ಜೀವಂತಗುಂಡುಗಳನ್ನು ಇಟ್ಟುಕೊಂಡು ಅರವಿಂದ ಕೇಜ್ರಿವಾಲ್​ ಭೇಟಿಗೆ ಬಂದಿದ್ದ ಮೌಲ್ವಿಯ ಬಂಧನ

ನವದೆಹಲಿ: ಜೀವಂತ ಗುಂಡು ಇಟ್ಟುಕೊಂಡು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರನ್ನು ಭೇಟಿಯಾಗಲು ಬಂದಿದ್ದ ಮಸೀದಿಯ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮಹಮದ್​ ಇಮ್ರಾನ್​ (39) ಎಂದು ಗುರುತಿಸಲಾಗಿದ್ದು, ಈತ ದೆಹಲಿ ಮಸೀದಿಯೊಂದರ ಮೇಲುಸ್ತುವಾರಿ ನೋಡಿಕೊಳ್ಳುತ್ತಾನೆ. ಈತ 12 ಜನರೊಟ್ಟಿಗೆ ಮುಖ್ಯಮಂತ್ರಿಯ ಜನತಾದರ್ಬಾರ್​ಗೆ ಆಗಮಿಸಿದ್ದ. ದೆಹಲಿ ವಕ್ಫ್​ ಬೋರ್ಡ್​ ಸದಸ್ಯರ ವೇತನ ಹೆಚ್ಚಳ ಮಾಡಿ ಎಂದು ಒತ್ತಾಯಿಸುವುದು ಇವರ ಉದ್ದೇಶವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅರವಿಂದ ಕೇಜ್ರಿವಾಲ್​ ಅವರ ನಿವಾಸದ ಭದ್ರತಾ ಸಿಬ್ಬಂದಿ ಇಮ್ರಾನ್​ನನ್ನು ಪರಿಶೀಲಿಸಿದಾಗ ಆತನ ಪರ್ಸ್​ನಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ಹರೇಂದ್ರ ಸಿಂಗ್​ ತಿಳಿಸಿದ್ದಾರೆ.

ಸ್ವಲ್ಪ ದಿನಗಳ ಹಿಂದೆಯಷ್ಟೇ ಅರವಿಂದ್​ ಕೇಜ್ರಿವಾಲ್​ ಮೇಲೆ ವ್ಯಕ್ತಿಯೋರ್ವ ಖಾರದ ಪುಡಿ ಎರಚಿದ್ದ. ಅದಾದ ಬಳಿಕ ತಮಗೆ ರಕ್ಷಣೆ ಸಾಕಾಗುತ್ತಿಲ್ಲವೆಂದು ಅರವಿಂದ್​ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು.