ಅರುಣ್​ ಜೇಟ್ಲಿಗೆ ಕ್ಯಾನ್ಸರ್​? ಬಜೆಟ್​ ಮಂಡನೆಗೆ ಆಗಮಿಸುತ್ತಾರಾ ಸಚಿವರು?

ನವದೆಹಲಿ: ಹಣಕಾಸು ಸಚಿವ ಅರುಣ್​ ಜೇಟ್ಲಿ ಕ್ಯಾನ್ಸರ್​ಗೆ ತುತ್ತಾಗಿದ್ದು ಅದಕ್ಕೆ ಸಂಬಂಧಪಟ್ಟ ಚಿಕಿತ್ಸೆಗಾಗಿ ನ್ಯೂಯಾರ್ಕ್​ಗೆ ತೆರಳಿದ್ದಾರೆ. ಫೆ.1ರಂದು ಬಜೆಟ್​ ಮಂಡನೆಗೆ ಆಗಮಿಸುವುದು ಅಸಾಧ್ಯವೆಂದು ಮೂಲಗಳು ತಿಳಿಸಿವೆ.

ಜೇಟ್ಲಿ ಅನಿರೀಕ್ಷಿತವಾಗಿ ವೈದ್ಯಕೀಯ ತಪಾಸಣೆಗೆಂದು ಭಾನುವಾರ ನ್ಯೂಯಾರ್ಕ್​ಗೆ ತೆರಳಿದ್ದರು. ಕಳೆದ ವರ್ಷ ಮೇ ನಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಸಹಜ ತಪಾಸಣೆಗೆ ಹೋಗಿದ್ದರೆಂದು ನಂಬಲಾಗಿತ್ತು.

ಆದರೆ ಜೇಟ್ಲಿ ಅವರು ಮೃದು ಅಂಗಾಂಶ ಕ್ಯಾನ್ಸರ್​ನಿಂದ ಬಳಲುತ್ತಿದ್ದು ಅದಕ್ಕೆ ಸಂಬಂಧಪಟ್ಟ ಚಿಕಿತ್ಸೆಗಾಗಿ ತೆರಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿ. ಅವರ ದೇಹದಲ್ಲಿ ಗಡ್ಡೆಯಾಗಿದ್ದು, ಅದು ಇತರ ಭಾಗಗಳಿಗೆ ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಹಾಗಾಗಿ ಫೆ.1ರಂದು ಕೇಂದ್ರಸರ್ಕಾರದ ಕೊನೇ ಬಜೆಟ್​ನ್ನು ಮಂಡಿಸಲು ಅವರು  ಆಗಮಿಸುವುದು ಅನುಮಾನ ಎಂದು ಹೇಳಲಾಗಿದೆ.

ಅರುಣ್​ ಜೇಟ್ಲಿ ಅವರು ಈಗಾಗಲೇ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಈಗ ಕ್ಯಾನ್ಸರ್​ ಆಪರೇಶನ್​ ಮಾಡುವುದು ಜಟಿಲವಾಗಿದೆ. ಯಾವುದೇ ಶಸ್ತ್ರಚಿಕಿತ್ಸೆ, ಕಿಮೋಥೆರಪಿಗಳು ಅವರ ಕಿಡ್ನಿಯ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ವೈದ್ಯಕೀಯ ವರದಿಯಲ್ಲಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಅರುಣ್​ ಜೇಟ್ಲಿ ಎರಡು ವಾರಗಳ ಕಾಲ ರಜೆ ಘೋಷಣೆ ಮಾಡಿದ್ದಾರೆ. ಆದರೆ ಕ್ಯಾನ್ಸರ್​ ಚಿಕಿತ್ಸೆಯಾಗಿರುವ ಕಾರಣ ಫೆ.1ರ ಒಳಗೆ ಅವರು ಭಾರತಕ್ಕೆ ಬರುವ ಸಾಧ್ಯತೆ ತುಂಬ ಕಡಿಮೆ ಎನ್ನಲಾಗಿದೆ.(ಏಜೆನ್ಸೀಸ್​)