ಏಷ್ಯಾ ಕಪ್​ ಕ್ರಿಕೆಟ್ ಟೂರ್ನಿ: ರೋಹಿತ್​ ನಾಯಕ, ವಿರಾಟ್​ಗೆ ವಿಶ್ರಾಂತಿ

ನವದೆಹಲಿ: ಸೆಪ್ಟೆಂಬರ್​ 15ರಿಂದ ಆರಂಭವಾಗಲಿರುವ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಗೆ ಟೀಂ ಇಂಡಿಯಾ ತಂಡ ಪ್ರಕಟಗೊಂಡಿದ್ದು, ಆರಂಭಿಕ ಆಟಗಾರ ರೋಹಿತ್​ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.

ಸಾಲು ಸಾಲು ಪಂದ್ಯಗಳನ್ನು ಆಡುತ್ತಿರುವ ನಾಯಕ ವಿರಾಟ್​ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ಮಹತ್ವದ ಟೂರ್ನಿಯಲ್ಲಿ ಕೊಹ್ಲಿಯನ್ನು ಕೈಬಿಟ್ಟಿರುವುದು ಕ್ರಿಕೆಟ್​ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಶಿಖರ್​ ಧವನ್​ಗೆ ಉಪನಾಯಕನ ಜವಾಬ್ದಾರಿ ವಹಿಸಲಾಗಿದ್ದು, ಕನ್ನಡಿಗರಾದ ಕೆ.ಎಲ್​.ರಾಹುಲ್​, ಮನೀಷ್​ ಪಾಂಡೆಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ವಿಕೆಟ್​ ಕೀಪರ್​ ಕೋಟಾದಲ್ಲಿ ಮಹೇಂದ್ರ ಸಿಂಗ್​ ಧೋನಿ ಮತ್ತು ದಿನೇಶ್​ ಕಾರ್ತಿಕ್​ ಸ್ಥಾನ ಪಡೆದುಕೊಂಡಿದ್ದರೆ, ಆಲ್​ರೌಂಡರ್​ ಕೋಟಾದಲ್ಲಿ ಹಾರ್ದಿಕ್​ ಪಾಂಡ್ಯಾ ಸ್ಥಾನ ಉಳಿಸಿಕೊಂಡಿದ್ದಾರೆ. ಉಳಿದಂತೆ ಸ್ಪಿನ್ನರ್ಸ್​ ಕೋಟಾದಲ್ಲಿ ಯಜುವೇಂದ್ರ ಚಹಾಲ್​, ಕುಲ್ದೀಪ್​ ಯಾದವ್​ ಮತ್ತು ಅಕ್ಷರ್​ ಪಟೇಲ್​ ಸ್ಥಾನ ಪಡೆದಿದ್ದರೆ, ನಿರೀಕ್ಷೆಯಂತೆ ಅನುಭವಿ ವೇಗಿಗಳಾದ ಭುವನೇಶ್ವರ್​ ಕುಮಾರ್​ ಮತ್ತು ಜಸ್ಪ್ರಿತ್​ ಬೂಮ್ರಾ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ತಂಡದಲ್ಲಿ ಹಲವಾರು ಯುವ ಪ್ರತಿಭೆಗಳಿಗೆ ಅವಕಾಶ​ ನೀಡಲಾಗಿದ್ದು, ಖಲೀಲ್​ ಅಹಮದ್​, ಶಾರ್ದುಲ್​ ಠಾಕೂರ್​, ಕೇದಾರ್​ ಜಾದವ್​, ಅಂಬಾಟಿ ರಾಯುಡು ಸ್ಥಾನ ಪಡೆದಿದ್ದಾರೆ.

ಇನ್ನು ಭಾರತ ಈ ಟೂರ್ನಿಯಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿಯಾಗಿರುವ ಪಾಕಿಸ್ತಾನ ಎದುರು ಸೆಪ್ಟೆಂಬರ್​ 19ರಂದು ಸೆಣೆಸಾಟ ನಡೆಸಲಿದೆ.

ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್ (ಉಪ ನಾಯಕ), ಕೆಎಲ್ ರಾಹುಲ್, ಅಂಬಾಟಿ ರಾಯುಡು, ಮನೀಶ್ ಪಾಂಡೆ, ಕೇದರ್ ಜಾದವ್, ಎಂಎಸ್ ಧೋನಿ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಯಜುವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್​ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಖಲೀಲ್ ಅಹಮ್ಮದ್