ಬೆಂಗಳೂರು: ಚುಟು ಚುಟು ಅಂತೈತಿ..’ ಎಂದು ಸಿನಿಪ್ರಿಯರನೇಕರಲ್ಲಿ ಚುರುಕು ಮೂಡಿಸಿದ್ದ ನಟಿ ಆಶಿಕಾ ರಂಗನಾಥ್ ನೃತ್ಯದಲ್ಲೇ ಮತ್ತೊಂದು ಕಮಾಲ್ ಮಾಡಲು ಮುಂದಾಗಿದ್ದಾರೆ. ಅದರಲ್ಲೂ ಅವರು ಈ ಸಲ ಕೋಟಿಗೊಬ್ಬನಿಗೆ ಜತೆ ಆಗಿದ್ದಾರೆ. ಅಂದರೆ, ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಅವರು ಹಾಡೊಂದಕ್ಕೆ ಹೆಜ್ಜೆ ಹಾಕುವ ಮೂಲಕ ಇದೇ ಮೊದಲ ಸಲ ಕಿಚ್ಚ ಸುದೀಪ್ ಜತೆ ಪರದೆ ಹಂಚಿಕೊಳ್ಳಲಿದ್ದಾರೆ.
‘ರಾಮ್ಾಬು ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಸೂರಪ್ಪ ಬಾಬು ನಿರ್ಮಾಣ ಹಾಗೂ ಶಿವಕಾರ್ತಿಕ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಕೋಟಿಗೊಬ್ಬ 3’ ಚಿತ್ರದಲ್ಲಿ ನಾಯಕ ಸುದೀಪ್ ಇಂಟ್ರೊಡಕ್ಷನ್ ಸಾಂಗ್ನಲ್ಲಿ ಆಶಿಕಾ ಹೆಜ್ಜೆ ಹಾಕಲಿದ್ದಾರೆ. ವಿಶೇಷವಾಗಿ ಮೂಡಿ ಬರಲಿರುವ ಈ ಹಾಡಿಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿನ ವಿಶಿಷ್ಟವಾದ ಸೆಟ್ನಲ್ಲಿ ಮಂಗಳವಾರ (ಜ. 14) ಶೂಟಿಂಗ್ ಆರಂಭವಾಗಲಿದ್ದು, ಒಟ್ಟು ನಾಲ್ಕು ದಿನ ಚಿತ್ರೀಕರಣ ನಡೆಯಲಿದೆ.
‘ಸುದೀಪ್ ಅವರ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ತುಂಬ ಇದೆ. ಆದರೆ ಅದಕ್ಕೂ ಮೊದಲೇ ಅವರ ಸಿನಿಮಾದಲ್ಲಿ ಅವರ ಜತೆಗೇ ಹೆಜ್ಜೆ ಹಾಕಲು ಅವಕಾಶ ಸಿಕ್ಕಿದ್ದು ತುಂಬ ಖುಷಿ ನೀಡಿದೆ’ ಎನ್ನುತ್ತ ಈ ಪ್ರಥಮ ಅವಕಾಶದ ಬಗ್ಗೆ ಹೇಳಿಕೊಂಡರು ಆಶಿಕಾ. ‘ನೃತ್ಯದಲ್ಲಿ ಒಂದು ಗೆಸ್ಟ್ ಅಪಿಯರೆನ್ಸ್ ಮಾಡಬೇಕು ಎಂದು ಚಿತ್ರತಂಡದವರು ಕೇಳಿದಾಗ ಯಾವ ರೀತಿಯ ನೃತ್ಯ, ಎಂಥ ಸೀಕ್ವೆನ್ಸ್ ಎಂಬ ಬಗ್ಗೆ ಎಲ್ಲ ಕೇಳಬೇಕು ಅನಿಸಿತ್ತು. ಆದರೆ ಸುದೀಪ್ ಅವರ ಜತೆ ಇಂಟ್ರೊಡಕ್ಷನ್ ಸಾಂಗ್ ಎಂದಾಗ ಏನನ್ನೂ ಕೇಳದೆ ಒಪ್ಪಿಕೊಂಡೆ’ ಎನ್ನುತ್ತಾರೆ ಆಶಿಕಾ. ‘ಈಗಲೂ ಅದೊಂದು ಸೆಟ್ ಸಾಂಗ್, ನಾಲ್ಕು ದಿನಗಳ ಚಿತ್ರೀಕರಣ ಎಂದಷ್ಟೇ ಗೊತ್ತು, ಉಳಿದದ್ದು ನನಗೂ ಅಲ್ಲಿಗೆ ಹೋದಮೇಲೆಯೇ ತಿಳಿಯಬೇಕು. ಆ ಅನುಭವ ಹೇಗಿರಬಹುದು ಎಂಬ ಬಗ್ಗೆ ಕುತೂಹಲದಿಂದಿದ್ದೇನೆ’ ಎನ್ನುತ್ತಾರೆ ಅವರು.
‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್ ಜತೆ ಮಡೊನ್ನ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಪಿ. ರವಿಶಂಕರ್, ಅಫ್ತಾಬ್ ಶಿವದಾಸಾನಿ, ನವಾಬ್ ಷಾ ಮುಂತಾದವರು ಅಭಿನಯಿಸಿದ್ದಾರೆ. ಜ. 14ರ ಸಂಜೆ 6ಕ್ಕೆ ‘ಆನಂದ್ ಆಡಿಯೋ’ದ ಯೂಟ್ಯೂಬ್ನಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಆಗಲಿದೆ.
2020ರಲ್ಲಿ ಇದು ನನ್ನ ಮೊದಲ ಶೂಟಿಂಗ್. ಸುದೀಪ್ ಅವರ ಜತೆ ಒಂದು ಅದ್ಭುತ ಇಂಟ್ರೊಡಕ್ಷನ್ ಸಾಂಗ್ನಲ್ಲಿ ಹೆಜ್ಜೆ ಹಾಕುವ ಮೂಲಕ ನನ್ನ ಹೊಸ ವರ್ಷ ಆರಂಭವಾಗುತ್ತಿರುವುದು ತುಂಬ ಖುಷಿ ನೀಡುತ್ತಿದೆ.
| ಆಶಿಕಾ ರಂಗನಾಥ್ ನಟಿ