ಏಷ್ಯಾ ಕಪ್​ ಫೈನಲ್​: ಬಾಂಗ್ಲಾದಿಂದ ಭಾರತಕ್ಕೆ ಸಾಧಾರಣ ಗುರಿ, ಗಮನಸೆಳೆದ ಲಿಟನ್​ ಶತಕ

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯಾ ಕಪ್​ 2018 ಟೂರ್ನಿಯ ಫೈನಲ್​ ಪಂದ್ಯದ ಹಣಾಹಣಿಯಲ್ಲಿ ಲಿಟನ್​ ದಾಸ್​ ಅವರ ಶತಕ ನೆರವಾದರೂ ಕೂಡ ಉಳಿದ ಆಟಗಾರರ ವೈಫಲ್ಯದಿಂದ  ಬಾಂಗ್ಲಾದೇಶ, ಟೀಂ ಇಂಡಿಯಾ ಗೆಲುವಿಗೆ ಸಾಧಾರಣ ಮೊತ್ತದ ಗುರಿ ನೀಡಿದೆ.

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಬಾಂಗ್ಲಾ ಪಡೆ 48.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 222 ರನ್​ ಕಲೆಹಾಕುವ ಮೂಲಕ ಟೀಂ ಇಂಡಿಯಾಗೆ 223 ರನ್​ ಸಾಧಾರಣ ಗುರಿಯನ್ನು ನೀಡಿದೆ.

ಬಾಂಗ್ಲಾ ಪರ ಆರಂಭಿಕರಾಗಿ ಕಣಕ್ಕಿಳಿದ ಲಿಟನ್​ ದಾಸ್​ ಹಾಗೂ ಮೆಹದಿ ಹಸನ್​ 121 ರನ್​ಗಳ ಉತ್ತಮ ಜತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ವೇಳೆ 32 ರನ್​ ಗಳಿಸಿದ್ದ ಹಸನ್,​ ಕೇದರ್​ ಜಾಧವ್​ ಓವರ್​ನಲ್ಲಿ ಅಂಬಾಟಿ ರಾಯುಡುಗೆ ಕ್ಯಾಚಿತ್ತು ಫೆವಲಿಯನ್​ ಕಡೆ ಮುಖ ಮಾಡಿದರು. ನಂತರ ಬಂದ ಯಾವೊಬ್ಬ ಬ್ಯಾಟ್ಸಮನ್​ ಕೂಡ ಲಿಟನ್​ ದಾಸ್​ಗೆ ಸಾಥ್​ ನೀಡಲಿಲ್ಲ. ಇಮ್ರುಲ್​ ಕಯೆಸ್​(2), ಮುಶ್ಪೀಕುರ್ ರಹೀಂ(5), ಮಹಮದ್​ ಮಿಥುನ್​(2), ಮಹಮದುಲ್ಲ(4) ಔಟಾಗಿ ನಿರ್ಗಮಿಸಿದರು.

ಇತ್ತ ಏಕಾಂಗಿಯಾಗಿ ಹೋರಾಡುತ್ತಿದ್ದ ಲಿಟನ್​ ದಾಸ್​ 117 ಎಸೆತಗಳಲ್ಲಿ 121 ರನ್​ಗಳ ಅಮೋಘ ಶತಕವನ್ನು ಬಾರಿಸಿ ತಂಡದ ಮೊತ್ತ 200 ಗಡಿಯ್ನನು ತಲುಪುವಷ್ಟರಲ್ಲಿ ಕುಲದೀಪ್​ ಯಾದವ್​ಗೆ ವಿಕೆಟ್​ ನೀಡಿ ಹೊರ ನಡೆದರು. ನಂತರ ಆಟ ಮುಂದುವರಿಸಿದ ಮಶ್ರಫ್​ ಮೊರ್ಟಜ(7), ನಜ್ಮುಲ್ ಇಸ್ಲಾಂ(7) ಕೂಡ ವಿಫಲವಾದರೂ, ಕೊನೆಯಲ್ಲಿ ಉತ್ತಮ ಆಟವಾಡಿದ ಸೌಮ್ಯ ಸರ್ಕಾರ್​ ಉಪಯುಕ್ತ 33 ರನ್​​​ ಗಳಿಸಿ ರನೌಟಾದರು. ರುಬೆಲ್​ ಹುಸೈನ್​ ಶೂನ್ಯಕ್ಕೆ ನಿರ್ಗಮಿಸಿದರೆ, ಮುಸ್ತಾಫಿಜುರ್​ ರೆಹಮಾನ್ 2 ರನ್​ ಗಳಿಸಿ ಅಜೇಯರಾಗಿ ಉಳಿದರು.​

ಟೀಂ ಇಂಡಿಯಾದ ಪರ ಮಾರಕ ಬೌಲಿಂಗ್​ ದಾಳಿ ನಡೆಸಿದ ಕುಲದೀಪ್​ ಯಾದವ್​ ಪ್ರಮುಖ 3 ವಿಕೆಟ್​ ಕಬಳಿಸಿ ಭಾರತದ ಪಾಲಿಗೆ ವರವಾದರು. ಉಳಿದಂತೆ ಕೇದರ್​ ಜಾಧವ್​​​ 2 ವಿಕೆಟ್​ ಪಡೆದರೆ, ಯಜುವೇಂದ್ರ ಚಹಾಲ್ ಹಾಗೂ ಜಸ್ಪ್ರಿತ್​ ಬೂಮ್ರಾ ತಲಾ​ 1 ವಿಕೆಟ್​ಗೆ ತೃಪ್ತಿಪಟ್ಟರು. ಮಹಮದ್​ ಮಿಥುನ್, ನಜ್ಮುಲ್ ಇಸ್ಲಾಂ, ಹಾಗೂ ಸೌಮ್ಯ ಸರ್ಕಾರ್​​​ ರನೌಟಾದರು. (ಏಜೆನ್ಸೀಸ್​)