ಅರುಣ್ ಮಾಚಯ್ಯ ಕೆಐಒ ತಾಂತ್ರಿಕ ಆಯೋಗದ ಜಂಟಿ ಅಧ್ಯಕ್ಷ

1 Min Read
ಅರುಣ್ ಮಾಚಯ್ಯ ಕೆಐಒ ತಾಂತ್ರಿಕ ಆಯೋಗದ ಜಂಟಿ ಅಧ್ಯಕ್ಷ

ಕೊಡಗು : ಗೋಣಿಕೊಪ್ಪದ ವಿಶ್ವ ಕರಾಟೆ ಮಂಡಳಿ, ಕಾಮನ್ ವೆಲ್ತ್ ಕರಾಟೆ ಮಂಡಳಿ ಮತ್ತು ಏಷ್ಯನ್ ಕರಾಟೆ ಒಕ್ಕೂಟದ ಅಧೀನದಲ್ಲಿರುವ ಕರಾಟೆ ಇಂಡಿಯಾ ಆರ್ಗನೈಜೇಷನ್(ಕೆ.ಐ.ಒ.) ತಾಂತ್ರಿಕ ಆಯೋಗದ ನೂತನ ಜಂಟಿ ಅಧ್ಯಕ್ಷರಾಗಿ ಕರಾಟೆ ಪಟು ಕೊಡಗಿನ ಸಿ.ಎಸ್.ಅರುಣ್ ಮಾಚಯ್ಯ ನೇಮಕವಾಗಿದ್ದಾರೆ.

ವಿಶ್ವ ಶಿಟೋರಿಯೋ ಕರಾಟೆ ಮಂಡಳಿ ಸ್ಟ್ಯಾಂಡಿಂಗ್ ನಿರ್ದೇಶಕರು, ಅಖಿಲ ಭಾರತ ಶಿಟೋರಿಯೋ ಕರಾಟೆ ಸಂಸ್ಥೆ ಅಧ್ಯಕ್ಷರೂ ಆಗಿರುವ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಕರಾಟೆ ಇಂಡಿಯಾ ಆರ್ಗನೈಜೇಷನ್‌ನ ಅತ್ಯುನ್ನತ ಹುದ್ದೆಗೇರಿದ ಪ್ರಥಮ ಕನ್ನಡಿಗರಾಗಿದ್ದಾರೆ.

ಈ ಕುರಿತು ಕರಾಟೆ ಇಂಡಿಯಾ ಆರ್ಗನೈಜೇಷನ್ ಅಧ್ಯಕ್ಷ ಭರತ್ ಶರ್ಮಾ ಅನುಮೋದನೆಯೊಂದಿಗೆ ನೇಮಕಾತಿ ಆದೇಶ ಹೊರಡಿಸಿರುವ ಜನರಲ್ ಸೆಕ್ರೆಟರಿ ಸಂಜೀವ್ ಕುಮಾರ್ ಜಂಗ್ರಾ, ಅರುಣ್ ಮಾಚಯ್ಯ ಅವರು ಐದು ದಶಕಗಳಿಂದ ಕರಾಟೆಯಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಮಹತ್ತರವಾದ ಜವಾಬ್ದಾರಿಯನ್ನು ವಹಿಸಲಾಗಿದ್ದು, ಅದನ್ನು ಅವರು ಸಮರ್ಥವಾಗಿ ನಿರ್ವಹಿಸಿ ಯಶಸ್ವಿಗೊಳಿಸಲಿದ್ದಾರೆ ಎಂಬ ಅಚಲವಾದ ವಿಶ್ವಾಸ ಹೊಂದಲಾಗಿದೆ ಎಂದು ಹೇಳಿದ್ದಾರೆ.

ಇವರೊಂದಿಗೆ ಕರ್ನಾಟಕ ಕರಾಟೆ ತಂಡದ ಮಾಜಿ ನಾಯಕ, ವಿಶ್ವ ಕರಾಟೆ ಒಕ್ಕೂಟದ ಹಲವಾರು ಚಾಂಪಿಯನ್‌ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ, ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿರುವ ಭಾರ್ಗವ್ ರೆಡ್ಡಿ ಅವರನ್ನು ಕರಾಟೆ ಇಂಡಿಯಾ ಆರ್ಗನೈಜೇಷನ್‌ನ ಅಥ್ಲೆಟಿಕ್ ಆಯೋಗದ ನೂತನ ಅಧ್ಯಕ್ಷರಾಗಿಯೂ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿಶ್ವ ಶಿಟೋರಿಯೋ ಕರಾಟೆ ಮಂಡಳಿ ಏಷ್ಯಾ ಮತ್ತು ಪೆಸಿಫಿಕ್ ಖಂಡದ ನಿರ್ದೇಶಕರಾಗಿ ವಿಶ್ವಮಟ್ಟದಲ್ಲಿ ಏಷ್ಯಾ ಮತ್ತು ಪೆಸಿಫಿಕ್ ಖಂಡವನ್ನು ಪ್ರತಿನಿಧಿಸುತ್ತಿರುವ ಅರುಣ್ ಮಾಚಯ್ಯ, ಅಲ್ಲದೆ ಪ್ರಸ್ತುತ ಅಖಿಲ ಭಾರತ ಶಿಟಾರಿಯೋ ಕರಾಟೆ ಸಂಸ್ಥೆ ಮತ್ತು ದಕ್ಷಿಣ ಭಾರತ ಕರಾಟೆ ಫೆಡರೇಷನ್ ಅಧ್ಯಕ್ಷರಾಗಿ, ಕರಾಟೆ ಇಂಡಿಯಾ ಆರ್ಗನೈಜೇಷನ್ ಹಿರಿಯ ಉಪಾಧ್ಯಕ್ಷರಾಗಿ, ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

See also  ಚುನಾವಣೋತ್ತರ ಸಮೀಕ್ಷೆ ಬಳಿಕ ಬಿಜೆಪಿ ಕಾರ್ಯಕರ್ತನ ಹತ್ಯೆ : ಟಿಎಂಸಿ ಕೈವಾಡದ ಶಂಕೆ

ಅಂತಾರಾಷ್ಟ್ರೀಯ ಕರಾಟೆ ತೀರ್ಪುಗಾರರಾಗಿರುವ ಸಿ.ಎಸ್. ಅರುಣ್ ಮಾಚಯ್ಯ ಅವರು ಕರಾಟೆಯಲ್ಲಿ 8ನೇ ಡ್ಯಾನ್ ಬ್ಲಾಕ್ ಬೆಲ್ಟ್ ಪದವೀಧರಾಗಿದ್ದಾರೆ. 2022ರಲ್ಲಿ ಲಂಡನ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

Share This Article