ಕೊಲಂಬೊ: ವೇಗಿ ಮೊಹಮದ್ ಸಿರಾಜ್ (21ಕ್ಕೆ 6) ಪ್ರಚಂಡ ಬೌಲಿಂಗ್ ನಿರ್ವಹಣೆಯ ಲವಾಗಿ ಟೀಮ್ ಇಂಡಿಯಾ, 16ನೇ ಆವೃತ್ತಿಯ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ನಡೆದ ೈನಲ್ ಪಂದ್ಯದಲ್ಲಿ ಜಂಟಿ ಆತಿಥೇಯ ಶ್ರೀಲಂಕಾ ಎದುರು 10 ವಿಕೆಟ್‌ಗಳಿಂದ ಏಕಪಕ್ಷೀಯ ಗೆಲುವು ದಾಖಲಿಸಿದ ರೋಹಿತ್ ಶರ್ಮ ಬಳಗ 8ನೇ ಬಾರಿಗೆ ಏಷ್ಯಾದ ಕ್ರಿಕೆಟ್ ಸಾಮ್ರಾಟ ಎನಿಸಿದೆ. ಈ ಮೂಲಕ ಭಾರತ ತಂಡ 1,185 ದಿನಗಳ ಬಳಿಕ ಪ್ರಮುಖ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದಂತಾಗಿದ್ದು, ಮುಂಬರುವ ತವರಿನ ಏಕದಿನ ವಿಶ್ವಕಪ್‌ಗೆ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಂಕಾ ನಾಯಕ ದಸುನ್ ಶನಕ ನಿರ್ಧಾರ ಭಾರತಕ್ಕೆ ಭರ್ಜರಿ ಲಾಭ ತಂದುಕೊಟ್ಟಿತು. ಮಳೆಯಿಂದಾಗಿ 40 ನಿಮಿಷ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಮೊಹಮದ್ ಸಿರಾಜ್ ಒಂದೇ ಓವರ್‌ನಲ್ಲಿ 4 ವಿಕೆಟ್ ಕಬಳಿಸಿ ಲಂಕಾ ದಿಕ್ಕೆಡುವಂತೆ ಮಾಡಿದರು.
ಒಂದೇ ಓವರ್‌ನಲ್ಲಿ 4 ವಿಕೆಟ್ ಕಬಳಿಸಿ ಲಂಕಾ ದಿಕ್ಕೆಡುವಂತೆ ಮಾಡಿದ ಮೊಹಮದ್ ಸಿರಾಜ್ ಈ ಪಂದ್ಯದಲ್ಲಿ ಹಲವು ದಾಖಲೆಗಳಿಗೆ ಭಾಜನರಾದರು.
16: ಮೊಹಮದ್ ಸಿರಾಜ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 5 ವಿಕೆಟ್ ಗೊಂಚಲು ಪಡೆದ ಲಂಕಾ ವೇಗಿ ಚಮಿಂಡಾ ವಾಸ್ (16 ಎಸೆತ) ದಾಖಲೆ ಸರಿಗಟ್ಟಿದರು. ವಾಸ್ 2003ರಲ್ಲಿ ಬಾಂಗ್ಲಾದೇಶ ವಿರುದ್ಧ ಈ ಸಾಧನೆ ಮಾಡಿದ್ದರು.
1: ಮೊಹಮದ್ ಸಿರಾಜ್ ಒಂದೇ ಓವರ್‌ನಲ್ಲಿ 4 ವಿಕೆಟ್ ಕಬಳಿಸಿದ ಭಾರತದ ಮೊದಲ ಮತ್ತು ವಿಶ್ವದ 4ನೇ ಬೌಲರ್ ಎನಿಸಿದರು. ಚಮಿಂಡಾ ವಾಸ್, ಮೊಹಮದ್ ಸಮಿ, ಆದಿಲ್ ರಶೀದ್ ಹಿಂದಿನ ಮೂವರು ಸಾಧಕರು.
4: ಮೊಹಮದ್ ಸಿರಾಜ್ (21ಕ್ಕೆ 6) ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ 4ನೇ ಅತ್ಯುತ್ತಮ ಬೌಲಿಂಗ್ ಸಾಧನೆ ದಾಖಲಿಸಿದರು. ಸ್ಟುವರ್ಟ್ ಬಿನ್ನಿ (4ಕ್ಕೆ 6), ಅನಿಲ್ ಕುಂಬ್ಳೆ (12ಕ್ಕೆ 6), ಜಸ್‌ಪ್ರೀತ್ ಬುಮ್ರಾ (19ಕ್ಕೆ 6) ಮೊದಲ 3 ಸ್ಥಾನದಲ್ಲಿದ್ದಾರೆ.
2: ಮೊಹಮದ್ ಸಿರಾಜ್ (21ಕ್ಕೆ6) ಏಷ್ಯಾಕಪ್ ಇತಿಹಾಸದ 2ನೇ ಅತ್ಯುತ್ತಮ ಬೌಲಿಂಗ್ ನಿರ್ವಹಣೆ ದಾಖಲಿಸಿದರು. ಲಂಕಾದ ಅಜಂತಾ ಮೆಂಡಿಸ್ (13ಕ್ಕೆ 6) ಶ್ರೇಷ್ಠ ನಿರ್ವಹಣೆ ತೋರಿದ್ದಾರೆ.
1: ಸಿರಾಜ್ ಏಕದಿನ ಕ್ರಿಕೆಟ್‌ನಲ್ಲಿ ಲಂಕಾ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಬೌಲರ್ ಎನಿಸಿದರು. ವಕಾರ್ ಯೂನಿಸ್ (26ಕ್ಕೆ 6) ಹಿಂದಿನ ಸಾಧಕ.