ಆಯೋಗದಲ್ಲಿ ಆಂತರಿಕ ಕಲಹ: ಮೋದಿ ವಿರುದ್ಧದ ಅಲ್ಪಮತದ ನಿರ್ಣಯ ದಾಖಲಿಸದ್ದಕ್ಕೆ ಅಸಮಾಧಾನ

ನವದೆಹಲಿ: ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ತೀರ್ಪಿನಲ್ಲಿ ಅಸಮ್ಮತಿ ಸೂಚಿಸಿರುವ ಅಂಶಗಳನ್ನು ಉಲ್ಲೇಖಿಸುವವರೆಗೂ ಅಂಥ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಹೇಳಿದ್ದಾರೆ.

ಅಂಥ ಸಭೆಗಳಿಂದ ದೂರವುಳಿಯದ ಹೊರತು ಬೇರೆ ಆಯ್ಕೆಗಳಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರಿಗೆ ಮೇ 16ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಕ್ಲೀನ್​ಚಿಟ್ ನೀಡಿದ 6 ಪ್ರಕರಣಗಳಲ್ಲಿ ಅಸಮ್ಮತಿ ವ್ಯಕ್ತಪಡಿಸಿ, ಕೆಲ ಪ್ರಕರಣಗಳಲ್ಲಿ ನೋಟಿಸ್ ನೀಡಬೇಕೆಂದು ನಿರ್ಣಯಿ ಸಿದ್ದರೂ ಅದನ್ನು ದಾಖಲಿಸ ಲಾಗಿರಲಿಲ್ಲ. ಇದು ಅಶೋಕ್ ಅಸಮಾಧಾನಕ್ಕೆ ಕಾರಣ ವಾಗಿದೆ. ಬಹುಮತ ಆಧಾರದ ನಿರ್ಣಯದಲ್ಲಿ ಅಲ್ಪಮತದ ಅಭಿಪ್ರಾಯಕ್ಕೆ ಅವಕಾಶ ದೊರೆಯುತ್ತಿಲ್ಲ. ಸಮಿತಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಹಾಗೂ ಸುಶೀಲ್ ಚಂದ್ರ ಮತ್ತಿಬ್ಬರು ಸದಸ್ಯರಾಗಿದ್ದಾರೆ. ಈ ಪತ್ರದ ಬಳಿಕ ಲಾವಾಸಾ ಜತೆ ಅರೋರಾ ಚರ್ಚೆ ನಡೆಸಿದ್ದರು.

ಸದಸ್ಯರು ತದ್ರೂಪಿಗಳಲ್ಲ: ಅಶೋಕ್ ಲಾವಾಸಾ ಪತ್ರಕ್ಕೆ ಪ್ರತಿಕ್ರಿಯಿಸಿ ರುವ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ, ಚುನಾವಣಾ ಆಯೋಗ ಅರೆ ನ್ಯಾಯಾಂಗ ವ್ಯವಸ್ಥೆಯಲ್ಲ. ಸಂಪೂರ್ಣ ಸಾಂವಿಧಾನಿಕ ಸಂಸ್ಥೆ ಹೀಗಾಗಿ, ಅಲ್ಪಮತದ ನಿರ್ಧಾರವನ್ನು ಪರಿಗಣಿಸಬೇಕಿಲ್ಲ. ಇಂಥ ಹಲವು ನಿದರ್ಶನಗಳು ಈ ಹಿಂದೆಯೂ ನಡೆದಿವೆ. ಚುನಾವಣಾ ಆಯೋಗದ ಸದಸ್ಯರು ತದ್ರೂಪಿಗಳಲ್ಲ. ಎಲ್ಲರಿಂದಲೂ ಒಂದೇ ರೀತಿ ಅಭಿಪ್ರಾಯ ಬರಬೇಕಿಲ್ಲ. ಈ ಹಿಂದೆಯೂ ಭಿನ್ನಾಭಿಪ್ರಾಯದ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆದರೆ, ಅವೆಲ್ಲವೂ ಅಯೋಗದ ಒಳಗೆ ಇದ್ದವು. ಬಳಿಕ ಆಯುಕ್ತರು ಬರೆದ ಪುಸ್ತಕಗಳಲ್ಲಿ ಉಲ್ಲೇಖ ಪಡೆದುಕೊಂಡಿವೆ. ಈ ವಿಚಾರವಾಗಿ ಸಾರ್ವಜನಿಕ ಚರ್ಚೆಗೆ ನಾನು ಮುಕ್ತನಾಗಿದ್ದರೂ, ಅದಕ್ಕೆಲ್ಲ ಸಮಯ ಕೂಡಿಬರಬೇಕು ಎಂದು ಅರೋರಾ ಹೇಳಿದ್ದಾರೆ.

ಸಾಂವಿಧಾನಿಕ ಸಂಸ್ಥೆ ಸಮಗ್ರತೆಗೆ ಧಕ್ಕೆ

ಪ್ರಜಾಪ್ರಭುತ್ವದ ಮತ್ತೊಂದು ಕರಾಳ ದಿನ ದಾಖಲಾಗಿದೆ. ಮೋದಿ- ಅಮಿತ್ ಷಾ ಜೋಡಿಗೆ ಕ್ಲೀನ್​ಚಿಟ್ ನೀಡುವ ಭರದಲ್ಲಿ ಅಶೋಕ್ ಲಾವಾಸಾ ಅವರ ಅಸಮ್ಮತಿಯನ್ನು ದಾಖಲಿಸಲಾಗಿಲ್ಲ. ಸಾಂವಿಧಾನಿಕ ಸಂಸ್ಥೆಯ ಅತಿಕ್ರಮಣವೇ ಮೋದಿ ಸರ್ಕಾರದ ಹೆಗ್ಗುರುತು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಟೀಕಿಸಿದ್ದಾರೆ. ಸಿಬಿಐ ನಿರ್ದೇಶಕರನ್ನು ಬದಲಾಯಿಸಲಾಯಿತು, ಕೇಂದ್ರ ವಿಚಕ್ಷಣಾ ದಳ ವಿಷಪೂರಿತ ವರದಿ ನೀಡುತ್ತಿದೆ. ಮತ್ತೀಗ ಚುನಾವಣಾ ಆಯೋಗವನ್ನೇ ವಿಭಜಿಸಲಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *