ಧವನ್-ರೋಹಿತ್ ಆರ್ಭಟಕ್ಕೆ ಬೆದರಿದ ಪಾಕಿಸ್ತಾನ

ದುಬೈ: ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿ ಅಜೇಯವಾಗಿ ಮುನ್ನಡೆದಿರುವ ಭಾರತ ತಂಡ ಫೈನಲ್ ಸ್ಥಾನವನ್ನು ಬಹುತೇಕ ಖಾತ್ರಿಪಡಿಸಿಕೊಂಡಿದೆ. ಆರಂಭಿಕರಾದ ಶಿಖರ್ ಧವನ್ (114ರನ್, 100ಎಸೆತ, 16 ಬೌಂಡರಿ, 2 ಸಿಕ್ಸರ್) ಮತ್ತು ನಾಯಕ ರೋಹಿತ್ ಶರ್ಮ (111*ರನ್, 119 ಎಸೆತ, 7 ಬೌಂಡರಿ, 4 ಸಿಕ್ಸರ್) ಶತಕಗಳ ಅಬ್ಬರದ ಬಲದಿಂದ ಭಾರತ ತಂಡ ಸೂಪರ್-4 ಹಂತದ ತನ್ನ 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 9 ವಿಕೆಟ್​ಗಳಿಂದ ಪರಾಭವಗೊಳಿಸಿತು. ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಸತತ 2ನೇ ಪಂದ್ಯದಲ್ಲಿ ಭಾರತ ಏಕಪಕ್ಷೀಯ ಗೆಲುವಿನ ಸಾಧನೆ ಮಾಡಿತು.

ಆಫ್ಘನ್ ಎದುರಿನ ಪಂದ್ಯದ ಮ್ಯಾಚ್ ವಿನ್ನರ್ ಶೋಯಿಬ್ ಮಲಿಕ್ (78 ರನ್, 90 ಎಸೆತ, 4 ಬೌಂಡರಿ, 2 ಸಿಕ್ಸರ್) ಅರ್ಧಶತಕದ ನೆರವಿನಿಂದ ಪಾಕಿಸ್ತಾನ ತಂಡ 7 ವಿಕೆಟ್​ಗೆ 237 ರನ್ ಪೇರಿಸಿತು. ಒಂದು ಹಂತದಲ್ಲಿ 260ರ ಗಡಿ ದಾಟುವ ಹಾದಿಯಲ್ಲಿದ್ದ ಪಾಕ್​ಗೆ ವೇಗಿ ಜಸ್​ಪ್ರೀತ್ ಬುಮ್ರಾ(29ಕ್ಕೆ 2) ಮತ್ತು ಸ್ಪಿನ್ನರ್​ಗಳಾದ ಕುಲದೀಪ್ ಯಾದವ್(41ಕ್ಕೆ 2), ಯಜುವೇಂದ್ರ ಚಾಹಲ್ (46ಕ್ಕೆ 2) ಕಡಿವಾಣ ಹಾಕಿದರು. ಪ್ರತಿಯಾಗಿ, ರೋಹಿತ್-ಧವನ್ ಜೋಡಿ ಮೊದಲ ವಿಕೆಟ್​ಗೆ ಸೇರಿಸಿದ 210 ರನ್ ಜತೆಯಾಟದಿಂದ ಭಾರತ 39.3 ಓವರ್​ಗಳಲ್ಲೇ 1 ವಿಕೆಟ್ ನಷ್ಟದಲ್ಲಿ 238 ರನ್ ಪೇರಿಸಿ ಸುಲಭ ಗೆಲುವು ಸಂಪಾದಿಸಿತು.

ಮಲಿಕ್- ಸರ್ಫ್ರಾಜ್ ಶತಕದ ಜತೆಯಾಟ

4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಸರ್ಫ್ರಾಜ್ ಅಹ್ಮದ್(44 ರನ್, 66 ಎಸೆತ, 2 ಬೌಂಡರಿ) ಅನುಭವಿ ಶೋಯಿಬ್ ಮಲಿಕ್​ರ ರಕ್ಷಣಾತ್ಮಕ ಆಟವನ್ನು ಗಮನಿಸುತ್ತಾ ನಿಧಾನವಾಗಿ ಕ್ರೀಸಿಗಂಟಿಕೊಂಡರು. ಈ ಜೋಡಿಯನ್ನು ಬೇರ್ಪಡಿಸಲು ರೋಹಿತ್ ಶರ್ಮ ಅನಿರೀಕ್ಷಿತವಾಗಿ ಕೇದಾರ್ ಜಾಧವ್​ರನ್ನು ದಾಳಿಗಿಳಿಸಿದರೂ ಯಶಸ್ವಿಯಾಗಲಿಲ್ಲ, 16ನೇ ಓವರ್​ನಿಂದ ಆಟ ಮುಂದುವರಿಸಿದ ಮಲಿಕ್-ಸರ್ಫ್ರಾಜ್, 39ನೇ ಓವರ್ ತನಕ ಭಾರತದ ಯೋಜನಾತ್ಮಕ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಾ 4ನೇ ವಿಕೆಟ್​ಗೆ 107 ರನ್​ಗಳ ಜತೆಯಾಟವಾಡಿದರು. ಆದರೆ ಈ ಜೋಡಿಯ ಪ್ರಾಬಲ್ಯ ಮುಂದುವರಿಯಲು ಕುಲದೀಪ್ ಬಿಡಲಿಲ್ಲ. ಕವರ್​ನಲ್ಲಿ ರೋಹಿತ್ ಶರ್ಮ ಹಿಡಿದ ಕ್ಯಾಚ್​ನೊಂದಿಗೆ ಸರ್ಫ್ರಾಜ್ ಇನಿಂಗ್ಸ್ ಕೊನೆಗೊಂಡಿತು. ನಂತರ ಕಣಕ್ಕಿಳಿದ ಟಿ20 ಸ್ಪೆಷಲಿಸ್ಟ್ ಆಸಿಫ್ ಅಲಿ (30 ರನ್, 21 ಎಸೆತ, 1 ಬೌಂಡರಿ, 2 ಸಿಕ್ಸರ್) ಅನುಭವಿ ಮಲಿಕ್ ನೀಡಿದ ಸಾಥ್​ನೊಂದಿಗೆ 42ನೇ ಓವರ್​ನಲ್ಲಿ ಭುವಿಗೆ ತಲಾ 2 ಬೌಂಡರಿ, 2 ಸಿಕ್ಸರ್ ಸಹಿತ 22 ರನ್ ಚಚ್ಚಿದರು. ಆಗ ಪಾಕ್ ಸುಲಭವಾಗಿ ಭಾರತಕ್ಕೆ ಕಠಿಣ ಸವಾಲು ನೀಡುವ ಎಲ್ಲಾ ಸಾಧ್ಯತೆಗಳಿದ್ದವು. ಆದರೆ ಶತಕದ ಹಾದಿಯಲ್ಲಿದ್ದ ಮಲಿಕ್ ಡೆತ್ ಓವರ್ ಸ್ಪೆಷಲಿಸ್ಟ್ ಬುಮ್ರಾರ ಲೆಗ್​ಸ್ಟಂಪ್​ನಿಂದ ಹೊರ ಹೋಗುತ್ತಿದ್ದ ಎಸೆತವನ್ನು ಮುಟ್ಟಲು ಹೋಗಿ ಧೋನಿಗೆ ಕ್ಯಾಚ್ ನೀಡಿದರು. ಇಲ್ಲಿಗೆ ಪಾಕ್​ನ ಬಿರುಸಿನ ಆಟ ನಿಂತಿತು. ಅಬ್ಬರಿಸಿದ ಆಸಿಫ್​ರನ್ನು ಗೂಗ್ಲಿ ಎಸೆತದ ಮೂಲಕ ಚಾಹಲ್ ಪೆವಿಲಿಯನ್​ಗೆ ಅಟ್ಟಿದರೆ, ಶಾದಬ್​ರನ್ನು ಬುಮ್ರಾ ಬೌಲ್ಡ್ ಮಾಡಿದರು.

ಪಾಕಿಸ್ತಾನದ ಅಗ್ರ ಬ್ಯಾಟ್ಸ್​ಮನ್ಸ್ ಫೇಲ್

ಭಾನುವಾರ ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಸರ್ಫ್ರಾಜ್ ಅಹ್ಮದ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ಮುಖಾಮುಖಿಯ ಬ್ಯಾಟಿಂಗ್ ವೈಫಲ್ಯದ ಎಚ್ಚರಿಕೆ ಇದ್ದರೂ ಪಾಕ್ ಆರಂಭಿಕ ಜೋಡಿ, ಭಾರತದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಲು ಯಶಸ್ವಿಯಾಗಲಿಲ್ಲ. ಆರಂಭಿಕ 7 ಓವರ್​ಗಳಲ್ಲಿ ಭುವನೇಶ್ವರ್-ಬುಮ್ರಾ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದ ಕಳೆದ ಪಂದ್ಯದ ಅರ್ಧಶತಕ ಸಾಧಕ ಇಮಾಮ್ ಉಲ್ ಹಕ್, ಯಜುವೇಂದ್ರ ಚಾಹಲ್ ಸ್ಪಿನ್ ಮ್ಯಾಜಿಕ್​ಗೆ ನಿರ್ಗಮಿಸಿದರು. ಧೋನಿ ನೀಡಿದ ರಿವ್ಯೂ ನೆರವಿನಿಂದ ಇಮಾಮ್ ಎಲ್​ಬಿ ಬಲೆಗೆ ಬಿದ್ದರು. ನಿರೀಕ್ಷೆ ಮೂಡಿಸಿದ್ದ ಬಾಬರ್ ಅಜಮ್ (9) ಅನಗತ್ಯ ರನ್​ಗಾಗಿ ಓಡಿ ಚಾಹಲ್​ರಿಂದ ರನೌಟ್ ಆಗಿ ನಿರ್ಗಮಿಸಿದರು. ಫಾಮರ್್​ಗೆ ಮರಳಬೇಕಾದ ಒತ್ತಡದಲ್ಲಿದ್ದ ಫಖರ್ ಜಮಾನ್(31) ಸ್ಪಿನ್ನರ್ ಕುಲದೀಪ್ ಓವರ್​ಗಳಲ್ಲಿ ಸ್ವೀಪ್ ಶಾಟ್ ಮೂಲಕ ತಲಾ 1 ಸಿಕ್ಸರ್, ಬೌಂಡರಿ ಸಿಡಿಸಿ ಲಯಕ್ಕೆ ಮರಳುವ ಹಾದಿಯಲ್ಲಿದ್ದರೂ, ಮತ್ತೊಮ್ಮೆ ಅದೇ ಪ್ರಯತ್ನಕ್ಕೆ ಕೈ ಹಾಕಿ ಎಲ್​ಬಿಯಾಗಿ ಹೊರ ನಡೆದರು.

ಧವನ್-ರೋಹಿತ್ ಮಾಸ್ಟರ್ ಸ್ಟ್ರೋಕ್

ಹಿಂದೆ ದಿಗ್ಗಜ ಬ್ಯಾಟ್ಸ್​ಮನ್​ಗಳಾದ ಸಚಿನ್ ತೆಂಡುಲ್ಕರ್-ವೀರೇಂದ್ರ ಸೆಹ್ವಾಗ್ ಆರಂಭಿಕ ಜೋಡಿಯಾಗಿ ಪಾಕ್ ಬೌಲರ್​ಗಳನ್ನು ದಂಡಿಸಿದ ಬಳಿಕ ಅಂಥ ಆಟ ಮೂಡಿಬಂದಿದ್ದು ವಿರಳ. ಆದರೆ ಅದೇ ಮಾದರಿಯ ಮಾಸ್ಟರ್ ಸ್ಟ್ರೋಕ್ ಇನಿಂಗ್ಸ್​ನೊಂದಿಗೆ ಟೀಮ್ ಇಂಡಿಯಾ ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಭಾನುವಾರ ಮತ್ತೆ ದುಬೈ ಸ್ಟೇಡಿಯಂನಲ್ಲಿ ಭಾರತದ ಅಭಿಮಾನಿಗಳನ್ನು ರಂಜಿಸಿದರು. ಆರಂಭದಲ್ಲೇ ಪಾಕಿಸ್ತಾನ ಫೀಲ್ಡರ್​ಗಳು ನೀಡಿದ ಜೀವದಾನಗಳ ಲಾಭವನ್ನು ಬಳಸಿಕೊಂಡ ಈ ಜೋಡಿ ಹಂತ ಹಂತವಾಗಿ ಸದೃಢಗೊಳ್ಳುತ್ತ ಸಾಗಿತು. ಶಾಹಿನ್ ಅಫ್ರಿದಿ ಎಸೆದ ಇನಿಂಗ್ಸ್​ನ 6ನೇ ಓವರ್​ನಲ್ಲಿ ರೋಹಿತ್ ನೇರವಾಗಿ ಕವರ್​ನಲ್ಲಿದ್ದ ಇಮಾಮ್ ಉಲ್ ಹಕ್ ಕೈಗೆ ಕ್ಯಾಚ್ ಕೊಟ್ಟರು. ಆದರೆ ಇಮಾಮ್ ಸುಲಭ ಕ್ಯಾಚ್ ಡ್ರಾಪ್ ಮಾಡಿದ್ದು ಪಾಕ್​ಗೆ ನಿರೀಕ್ಷಿಸಲಾಗದ ಹಿನ್ನಡೆ ತಂದಿತು. ಇವರಿಬ್ಬರ ಕೆಚ್ಚಿನ ಆಟವನ್ನು ನಿಯಂತ್ರಿಸಲು ಪಾಕ್ ಎಷ್ಟೇ ಕಾರ್ಯತಂತ್ರ ರೂಪಿಸಿದರೂ ಪ್ರಯತ್ನ ಕೈಗೂಡದಿದ್ದಾಗ, ನಾಯಕ ಸರ್ಫ್ರಾಜ್ ಅಹ್ಮದ್ ಅಸಹಾಯಕರಾದರು. ಧವನ್ 33ನೇ ಓವರ್​ನಲ್ಲಿ ಮಿಡ್ ಆಫ್ ಕಡೆ ಬೌಂಡರಿ ಸಿಡಿಸಿ 15ನೇ ಶತಕ ಪೂರೈಸಿದರು. ರೋಹಿತ್ ಜತೆ ಮೊದಲ ವಿಕೆಟ್​ಗೆ 33.3 ಓವರ್​ಗಳಲ್ಲಿ 210 ರನ್​ಗಳ ಜತೆಯಾಟವಾಡಿದ ಬಳಿಕ ಧವನ್ ರನೌಟ್ ಆಗಿ ನಿರ್ಗಮಿಸಿದರು. ಅಂತಿಮವಾಗಿ ರೋಹಿತ್ ಶರ್ಮ ಕೂಡ 19ನೇ ಸೆಂಚುರಿ ಸಿಡಿಸಿದರು.

15 – ಶಿಖರ್ ಧವನ್ ಏಕದಿನ ಕ್ರಿಕೆಟ್​ನಲ್ಲಿ 15ನೇ ಶತಕ ಬಾರಿಸಿದರು. ಈ ಮೂಲಕ ಅವರು ಏಕದಿನ ಕ್ರಿಕೆಟ್​ನಲ್ಲಿ ಭಾರತ ಪರ ಶತಕ ಸಿಡಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಯುವರಾಜ್ ಸಿಂಗ್ (14) ಅವರನ್ನು ಹಿಂದಿಕ್ಕಿ, ವೀರೇಂದ್ರ ಸೆಹ್ವಾಗ್ (15) ಸಾಧನೆ ಸರಿಗಟ್ಟಿದರು. ರೋಹಿತ್ ಶರ್ಮ ಏಕದಿನ ಕ್ರಿಕೆಟ್​ನಲ್ಲಿ 19ನೇ ಶತಕ ಬಾರಿಸಿದ ಸಾಧನೆ ಮಾಡಿದರು. ಸಚಿನ್ ತೆಂಡುಲ್ಕರ್ (49), ವಿರಾಟ್ ಕೊಹ್ಲಿ (35) ಮತ್ತು ಸೌರವ್ ಗಂಗೂಲಿ (22) ಶತಕ ಸಾಧನೆಯಲ್ಲಿ ಇವರಿಗಿಂತ ಮುಂದಿರುವ ಭಾರತೀಯ ಬ್ಯಾಟ್ಸ್​ಮನ್​ಗಳಾಗಿದ್ದಾರೆ.

7 – ಏಕದಿನ ಕ್ರಿಕೆಟ್​ನಲ್ಲಿ ಭಾರತದ ಇಬ್ಬರೂ ಆರಂಭಿಕರು ಒಂದೇ ಪಂದ್ಯದಲ್ಲಿ ಶತಕ ಸಿಡಿಸಿದ 7ನೇ ಸಾಧನೆ ಇದಾಗಿದೆ. ರೋಹಿತ್-ಧವನ್ ಪಾಕ್ ವಿರುದ್ಧ ಶತಕ ಸಿಡಿಸಿದ ಭಾರತದ 3ನೇ ಆರಂಭಿಕ ಜೋಡಿ. ಸಚಿನ್ ತೆಂಡುಲ್ಕರ್-ನವಜೋತ್ ಸಿಂಗ್ ಸಿಧು 1996ರಲ್ಲಿ ಶಾರ್ಜಾದಲ್ಲಿ ಮತ್ತು ವೀರೇಂದ್ರ ಸೆಹ್ವಾಗ್-ರಾಹುಲ್ ದ್ರಾವಿಡ್ 2005ರಲ್ಲಿ ಕೊಚ್ಚಿಯಲ್ಲಿ ಶತಕ ಸಿಡಿಸಿದ್ದರು.