ಇಂದಿನಿಂದ ಆಶಸ್ ಫೈಟ್: ಇಂಗ್ಲೆಂಡ್-ಆಸ್ಟ್ರೇಲಿಯಾ ಪ್ರತಿಷ್ಠೆಯ ಕದನ, ಎಜ್​ಬಾಸ್ಟನ್​ನಲ್ಲಿ ಮೊದಲ ಟೆಸ್ಟ್

ಬರ್ವಿುಂಗ್​ಹ್ಯಾಂ: ಒಟ್ಟಾರೆ 137 ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಹಾಗೂ ಸಾಂಪ್ರದಾಯಿಕ ಆಶಸ್ ಟೆಸ್ಟ್ ಸರಣಿಗೆ ಗುರುವಾರ ಎಜ್​ಬಾಸ್ಟನ್​ನಲ್ಲಿ ಚಾಲನೆ ಸಿಗಲಿದೆ. ಇದು 71ನೇ ಆಶಸ್ ಸರಣಿಯಾಗಿದ್ದು, ಆತಿಥೇಯ ಇಂಗ್ಲೆಂಡ್ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಸರಣಿ ಗೆಲ್ಲುವ ಹಪಹಪಿಯೊಂದಿಗೆ ಹೋರಾಟಕ್ಕೆ ಸಜ್ಜಾಗಿವೆ. ಉಭಯ ತಂಡಗಳ ಅಭಿಮಾನಿಗಳನ್ನು ವಿಪರೀತ ಕಾತರಕ್ಕೆ ಕೊಂಡೊಯ್ಯುವ ಆಶಸ್ ಸರಣಿ ಈ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನ ಭಾಗವಾಗಿರಲಿದೆ ಎನ್ನುವುದು ವಿಶೇಷ.

ವಿವಾದ, ಗೊಂದಲಗಳ ಸೂಪರ್ ಓವರ್ ಮೂಲಕ ಏಕದಿನ ವಿಶ್ವಕಪ್ ಗೆದ್ದ ಆತ್ಮಸ್ಥೈರ್ಯ ಇಂಗ್ಲೆಂಡ್​ನ ಶಕ್ತಿಯಾದರೆ, ಆಸೀಸ್​ಗೆ ಅತಿ ಹೆಚ್ಚು ಆಶಸ್ ಸರಣಿ ಗೆದ್ದ ಇತಿಹಾಸದ ಬಲವಿದೆ. ಆದರೆ ಆಂಗ್ಲರ ನಾಡಿನಲ್ಲಿ 18 ವರ್ಷಗಳಿಂದ ಸರಣಿ ಗೆಲ್ಲದಿರುವ ಆಸೀಸ್ ಈ ಬಾರಿ ಆ ಕೆಟ್ಟ ದಾಖಲೆಯನ್ನು ಅಳಿಸುವ ಗುರಿಯಲ್ಲಿದೆ. ಈ ಸರಣಿ ಇಂಗ್ಲೆಂಡ್​ಗಿಂತ ಆಸೀಸ್ ತಂಡಕ್ಕೆ ಹೆಚ್ಚಿನ ಸವಾಲಿನದ್ದಾಗಿದೆ. 18 ತಿಂಗಳ ಹಿಂದೆ ಚೆಂಡು ವಿರೂಪದ ಕಳಂಕಿತರಾದ ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್ ಮೇಲಿನ ಸಿಟ್ಟು ಆಂಗ್ಲ ಅಭಿಮಾನಿಗಳಿಗೆ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ವಿಶ್ವಕಪ್ ಸಮಯದಲ್ಲಿ ಎದುರಾದ ಗೇಲಿಯೇ ಸಾಕ್ಷಿ. ಆತಿಥೇಯ ಅಭಿಮಾನಿಗಳಿಂದ ಇದು ಈ ಬಾರಿಯೂ ಮುಂದುವರಿಯಬಹುದು. ತವರಿನಲ್ಲಿ ಕೊನೇ 2 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಆಸೀಸ್ ಗೆದ್ದಿದ್ದು ಬಿಟ್ಟರೆ, ಟೀಮ್ ಇಂಡಿಯಾ ಎದುರು ಸೋತಿತ್ತು. ಅದಕ್ಕಿಂತ ಹಿಂದಿನೆರಡು ಸರಣಿಯಲ್ಲೂ ಆತಿಥೇಯ ದಕ್ಷಿಣ ಆಫ್ರಿಕಾ, ಪಾಕಿಸ್ತಾನದ ಎದುರು ಪರಾಭವಗೊಂಡಿತ್ತು. ಆಸೀಸ್ ತಂಡವನ್ನು ಈ ಬಾರಿ ಮುನ್ನಡೆಸುವ ನಾಯಕ ಟಿಮ್ ಪೇನ್​ಗೆ ಇದು ಮೊದಲ ಆಶಸ್ ಸವಾಲು. ಇತ್ತೀಚೆಗಿನ ನಿರ್ವಹಣೆ ಪ್ರಕಾರ, ಜೋ ರೂಟ್ ಸಾರಥ್ಯದ ಇಂಗ್ಲೆಂಡ್ ತಂಡವೂ ಟೆಸ್ಟ್ ಹಿಡಿತ ಕಂಡುಕೊಳ್ಳಲು ಶ್ರಮವಹಿಸಬೇಕಿದೆ. ಮೊನ್ನೆಯಷ್ಟೇ ಐರ್ಲೆಂಡ್ ಎದುರು ಏಕೈಕ ಟೆಸ್ಟ್ ಗೆಲುವು ಹೊರತುಪಡಿಸಿ ವಿಂಡೀಸ್ ಪ್ರವಾಸದ ಟೆಸ್ಟ್ ಸರಣಿಯನ್ನು 1-2ರಿಂದ ಸೋತಿತ್ತು. -ಏಜೆನ್ಸೀಸ್

ಟೀಮ್ ನ್ಯೂಸ್

ಇಂಗ್ಲೆಂಡ್: ಕಳೆದ ಐರ್ಲೆಂಡ್ ಎದುರಿನ ಪಂದ್ಯಕ್ಕಿಂತ ಬಲಿಷ್ಠ 11ರ ಬಳಗವನ್ನು ಕಣಕ್ಕಿಳಿಸಲಿದೆ. ಸ್ಟಾರ್ ವೇಗಿ ಜೋಫ್ರಾ ಆರ್ಚರ್​ಗೆ ಪದಾರ್ಪಣೆ ಮಾಡುವ ಅವಕಾಶ ನೀಡಿಲ್ಲ. ಫಿಟ್ ಆಗಿ ಮರಳಿರುವ ವೇಗಿ ಜೇಮ್್ಸ ಆಂಡರ್​ಸನ್ ಇಂಗ್ಲೆಂಡ್ ಬೌಲಿಂಗ್ ವಿಭಾಗಕ್ಕೆ ಬಲ ನೀಡಲಿದ್ದಾರೆ. ಜೇಸನ್ ರಾಯ್, ರಾರಿ ಬರ್ನ್ಸ್, ಜೋಯ್ ಡೆನ್ಲಿ, ಬಟ್ಲರ್​ಗೆ ಇದು ಮೊದಲ ಆಶಸ್ ಟೆಸ್ಟ್. ವೇಗಿ ಸ್ಯಾಮ್ ಕರ›ನ್​ಗೂ ಈ ಪಂದ್ಯದಲ್ಲಿ ಸ್ಥಾನ ನೀಡಿಲ್ಲ.

ಆಸ್ಟ್ರೇಲಿಯಾ: ಟಾಸ್ ವೇಳೆ ಅಂತಿಮ ಹನ್ನೊಂದರ ಬಳಗವನ್ನು ಪ್ರಕಟಿಸಲಿದೆ. ಡೇವಿಡ್ ವಾರ್ನರ್ ಮತ್ತು ಮಿಚೆಲ್ ಸ್ಟಾರ್ಕ್ ಫಿಟ್ನೆಸ್ ಪರೀಕ್ಷಿಸಿ ಅವರನ್ನು ಆಡಿಸುವ ನಿರ್ಧಾರ ಮಾಡಬಹುದು. ಅಭ್ಯಾಸದ ವೇಳೆ ಗಾಯಗೊಂಡ ವಾರ್ನರ್ ಅಲಭ್ಯರಾದರೆ, ಚೆಂಡು ವಿರೂಪದ ಇನ್ನೋರ್ವ ಕಳಂಕಿತ ಕ್ಯಾಮರೂನ್ ಬ್ಯಾಂಕ್ರಾಫ್ಟ್​ಗೆ ಅಂತಿಮ 11ರ ಬಳಗದಲ್ಲಿ ಸ್ಥಾನ ಸಿಗಬಹುದು.

04. ಕಳೆದ 4 ಆಶಸ್ ಸರಣಿಗಳಲ್ಲಿ ಆತಿಥೇಯ ತಂಡವೇ ಟ್ರೋಫಿ ಜಯಿ ಸಿದೆ. 2010ರಲ್ಲಿ ಕೊನೆಯದಾಗಿ ಇಂಗ್ಲೆಂಡ್ ತಂಡ ಆಸೀಸ್​ನಲ್ಲಿ ಸರಣಿ ಗೆದ್ದಿದ್ದರೆ, ಆಸೀಸ್ 2001ರಲ್ಲಿ ಕೊನೆಯದಾಗಿ ಇಂಗ್ಲೆಂಡ್​ನಲ್ಲಿ ಸರಣಿ ಜಯಿಸಿದೆ.

  • ಒಟ್ಟು ಟೆಸ್ಟ್- 330
  • ಆಸೀಸ್- 134
  • ಇಂಗ್ಲೆಂಡ್- 106
  • ಡ್ರಾ- 90

ಬೂದಿಗಡಿಗೆ ಹಿಂದಿನ ಕಥೆ!

1882ರಲ್ಲಿ ಉಭಯ ತಂಡಗಳ ನಡುವಿನ 9ನೇ ಟೆಸ್ಟ್ ಪಂದ್ಯದ ಕೊನೆಗೆ ‘ಆಶಸ್’ ಜನ್ಮತಾಳಿತು. ಲಂಡನ್​ನ ಓವಲ್​ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಬ್ರಿಟಿಷರನ್ನು ಅವರದೇ ನೆಲದಲ್ಲಿ ಬಗ್ಗುಬಡಿದು ಆಸ್ಟ್ರೇಲಿಯಾ ಆಘಾತ ನೀಡಿತ್ತು. 85ರನ್ ಬೆನ್ನಟ್ಟಲಾಗದೆ 77 ರನ್​ಗೆ ಆಲೌಟಾದ ಇಂಗ್ಲೆಂಡ್ ತನ್ನದೇ ವಸಾಹತು ತಂಡದೆದುರು ಮುಖಭಂಗ ಎದುರಿಸಿತ್ತು. ಇಂಗ್ಲೆಂಡಿನ ಸೋಲನ್ನು ‘ಸ್ಪೋರ್ಟಿಂಗ್ ಟೈಮ್್ಸ’ ಪತ್ರಿಕೆ ‘ಇಂಗ್ಲಿಷ್ ಕ್ರಿಕೆಟ್​ನ ನಿಧನ’ ಎಂದು ಪ್ರಕಟಿಸಿತು. 1882ರ ಸೆಪ್ಟೆಂಬರ್ 2ರ ಸಂಚಿಕೆಯಲ್ಲಿ ರೆಜಿನಾಲ್ಡ್ ಬ್ರೂಕ್ಸ್ ಬರೆದ ಲೇಖನದಲ್ಲಿ ‘1882ರ ಆಗಸ್ಟ್ 29ರಂದು ಇಂಗ್ಲಿಷ್ ಕ್ರಿಕೆಟ್ ನಿಧನ ಹೊಂದಿದೆ. ಇದರ ಬೂದಿಯನ್ನು ಆಸ್ಟ್ರೇಲಿಯಾಕ್ಕೆ ಕೊಂಡೊಯ್ಯಲಾಗಿದೆ’ ಎಂದು ಬರೆದಿದ್ದರು. ಇದಕ್ಕೆ ಪ್ರತಿಯಾಗಿ 1883ರ ಆಸ್ಟ್ರೇಲಿಯಾ ಪ್ರವಾಸಕ್ಕೆ ಮುನ್ನ ಆಗಿನ ಇಂಗ್ಲೆಂಡ್ ನಾಯಕ ಇವೊ ಬ್ಲಿಗ್, ‘ಆ ಆಶಸ್ ಮರಳಿ ತರುವೆವು’ ಎಂದು ಘೊಷಿಸಿದರು. ಅಲ್ಲದೆ ಆ ಸರಣಿಯನ್ನು ಇಂಗ್ಲೆಂಡ್ 2-1ರಿಂದ ಜಯಿಸಿತು. ನಂತರ ನಡೆದ ಭೋಜನ ಕೂಟದ ವೇಳೆ ಬ್ಲಿಗ್​ಗೆ ವಿಕ್ಟೋರಿಯಾದ ಮಹಿಳೆಯರ ಗುಂಪೊಂದು ಜೇಡಿಮಣ್ಣಿನ ಸಣ್ಣ ಕರಂಡದಲ್ಲಿ ಭಸ್ಮವನ್ನು ಇಟ್ಟು ಸಾಂಕೇತಿಕವಾಗಿ ಪ್ರದಾನ ಮಾಡಿತು. ಇದಾಗಿ ಸುಮಾರು 20 ವರ್ಷಗಳ ಬಳಿಕ ಉಭಯ ತಂಡಗಳ ಸರಣಿಗೆ ‘ಆಶಸ್’ ಎಂಬ ಶಾಶ್ವತ ಹೆಸರು ಬಂದಿತು.

70. ಇದುವರೆಗೆ 70 ಆಶಸ್ ಸರಣಿಗಳು ನಡೆದಿದ್ದು, ಆಸ್ಟ್ರೇಲಿಯಾ 33 ಮತ್ತು ಇಂಗ್ಲೆಂಡ್ 32ರಲ್ಲಿ ಸರಣಿ ಗೆದ್ದಿದೆ. ಉಳಿದಂತೆ 5 ಸರಣಿ ಡ್ರಾಗೊಂಡಿವೆ. ಈ ಪೈಕಿ, ಹಿಂದಿನ ಆಶಸ್ ಗೆದ್ದ ಆಧಾರದಲ್ಲಿ ಆಸೀಸ್ 4 (1938, 1962, 1965, 1968) ಮತ್ತು ಇಂಗ್ಲೆಂಡ್ 1 (1972) ಬಾರಿ ಟ್ರೋಫಿ ಉಳಿಸಿಕೊಂಡಿದೆ.

ಅತಿ ಸಣ್ಣ ಟ್ರೋಫಿ!

ಆಶಸ್ ಗೆದ್ದವರಿಗೆ ಸಿಗುವುದು ಕೇವಲ 11 ಸೆಂಟಿ ಮೀಟರ್ ಎತ್ತರದ ಬೂದಿ ಗಡಿಗೆ! ಇದು ಇಂಗ್ಲೆಂಡ್-ಆಸ್ಪ್ರೇಲಿಯಾ ಟೆಸ್ಟ್ ಕ್ರಿಕೆಟ್ ಹಿರಿಮೆಯ ಸಂಕೇತ. ವಿಶ್ವದ ಅತಿಕಿರಿಯ ಮೂಲ ಟ್ರೋಫಿ ಎಂಸಿಸಿ ವಶದಲ್ಲಿದೆ. ಇದರ ಪ್ರತಿಕೃತಿಯನ್ನಷ್ಟೇ ವಿಜೇತರಿಗೆ ನೀಡಲಾಗುತ್ತದೆ.

1883ರಲ್ಲಿ ಹುಟ್ಟು

1877ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್​ನಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದ ಚೊಚ್ಚಲ ಪಂದ್ಯ ನಡೆದಿತ್ತು. ಆದರೆ ಇದನ್ನು ಆಶಸ್ ಟೆಸ್ಟ್ ಎನ್ನಲಾಗುವುದಿಲ್ಲ. 1883ರ ನಂತರದ ಸರಣಿಗಳಷ್ಟೇ ಆಶಸ್ ಸರಣಿ ಎನಿಸಿವೆ. ಇದಕ್ಕೆ ಮುನ್ನ ಉಭಯ ತಂಡಗಳ ನಡುವೆ 16 ಟೆಸ್ಟ್ ನಡೆದಿದ್ದವು ಮತ್ತು ಇದರಲ್ಲಿ ಆಸೀಸ್ 10, ಇಂಗ್ಲೆಂಡ್ 2ರಲ್ಲಿ ಗೆದ್ದು, ಉಳಿದ 4 ಡ್ರಾಗೊಂಡಿದ್ದವು.

14. ಎಜ್​ಬಾಸ್ಟನ್​ನಲ್ಲಿ ನಡೆದಿರುವ ಒಟ್ಟು 14 ಆಶಸ್ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ 6ರಲ್ಲಿ ಗೆದ್ದರೆ, ಆಸ್ಟ್ರೇಲಿಯಾ 3ರಲ್ಲಿ ಜಯಿಸಿದೆ. 5 ಪಂದ್ಯಗಳ ಡ್ರಾ ಕಂಡಿವೆ.