ಪಾಕಿಸ್ತಾನದ ವಿರುದ್ಧ ಕಂಚು ಗೆದ್ದ ಭಾರತದ ಪುರುಷರ ಹಾಕಿ ತಂಡ

ಜಕಾರ್ತಾ: ಏಷ್ಯನ್‌ ಗೇಮ್ಸ್‌ 2018ರ ಕ್ರೀಡಾಕೂಟದಲ್ಲಿ ಎದುರಾಳಿ ಪಾಕಿಸ್ತಾನವನ್ನು ಮಣಿಸಿರುವ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕಕ್ಕೆ ಕೊರಳೊಡ್ಡಿದೆ.

ಹಾಕಿ ಸೆಮಿಫೈನಲ್ಸ್‌ನಲ್ಲಿ ಮಲೇಷ್ಯಾ ವಿರುದ್ಧ ಸೋಲನ್ನನುಭವಿಸಿದ್ದ ಭಾರತ ತಂಡ, ಪಾಕಿಸ್ತಾನವನ್ನು 2-1 ಅಂತರದಿಂದ ಸೋಲಿಸುವ ಮೂಲಕ ಜಯಶಾಲಿಯಾಗಿದ್ದು, ಕಂಚಿನ ಪದಕವನ್ನು ಪಡೆದುಕೊಂಡಿದೆ.

ಭಾರತದ ಪರ ಆಕಾಶ್‌ದೀಪ್‌ ಮೂರನೇ ನಿಮಿಷಕ್ಕೆ ಮತ್ತು ಹರ್ಮನ್‌ ಪ್ರೀತ್‌ ಸಿಂಗ್‌ 50ನೇ ನಿಮಿಷಕ್ಕೆ ಗೋಲು ದಾಖಲಿಸಿದರು. ನಂತರ ಪಾಕಿಸ್ತಾನ ತಂಡ ಮೊಹಮ್ಮದ್‌ ಆತಿಕ್‌ 52ನೇ ನಿಮಿಷಕ್ಕೆ ಒಂದು ಗೋಲು ದಾಖಲಿಸಿದರೂ ಕೂಡ ಭಾರತದ ಎದುರು ಮುಗ್ಗರಿಸಿತು. ಅಂತಿಮವಾಗಿ ಭಾರತವು 2-1 ಅಂತರದಿಂದ ಪಾಕಿಸ್ತಾನವನ್ನು ಸೋಲಿಸಿ ಕಂಚಿನ ಪದಕ ಪಡೆದಿದೆ.

ಪಂದ್ಯದಲ್ಲಿ ಭಾರತವು ಎರಡು ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲು ಗಳಿಸಿಕೊಳ್ಳುವಲ್ಲಿ ವಿಫಲವಾಯಿತು. ಅಂತೆಯೇ ಪಾಕಿಸ್ತಾನವು ನಾಲ್ಕು ಪೆನಾಲ್ಟಿ ಕಾರ್ನರ್‌ಗಳಲ್ಲೂ ಗೋಲು ಗಳಿಸುವ ಅವಕಾಶ ಕೈಚೆಲ್ಲಿತು. (ಏಜೆನ್ಸೀಸ್)