ಮಾಜಿ ಪ್ರಧಾನಿ ಇಂದಿರಾ ಗಾಂಧಿ ರೀತಿಯಲ್ಲಿ ತನ್ನ ಹತ್ಯೆಯಾಗಲಿದೆಯೆಂದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ !

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾದಂತೆ ನನ್ನ ಹತ್ಯೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿಯು ನನ್ನ ಜೀವನವನ್ನು ಹಾಳು ಮಾಡಿದ ಬಳಿಕ ಅವರು ನನ್ನನ್ನು ಒಂದು ದಿನ ಕೊಲ್ಲುತ್ತಾರೆ. ನನ್ನ ವೈಯಕ್ತಿಕ ಭದ್ರತಾ ಅಧಿಕಾರಿ(ಪಿಎಸ್ಒ)ಯು ಎಲ್ಲವನ್ನು ಬಿಜೆಪಿಗೆ ವರದಿ ಮಾಡುತ್ತಿದ್ದಾರೆ. ಹಾಗಾಗಿ ಅವರು ಇಂದಿರಾಗಾಂಧಿಯವರಂತೆ ನನ್ನ ಎಸ್‌ಪಿಒ ಅಧಿಕಾರಿ ಮೂಲಕವೇ ನನ್ನನ್ನು ಸಾಯಿಸುತ್ತಾರೆ ಎಂದರು.

ಕೇಜ್ರಿವಾಲರ ಈ ಹೇಳಿಕೆ ಕುರಿತು ದೆಹಲಿ ಪೊಲೀಸರು ಪ್ರತಿಕ್ರಿಯಿಸಿ, ಮುಖ್ಯಮಂತ್ರಿಯ ಭದ್ರತಾ ತಂಡದಲ್ಲಿರುವ ನಮ್ಮ ಭದ್ರತಾ ಸಿಬ್ಬಂದಿ ಅವರ ಕರ್ತವ್ಯಗಳಿಗೆ ಬದ್ಧರಾಗಿದ್ದಾರೆ. ನಮ್ಮ ಘಟಕವು ಎಲ್ಲ ರಾಜಕೀಯ ಪಕ್ಷಗಳ ಹಲವಾರು ಉನ್ನತ ನಾಯಕರಿಗೆ ಭದ್ರತೆಯನ್ನು ಒದಗಿಸುತ್ತಿದೆ ಎಂದು ಹೇಳಿದ್ದಾರೆ.

ಈ ತಿಂಗಳ ಆರಂಭಕ್ಕೂ ಮುನ್ನ ಲೋಕಸಭಾ ಚುನಾವಣೆ ಅಂಗವಾಗಿ ರೋಡ್‌ ಶೋ ನಡೆಸುವ ವೇಳೆ ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಅರವಿಂದ ಕೇಜ್ರಿವಾಲ್‌ರಿಗೆ ವ್ಯಕ್ತಿಯೊಬ್ಬ ಕಪಾಳಕ್ಕೆ ಹೊಡೆದಿದ್ದ. (ಏಜೆನ್ಸೀಸ್)