Friday, 16th November 2018  

Vijayavani

Breaking News

ಇಂದಿನಿಂದ ಏಷ್ಯಾದ ಕ್ರೀಡಾಹಬ್ಬ

Saturday, 18.08.2018, 3:01 AM       No Comments

ಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್​ಗಳಂತೆ ಏಷ್ಯಾದ ದೇಶಗಳನ್ನು ಒಗ್ಗೂಡಿಸುವ ಕ್ರೀಡಾಕೂಟ ಏಷ್ಯನ್ ಗೇಮ್ಸ್​. ಏಷ್ಯಾಡ್ ಎಂದೇ ಜನಪ್ರಿಯವಾಗಿರುವ ಈ ಕ್ರೀಡಾಕೂಟದ ಪ್ರಥಮ ಆವೃತ್ತಿಯನ್ನು ಅಯೋಜಿಸಿದ ಹೆಮ್ಮೆ ಭಾರತದ್ದು. 1951 ಹಾಗೂ 1982ರಲ್ಲಿ ನವದೆಹಲಿಯಲ್ಲಿ ಭಾರತ ಈ ಕೂಟದ ಆತಿಥ್ಯ ವಹಿಸಿತ್ತು. ಇಂಡೋನೇಷ್ಯಾದ ಆತಿಥ್ಯದಲ್ಲಿ 18ನೇ ಆವೃತ್ತಿಯ ಕ್ರೀಡಾಕೂಟ ಶನಿವಾರ ಆರಂಭಗೊಳ್ಳಲಿದೆ. ವಿಯೆಟ್ನಾಂನ ಹನೋಯಿಯಲ್ಲಿ ಗೇಮ್ಸ್​ ನಡೆಯಬೇಕಿತ್ತಾದರೂ ಆರ್ಥಿಕ ಕಾರಣದಿಂದ ವಿಯೆಟ್ನಾಂ ಹಿಂದೆ ಸರಿದ ಕಾರಣ, ಇಂಡೋನೇಷ್ಯಾಗೆ 2018ರ ಏಷ್ಯಾಡ್ ಆಯೋಜಿಸುವ ಅದೃಷ್ಟ ಒಲಿದಿತ್ತು. ಏಷ್ಯಾಡ್​ಗೆ ಅವಳಿ ನಗರ ಆತಿಥ್ಯ ವಹಿಸಿಕೊಳ್ಳುತ್ತಿರುವುದು ಇದೇ ಮೊದಲು. ಭಾರತ ಕ್ರೀಡಾಕೂಟಕ್ಕೆ ದಾಖಲೆಯ 572 ಕ್ರೀಡಾಪಟುಗಳನ್ನು ಕಳುಹಿಸಿಕೊಟ್ಟಿದೆ. ಸೆಪ್ಟೆಂಬರ್ 2ರವರೆಗೆ ಏಷ್ಯಾದ ಕಣ್ಣು ಇಂಡೋನೇಷ್ಯಾದ ಮೇಲಿರಲಿದೆ.

ಕುಸ್ತಿ

ಇಂಚೋನ್ ಏಷ್ಯಾಡ್ ಬೆಳ್ಳಿ ವಿಜೇತ ಭಜರಂಗ್ ಪೂನಿಯಾ ಭರ್ಜರಿ ಲಯದಲ್ಲಿದ್ದು, ಇತ್ತೀಚೆಗೆ ತಾವು ಸ್ಪರ್ಧಿಸಿದ 6 ಅಂತಾರಾಷ್ಟ್ರೀಯ ಕೂಟಗಳಲ್ಲೂ ಪದಕ ಸಾಧನೆ ಮಾಡಿದ್ದಾರೆ. ಅವರೊಂದಿಗೆ ಭಾರತದ ಅತ್ಯಂತ ಯಶಸ್ವಿ ಒಲಿಂಪಿಯನ್ ಸುಶೀಲ್ ಕುಮಾರ್ ಮೇಲೆಯೂ ಪದಕ ನಿರೀಕ್ಷೆ ಇದೆ. ರಿಯೋ ಒಲಿಂಪಿಕ್ಸ್​ನಲ್ಲಿ ಗಾಯಗೊಂಡು ಅಘಾತಕಾರಿಯಾಗಿ ಸ್ಪರ್ಧೆ ಮುಗಿಸಿದ್ದ ಮಹಿಳಾ ರೆಸ್ಲರ್ ವಿನೇಶ್ ಪೋಗಟ್ ಮೇಲೆಯೂ ಹೆಚ್ಚಿನ ನಿರೀಕ್ಷೆ ಇದೆ.

ಸ್ಪರ್ಧಿಗಳು: 18, ಪಣಕ್ಕಿರುವ ಸ್ವರ್ಣ: 18

ಇತರ ಪ್ರಮುಖ ಸ್ಪರ್ಧಿಗಳು: ಸಂದೀಪ್ ತೋಮರ್ (57 ಕೆಜಿ), ಪೂಜಾ ಧಂಡಾ (62 ಕೆಜಿ), ದಿವ್ಯಾ ಕಾಕ್ರನ್ (68 ಕೆಜಿ).

ಸ್ಪರ್ಧೆಯ ದಿನಾಂಕ: 19-22


ಬ್ಯಾಡ್ಮಿಂಟನ್

ಏಷ್ಯಾಡ್​ನ ಪ್ರಮುಖ ಸ್ಪರ್ಧೆ ಬ್ಯಾಡ್ಮಿಂಟನ್. ಇಲ್ಲಿಯ ನಿರ್ವಹಣೆಯನ್ನು ಒಲಿಂಪಿಕ್ ಮಟ್ಟದಲ್ಲಿ ಅಳೆಯಬಹುದು. ಎಂದಿನಂತೆ ಹಾಲಿ ವಿಶ್ವ ಚಾಂಪಿಯನ್​ಷಿಪ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಅವರೊಂದಿಗೆ ಸೈನಾ ನೆಹ್ವಾಲ್ ಮೇಲೂ ನಿರೀಕ್ಷೆ ಇಡಬಹುದು. ಕ್ಯಾರೊಲಿನ್ ಮರಿನ್ ಸ್ಪರ್ಧೆಗೆ ಇಲ್ಲದಿರುವುದು ಅವರಿಗೆ ನೆರವಾಗಬಹುದು. ಪುರುಷರ ವಿಭಾಗದಲ್ಲಿ ಕೆ. ಶ್ರೀಕಾಂತ್ ಫೇವರಿಟ್ ಆಗಿದ್ದಾರೆ.

ಸ್ಪರ್ಧಿಗಳು: 20, ಪಣಕ್ಕಿರುವ ಸ್ವರ್ಣ: 7

ಇತರ ಪ್ರಮುಖ ಸ್ಪರ್ಧಿಗಳು: ಅಶ್ವಿನಿ ಪೊನ್ನಪ್ಪ, ಸಾತ್ವಿಕ್ ​ಸಾಯಿರಾಜ್ ರಂಕಿರೆಡ್ಡಿ, ಸಿಕ್ಕಿ ರೆಡ್ಡಿ

ಸ್ಪರ್ಧೆಯ ದಿನಾಂಕ: 19-28


ಶೂಟಿಂಗ್

ಅನುಭವಿ ಶೂಟರ್​ಗಳೆಲ್ಲ ತೆರೆಮರೆಗೆ ಸರಿದ ಬೆನ್ನಲ್ಲಿಯೇ ಭಾರತ ಶೂಟಿಂಗ್ ತಂಡದ ಜವಾಬ್ದಾರಿ ಯುವ ಶೂಟರ್​ಗಳ ಹೆಗಲೇರಿದೆ. ಮನು ಭಾಕರ್, ಅನೀಶ್ ಭನ್ವಾಲಾ ಕಳೆದ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಅದ್ಭುತ ನಿರ್ವಹಣೆಯ ಮೂಲಕ ಗಮನಸೆಳೆದಿದ್ದಾರೆ. 16 ವರ್ಷದ ಮನು ಹಾಗೂ ಅನೀಶ್​ರೊಂದಿಗೆ ಅನುಭವಿಗಳಾದ ಅಪೂರ್ವಿ ಚಾಂಡೆಲಾ, ಶ್ರೇಯಸಿ ಸಿಂಗ್ ಮೇಲೆ ಎಲ್ಲರ ಗಮನ ಇರಲಿದೆ.

ಸ್ಪರ್ಧಿಗಳು: 29, ಪಣಕ್ಕಿರುವ ಸ್ವರ್ಣ: 20

ಇತರ ಪ್ರಮುಖ ಸ್ಪರ್ಧಿಗಳು: ರಾಹಿ ಸನೋಬಾಟ್, ರವಿ ಕುಮಾರ್, ಮಾನವ್​ಜೀತ್ ಸಿಂಗ್ ಸಂಧು, ಎಲಾವೆನಿಲ್ ವಲರಿವನ್

ಸ್ಪರ್ಧೆಯ ದಿನಾಂಕ: 19-26


ಟೆನಿಸ್

ಚೀನಾ ಹಾಗೂ ದಕ್ಷಿಣ ಕೊರಿಯಾದಿಂದ ಪ್ರಬಲ ಪೈಪೋಟಿ ಎದುರಾಗಲಿರುವ ವಿಭಾಗ ಟೆನಿಸ್. ಅಗ್ರ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಜೋಡಿಯ ಮೇಲೆ ಸ್ವರ್ಣ ಪದಕದ ಭಾರವಿದೆ. 2014ರ ಗೇಮ್ಸ್​ನ ಮಿಶ್ರ ಡಬಲ್ಸ್​ನಲ್ಲಿ ಸಾನಿಯಾ ಹಾಗೂ ಸಾಕೇತ್ ಮೈನೇನಿ ಜೋಡಿ ಸ್ವಣ ಜಯಿಸಿತ್ತು. ಈ ಬಾರಿ ಸಾನಿಯಾ ಮಿರ್ಜಾ ಹಾಗೂ ಅನುಭವಿ ಲಿಯಾಂಡರ್ ಪೇಸ್ ಇಲ್ಲದೆ ತಂಡ ಕಣಕ್ಕಿಳಿಯುತ್ತಿದೆ.

ಸ್ಪರ್ಧಿಗಳು: 11, ಪಣಕ್ಕಿರುವ ಸ್ವರ್ಣ: 5

ಇತರ ಪ್ರಮುಖ ಸ್ಪರ್ಧಿಗಳು: ರಾಮಕುಮಾರ್ ರಾಮನಾಥನ್, ಅಂಕಿತಾ ರೈನಾ, ಪ್ರಾರ್ಥನಾ ಥೋಂಬಾರೆ.

ಸ್ಪರ್ಧೆಯ ದಿನಾಂಕ: 19-25


ಅಥ್ಲೆಟಿಕ್ಸ್

ಏಷ್ಯಾಡ್​ನಲ್ಲಿ ಚೀನಾ, ಜಪಾನ್ ಬಿಟ್ಟರೆ ಅಥ್ಲೆಟಿಕ್ಸ್​ನ ಬಲಾಢ್ಯ ತಂಡ ಭಾರತ. ಒಲಿಂಪಿಕ್ ಹಾಗೂ ಕಾಮನ್ವೆಲ್ತ್ ಗೇಮ್ಸ್​ನಂತೆ ಅಥ್ಲೆಟಿಕ್ಸ್​ನ ಶಕ್ತಿಕೇಂದ್ರಗಳು ಗೇಮ್ಸ್​ನಲ್ಲಿ ಇರುವುದಿಲ್ಲ. ಇದರಿಂದಾಗಿ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ, ಡಿಸ್ಕಸ್ ಥ್ರೋ ಅಥ್ಲೀಟ್ ಸೀಮಾ ಪೂನಿಯಾ ಹಾಗೂ ಇತ್ತೀಚಿನ ಸೆನ್ಸೇಷನ್ ಹಿಮಾ ದಾಸ್ ಮೇಲೆ ಸ್ವರ್ಣ ಪದಕದ ನಿರೀಕ್ಷೆ ಇಡಬಹುದು.

ಸ್ಪರ್ಧಿಗಳು: 51, ಪಣಕ್ಕಿರುವ ಸ್ವರ್ಣ: 48

ಇತರ ಪ್ರಮುಖ ಸ್ಪರ್ಧಿಗಳು: ದ್ಯುತೀ ಚಂದ್, ಸುಧಾ ಸಿಂಗ್, ಮಹಿಳೆಯರ 4/400ಮೀ ರಿಲೇ ತಂಡ, ಜಿ. ಲಕ್ಷ್ಮಣನ್

ಸ್ಪರ್ಧೆಯ ದಿನಾಂಕ: 25-30


ಕಬಡ್ಡಿ

ಈ ವಿಭಾಗದಲ್ಲಿ ಭಾರತ ಫೇವರಿಟ್. ಇದರಲ್ಲಿ ಚಿನ್ನ ಗೆಲ್ಲದೆ ಇದ್ದರೆ ಭಾರತಕ್ಕೆ ನಿರಾಸೆಯಾಗಲಿದೆ. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಕಳೆದ ಟೂರ್ನಿಯಲ್ಲಿ ಭಾರತ ಚಿನ್ನ ಜಯಿಸಿತ್ತು. ಎಂದಿನಂತೆ ಭಾರತದ ಸ್ವರ್ಣದ ಆಸೆಯನ್ನು ಭಗ್ನ ಮಾಡುವ ಶಕ್ತಿ ಹೊಂದಿರುವ ಏಕೈಕ ತಂಡ ಇರಾನ್. ಏಷ್ಯಾಡ್​ನ ಪುರುಷರ ವಿಭಾಗದಲ್ಲಿ ಈವರೆಗೂ ಆಡಿರುವ 7 ಟೂರ್ನಿಗಳಲ್ಲೂ ಭಾರತ ಸ್ವರ್ಣ ಗೆದ್ದಿದ್ದರೆ, 2010ರಿಂದ ಮಹಿಳಾ ವಿಭಾಗದ ಏಷ್ಯಾಡ್ ಕಬಡ್ಡಿ ಆರಂಭಿಸಲಾಗಿದ್ದು, ಎರಡೂ ಟೂರ್ನಿಗಳಲ್ಲಿ ಭಾರತವೇ ಚಾಂಪಿಯನ್ ಆಗಿದೆ.

ಸ್ಪರ್ಧಿಗಳು: 24 | ಪಣಕ್ಕಿರುವ ಸ್ವರ್ಣ: 2

ಸ್ಪರ್ಧೆಯ ದಿನಾಂಕ: 19-23


ಹಾಕಿ

ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಇದರಲ್ಲಿ ಫೇವರಿಟ್. ಪುರುಷರ ತಂಡ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದ್ದರೆ, ಮಹಿಳಾ ತಂಡ ಕಳೆದ ಕೂಟದಲ್ಲಿ ಕಂಚಿನ ಪದಕ ಗೆದ್ದಿತ್ತು. ಚಾಂಪಿಯನ್ ಆದಲ್ಲಿ 2020ರ ಒಲಿಂಪಿಕ್ಸ್ ಪ್ರವೇಶ ನಿಶ್ಚಯವಾಗುವುದರಿಂದ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಬಹುದು. ಪುರಷರ ವಿಭಾಗದಲ್ಲಿ ದಕ್ಷಿಣ ಕೊರಿಯಾ ಹಾಗೂ ಪಾಕಿಸ್ತಾನ, ಮಹಿಳಾ ವಿಭಾಗದಲ್ಲಿ ಚೀನಾ ಹಾಗೂ ದಕ್ಷಿಣ ಕೊರಿಯಾದಿಂದ ಸವಾಲುಗಳಿವೆ.

ಸ್ಪರ್ಧಿಗಳು: 32, ಪಣಕ್ಕಿರುವ ಸ್ವರ್ಣ: 2

ಸ್ಪರ್ಧೆಯ ದಿನಾಂಕ: 19-ಸೆ.1


ಬಾಕ್ಸಿಂಗ್

ಬಲಿಷ್ಠ ಕಜಾಕಿಸ್ತಾನದ ಸ್ಪರ್ಧಿಗಳಿರುವ ವಿಭಾಗ ಬಾಕ್ಸಿಂಗ್. ಭಾರತವೂ ಬಲಿಷ್ಠವಾಗಿದ್ದರೂ, 2014ರಲ್ಲಿ ಕೇವಲ 1 ಸ್ವರ್ಣ ಗೆದ್ದಿತ್ತು. ಈ ಬಾರಿ ವಿಕಾಸ್ ಕೃಷ್ಣನ್, ಶಿವ ಥಾಪ ಹಾಗೂ ಸೆನ್ಸೇಷನ್ ಸೋನಿಯಾ ಲಾಥೆರ್ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಗಳಿವೆ. ಎಂಸಿ ಮೇರಿ ಕೋಮ್ ಗೇಮ್್ಸ ಅಲಭ್ಯರಾಗಿದ್ದಾರೆ.

ಸ್ಪರ್ಧಿಗಳು: 10, ಪಣಕ್ಕಿರುವ ಸ್ವರ್ಣ: 13 ಇತರ

ಪ್ರಮುಖ ಸ್ಪರ್ಧಿಗಳು: ಮೊಹಮದ್ ಹಸಮುದ್ದೀನ್, ಮನೋಜ್ ಕುಮಾರ್, ಸರ್ಜುಬಾಲಾ ದೇವಿ.

ಸ್ಪರ್ಧೆಯ ದಿನಾಂಕ: 24-ಸೆ.1


ಜಕಾರ್ತದಲ್ಲಿ ವರ್ಣರಂಜಿತ ಚಾಲನೆ

ವಿಶ್ವ ಕ್ರೀಡಾಕೂಟಗಳ ಪೈಕಿ ಒಲಿಂಪಿಕ್ಸ್ ಬಳಿಕ 2ನೇ ಅತಿ ದೊಡ್ಡ ಕ್ರೀಡಾಕೂಟ ಎನಿಸಿರುವ ಏಷ್ಯಾಡ್ ಆತಿಥ್ಯಕ್ಕೆ ಇಂಡೋನೇಷ್ಯಾದ ರಾಜಧಾನಿ ಜಕಾರ್ತ ಹಾಗೂ ಪಾಲೆಂಬಾಂಗ್ ಸಜ್ಜಾಗಿದೆ. ಶನಿವಾರ ಸಂಜೆ ಭಾರತೀಯ ಕಾಲಮಾನ ಪ್ರಕಾರ 5.30ಕ್ಕೆ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ. ಇಂಡೋನೇಷ್ಯಾದ ಪ್ರಖ್ಯಾತ ನೃತ್ಯಗಾರ ಏಕೊ ಸುಪ್ರಿಯಾಂಟೊ ಮಾರ್ಗದರ್ಶನದಲ್ಲಿ ಏಷ್ಯಾಡ್ ಉದ್ಘಾಟನಾ ಸಮಾರಂಭ ನಡೆಯುತ್ತಿದೆ. ಜಕಾರ್ತದಲ್ಲಿರುವ ಸುಮಾರು 75 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಗೆಲೊರಾ ಬಂಗ್ ಕರ್ನೆ ಸ್ಟೇಡಿಯಂನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. 6 ಸಾವಿರ ಕಲಾವಿದರು ಏಕಕಾಲದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಸ್ಟಾರ್ ಸಂಗೀತಗಾರರಾದ ಅಂಗ್ಗುನ್, ವಿರಾ ವಾಲೆನ್, ಇಡೊ ಕೊಂಡೊಲಿಗಿಟ್, ಕಾಮಸಿಯಾನ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಗೀತ ಪ್ರಧಾನ ಕಾರ್ಯಕ್ರಮಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಸುಮಾರು 3 ಗಂಟೆಗಳ ಕಾಲ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಇಂಡೋನೇಷ್ಯಾ ದೇಶದ ಗತವೈಭವ ಅನಾವರಣಗೊಳ್ಳಲಿದೆ. ಸಮಾರಂಭದ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಸುಮಾರು 18 ಸಾವಿರ ಕಿಲೋ ಮೀಟರ್ ಸಂಚರಿಸಿದ ಕ್ರೀಡಾ ಜ್ಯೋತಿ ರಿಲೇ ಗುರುವಾರವಷ್ಟೇ ಜಕಾರ್ತ ಪ್ರವೇಶಿಸಿದೆ. ಬದ್ಧವೈರಿಗಳಾದ ಉತ್ತರ ಹಾಗೂ ದಕ್ಷಿಣ ಕೊರಿಯಾದ ರಾಷ್ಟ್ರಾಧ್ಯಕ್ಷರುಗಳಾದ ಕಿಮ್ ಜಾಂಗ್ ಹಾಗೂ ಮೂನ್ ಜಿಯಿನ್ ಉದ್ಘಾಟನಾ ಸಮಾರಂಭದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಭಾರತೀಯ ಮಹಿಳೆಯರಿಗೂ ಸೂಟುಬೂಟು: ಗೋಲ್ಡ್​ಕೋಸ್ಟ್ ಕಾಮನ್ವೆಲ್ತ್ ಗೇಮ್್ಸ ಮಾದರಿಯಂತೆಯೇ ಏಷ್ಯಾಡ್​ನಲ್ಲೂ ಭಾರತೀಯ ಮಹಿಳಾ ಕ್ರೀಡಾಪಟುಗಳು ಉದ್ಘಾಟನಾ ಸಮಾರಂಭದ ವೇಳೆ ಸೂಟುಬೂಟು ಧರಿಸಲಿದ್ದಾರೆ. ಭಾರತ ಪುರುಷರ ಹಾಗೂ ಮಹಿಳೆಯರು ಒಂದೇ ಬಣ್ಣದ ಪ್ಯಾಂಟ್, ಶರ್ಟ್ ಹಾಗೂ ಬ್ಲೇಜರ್ ತೊಡಲಿದ್ದಾರೆ.

ಒಲಿಂಪಿಕ್ಸ್​ಗೆ ದಿಕ್ಸೂಚಿ

ಕಳೆದ ಗೋಲ್ಡ್​ಕೋಸ್ಟ್ ಕಾಮನ್ವೆಲ್ತ್ ಗೇಮ್್ಸ ಯಶಸ್ಸಿನ ಬಳಿಕ ಭಾರತಕ್ಕೆ 2020ರ ಟೋಕಿಯೊ ಒಲಿಂಪಿಕ್ಸ್​ಗೆ ಸಿದ್ಧತೆ ನಡೆಸಲು ಇದೊಂದು ಅಪೂರ್ವ ಅವಕಾಶವಾಗಿದೆ. 1982ರಿಂದ ಪ್ರತಿ ಏಷ್ಯಾಡ್​ನಲ್ಲೂ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುತ್ತ ಬಂದಿರುವ ಚೀನಾ ಈ ಸಲವೂ ಪ್ರಾಬಲ್ಯ ಮೆರೆಯುವ ನಿರೀಕ್ಷೆ ಇದ್ದರೆ, ಎಂದಿನಂತೆ ದಕ್ಷಿಣ ಕೊರಿಯಾ ಮತ್ತು ಜಪಾನ್ 2ನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿವೆ.

ಇತರ ಸ್ವರ್ಣ ನಿರೀಕ್ಷೆಗಳು

ಜಿಮ್ನಾಸ್ಟಿಕ್ಸ್​ನಲ್ಲಿ ದೀಪಾ ಕರ್ವಕರ್ ದೀರ್ಘ ವಿಶ್ರಾಂತಿಯ ಬಳಿಕ ಸ್ಪರ್ಧೆ ಮಾಡುತ್ತಿದ್ದಾರೆ. ಟೇಬಲ್ ಟೆನಿಸ್​ನ ಶಕ್ತಿ ಕೇಂದ್ರ ಚೀನಾ ಸ್ಪರ್ಧೆಯ ನಡುವೆಯೂ ಮನಿಕಾ ಬಾತ್ರಾ ಸ್ವರ್ಣ ಗೆಲ್ಲುವ ಛಾತಿ ಹೊಂದಿದ್ದಾರೆ. ಅದರಂತೆ ಸ್ಕಾ್ವಷ್ ಕ್ರೀಡೆಯಲ್ಲೂ ಒಂದು ಅಥವಾ ಎರಡು ಚಿನ್ನದ ಆಶಾವಾದ ಇಡಬಹುದು. ಏಷ್ಯಾಡ್ ಆರ್ಚರಿಯಲ್ಲಿ ಭಾರತದ ದೊಡ್ಡ ಮಟ್ಟದ ಸ್ಪರ್ಧೆಗೆ ದಕ್ಷಿಣ ಕೊರಿಯಾ ಅಡ್ಡಿಯಾಗಬಹುದು. ರೋಯಿಂಗ್​ನಲ್ಲಿ ಚಿನ್ನದ ನಿರೀಕ್ಷೆ ಕಡಿಮೆ ಇದ್ದರೂ ಒಂದೆರಡು ಪದಕದ ನಿರೀಕ್ಷೆ ಇದೆ.

ಪದಕ ನಿರೀಕ್ಷೆ ಕಡಿಮೆ

ಏಷ್ಯಾಡ್​ನಲ್ಲಿ ಭಾರತ ತಂಡ, ಸ್ವಿಮ್ಮಿಂಗ್ (ಸ್ಪರ್ಧಾ ದಿನಾಂಕ 19-24), ಬಾಸ್ಕೆಟ್​ಬಾಲ್ (21-26), ಬೌಲಿಂಗ್ (22-27), ಬ್ರಿಜ್ (21-ಸೆ.1), ಕನೋಯಿಂಗ್ (21-27), ಸೈಕ್ಲಿಂಗ್ (20-31), ಈಕ್ವೆಸ್ಟ್ರಿಯನ್ (20-30), ಫೆನ್ಸಿಂಗ್ (19-24), ಗಾಲ್ಪ್ (23-26), ಹ್ಯಾಂಡ್​ಬಾಲ್ (13-31), ಜುಡೋ (29-1), ಕರಾಟೆ (25-27), ಮಾರ್ಷಲ್ ಆರ್ಟ್ಸ್-ಕುರಾಶ್, ಪೆನ್​ಕಾಕ್ ಸಿಲಾಟ್, ವುಶು (28-30), ರೋಲರ್ ಸ್ಕೇಟಿಂಗ್ (28-31), ಸೈಲಿಂಗ್ (24-31), ಸೆಪಕ್ ಟ್ರಾಕಾ (19-ಸೆ.1), ಸ್ಪೋರ್ಟ್ಸ್ ಕ್ಲೈಂಬಿಂಗ್ (23-27), ಟೇಕ್ವಾಂಡೋ (19-23), ಸಾಫ್ಟ್ ಟೆನಿಸ್ (28-ಸೆ.1), ವಾಲಿಬಾಲ್ (19-ಅ.1), ವೇಟ್​ಲಿಫ್ಟಿಂಗ್ (20-27) ಸ್ಪರ್ಧೆಗಳಲ್ಲಿ ಭಾರತ ಇದ್ದರೂ ಪದಕದ ನಿರೀಕ್ಷೆ ಬಹಳ ಕಡಿಮೆ ಇದೆ.

Leave a Reply

Your email address will not be published. Required fields are marked *

Back To Top