ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​, ಡಿಸಿಎಂ ಸಚಿನ್​ ಪೈಲಟ್ ಸುಳಿವು ನೀಡಿದ ರಾಹುಲ್ ಟ್ವೀಟ್

ನವದೆಹಲಿ: ಭಾರಿ ಕುತೂಹಲ ಮೂಡಿಸಿದ್ದ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆ ಹಣಾಹಣಿ ಬಹುತೇಕ ಅಂತ್ಯವಾಗಿದ್ದು, ಅಶೋಕ್​ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಮತ್ತು ಸಚಿನ್​ ಪೈಲಟ್​ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.

ಸಿಎಂ, ಡಿಸಿಎಂ ಸ್ಥಾನಕ್ಕೇರುವವರ ಹೆಸರಿನ ಅಧಿಕೃತ ಘೋಷಣೆಯೊಂದೇ ಬಾಕಿಯಿದ್ದು, ರಾಹುಲ್​ ಗಾಂಧಿ ತಮ್ಮ ಟ್ವಿಟರ್​ನಲ್ಲಿ ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್​ ಪೈಲಟ್ ಜತೆಗಿರುವ ಚಿತ್ರ ಶೇರ್ ಮಾಡಿ ಅದರೊಂದಿಗೆ ‘ಯುನೈಟೆಡ್​ ಕಲರ್ಸ್​ ಆಫ್​ ರಾಜಸ್ಥಾನ್’ ಎಂದು ಶೀರ್ಷಿಕೆ ಕೊಟ್ಟು ಟ್ವೀಟ್​ ಮಾಡಿದ್ದಾರೆ.

ಮಧ್ಯಪ್ರದೇಶದ ಸಿಎಂ ಆಗಿ ಆಯ್ಕೆಯಾದ ಕಮಲ್​ನಾಥ್ ಹಾಗೂ ಸಿಂಧಿಯಾ ​ ಅವರೊಂದಿಗಿನ ಚಿತ್ರವನ್ನು ರಾಹುಲ್​ ಗಾಂಧಿ ನಿನ್ನೆ ಸಂಜೆ ಇದೇ ರೀತಿ ಟ್ವೀಟ್​ ಮಾಡಿದ್ದರು.

ಸಚಿನ್​ ಪೈಲಟ್​ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಆಫರ್​ ಮಾಡಿದ್ದು, ಅವರು ಅದನ್ನು ಒಪ್ಪಿಕೊಂಡಿದ್ದಾರಾ ಎಂಬುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ರಾಜಸ್ಥಾನದ ಪ್ರಮುಖ ಹೆದ್ದೆಗಳಿಗೆ ಹೆಸರು ನಿರ್ಧರಿಸಲು ಕಳೆದ 36 ಗಂಟೆಗಳ ನಿರಂತರ ಸಭೆ ನಡೆಸಲಾಗಿತ್ತು. ಪ್ರಿಯಾಂಕ ಗಾಂಧಿ ವಾದ್ರ ಕೂಡ ಸಭೆಯೊಂದರಲ್ಲಿ ಪಾಲ್ಗೊಂಡಿದ್ದರು. (ಏಜೆನ್ಸೀಸ್)