ಹರಪನಹಳ್ಳಿ : ತಾಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ಶ್ರೀನಿವಾಸಪುರ ಗ್ರಾಮದ ಚೆಕ್ ಡ್ಯಾಮ್ ಭರ್ತಿಯಾಗಿದ್ದರಿಂದ ರಸ್ತೆಯಲ್ಲಿ ಜಲಾವೃತಗೊಂಡು ಬೂದಿಹಾಳ್-ಹುಣಸಿಕಟ್ಟೆ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ವರ್ಷದ ಹಿಂದೆ ಗ್ರಾಮಸ್ಥರ ವಿರೋಧದ ನಡುವೆಯೂ ಅಂದಾಜು 35 ಲಕ್ಷ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ಡ್ಯಾಂಗೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆಯಿಂದ ನೀರು ಮುಂದೆ ಸಾಗದೆ ವಿವಿಧ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜನರಿಗೆ ಹಳ್ಳ ದಾಟುವುದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜೀವದ ಹಂಗು ತೊರೆದು ಹಳ್ಳದಾಟಬೇಕಾಗುತ್ತಿದೆ. ಶ್ರೀನಿವಾಸಪುರ- ಬೂದಿಹಾಳ್ ಗ್ರಾಮದ ಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಲಾಗಿತ್ತು. ಭರವಸೆ ನೀಡಿದ್ದ ಅಧಿಕಾರಿಗಳು ನಂತರ ಗ್ರಾಮದ ಕಡೆ ಹಿಂತಿರುಗಿ ನೋಡಿಲ್ಲ ಎಂದು ಗ್ರಾಮಸ್ಥ ಭರತ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಚೆಕ್ ಡ್ಯಾಂನ ಹೂಳು ತೆಗೆದಿಲ್ಲ. ನೀರು ಸರಾಗವಾಗಿ ಹರಿಯುತ್ತಿಲ್ಲ. ಅಲ್ಲದೆ ಕಳಪೆ ಕಾಮಗಾರಿ ನಡೆದಿದೆ. ಕೂಡಲೇ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರಾದ ನಾರಪ್ಪ, ಸರ್ವೇಶ,ಆರ್. ಪ್ರಕಾಶ, ಉದಯಕುಮಾರ, ನಾಗರಾಜ, ಅರುಣ ಕುಮಾರ್, ಮರಳುಸಿದ್ದಪ್ಪ, ರಾಮನಗೌಡ, ಹರೀಶ ಇತರರಿದ್ದರು.