ಅಶ್ವತ್ಥಕಟ್ಟೆಯಲ್ಲಿ ಪ್ರತ್ಯಕ್ಷವಾಗುತ್ತಿರುವ ‘ನಾಗರ

ಗೋಕರ್ಣ: ಇಲ್ಲಿನ ಪುರಾತನ ಅಶ್ವತ್ಥಕಟ್ಟೆಯಲ್ಲಿರುವ ನಾಗದೇವತಾ ಸನ್ನಿಧಿಗೆ ಕಳೆದ ಕೆಲ ದಿನಗಳಿಂದ ನಾಗರಹಾವು ಪ್ರತ್ಯಕ್ಷವಾಗಿ ದರ್ಶನ ಕೊಟ್ಟು ವಿಸ್ಮಯ ಹುಟ್ಟು ಹಾಕಿದೆ.

ತಾಪಂ ಸದಸ್ಯ ಮಹೇಶ ಶೆಟ್ಟಿ ಅವರ ಕುಟುಂಬಕ್ಕೆ ಸೇರಿದ ಪುರಾತನ ಅಶ್ವತ್ಥಕಟ್ಟೆ ಇದಾಗಿದೆ. ಕೆಲ ತಿಂಗಳ ಹಿಂದೆ ಅಶ್ವತ್ಥಕಟ್ಟೆಯಲ್ಲಿ ಅನಾದಿಯಿಂದ ಸ್ಥಾಪಿತವಾಗಿದ್ದ ನಾಗದೇವರಿಗೆ ಪುನರ್ ಪ್ರತಿಷ್ಠೆಯನ್ನು ರಾಘವೇಶ್ವರ ಭಾರತಿ ಸ್ವಾಮೀಜಿ ನೆರವೇರಿಸಿದ್ದರು. ಪ್ರತಿಷ್ಠಾ ನಂತರದ ಪ್ರಥಮ ಪೂಜೆಯನ್ನು ಶ್ರೀಗಳು ಸಲ್ಲಿಸಿದ್ದರು. ಪೂಜೆ ವೇಳೆ ಅಶ್ವತ್ಥ ಸನ್ನಿಧಿಯಲ್ಲಿದ್ದ ದೊಡ್ಡ ರಂದ್ರ ಮತ್ತು ಬಿಲವನ್ನು ಕಂಡ ಇದನ್ನು ಯಾವತ್ತೂ ಮುಚ್ಚಬೇಡಿ. ಇದು ನಾಗದೇವತೆ ತನ್ನ ಓಡಾಟಕ್ಕೆ ಸ್ವಯಂ ನಿರ್ವಿುಸಿಕೊಂಡ ಸರಾಗ ಮಾರ್ಗವಾಗಿದೆ ಎಂದು ಶ್ರೀಗಳು ಸೂಚನೆ ಕೊಟ್ಟಿದ್ದರು. ಅದರಂತೆ ಕಾಮಗಾರಿ ಮುಗಿದ ನಂತರವೂ ಆ ಬಿಲ ಮತ್ತು ರಂಧ್ರವನ್ನು ಹಾಗೇ ಬಿಡಲಾಗಿತ್ತು. ಶ್ರೀಗಳ ಆದೇಶಕ್ಕೆ ನಿದರ್ಶನವೆಂಬಂತೆ ಕಳೆದ ಮೂರು ದಿನಗಳಿಂದ ಸಾಕ್ಷಾತ್ ನಾಗರದ ಓಡಾಟ ಈ ಮಾರ್ಗದಿಂದ ಪ್ರಾರಂಭವಾಗಿದೆ. ಇದು ನಂಬಿದ ಭಕ್ತರನ್ನು ಆಶ್ಚರ್ಯಕ್ಕೀಡು ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಹೇಶ ಶೆಟ್ಟಿ, ‘ಸಾಕ್ಷಾತ್ ನಾಗರ ಒಮ್ಮೆ ಬಂದು ನಾಗದೇವತೆಯನ್ನು ಸುತ್ತು ಹಾಕಿ ಮತ್ತೆ ಬಂದ ದಾರಿಯಲ್ಲಿಯೇ ಹೊರಟು ಹೋಗುತ್ತಿದೆ. ಜತೆಗೆ ಈ ನಾಗರ ಪೊರೆ ಬಿಟ್ಟು ನಮ್ಮನ್ನು ಆಶೀರ್ವದಿಸಿದೆ. ನಂಬಿದವರ ಪಾಲಿನ ಸಾಕ್ಷಾತ್ ದೇವರಾದ ರಾಘವೇಶ್ವರ ಶ್ರೀಗಳ ಮಾತು ನಿಜವಾಗಿದೆ’ ಎಂದು ತಿಳಿಸಿದ್ದಾರೆ.