ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಹಾವು- ಏಣಿ ಆಟ

ಮುದ್ದೇಬಿಹಾಳ: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ವಿಷಯದಲ್ಲಿ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಗೊಂದಲದಲ್ಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಆರೋಪಿಸಿದ್ದಾರೆ.

ಶಿಕ್ಷಣ ಸಚಿವರು ವರ್ಗಾವಣೆ ವಿಷಯವಾಗಿ ಬೆಳಗ್ಗೆಯೊಂದು ಸಂಜೆಯೊಂದು ಹೇಳಿಕೆ ನೀಡುತ್ತಿದ್ದಾರೆ. ಶಿಕ್ಷಕರು ವರ್ಗಾವಣೆ ಇಲ್ಲದೆ ನೆಮ್ಮದಿ ಕಳೆದುಕೊಂಡಿದ್ದಾರೆ. 2017ರಲ್ಲಿ ಕಾಯ್ದೆಗೆ ತಿದ್ದುಪಡಿ ಆದ ಬಳಿಕವೂ ವರ್ಗಾವಣೆ ಆಗಿಲ್ಲ. ಸರ್ಕಾರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಹಾವು-ಏಣಿಯಾಟವನ್ನಾಗಿ ಪರಿಗಣಿಸಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಹೈದರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿ ಹೆಚ್ಚಿನ ಶಿಕ್ಷಕರು ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳ ಶಿಕ್ಷಕರು ಹೈ-ಕ ಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. 371ಜೆ ಸ್ಥಾನಮಾನ ದೊರಕಿದ ಬಳಿಕ ಎಲ್ಲ ಇಲಾಖೆಯಲ್ಲಿ ಹೈ-ಕ ವೃಂದ ಹಾಗೂ ಹೈ-ಕ ಅಲ್ಲದ ವೃಂದ ಯಾವುದು ಎಂದು ತಿಳಿದು ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ಹೇಳಿದರು.

ಒಂದು ಬಾರಿ ಹೈ-ಕ ಭಾಗದಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಅವರವರ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ವರ್ಗಾವಣೆಗೆ ಸರ್ಕಾರ ಮುಂದಾಗಬೇಕು. ಹೈ-ಕ ಭಾಗದಲ್ಲಿ ಶಿಕ್ಷಕರು ಖಾಲಿ ಆಗುತ್ತಾರೆ ಎಂಬ ಆತಂಕ ಸರ್ಕಾರಕ್ಕಿದ್ದು, ಈಗಾಗಲೇ ಆರಂಭಿಸಿರುವ ಶಿಕ್ಷಕರ ನೇಮಕದಿಂದ ಲಭ್ಯವಾಗುವ 4 ಸಾವಿರ ಶಿಕ್ಷಕರನ್ನು ಹೈ-ಕ ಭಾಗಕ್ಕೆ ಕೊಡುವ ಕಾರ್ಯವನ್ನು ಸರ್ಕಾರ ಮಾಡಲಿ ಎಂದು ಒತ್ತಾಯಿಸಿದರು.

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕುರಿತು ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಜತೆಗೆ ಚರ್ಚೆ ಮಾಡಿದ್ದೇನೆ ಎಂದು ಶಹಾಪುರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಿಜೆಪಿ ಮುಖಂಡರಾದ ಹನುಮಂತ್ರಾಯ ದೇವರಳ್ಳಿ, ಅಪ್ಪುಗೌಡ ಮೈಲೇಶ್ವರ ಮತ್ತಿತರರು ಇದ್ದರು.