Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಇಂದಿನಿಂದ ಏಷ್ಯಾಕಪ್ ಏಕದಿನ ಕ್ರಿಕೆಟ್ ಫೈಟ್

Saturday, 15.09.2018, 2:05 AM       No Comments

ದುಬೈ: ಆರು ದೇಶಗಳ ನಡುವಿನ ಪ್ರತಿಷ್ಠಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿ ಯುಎಇ ಆತಿಥ್ಯದಲ್ಲಿ ಶನಿವಾರ ಆರಂಭವಾಗಲಿದೆ. ಕಳೆದ ಮೂರು ಆವೃತ್ತಿಯ ಏಷ್ಯಾಕಪ್​ಗೆ ಬಾಂಗ್ಲಾದೇಶ ಆತಿಥ್ಯ ವಹಿಸಿಕೊಂಡಿದ್ದರೆ, 1995ರ ಬಳಿಕ ಮೊದಲ ಬಾರಿಗೆ ಯುಎಇಯಲ್ಲಿ ಟೂರ್ನಿ ನಡೆಯಲಿದೆ. ಐದು ಬಾರಿಯ ಚಾಂಪಿಯನ್ ಶ್ರೀಲಂಕಾ ಹಾಗೂ 2012 ಹಾಗೂ 2016 (ಟಿ20) ಆವೃತ್ತಿಯ ರನ್ನರ್​ಅಪ್ ಬಾಂಗ್ಲಾದೇಶ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಟೂರ್ನಿಯಲ್ಲಿ ಲೀಗ್ ಹಾಗೂ ಸೂಪರ್ ಫೋರ್ ಹಂತದಲ್ಲಿ ಎರಡು ಬಾರಿ ಭಾರತ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮುಖಾಮುಖಿ ನಿಗದಿಯಾಗಿರುವ ಕಾರಣ, ವಿರಾಟ್ ಕೊಹ್ಲಿ ಈ ಟೂರ್ನಿಯಲ್ಲಿ ಆಡುತ್ತಿಲ್ಲ ಎನ್ನುವ ವಿಚಾರ ಹೆಚ್ಚಿನ ಮಹತ್ವ ಪಡೆದುಕೊಂಡಿಲ್ಲ. ಏಷ್ಯಾ ಕ್ರಿಕೆಟ್​ನ ಶಕ್ತಿಕೇಂದ್ರಗಳಾದ ಭಾರತ, ಪಾಕಿಸ್ತಾನ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿರುವುದು ಮಾತ್ರವಲ್ಲ, ಟೂರ್ನಿಯ ಫೈನಲ್​ಗೇರುವ ಫೇವರಿಟ್ ತಂಡಗಳಾಗಿವೆ. ಭಾರತ ತಂಡವನ್ನು ಹಂಗಾಮಿ ನಾಯಕ ರೋಹಿತ್ ಶರ್ಮ ಮುನ್ನಡೆಸಲಿದ್ದರೆ, ಪಾಕಿಸ್ತಾನವನ್ನು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಸರ್ಫ್ರಾಜ್ ಖಾನ್ ಮುನ್ನಡೆಸಲಿದ್ದಾರೆ.

ಸೆಪ್ಟೆಂಬರ್ 28 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲೂ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಬೇಕು ಎನ್ನುವುದು ಸಂಘಟಕರ ಆಸೆಯಾಗಿದ್ದರೂ, ಈ ಹಾದಿ ಸುಲಭವಿಲ್ಲ. ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ವಿಶ್ವ ಕ್ರಿಕೆಟ್​ನಲ್ಲಿ ಮಿಂಚಿನಂತೆ ಪ್ರಗತಿ ಸಾಧಿಸಿರುವ ಅಫ್ಘಾನಿಸ್ತಾನ ತಂಡದಿಂದ ತೀವ್ರ ಮಟ್ಟದ ಪ್ರತಿರೋಧ ವ್ಯಕ್ತವಾಗಲಿದೆ. ಹಾಂಕಾಂಗ್ ತಂಡ ಮಾತ್ರವೇ, ಟೂರ್ನಿಯಲ್ಲಿರುವ ಏಕೈಕ ದುರ್ಬಲ ಎದುರಾಳಿ.

ಮೂರು ತಿಂಗಳ ಇಂಗ್ಲೆಂಡ್ ಪ್ರವಾಸದ ಕಾರಣ ವಿರಾಟ್ ಕೊಹ್ಲಿಗೆ ಏಷ್ಯಾಕಪ್​ನಿಂದ ವಿಶ್ರಾಂತಿ ನೀಡಲಾಗಿದೆ. ಕೊಹ್ಲಿಗೆ ವಿಶ್ರಾಂತಿ ನೀಡಿದ ಹಂತದಲ್ಲಿ ತಂಡ ಯಾವ ರೀತಿಯಲ್ಲಿ ಒತ್ತಡ ನಿಭಾಯಿಸಲಿದೆ ಎನ್ನುವುದು ವಿಶ್ವಕಪ್​ಗೆ ತಂಡ ಸಂಯೋಜನೆ ದೃಷ್ಟಿಯಲ್ಲೂ ಪ್ರಮುಖವಾಗಲಿದೆ. ಸೆ. 18ರಂದು ಹಾಂಕಾಂಗ್ ವಿರುದ್ಧ ಆಡುವ ಮೂಲಕ ಭಾರತ ತಂಡ ಅಭಿಯಾನ ಆರಂಭಿಸಲಿದ್ದು, ಮರುದಿನವೇ ಪಾಕಿಸ್ತಾನ ವಿರುದ್ಧ ಪಂದ್ಯವಾಡಲಿದೆ. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮ ಅದ್ಭುತ ಆಟಗಾರನಾಗಿದ್ದರೂ, ಗುಣಮಟ್ಟದ ತಂಡದ ವಿರುದ್ಧ ಅವರ ನಾಯಕತ್ವದ ಪರೀಕ್ಷೆಯಾಗಿಲ್ಲ. ಕಳೆದ ಡಿಸೆಂಬರ್​ನಲ್ಲಿ ಶ್ರೀಲಂಕಾ ವಿರುದ್ಧ ತಂಡವನ್ನು ಮುನ್ನಡೆಸಿದ್ದರೂ, ಶ್ರೀಲಂಕಾ ತಂಡ ಅಂದು ಬಾಂಗ್ಲಾದೇಶಕ್ಕಿಂತ ದುರ್ಬಲ ತಂಡವಾಗಿತ್ತು.

ಮೊಹಮದ್ ಆಮಿರ್, ಆಲ್ರೌಂಡರ್ ಹಸನ್ ಅಲಿ, ಸ್ಟಾರ್ ಆರಂಭಿಕ ಆಟಗಾರ ಫಖರ್ ಜಮಾನ್ ಹಾಗೂ ಪ್ರತಿಭಾವಂತ ಬ್ಯಾಟ್ಸ್​ಮನ್​ಗಳಾದ ಬಾಬರ್ ಅಜಮ್ ಹಾಗೂ ಹ್ಯಾರಿಸ್ ಸೋಹೈಲ್ ವಿರುದ್ಧ ರೋಹಿತ್​ರ ತಂತ್ರಗಳು ಪರೀಕ್ಷೆಗೆ ಒಳಗಾಗಲಿವೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹಾಗೂ ಅನುಭವಿ ಆಟಗಾರ ಎಂಎಸ್ ಧೋನಿಗೆ ಸೂಕ್ತ ಬ್ಯಾಟಿಂಗ್ ಕ್ರಮಾಂಕವನ್ನು ನೀಡುವುದು ಈ ಟೂರ್ನಿಯಲ್ಲಿ ಭಾರತದ ಪ್ರಮುಖ ಗುರಿಯಾಗಿರಲಿದೆ.

ಬಾಂಗ್ಲಾದೇಶವೂ ಬಲಿಷ್ಠ

ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಹಲವು ವರ್ಷಗಳಿಂದ ಉತ್ತಮ ನಿರ್ವಹಣೆ ನೀಡುತ್ತ ಬಂದಿದೆ. 2016ರಲ್ಲಿ ಟಿ20 ಮಾದರಿಯ ಟೂರ್ನಿಯ ಫೈನಲ್ ಆಡಿದ್ದ ಬಾಂಗ್ಲಾದೇಶ, 2012ರಲ್ಲಿ ಏಕದಿನ ಮಾದರಿಯ ಟೂರ್ನಿಯ ಫೈನಲ್ ಆಡಿತ್ತು. ಅಬುಧಾಬಿ ಹಾಗೂ ದುಬೈ ನಿಧಾನಗತಿಯ ಬೌಲಿಂಗ್​ಗೆ ಹೆಚ್ಚಿನ ಸಹಾಯ ಮಾಡುವುದರಿಂದ ಬಾಂಗ್ಲಾದೇಶದ ಬೌಲರ್​ಗಳಿಗೆ ನೆರವೀಯಲಿದೆ. ಬ್ಯಾಟಿಂಗ್​ನಲ್ಲಿ ಅನುಭವಿ ತಮೀಮ್ ಇಕ್ಬಾಲ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಆಟವಾಡಬಲ್ಲ ಮಹಮದುಲ್ಲರನ್ನು ಒಳಗೊಂಡಿದೆ. ಮುಶ್ಪೀಕರ್ ರಹೀಂ ಹಾಗೂ ಗಾಯದಿಂದ ಚೇತರಿಸಿಕೊಂಡಿರುವ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅನುಭವದ ಆಟ ತಂಡದ ಪ್ಲಸ್ ಪಾಯಿಂಟ್.

ಶ್ರೀಲಂಕಾ ಸೂಪರ್ ಟೀಮ್

ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡ ಗರಿಷ್ಠ ಬಾರಿ ಎದುರಿಸಿರುವ ಎದುರಾಳಿಯೆಂದರೆ ಶ್ರೀಲಂಕಾ. ಅನುಭವಿ ಆಟಗಾರರ ನಿವೃತ್ತಿಯ ಬಳಿಕ, ಯುವ ಆಟಗಾರರು ಜವಾಬ್ದಾರಿಯನ್ನು ನಿಭಾಯಿಸಲು ಸಾಕಷ್ಟು ಅವಧಿ ತೆಗೆದುಕೊಂಡರು. ಇದಕ್ಕೆ ಆಟಗಾರರೊಂದಿಗೆ ಆಡಳಿತಾತ್ಮಕ ಸಮಸ್ಯೆಗಳೂ ಕಾರಣವಾದವು. ಏಂಜೆಲೋ ಮ್ಯಾಥ್ಯೂಸ್, ಉಪುಲ್ ತರಂಗ, ಥಿಸರ ಪೆರೇರಾ ಹಾಗೂ ಲಸಿತ್ ಮಾಲಿಂಗರೊಂದಿಗೆ ಯುವ ಆಟಗಾರರಾದ ಅಕಿಲ ಧನಂಜಯ, ದಸುನ್ ಶನಕ ಹಾಗೂ ಕುಸಾಲ್ ರಜಿತಾ ಪೆರೇರಾರಂಥವರಿದ್ದಾರೆ. ಅಸ್ಥಿರ ಆಟವೇ ಲಂಕಾ ಪಾಲಿನ ಸಮಸ್ಯೆಯಾಗಿದ್ದು, ಏಷ್ಯಾಕಪ್​ನಲ್ಲಿ ಇದಕ್ಕೆ ಉತ್ತರ ಸಿಗುವ ಭರವಸೆಯಲ್ಲಿದೆ.

ಆಫ್ಘನ್ ಆಟಕ್ಕೆ ಸವಾಲು

ಜಾಗತಿಕ ಟಿ20 ಸೂಪರ್​ಸ್ಟಾರ್ ಸ್ಪಿನ್ ಬೌಲರ್ ರಶೀದ್ ಖಾನ್​ರ ಮೇಲೆ ಅತಿಯಾಗಿ ಅವಲಂಬಿತ ವಾಗಿರುವ ಅಫ್ಘಾನಿಸ್ತಾನ, ಒಂದೆರಡು ಅಚ್ಚರಿಯ ಫಲಿತಾಂಶದ ಮೇಲೆ ಕಣ್ಣಿಟ್ಟಿದೆ. ಇನ್ನೊಂದೆಡೆ ಹಾಂಕಾಂಗ್ ತಂಡವನ್ನು ಭಾರತೀಯ ಮೂಲಕ ಅನ್ಶುಮಾನ್ ರಾಥ್ ಮುನ್ನಡೆಸಲಿದ್ದು, ಹೆಚ್ಚಿನ ವಲಸಿಗ ಕ್ರಿಕೆಟಿಗರೇ ತಂಡದಲ್ಲಿದ್ದಾರೆ. ಹಾಂಕಾಂಗ್ ತಂಡ ಆಡುವ ಪಂದ್ಯ ಗಳೂ ಏಕದಿನ ಮಾನ್ಯತೆ ಹೊಂದಿರಲಿರುವ ಕಾರಣ, ಆದಷ್ಟು ಸ್ಪರ್ಧಾತ್ಮಕವಾಗಿ ಆಡುವ ಗುರಿಯಲ್ಲಿ ತಂಡವಿದೆ.

17:  ರೋಹಿತ್ ಶರ್ಮ ಈವರೆಗೂ ಏಷ್ಯಾಕಪ್​ನಲ್ಲಿ 17 ಪಂದ್ಯವಾಡಿದ್ದಾರೆ. ಹಾಗೇನಾದರೂ ತಂಡವನ್ನು ಫೈನಲ್​ಗೇರಿಸಿದಲ್ಲಿ ರೋಹಿತ್ ಶರ್ಮ, ಏಷ್ಯಾಕಪ್​ನಲ್ಲಿ ಗರಿಷ್ಠ ಪಂದ್ಯವಾಡಿದ ಭಾರತದ ಆಟಗಾರ ಎನಿಸಲಿದ್ದಾರೆ. 23 ಪಂದ್ಯವಾಡಿರುವ ಸಚಿನ್ ತೆಂಡುಲ್ಕರ್ ಸದ್ಯ ಅಗ್ರಸ್ಥಾನದಲ್ಲಿದ್ದಾರೆ.

ಧನುಷ್ಕ ಗುಣತಿಲಕ ಔಟ್

ಕೊಲಂಬೊ: ಟೆಸ್ಟ್ ತಂಡದ ನಾಯಕ ದಿನೇಶ್ ಚಾಂಡಿಮಲ್​ರನ್ನು ಈಗಾಗಲೇ ಏಷ್ಯಾಕಪ್ ಟೂರ್ನಿಗೆ ಕಳೆದುಕೊಂಡಿರುವ ಶ್ರೀಲಂಕಾ ಮತ್ತೊಂದು ಆಘಾತ ಎದುರಿಸಿದೆ. ಆರಂಭಿಕ ಆಟಗಾರ ಧನುಷ್ಕ ಗುಣತಿಲಕ ಬೆನ್ನುನೋವಿಗೆ ತುತ್ತಾಗಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. 27 ವರ್ಷದ ಬ್ಯಾಟ್ಸ್​ಮನ್ ತವರಿಗೆ ವಾಪಸಾಗಲಿದ್ದು, ಇವರ ಸ್ಥಾನವನ್ನು ಶೇಹಾನ್ ಜಯಸೂರ್ಯ ತುಂಬಲಿದ್ದಾರೆ ಎಂದು ಹೇಳಿದೆ.

ಟೂರ್ನಿಯ ಸ್ವರೂಪ

ಏಷ್ಯಾಕಪ್​ನ ಲೀಗ್ ಹಂತದಲ್ಲಿ 6 ತಂಡಗಳು 2 ಗುಂಪುಗಳನ್ನಾಗಿ ವಿಭಾಗಿಸಲಾಗಿದೆ. ಭಾರತ, ಹಾಂಕಾಂಗ್ ಹಾಗೂ ಪಾಕಿಸ್ತಾನ ಎ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಕಠಿಣ ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಎರಡೂ ಗುಂಪಿನ ಅಗ್ರ ಎರಡು ತಂಡಗಳು ಸೂಪರ್ 4 ಹಂತಕ್ಕೆ ಮುನ್ನಡೆಯಲಿವೆ. ಸೆ. 21ರಿಂದ 26ರವರೆಗೆ ಸೂಪರ್-4 ಕೂಡ ಲೀಗ್ ಮಾದರಿಯಲ್ಲಿ ನಡೆಯಲಿದೆ. ಪ್ರತಿ ತಂಡಗಳು ಮೂರು ಪಂದ್ಯವಾಡಲಿದ್ದು, ಅಗ್ರ 2 ತಂಡಗಳು ಸೆ. 28ರ ಫೈನಲ್​ಗೇರಲಿವೆ. ಏಷ್ಯಾಕಪ್​ನಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿವೆ.

ಯುಎಇಯಲ್ಲಿ ಮತ್ತೆ ಕ್ರಿಕೆಟ್ ಆಡಲು ಬಂದಿದ್ದಕ್ಕೆ ಸಂಭ್ರಮವೆನಿಸಿದೆ. ಇಲ್ಲಿ ಅತ್ಯುತ್ತಮ ಕ್ರಿಕೆಟ್ ಆಡಿದ ನೆನಪುಗಳಿವೆ. ವಿಶ್ವಕಪ್​ಗೂ ಮುನ್ನ ನಮಗೆ ಉತ್ತಮ ವೇದಿಕೆ ಸಿಕ್ಕಿದೆ. ಪಾಕ್ ವಿರುದ್ಧದ ಪಂದ್ಯವನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ ಎನ್ನುವುದು ತಿಳಿದಿದೆ. ಎಲ್ಲ ತಂಡಗಳೂ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿವೆ. ಎಲ್ಲ ತಂಡಗಳೂ ಬಲಿಷ್ಠವಾಗಿವೆ. ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಟೂರ್ನಿಯಲ್ಲಿ ತಂಡದ ನಾಯಕನಾಗಿದ್ದೇನೆ.

| ರೋಹಿತ್ ಶರ್ಮ ಟೀಮ್ ಇಂಡಿಯಾ ನಾಯಕ

6: ಕಳೆದ 13 ಏಷ್ಯಾಕಪ್ ಆವೃತ್ತಿಗಳಲ್ಲಿ ಭಾರತ ಅತ್ಯಧಿಕ 6 ಬಾರಿ ಪ್ರಶಸ್ತಿ ಜಯಿಸಿದೆ. 1984, 1988, 1990-91, 1995, 2010ರ ಏಕದಿನ ಟೂರ್ನಿಗಳಲ್ಲದೆ, 2016ರಲ್ಲಿ ಟಿ20 ಪ್ರಕಾರದಲ್ಲಿ ನಡೆದ ಟೂರ್ನಿಯಲ್ಲೂ ಭಾರತ ಚಾಂಪಿಯನ್ ಆಗಿತ್ತು. ಉಳಿದಂತೆ ಶ್ರೀಲಂಕಾ 5 ಮತ್ತು ಪಾಕಿಸ್ತಾನ 2 ಬಾರಿ ಏಷ್ಯಾಕಪ್ ಜಯಿಸಿದೆ.

Leave a Reply

Your email address will not be published. Required fields are marked *

Back To Top