ಭಾರತಕ್ಕೆ 14ನೇ ಚಿನ್ನದ ಪದಕ: ಏಷ್ಯಾಡ್​ ಬಾಕ್ಸಿಂಗ್​ನಲ್ಲಿ ಸ್ವರ್ಣ ಗೆದ್ದು ಇತಿಹಾಸ ಬರೆದ ಅಮಿತ್​

ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ 2018ರಲ್ಲಿ ಭಾರತ 14ನೇ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ಏಷ್ಯಾಡ್​ನಲ್ಲಿ ಇಂದು ನಡೆದ ಪುರುಷರ ವಿಭಾಗದ ಲೈಟರ್​ ಫ್ಲೈ (49ಕೆ.ಜಿ.) ಬಾಕ್ಸಿಂಗ್​ನಲ್ಲಿ ಭಾರತದ ಅಮಿತ್​ ಪಂಘಾಲ್​ ಅವರು ಉಜ್ಬೆಕಿಸ್ತಾನದ ಹಸನ್​ಬಾಯ್ ದುಸ್ಮಟೊವ್​ರನ್ನು ಎದುರಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಏಷ್ಯನ್​ ಗೇಮ್ಸ್​ ಬಾಕ್ಸಿಂಗ್​ನಲ್ಲಿ ಫೈನಲ್​ಗೇರಿದ ಏಕೈಕ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದ ಅಮಿತ್​ ಇಂದು ಸ್ವರ್ಣ ಪದಕ ಜಯಿಸಿ ಇತಿಹಾಸ ಸೃಷ್ಟಿಸಿದ್ದಾರೆ.

ಅಮಿತ್ ಸೆಮಿಫೈನಲ್​ನಲ್ಲಿ 3-2ರಿಂದ ಫಿಲಿಪ್ಪಿನ್ಸ್​ನ ಕಾರ್ಲೆ ಪಾಲಮ್ನು ಅವರನ್ನು ಸೋಲಿಸಿದ್ದರು. ಗೋಲ್ಡ್​ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್​ನ ಬೆಳ್ಳಿ ಪದಕ ವಿಜೇತರಾಗಿದ್ದರು.

ಪದಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದ ಭಾರತ
ಏಷ್ಯಾಡ್​ನಲ್ಲಿ ಇಲ್ಲಿಯವರೆಗೆ ಭಾರತ 14 ಚಿನ್ನ, 23 ಬೆಳ್ಳಿ ಮತ್ತು 29 ಕಂಚಿನ ಪದಕಗಳೊಂದಿಗೆ ಒಟ್ಟು 66 ಪದಕಗಳನ್ನು ಪಡೆದುಕೊಂಡು ಪದಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ. (ಏಜೆನ್ಸೀಸ್​)