More

    ಶಿಕ್ಷಕ ವೃತ್ತಿಯ ಮಾದರಿಯಾದ ಅಶ್ವತ್ಥ್

    ಬೆಂಗಳೂರು: ಮೇಷ್ಟ್ರು ಎನಿಸಿಕೊಂಡವರು ಹೇಗಿರಬೇಕು ಎಂದು ತಾವು ನಿರ್ವಹಿಸಿದ ಪಾತ್ರಗಳ ಮೂಲಕವೇ ನಾಡಿಗೆ ತೋರಿಸಿಕೊಟ್ಟವರು ಕೆ.ಎಸ್. ಅಶ್ವತ್ಥ್. ಅವರ ಪಾತ್ರಗಳು ಶಿಕ್ಷಕ ವೃತ್ತಿಗೇ ಗೌರವವನ್ನು ತಂದುಕೊಟ್ಟಿವೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೆ.ಎಸ್. ಅಶ್ವತ್ಥ್ 10ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ನಾಗರಹಾವು’ ಸಿನಿಮಾದಲ್ಲಿನ ಚಾಮಯ್ಯ ಮೇಷ್ಟ್ರು ಪಾತ್ರವನ್ನು ತರಾಸು ಅಕ್ಷರಗಳಲ್ಲಿ ಬರೆದರು, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅದನ್ನು ಅದ್ಭುತ ಮೂರ್ತರೂಪ ನೀಡಿದರು. ಆದರೆ, ಆ ಪಾತ್ರಕ್ಕೆ ಕನ್ನಡಿಗರ ಮನದಲ್ಲಿ ಅಚ್ಚೊತ್ತುವಂತೆ ಜೀವ ತುಂಬಿದವರು ನಟ ಕೆ.ಎಸ್. ಅಶ್ವತ್ಥ್. ನಿಜವಾದ, ಶಿಸ್ತಿನ ಶಿಕ್ಷಕ ವಿದ್ಯಾರ್ಥಿಗಳಲ್ಲಿ ನೈತಿಕತೆ, ಪ್ರಾಮಾಣಿಕತೆಯನ್ನು ಬೆಳೆಸುತ್ತಾನೆ. ಕನ್ನಡ ಚಿತ್ರರಂಗದಲ್ಲಿ ಅಶ್ವತ್ಥ್ ತಮ್ಮ ಪಾತ್ರಗಳ ಮುಖಾಂತರವೇ ಪ್ರೇಕ್ಷಕರಲ್ಲಿ ಇಂತಹ ಅಮೂಲ್ಯ ಗುಣಗಳನ್ನು ಬೆಳೆಸಿದರು. ಅಶ್ವತ್ಥ್ ಅವರಿಗೆ ಅವರೇ ಸರಿಸಾಟಿ ಎಂದರು. ನಟ ಶಿವರಾಜ್​ಕುಮಾರ್ ಮಾತನಾಡಿ, ಅಶ್ವತ್ಥ್​ರ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕವನು, ಅದಕ್ಕೆ ಯೋಗ್ಯತೆ ಇರಬೇಕು. ಅಶ್ವತ್ಥ್ ಕರ್ನಾಟಕಕ್ಕೆ ಮಾತ್ರವಲ್ಲದೇ ದೇಶದ ಎಲ್ಲ ಮೇರುನಟರಲ್ಲಿ ಒಬ್ಬರಾದವರು. ಅವರಿಗಿದ್ದ ಸರಳತೆ ಎಲ್ಲ ಕಲಾವಿದರಿಗೂ ಮಾದರಿ. ‘ಇನ್​ಸ್ಪೆಕ್ಟರ್ ವಿಕ್ರಮ್, ‘ಮೋಡದ ಮರೆಯಲ್ಲಿ’ , ‘ಚಿರ ಬಾಂಧವ್ಯ’ ಮತ್ತಿತರ ಚಿತ್ರಗಳಲ್ಲಿ ಆ ದಿಗ್ಗಜ ಕಲಾವಿದ ನೊಡನೆ ಜತೆಯಲ್ಲಿ ನಟಿಸಿದ್ದು ನನ್ನ ಭಾಗ್ಯ. ಅವರ ಆಶೀರ್ವಾದದಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ನಂಬಿದ್ದೇನೆ ಎಂದು ಸ್ಮರಿಸಿದರು. ಒಣಕಲ್ ಮಠದ ಶ್ರೀ ಬಸವರಾಮಾನಂದ ಸ್ವಾಮೀಜಿ, ಹಿರಿಯ ನಟರಾದ ರಾಜೇಶ್, ಶ್ರೀನಾಥ್, ಅಶೋಕ್, ಜೈಜಗದೀಶ್, ಗಾಯಕಿ ಕಸ್ತೂರಿ ಶಂಕರ್ ಮತ್ತಿತರರಿದ್ದರು.

    ಕಣ್ಣೀರಾದ ಶಿವರಾಜ್​ಕುಮಾರ್

    ‘ಮೋಡದ ಮರೆಯಲ್ಲಿ’ ಚಿತ್ರದಲ್ಲಿ ಅಶ್ವತ್ಥ್ ರೊಂದಿಗೆ ನಾನು ನಟಿಸಿದ್ದರ ಬಗ್ಗೆ ಅಪ್ಪಾಜಿ (ಡಾ.ರಾಜ್) ಮತ್ತು ಅಮ್ಮ (ಪಾರ್ವತಮ್ಮ) ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂದು ಅಶ್ವತ್ಥ್, ಅಪ್ಪಾಜಿ, ಅಮ್ಮ ಮೂವರೂ ಇಲ್ಲ. ಅಶ್ವತ್ಥ್​ರ ಜತೆ ನಟಿಸಿದ್ದು ಪಿತೃವಾತ್ಸಲ್ಯವನ್ನು ನೆನಪಿಸುತ್ತದೆ ಎನ್ನುವಾಗ ಶಿವರಾಜ್​ಕುಮಾರ್ ಕಣ್ಣಂಚು ನೀರಾಯಿತು. ಸಭಿಕರೂ ಒಂದು ಕ್ಷಣ ಭಾವುಕರಾದರು.

    ಶೂಟಿಂಗ್ ಸೆಟ್​ನಲ್ಲಿ ಅಶ್ವತ್ಥ್ ತೋರಿಸುತ್ತಿದ್ದ ಸಮಯಪ್ರಜ್ಞೆ, ಶಿಸ್ತಿನ ಜೀವನ ಎಲ್ಲರಿಗೂ ಮಾದರಿ. ಕನ್ನಡ ಚಿತ್ರರಂಗ ಅವರನ್ನಾಗಲಿ, ಅವರ ಮಗ ಶಂಕರ್ ಅಶ್ವತ್ಥ್​ರನ್ನಾಗಲಿ ಸರಿಯಾಗಿ ನೋಡಿಕೊಳ್ಳಲಿಲ್ಲ. ಸರಿಯಾಗಿ ನೋಡಿಕೊಂಡಿದ್ದರೆ ಶಂಕರ್ ಅಶ್ವತ್ಥ್ ಉಬರ್ ಕ್ಯಾಬ್ ಓಡಿಸುವ ಪರಿಸ್ಥಿತಿ ಬರುತ್ತಿರಲಿಲ್ಲ.

    | ಎಚ್.ಆರ್. ಭಾರ್ಗವ ನಿರ್ದೇಶಕ

     

    ತಂದೆಯವರು (ಕೆ.ಎಸ್. ಅಶ್ವತ್ಥ್) ನಮಗೆ ಜೀವನವೆಂಬ ನದಿಯಲ್ಲಿ ಈಜುವುದನ್ನು ಕಲಿಸಿ ದ್ದಾರೆ. ನಾವು ಅವರು ಹಾಕಿ ಕೊಟ್ಟ ಹಾದಿಯಲ್ಲೇ ಸಾಗುತ್ತಿದ್ದೇವೆ.

    | ಶಂಕರ್ ಅಶ್ವತ್ಥ್ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts