ಭಾರತಕ್ಕೆ ಯಾರೂ ಮೋಸ ಮಾಡಲು ಸಾಧ್ಯವಿಲ್ಲ: ವಿಜಯ್​ ಮಲ್ಯ ಗಡಿಪಾರು ಆದೇಶಕ್ಕೆ ಅರುಣ್​ ಜೇಟ್ಲಿ ಪ್ರತಿಕ್ರಿಯೆ

ನವದೆಹಲಿ: ವಿಜಯ್​ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಯುಕೆ ನ್ಯಾಯಾಲಯ ಆದೇಶ ನೀಡಿದ್ದಕ್ಕೆ ಕೇಂದ್ರ ಸಚಿವ ಅರುಣ್​ ಜೇಟ್ಲಿ ಸಂತಸ ವ್ಯಕ್ತಪಡಿಸಿದ್ದು, ಇದು ನೈತಿಕತೆಗೆ ಸಿಕ್ಕ ಗೆಲುವು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆದೇಶದ ಕುರಿತು ಟ್ವೀಟ್​ ಮಾಡಿದ ಅವರು, ಭಾರತಕ್ಕೆ ಯಾರೂ ಮೋಸ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ವಿಜಯ್​ ಮಲ್ಯ ಪ್ರಕರಣವೇ ಸಾಕ್ಷಿ. ಇಲ್ಲಿನ ಜನರು, ಆರ್ಥಿಕತೆಗೆ ವಂಚನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇದೊಂದು ಪಾಠವಾಗಲಿ ಎಂದು ಹೇಳಿದ್ದಾರೆ.

ಭಾರತದ ಪಾಲಿಗೆ ಇಂದು ಅದ್ಭುತವಾದ ದಿನ. ನಮ್ಮ ದೇಶಕ್ಕೆ ಮೋಸ ಮಾಡಿದವರು ಶಿಕ್ಷೆ ಅನುಭವಿಸಿಯೇ ತೀರುತ್ತಾರೆ. ಯುಕೆ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ. ಯುಪಿಎ ಸರ್ಕಾರವಿದ್ದಾಗ ವಿಜಯ್​ ಮಲ್ಯ ಅವರಿಗೆ ತುಂಬ ಅನುಕೂಲವಾಗಿತ್ತು. ಈಗ ಸಂಕಷ್ಟ ಎದುರಾಗಿದೆ ಎಂದಿದ್ದಾರೆ.

ಬಿಜೆಪಿ ಮುಖಂಡ ಸುಬ್ರಹ್ಮಣಿಯನ್​ ಸ್ವಾಮಿ ಪ್ರತಿಕ್ರಿಯೆ ನೀಡಿ, ಮೊದಲು ಪ್ರಧಾನಿ ಮೋದಿಯವರಿಗೆ ಅಭಿನಂದನೆ ತಿಳಿಸಬೇಕು. ವಿಜಯ್​ ಮಲ್ಯ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಮೋದಿಯವರು ತನಿಖಾ ದಳಗಳನ್ನು ಅವರ ಪಾಡಿಗೆ ಬಿಟ್ಟಿದ್ದರು. ಅವರ ಮೇಲೆ ನಿರ್ಬಂಧ ಹೇರದೆ ಕೆಲಸ ಮಾಡಲು ಬಿಟ್ಟಿದ್ದರು ಎಂದು ಹೇಳಿದ್ದಾರೆ.

ತೀರ್ಪು ಸ್ವಾಗತಾರ್ಹವೆಂದ ಸಿಬಿಐ
ವಿಜಯ್​ ಮಲ್ಯ ಅವರನ್ನು ಭಾರತಕ್ಕೆ ಕರೆಸಲು ಪ್ರಯತ್ನಿಸುತ್ತಿದ್ದ ಸಿಬಿಐ ಯುಕೆ ನ್ಯಾಯಾಲಯದ ತೀರ್ಪನ್ನು ಸ್ವಾಗಿತಿಸಿದೆ.
ವಿಜಯ್​ ಮಲ್ಯ ಅವರನ್ನು ಬಹುಬೇಗನೇ ಭಾರತಕ್ಕೆ ವಾಪಸ್​ ಕರೆತಂದು ವಿಚಾರಣೆ ನಡೆಸುತ್ತೇವೆ. ಸಿಬಿಐಗೆ ಅದ್ದರದ್ದೇ ಆದ ಅಂತರ್​ಶಕ್ತಿ ಇದೆ. ವಿಜಯ್​ ಮಲ್ಯ ಅವರ ಪ್ರಕರಣದಲ್ಲಿ ನಾವು ತುಂಬ ಶ್ರಮಪಟ್ಟಿದ್ದೇವೆ. ಸತ್ಯ ಹಾಗೂ ಕಾನೂನು ಬದ್ಧವಾಗಿ ನಾವು ಕೆಲಸ ಮಾಡುತ್ತೇವೆ. ವಿಜಯ್​ ಮಲ್ಯ ಗಡಿಪಾರು ಪ್ರಕ್ರಿಯೆಯಲ್ಲೂ ಕೂಡ ಕ್ರಮ ಬದ್ಧವಾಗಿ ಮುಂದುವರಿಯುತ್ತೇವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ರಫೆಲ್​ ಬಗ್ಗೆ ಮಾತನಾಡಲಿ
ವಿಜಯ್​ ಮಲ್ಯ ಭಾರತಕ್ಕೆ ಗಡಿಪಾರು ಆಗಿದ್ದರ ಬಗ್ಗೆ ಮಾತನಾಡಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ಇದೇನೂ ಅಂಥ ಮಹತ್ವದ ಗೆಲುವಲ್ಲ. ಪ್ರಧಾನಿಯವರು ಮೊದಲು ರಫೇಲ್​ ಡೀಲ್​ ಬಗ್ಗೆ ಮಾತನಾಡಲಿ ಎಂದು ವ್ಯಂಗ್ಯವಾಡಿದ್ದಾರೆ.