ರಾಷ್ಟ್ರ ರಾಜಧಾನಿ ಕೆಲವೇ ದಿನಗಳಲ್ಲಿ ಆಗಲಿದೆಯಂತೆ ‘ಗ್ಯಾಸ್‌ ಚೇಂಬರ್‌’

ನವದೆಹಲಿ: ಕೆಲವೇ ದಿನಗಳಲ್ಲಿ ದೆಹಲಿಯು ಗ್ಯಾಸ್‌ ಚೇಂಬರ್‌ ಆಗಲಿದೆ. ರೈತರು ಭತ್ತದ ಹುಲ್ಲನ್ನು ಸುಡುತ್ತಿರುವುದಕ್ಕೆ ಕೇಂದ್ರ ಸರ್ಕಾರ, ಪಂಜಾಬ್‌ ಮತ್ತು ಹರಿಯಾಣ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕಿಡಿಕಾರಿದ್ದಾರೆ.

ಕಳೆದ ವಾರದಿಂದಲೂ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ದೆಹಲಿಯಲ್ಲಿನ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವ ಪ್ರಮುಖ ಕಾರಣಗಳಲ್ಲಿ ನೆರೆ ರಾಜ್ಯಗಳಲ್ಲಿ ಕಟಾವು ಮಾಡಿದ ಫಸಲಿನ ಉಳಿಕೆಯನ್ನು ಸುಡುತ್ತಿರುವುದು ಮುಖ್ಯ ಕಾರಣವಾಗಿದೆ.

ರೈತರಿಗಾಗಿ ಕೇಂದ್ರ ಸರ್ಕಾರ, ಪಂಜಾಬ್‌ ಮತ್ತು ಹರಿಯಾಣ ಸರ್ಕಾರಗಳು ಏನನ್ನು ಮಾಡಿಲ್ಲ. ಅದರ ಪರಿಣಾಮವಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ ಮತ್ತು ದೆಹಲಿಯು ಶೀಘ್ರದಲ್ಲೇ ಗ್ಯಾಸ್‌ ಚೇಂಬರ್‌ ಆಗಿ ಮಾರ್ಪಡಲಿದೆ ಎಂದು ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಇದೇ ವಿಚಾರವಾಗಿ ಗುರುವಾರವಷ್ಟೇ ದೆಹಲಿ ಉಪಮುಖ್ಯಮಂತ್ರಿ ಮನಿಶ್‌ ಸಿಸೋಡಿಯಾ ಅವರು ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಗಾಳಿಯ ಗುಣಮಟ್ಟವನ್ನು ಕಾಪಾಡಲು ಬೇಕಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.

ಈ ವಿಚಾರದಲ್ಲಿ ಕೇಂದ್ರವು ಕೂಡಲೇ ಮಧ್ಯೆ ಪ್ರವೇಶಿಸಬೇಕು. ಇದುವರೆಗೂ ರೈತರಿಗೆ ಸಬ್ಸಿಡಿ ನೀಡಲಾಗಿಲ್ಲ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ತೋರಿಸುತ್ತದೆ. ಇನ್ನೇನು ಡಿಸೆಂಬರ್‌ ಮತ್ತು ಜನವರಿ ತಿಂಗಳು ಹತ್ತಿರವಾಗುತ್ತಿದ್ದು, ಇಡೀ ಉತ್ತರ ಭಾರತವೇ ಹೊಗೆಯಿಂದಾಗಿ ಗ್ಯಾಸ್‌ ಚೇಂಬರ್‌ ಆಗಿ ಮಾರ್ಪಡಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)