ಏಷ್ಯಾಡ್​ನಲ್ಲಿ ಪದಕ ಗೆದ್ದರೇನಂತೆ, ಬದುಕು ಸಾಗಿಸಲು ಚಹಾ ಮಾರಲೇ ಬೇಕು!

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್​ ಗೇಮ್ಸ್​-2018 ಕ್ರೀಡಾ ಕೂಟದ “ಸೆಪಕ್​ ತಕ್ರವ್”​ ಆಟದಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡದ ಹರೀಶ್​ ಕುಮಾರ್​ ಅವರ ಕುಟುಂಬ ತೀವ್ರ ಬಡತನ ಎದುರಿಸುತ್ತಿದೆ. ಹೀಗಾಗಿ ಪದಕ ವಿಜೇತ ಕ್ರೀಡಾಪಟು ಹರೀಶ್​ ಜೀವನ ಸಾಗಿಸಲು ದೆಹಲಿಯಲ್ಲಿರುವ ತಮ್ಮ ತಂದೆಯ ಅಂಗಡಿಯಲ್ಲಿ ಚಹಾ ಮಾರಾಟ ಮಾಡುತ್ತಿದ್ದಾರೆ.

ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್​ಐ ಜತೆ ಮಾತನಾಡಿರುವ ಹರೀಶ್​, ನಮ್ಮ ಕುಟುಂಬ ದೊಡ್ಡದಿದೆ. ಆದರೆ, ಆದಾಯ ಮಾತ್ರ ಕಡಿಮೆ. ಅಂಗಡಿಯಲ್ಲಿ ಟೀ ಮಾರಾಟ ಮಾಡುವ ಮೂಲಕ ನಾನು ನನ್ನ ಕುಟುಂಬಕ್ಕೆ ನೆರವಾಗುತ್ತಿದ್ದೇನೆ. ಇದರ ನಡುವೆಯೂ ಮಧ್ಯಾಹ್ನ 2 ರಿಂದ 6 ಗಂಟೆ ವರೆಗೆ ನಾನು ಕ್ರೀಡಾಭ್ಯಾಸದಲ್ಲಿ ತೊಡಗಿಕೊಳ್ಳುತ್ತೇನೆ. ಭವಿಷ್ಯದಲ್ಲಿ ನಾನೊಂದು ಉತ್ತಮ ನೌಕರಿ ಪಡೆಯಬೇಕಾಗಿದೆ ಎಂದು ಹೇಳಿದ್ದಾರೆ.

ಇನ್ನು ಸೆಪಕ್​ ತಕ್ರವ್​ ಕ್ರೀಡೆಯಲ್ಲಿನ ತಮ್ಮ ಪರಿಶ್ರಮ, ಸಾಧನೆ ಕುರಿತು ಮಾತನಾಡಿ, 2011ರಿಂದಲೂ ನಾನು ಈ ಕ್ರೀಡೆಯಲ್ಲಿ ತೊಡಗಿದ್ದೇನೆ. ನನ್ನ ಕೋಚ್​ ಹೇಮ್​ ರಾಜ್​ ಈ ಕ್ರೀಡೆಗೆ ನನ್ನನ್ನು ಕರೆತಂದರು. ಮೊದಲಿಗೆ ಟೈರ್​ನಲ್ಲಿ ನಾವೆಲ್ಲ ಈ ಆಟ ಆಡುತ್ತಿದ್ದೆವು. ಇದನ್ನು ಗಮನಿಸಿದ ಕೋಚ್​ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ನನ್ನನ್ನು ನೋಂದಾಯಿಸಿದರು. ಆ ನಂತರ ನನಗೆ ನಿರಂತರ ಧನ ಸಹಾಯ ಮತ್ತು ಅಭ್ಯಾಸದ ಕಿಟ್​ ದೊರೆಯಿತು. ನಾನು ನಿತ್ಯ ಕ್ರೀಡಾಭ್ಯಾಸ ಮಾಡುತ್ತೇನೆ. ಮುಂದೆಯೂ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತೇನೆ. ಈ ಮೂಲಕ ದೇಶಕ್ಕೆ ಹೆಚ್ಚಿನ ಪ್ರಶಸ್ತಿಗಳನ್ನು ಗೆದ್ದು ತರುತ್ತೇನೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಹರೀಶ್​ ತಾಯಿ, ಇಂದಿರಾ ದೇವಿ ಮಾತನಾಡಿ, ” ನಮ್ಮ ಮಕ್ಕಳನ್ನು ತುಂಬ ಕಷ್ಟದಲ್ಲಿ ಬೆಳೆಸಿದೆವು. ಪತಿ ಸಾಧಾರಣ ಆಟೋ ಡ್ರೈವರ್​. ಜತೆಗೆ ಟೀ ಅಂಗಡಿಯನ್ನೂ ನಡೆಸುತ್ತಾರೆ. ನನ್ನ ಮಗ ಹರೀಶ್​, ತಂದೆಗೆ ನೆರವಾಗುತ್ತಾನೆ. ಕ್ರೀಡಾಭ್ಯಾಸ ಮಾಡಲು ಸರ್ಕಾರ ನನ್ನ ಮಗನಿಗೆ ಆಹಾರ ಮತ್ತು ಆರ್ಥಿಕ ಸಹಾಯ ನೀಡುತ್ತಿದೆ. ಇದಕ್ಕಾಗಿ ನಾನು ಸರ್ಕಾರ ಮತ್ತು ಕೋಚ್​ ಹೇಮರಾಜ್​ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.

ಏಷ್ಯಾಡ್​ ಕ್ರೀಡಾ ಕೂಟದಲ್ಲಿ ಈ ಹಿಂದಿನ ಚಾಂಪಿಯನ್​ ಥಾಯ್‌ಲೆಂಡ್‌ ವಿರುದ್ಧ ಸೋಲು ಅನುಭವಿಸಿದ್ದ ಭಾರತ ಕಂಚಿನ ಪದಕಕ್ಕೆ ತೃಪ್ತಿ ಪಟ್ಟಿತ್ತು. ಈ ತಂಡದಲ್ಲಿ ಹರೀಶ್ ಕುಮಾರ್​ ಅವರೂ ಇದ್ದರು.