ಜಾರಿಗೆಕಟ್ಟೆ ಬಸ್ ನಿಲ್ದಾಣ ಜಲಾವೃತ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಮುಂಡ್ಕೂರು ಜಾರಿಗೆಕಟ್ಟೆ ಜಂಕ್ಷನ್‌ನ ಬಸ್ ನಿಲ್ದಾಣ ಮುಂಭಾಗ ನಿರಂತರ ಜಲಾವೃತಗೊಳ್ಳುತ್ತಿದ್ದು, ಈ ಭಾಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಬಸ್ ತಂಗುದಾಣ ಎದುರು ಹೊಂಡವಿದೆ. ಜತೆಗೆ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲ. ಜೋರಾದ ಮಳೆ ಸಂದರ್ಭ ಈ ಬಸ್ ತಂಗುದಾಣ ಸುತ್ತಮುತ್ತ ನೀರು ತುಂಬಿ ಕೆರೆಯಂತಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಬಸ್ ನಿಲ್ದಾಣ ಪ್ರವೇಶಿಸಲು ಅನನುಕೂಲವಾಗುತ್ತದೆ.
ಜನನಿಬಿಡ ಜಂಕ್ಷನ್
ಜಾರಿಗೆಕಟ್ಟೆ ಜಂಕ್ಷನ್ ಜನನಿಬಿಡ ಪ್ರದೇಶವಾಗಿದ್ದು, ಮೂಡುಬಿದಿರೆ, ಉಡುಪಿ, ಬೆಳ್ಮಣ್, ಕಾರ್ಕಳ, ಕಿನ್ನಿಗೋಳಿ, ಕಟೀಲು, ಮೂಲ್ಕಿ, ಹಳೆಯಂಗಡಿ, ಮಂಗಳೂರು, ಬಜ್ಪೆ ಕಡೆ ಈ ಜಂಕ್ಷನ್ ಮೂಲಕವೇ ಬಸ್ ಬದಲಾಯಿಸಬೇಕಾಗಿದೆ. ಮೂಡುಬಿದಿರೆ, ಐಕಳ, ಕಟೀಲು, ಮುಂಡ್ಕೂರು, ಬೆಳ್ಮಣ್, ನಿಟ್ಟೆ, ಮೂಲ್ಕಿಯ ಶಾಲೆ ಹಾಗೂ ಕಾಲೇಜುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಕೂಡ ಈ ಜಂಕ್ಷನ್ ಮೂಲಕವೇ ಸಾಗುತ್ತಾರೆ. ಈ ಬಸ್ ತಂಗುದಾಣದ ಅಂಗಡಿಗಳನ್ನು ಏಲಂ ಮಾಡಿ ಆದಾಯ ಪಡೆಯುವ ಮುಂಡ್ಕೂರು ಗ್ರಾಪಂ ಆಡಳಿತ ಕೂಡಲೇ ಇಲ್ಲಿನ ಚರಂಡಿ ಸರಿಪಡಿಸಿ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ.

ಕೋಟ್,,,,,,,
ಭಾರಿ ಸಂಖ್ಯೆಯ ಜನರು ಸೇರುವ ಜಾರಿಗೆಕಟ್ಟೆ ಬಸ್ ತಂಗುದಾಣ ಮುಂಭಾಗ ನೀರು ನಿಂತ ಪರಿಣಾಮ ಪ್ರಯಾಣಿಕರಿಗೆ ತೊಂದರೆಯಾಗಿದೆ. ಕೂಡಲೇ ಪಂಚಾಯಿತಿ ಚರಂಡಿ ದುರಸ್ತಿ ಪಡಿಸಿ ಕ್ರಮ ಕೈಗೊಳ್ಳಬೇಕಾಗಿದೆ.
ನೆಲ್ಸನ್ ಡಿಸೋಜ
ಜಾರಿಗೆಕಟ್ಟೆ, ಸ್ಥಳೀಯ

———-
ಇಲ್ಲಿನ ವ್ಯವಸ್ಥೆ ಸರಿಪಡಿಸಲು ಪಂಚಾಯಿತಿ ವತಿಯಿಂದ ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ಮುಂದೆ ಮೋರಿ ಅಗತ್ಯ ಇದ್ದಲ್ಲಿ ಇತರ ಇಲಾಖೆಯ ನೆರವು ಪಡೆಯಲಾಗುವುದು. ಅಷ್ಟರವರೆಗೆ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗುವುದು.
ಶಶಿಧರ ಆಚಾರ್ಯ
ಮುಂಡ್ಕೂರು ಗ್ರಾಪಂ ಪಿಡಿಒ

Leave a Reply

Your email address will not be published. Required fields are marked *