ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್​, ಡಿಸಿಎಂ ಆಗಿ ಸಚಿನ್​ ಪೈಲಟ್​​ ಪ್ರಮಾಣವಚನ ಸ್ವೀಕಾರ

<< ಸಾರ್ವಜನಿಕ ಹಿತಾಸಕ್ತಿ ಹಾಗೂ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳ ಆದ್ಯತೆ ಮೇಲೆ ಕಾರ್ಯನಿರ್ವಹಣೆ>>

ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಅಶೋಕ್​ ಗೆಹ್ಲೋಟ್​ ಹಾಗೂ ಉಪಮುಖ್ಯಮಂತ್ರಿಯಾಗಿ ಯೂತ್​ ಐಕಾನ್​ ಸಚಿನ್​ ಪೈಲಟ್​ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

ಜೈಪುರದಲ್ಲಿರುವ ಐತಿಹಾಸಿಕ ಆಲ್ಬರ್ಟ್​ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಸೇರಿದಂತೆ ಇತರೆ ಕಾಂಗ್ರೆಸ್​ ನಾಯಕರು ಉಪಸ್ಥಿತರಿದ್ದರು.

ಪ್ರಣಾಳಿಕೆ ಆಧರಿಸಿ ಕೆಲಸ
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಗೆಹ್ಲೋಟ್​ ಅವರು ಸಚಿವ ಸಂಪುಟ ನಿರ್ಧರಿಸಿದ ಮೇಲೆ ಮುಖ್ಯಮಂತ್ರಿ ಅವರ ಸಲಹೆ ಮೇರೆಗೆ ಕಾರ್ಯ ನಿರ್ವಹಿಸುತ್ತಾರೆ. ಸಂಪುಟ ರಚನೆ ನಂತರ ಸಾರ್ವಜನಿಕ ಹಿತಾಸಕ್ತಿ ಹಾಗೂ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳ ಆದ್ಯತೆ ಮೇಲೆ ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದರು.

ಹೊಸ ಯುಗ ಆರಂಭ
ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಅವರು ಮಾತನಾಡಿ, ಜನರ ನಿರೀಕ್ಷೆಗಳನ್ನು ಮುಟ್ಟುವ ಮಟ್ಟಿಗೆ ಕಾಂಗ್ರೆಸ್​ ಕಾರ್ಯನಿರ್ವಹಿಸಲಿದೆ. ರಾಜ್ಯ ಹಾಗೂ ರಾಜ್ಯದ ಜನರಿಗೆ ಇದೊಂದು ಹೊಸ ಯುಗ ಆರಂಭವಾಗಿದೆ. ಜನರು ನಮ್ಮನ್ನು ನಂಬಿದ್ದಾರೆ. ಇಂದಿನಿಂದಲೇ ನಮ್ಮ ಕಾರ್ಯ ಪ್ರಾರಂಭವಾಗಿದೆ. ಆದಷ್ಟು ಬೇಗ ಸಚಿವ ಸಂಪುಟವನ್ನು ರಚಿಸಿ ನಮ್ಮ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ತಿಳಿಸಿದರು. (ಏಜೆನ್ಸೀಸ್​)