ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭೆ ಸ್ಥಾನ ಗೆಲ್ಲಲು ತಂತ್ರ ರೂಪಿಸಿದ ಆರ್​. ಅಶೋಕ್​

>

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಬೇಕಾದ ಅನಿವಾರ್ಯತೆಯಲ್ಲಿರುವ ಮಾಜಿ ಉಪ ಮುಖ್ಯಮಂತ್ರಿ ಆರ್​. ಅಶೋಕ್​ ಮಾಜಿ ಶಾಸಕ ಚೆಲುವರಾಯಸ್ವಾಮಿ ಮತ್ತು ಮಾಜಿ ಶಾಸಕ ಬಾಲಕೃಷ್ಣ ಮತ್ತು ಪರಿಷತ್​ ಮಾಜಿ ಉಪ ಸಭಾಪತಿ ಪುಟ್ಟಣ್ಣ ಅವರನ್ನು ಬಿಜೆಪಿ ಕರೆತರುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಬಿಜೆಪಿ ಈ ವರೆಗೆ ಗೆದ್ದಿಲ್ಲ. ಆದರೆ, ಈ ಕ್ಷೇತ್ರಗಳನ್ನೂ ಗೆಲ್ಲಬೇಕು ಎಂಬ ಉದ್ದೇಶ ಹೊಂದಿರುವ ಬಿಜೆಪಿ ಈ ಉದ್ದೇಶ ಸಾಧನೆಗಾಗಿ ಒಕ್ಕಲಿಗರ ಮುಖಂಡ ಅಶೋಕ್​ ಅವರನ್ನು ನಿಯೋಜಿಸಿದೆ. ಪಕ್ಷದ ಸೂಚನೆ ಮೇರೆಗೆ ಅಖಾಡಕ್ಕಿಳಿದಿರುವ ಅಶೋಕ್​, ಮಂಡ್ಯ ಜಿಲ್ಲೆಯಲ್ಲಿ ಪ್ರಮುಖ ನಾಯಕರು ಎನಿಸಿಕೊಂಡಿರುವ ಚೆಲುವರಾಯಸ್ವಾಮಿ ಅವರನ್ನೂ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ರಾಮನಗರ ಜಿಲ್ಲೆಯ ಪ್ರಭಾವಿ ಮುಖಂಡರಾದ ಮಾಗಡಿಯ ಮಾಜಿ ಶಾಸಕ ಎಚ್​.ಸಿ ಬಾಲಕೃಷ್ಣ ಮತ್ತು ಅದೇ ಭಾಗದಿಂದ ಪರಿಷತ್​ಗೆ ಆಯ್ಕೆಯಾಗುತ್ತಿದ್ದ ಪುಟ್ಟಣ್ಣ ಅವರನ್ನು ಕರೆತರಲು ಕಸರತ್ತು ನಡೆಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್​ ನಡುವೆ ಲೋಕಸಭೆ ಚುನಾವಣೆಗೆ ಮೈತ್ರಿಯಾಗಿರುವ ಹಿನ್ನೆಲೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಒಂದೋ ಕಾಂಗ್ರೆಸ್​ ಅಥವಾ ಜೆಡಿಎಸ್​ ಅಭ್ಯರ್ಥಿ ಮಾತ್ರ ಸ್ಪರ್ಧೆ ಮಾಡಲಿದ್ದಾರೆ. ಇನ್ನೊಂದು ಪಕ್ಷ ಬೆಂಬಲವಾಗಿ ನಿಂತು ಕೆಲಸ ಮಾಡಲಿದೆ. ಆಗ ಬಿಜೆಪಿ ಮತ್ತು ಮೈತ್ರಿ ಕೂಟದ ನಡುವೆ ನೇರ ಸ್ಪರ್ಧೆ ಏರ್ಪಡುತ್ತದೆ. ಅಂಥ ಸನ್ನಿವೇಶದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲುವು ದಕ್ಕಿಸಿಕೊಳ್ಳಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಆ ತಂತ್ರಗಾರಿಕೆಯ ಭಾಗವಾಗಿಯೇ ಈ ಮೂವರ ಮೇಲೆ ಪಕ್ಷ ಹೆಚ್ಚಿನ ಲಕ್ಷ್ಯ ವಹಿಸಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್​ ಸೋದರ ಡಿ.ಕೆ ಸುರೇಶ್​ ವಿರುದ್ಧ ಬಿಜೆಪಿ ಯೋಗೀಶ್ವರ್​ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಡಿ.ಕೆ ಸುರೇಶ್​ ಮೊದಲ ಬಾರಿಗೆ ಸಂಸತ್​ಗೆ ಸ್ಪರ್ಧಿಸಿದಾಗ ಅವರ ಗೆಲುವಿಗೆ ನೆರವಾಗಿದ್ದು ಇದೇ ಯೋಗೀಶ್ವರ್​. ಚನ್ನಪಟ್ಟಣದಲ್ಲಿ ತಮ್ಮದೇ ವರ್ಚಸ್ಸು ಹೊಂದಿರುವ ಯೋಗೀಶ್ವರ್​ಗೆ, ಮಾಗಡಿಯ ಬಾಲಕೃಷ್ಣ ಅವರ ನೆರವು ಸಿಕ್ಕರೆ ರಾಮನಗರ ಜಿಲ್ಲೆಯಲ್ಲಿ ಹೆಚ್ಚಿನ ಬಲ ಸಿಕ್ಕಂತಾಗುತ್ತದೆ. ಅವರ ಜತೆಗೆ ಪುಟ್ಟಣ್ಣ ಅವರು ರಾಮನಗರ ಜಿಲ್ಲಾ ವ್ಯಾಪ್ತಿಯ ಶಿಕ್ಷಕರ ಮತಗಳನ್ನು ಸೆಳೆಯುವ ಸಾಧ್ಯತೆಗಳಿವೆ. ಬಿಜೆಪಿಯ ಈ ತಂತ್ರಗಾರಿಕೆ ಫಲಿಸಿದರೆ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಗೆಲುವು ದೂರದ ಮಾತೇನಲ್ಲ.

ಈ ಹಿಂದೆ ಜೆಡಿಎಸ್​ನಲ್ಲಿದ್ದ ಚೆಲುವರಾಯಸ್ವಾಮಿ, ಎಚ್​.ಸಿ ಬಾಲಕೃಷ್ಣ ಮತ್ತು ಪುಟ್ಟಣ್ಣ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಬಂಡೆದ್ದು ಕಾಂಗ್ರೆಸ್​ ಸೇರಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದಲೇ ಸ್ಪರ್ಧಿಸಿದ್ದ ಈ ನಾಯಕರು ಜೆಡಿಎಸ್​ ಅಭ್ಯರ್ಥಿಗಳ ವಿರುದ್ಧವೇ ಸೋಲುಂಡಿದ್ದರು. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ರಚನೆಯಾಗಿರುವುದರಿಂದ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಗಳ ಪರವಾಗಿ ಈ ನಾಯಕರು ದುಡಿಯುವ ಅನಿವಾರ್ಯತೆಯಲ್ಲಿದ್ದಾರೆ.