬೆಳ್ಳಿ ಪದಕ ಗೆದ್ದಿದ್ದ ಮನೀಷ್ ನರ್ವಾಲ್, ಪುರುಷರ 100 ಮೀ ಏರ್​ಪಿಸ್ತೂಲ್​ನಲ್ಲಿ (ಎಸ್​ಎಚ್1) ಸ್ವರ್ಣ ಸಾಧನೆ ಮಾಡಿದರು. ಏರ್ ಪಿಸ್ತೂಲ್​ನಲ್ಲಿ ಏಷ್ಯನ್ ಪ್ಯಾರಾ ಗೇಮ್್ಸ ದಾಖಲೆಯೊಂದಿಗೆ ಮನೀಷ್ ಅಗ್ರಸ್ಥಾನ ಪಡೆದರು. ಅರ್ಹತಾ ಹಂತದಲ್ಲಿ 577 ಅಂಕದೊಂದಿಗೆ 2ನೇ ಸ್ಥಾನ ಪಡೆದು ಫೈನಲ್​ಗೇರಿದ್ದರು.

ಅನೀಷ್, ರಾಂಪಾಲ್, ವೀರೇಂದರ್​ಗೆ ಬೆಳ್ಳಿ

ಪುರುಷರ ಡಿಸ್ಕಸ್ ಥ್ರೋ ವಿಭಾಗ (ಎಫ್ 43/44, ಎಫ್62/64) ವಿಭಾಗದಲ್ಲಿ ಅನೀಷ್ ಕುಮಾರ್ ಬೆಳ್ಳಿ ಗೆದ್ದರು. ಈ ವಿಭಾಗದ ಕಂಚಿನ ಪದಕ ಕೂಡ ಭಾರತದ ಪಾಲಾಯಿತು. ತನ್ನ 5ನೇ ಯತ್ನದಲ್ಲಿ ಸುರೇಂದರನ್ ಪಿಳೈ ಅನೀಷ್ ಕುಮಾರ್ 45.41 ಮೀಟರ್ ದೂರ ಎಸೆದು ಬೆಳ್ಳಿ ಪದಕ ಜಯಿಸಿದರು. ಪ್ರದೀಪ್, ತನ್ನ ಕೊನೆಯ ಯತ್ನದಲ್ಲಿ 46.64 ಮೀಟರ್ ದೂರ ಡಿಸ್ಕಸ್ ಎಸೆದು ಕಂಚು ಗೆದ್ದುಕೊಂಡರು. ಇರಾನ್​ನ ಫರ್ಜಾದ್ ವಿಶ್ವದಾಖಲೆಯ 54.61 ಮೀಟರ್ ಸಾಧನೆಯೊಂದಿಗೆ ಸ್ವರ್ಣ ಮುಡಿಗೇರಿಕೊಂಡರು. ಪುರುಷರ ಹೈಜಂಪ್​ನ ಕ್ಲಾಸ್ ಟಿ45/46/47 ವಿಭಾಗದಲ್ಲಿ ರಾಂಪಾಲ್ ವೈಯಕ್ತಿಕ ಶ್ರೇಷ್ಠ 1.94 ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಜಯಿಸಿದರು. ಚೀನಾದ ಚೆನ್ ಹಾಂಗ್ಜೀ ಕೂಡ ಇಷ್ಟೇ ದೂರವನ್ನು ಹಾರಿದ್ದರಿಂದ ಬೆಳ್ಳಿ ಪದಕವನ್ನು ಇಬ್ಬರಿಗೂ ವಿತರಿಸಲಾಯಿತು. ಪುರುಷರ ಶಾಟ್​ಪುಟ್​ನ ಎಫ್ 56/57 ಕ್ಲಾಸ್ ವಿಭಾಗದಲ್ಲಿ ವೀರೇಂದರ್ 14.23 ಮೀಟರ್ ದೂರ ಎಸೆದು ಬೆಳ್ಳಿ ಪದಕ ಗೆದ್ದರು.