More

    ಅಪಾರ್ಟ್​​ಮೆಂಟ್​ಗಳೆಂಬ ಬೆಲ್ಲದಚ್ಚಿನ ಒಳ-ಹೊರಗೆ

    ಅಪಾರ್ಟ್​​ಮೆಂಟ್​ಗಳೆಂಬ ಬೆಲ್ಲದಚ್ಚಿನ ಒಳ-ಹೊರಗೆ

    ಬೃಹತ್ ಕಾಂಪೌಂಡಿನ ದೊಡ್ಡದಾದ ಗೇಟುಗಳು. ಕಾರುಗಳು ಒಳಗೆ-ಹೊರಗೆ ಬರಲು ಬೇರೆ-ಬೇರೆ ದಿಕ್ಕಿನ ಪ್ರವೇಶದ್ವಾರಗಳು. ಎಲ್ಲ ಕಡೆಯೂ ಯೂನಿಫಾಮ್ರ್ ಧರಿಸಿದ ಸೆಕ್ಯೂರಿಟಿ. ಒಳಗೆ ಪ್ರವೇಶಿಸುವ ಮೊದಲೇ ನಿಮ್ಮನ್ನು ತಡೆದು ಯಾರ ಅಪಾರ್ಟ್​ವೆುಂಟಿಗೆ, ಯಾವ ಕಾರಣಕ್ಕೆ ಬಂದಿದ್ದೀರಿ ಎಂಬುದನ್ನು ವಿಸಿಟರ್ಸ್ ಬುಕ್ಕಿನಲ್ಲಿ ನಮೂದಿಸಿಕೊಂಡು ಫೋನ್ ನಂಬರ್, ವಿಳಾಸ ಬರೆಸಿಕೊಂಡು ಒಳಗೆ ಬಿಡುತ್ತಾನೆ. ಕೆಲವು ಕಡೆ ನೇರವಾಗಿ ಮನೆಯೊಡೆಯರಿಗೆ ಫೋನ್ ಮಾಡಿ ಇಂಥ ಹೆಸರಿನವರು ಗೇಟಿನಲ್ಲಿ ನಿಮ್ಮನ್ನು ಕೇಳಿಕೊಂಡು ಬಂದಿದ್ದಾರೆ, ಒಳಗೆ ಕಳಿಸಬಹುದೆ? ಎಂದು ಅನುಮತಿ ಪಡೆದುಕೊಂಡ ಮೇಲೆಯೇ ಒಳಹೋಗಿ ಎನ್ನುತ್ತಾನೆ. ಒಳಗೆ ಪ್ರವೇಶಿಸಿದ ಬಳಿಕವೂ ಬ್ಲಾಕು, ವಿಂಗು ಎಂದು ಹುಡುಕಲು ಅರ್ಧಗಂಟೆಯೇ ಬೇಕಾದೀತು. ಆ ಬಳಿಕ ನಿಮಗೆ ಬೇಕಾದ ಅಪಾರ್ಟ್​ವೆುಂಟ್​ಗೆ ಸಂಬಂಧಪಟ್ಟ ಲಿಫ್ಟನ್ನು ಹುಡುಕಿ ಎಷ್ಟನೇ ಮಹಡಿ ಎಂಬುದನ್ನು ಒತ್ತಿ ಕೊನೆಗೂ ನಿಮ್ಮ ಬಂಧುಗಳ ಮನೆಯ ಬಾಗಿಲನ್ನು ಬೆಲ್ ಮಾಡಿ ಒಳಗಿಂದ ಚಿಲಕ ತೆಗೆಯಲು ತಡಕಾಡಿ (ಯಾಕೆಂದರೆ ಆಧುನಿಕ ಚಿಲಕಗಳು ತೆಗೆಯಲು ಸುಲಭ ಸಾಧ್ಯವಾದವುಗಳಲ್ಲ) ಬಾಗಿಲು ತೆರೆದು ‘ಹೋ ಹೋ ಹೋ ಬನ್ನಿ ಬನ್ನಿ… ಸೀರಿಯಲ್ ನೋಡುತ್ತಿದ್ವಾ ಬೆಲ್ಲಾಗಿದ್ದು ಕೇಳಲೇ ಇಲ್ಲ’ ಎನ್ನುವಷ್ಟರಲ್ಲಿ ಹಳ್ಳಿಯ ಮನೆಯಾದರೆ ಮನೆಯೊಳಗೆ ಹೋಗಿ ಕೈಕಾಲು ತೊಳೆದು, ಚಹಾ ಕುಡಿದು ಎಲೆಯಡಿಕೆ ಬಟ್ಟಲಿಗೆ ಕೈ ಹಾಕುವಷ್ಟು ಸಮಯ ಹಿಡಿದಿರುತ್ತದೆ.

    ಹಳ್ಳಿಗಳನ್ನು ತೊರೆದು ಯುವಜನತೆ ಉದ್ಯೋಗ ಅರಸಿ ನಗರಗಳತ್ತ ಮುಖ ಮಾಡಿ ಹೊರಟ ದಿನದಿಂದಲೇ ನಗರಗಳು ಜನಸಂದಣಿಯಿಂದ ಕಿಕ್ಕಿರಿಯತೊಡಗಿದವು. ವಸತಿ, ವಿದ್ಯುತ್, ಕುಡಿಯುವ ನೀರು, ಸ್ವಚ್ಛತೆ, ಒಳಚರಂಡಿ ವ್ಯವಸ್ಥೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಗರಾಡಳಿತಕ್ಕೆ ಸವಾಲಾಗಿ ಪರಿಣಮಿಸತೊಡಗಿತು. ಹೀಗೆ ಬಂದ ವಲಸೆ ಜನಾಂಗ ಆಯಾ ನಗರಗಳಲ್ಲಿಯೇ ನೆಲೆಸಿ ಅಲ್ಲಿಯೇ ನೆಲೆ ಕಂಡುಕೊಂಡು ಅದೇ ನಗರದ ಮೂಲನಿವಾಸಿ ಜನವಾಗಿ ಪರಿವರ್ತಿತವಾಗಿಬಿಟ್ಟಿತು.

    ಜನಸಂಖ್ಯೆ ಬೆಳೆದಂತೆ ಕೂಡುಕುಟುಂಬಗಳು ಇಬ್ಭಾಗವಾಗ ತೊಡಗಿ ಸ್ವಂತ ಮನೆಗಳ ಕನಸನ್ನು ನನಸಾಗಿಸಿಕೊಳ್ಳುವುದೇ ಆದ್ಯತೆಯಾಗತೊಡಗಿತು. ನಗರಗಳು ಅಡ್ಡಡ್ಡ ಬೆಳೆಯಲು ಜಾಗವೇ ಇಲ್ಲದಾದಾಗ ಹಾಗೂ ಒತ್ತೊತ್ತಾಗಿ ಕಟ್ಟಿದ ಮನೆಗಳಿಗೆ ಗಾಳಿ-ಬೆಳಕು ಪೂರೈಕೆ ಇಲ್ಲದೆ ಅದರೊಳಗೆ ವಾಸ ಮಾಡುವುದೇ ಸಾಧ್ಯವಿಲ್ಲವೆಂಬ ಉಸಿರುಗಟ್ಟಿಸುವ ಪರಿಸ್ಥಿತಿ ನಿರ್ವಣವಾದಾಗ ಬಿಲ್ಡರುಗಳು ನಗರವನ್ನು ಎತ್ತರಕ್ಕೆ ಉದ್ದುದ್ದ ಬೆಳೆಸುವ ಪ್ಲಾನ್ ಹಾಕತೊಡಗಿದರು. ಹಣವುಳ್ಳ ನಗರವಾಸಿಗಳು ಅಪಾರ್ಟ್​ವೆುಂಟ್ ಎಂಬ ಮೋಹಕ ಜಾಲದೊಳಗೆ ಸಿಲುಕಿಕೊಳ್ಳುವಂತೆ ಆಮಿಷ ನೀಡತೊಡಗಿದರು. ಕಣ್ಣಿಗೆ ರಾಚುವ ಬಣ್ಣಬಣ್ಣದ ವಸತಿ ಸಮುಚ್ಚಯಗಳ ಜಾಹೀರಾತುಗಳು, ಆಕಾಶದೆತ್ತರಕ್ಕೆ ಎದ್ದುನಿಂತ ಬಿಲ್ಡಿಂಗ್​ಗಳು ಅದರೊಳಗೆ ನೀಡಲಾಗುವ ಸವಲತ್ತುಗಳು, ಅಪಾರ್ಟ್​ವೆುಂಟ್ ಖರೀದಿಗೆ ಬ್ಯಾಂಕುಗಳು ನೀಡುವ ಸಾಲದ ಸವಲತ್ತುಗಳು… ಇವೆಲ್ಲವೂ ಅಪಾರ್ಟ್​ವೆುಂಟ್ ಸಂಸ್ಕೃತಿ ಬೇರೂರಲು ಕಾರಣವಾಗತೊಡಗಿದವು.

    ಬೆಂಗಳೂರು ನಗರ ಒಂದರಲ್ಲಿಯೇ ಎಪ್ಪತೆôದು ಸಾವಿರ ಅಪಾರ್ಟ್​ವೆುಂಟ್​ಗಳು ಇವೆ ಎಂಬುದು ಒಂದು ಅಂದಾಜು. ಈಗ ಅವುಗಳ ಸಂಖ್ಯೆ ಹೆಚ್ಚಾಗಿರಲೂಬಹುದು. ಉದ್ಯೋಗಸ್ಥ ದಂಪತಿಗೆ ಕಂಪೌಂಡಿರುವ ಸ್ವಂತ ಮನೆಯೊಂದನ್ನು ನಿರ್ವಹಿಸುವುದು ಬಲುಕಷ್ಟ. ಅಂಗಳಗಳನ್ನು ಕ್ಲೀನ್ ಇಟ್ಟುಕೊಳ್ಳುವುದು, ತಾವು ಆಫೀಸಿಗೆ ಬೆಳಗ್ಗೆ ಹೋಗಿ ಸಂಜೆ ಬರುವ ತನಕದ ಮನೆಯ ಭದ್ರತೆಯ ಪ್ರಶ್ನೆ, ಒಬ್ಬೊಬ್ಬರೇ ಮನೆಯಲ್ಲಿರಬೇಕಾದ ಸಂದರ್ಭ ಬಂದಾಗ ಅಪಾರ್ಟ್​ವೆುಂಟುಗಳಲ್ಲಿರುವ ಸುರಕ್ಷತೆ ಇವೆಲ್ಲವೂ ಅಪಾರ್ಟ್ ಮೆಂಟುಗಳೆಡೆಗೆ ಉದ್ಯೋಗಸ್ಥರು ಆಕರ್ಷಿತರಾಗಲು ಕಾರಣ.

    ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಕಟ್ಟಿರುವ ಅಪಾರ್ಟ್​ವೆುಂಟುಗಳಲ್ಲಿ ಹಲವು ಬಗೆಯ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ. ಈಜುಕೊಳ, ವಾಕಿಂಗ್​ಪಥ, ಸಣ್ಣಪುಟ್ಟ ಅಂಗಡಿಗಳು, ಹಾಲಿನ ಬೂತು, ಮಕ್ಕಳ ಪಾರ್ಕ, ಹಿರಿಯ ನಾಗರಿಕರು ಕೂತು ಹರಟಲು ಬೆಂಚುಗಳು, ಕ್ಲಬ್​ಹೌಸ್, ಪಾರ್ಟಿ ಹಾಲ್- ಏನುಂಟು ಏನಿಲ್ಲ! ನೂರಾರು ಹಳ್ಳಿಗಳನ್ನು ಸೇರಿಸಿ ನಿರ್ಮಾಣ ಮಾಡಲಾದ ಒಂದು ಹೆಸರಿನ ಅಪಾರ್ಟ್​ವೆುಂಟುಗಳನ್ನು ನೋಡಬಹುದು.

    ಹಣಕಾಸಿನ ಲೆಕ್ಕಾಚಾರ ಹೇಗೂ ಇರಲಿ; ಒಳ್ಳೆಯ ಅಪಾರ್ಟ್​ವೆುಂಟುಗಳು ಒದಗಿಸುವ ವಿಶಾಲವಾದ ಆವರಣಗಳು ಹಿರಿಯ ನಾಗರಿಕರು ಭದ್ರತೆಯ ದೃಷ್ಟಿಯಿಂದಲೂ ವಾಸಿಸಲು ಯೋಗ್ಯವಾಗಿರುತ್ತವೆ. ಸಂಜೆಯ ಸಮಯ ಹರಟಲು ಸಮಾನವಯಸ್ಕ, ಮನಸ್ಕ ಸಂಗಾತಿಗಳು ಸಿಗುವುದರಿಂದ ನಿವೃತ್ತ ಜೀವನವನ್ನು ಸಾಗಿಸುವ ಹಿರಿಯರಿಗೆ ನಿಶ್ಚಿಂತವಾದ ವಾಸದ ಸ್ಥಳ ಅಪಾರ್ಟ್​ವೆುಂಟ್. ಜನನಿಬಿಡ ರಸ್ತೆಗಳ ಪಕ್ಕದಲ್ಲಿ ಕೂತು ಹರಟುವ ಹಿರಿಯರಿಗಿಂತಲೂ ಅಪಾರ್ಟ್ ಮೆಂಟುಗಳ ಒಳಗಡೆಯ ಆವರಣದಲ್ಲಿ ಕೂತು ಹರಟೆ ಹೊಡೆಯುವ ಹಿರಿಯರು ಅಂತೆಯೇ ಮಕ್ಕಳು ಹೆಚ್ಚು ಸುರಕ್ಷಿತರಾಗಿರುತ್ತಾರೆ. ಚಿಕ್ಕಮಕ್ಕಳನ್ನು ಬೆಳೆಸಲು ಅಪಾರ್ಟ್ ಮೆಂಟುಗಳು ಹೆಚ್ಚು ಸೂಕ್ತ ಎನ್ನಬಹುದು. ಒಂದೇ ವಯಸ್ಸಿನ ಮಕ್ಕಳು ಆಡಲು ಸಿಗುವುದರಿಂದ ಮನೆಮನೆಗಳಿಗೆ ಪರಿಚಿತ ಬಂಧವನ್ನು ಏರ್ಪಡಿಸುವವರೂ ಈ ‘ಕಿರಿಯ ನಾಗರಿಕ’ರೇ. ‘ಇವತ್ತು ನಾನು ಆಫೀಸಿನಿಂದ ಬರಲು ಸ್ವಲ್ಪ ತಡವಾಗುತ್ತದೆ. ನನ್ನ ಮಗಳು ನಿಮ್ಮ ಮಗಳೊಂದಿಗೆ ನಿಮ್ಮ ಮನೆಯಲ್ಲೇ ಸ್ವಲ್ಪ ಹೊತ್ತು ಇರಲಿ’ ಎನ್ನುವ ಉದ್ಯೋಗಸ್ಥ ತಾಯಿಯಂದಿರಿಗೂ ಅಪಾರ್ಟ್​ವೆುಂಟ್​ಗಳೆಂದರೆ ಅಚ್ಚುಮೆಚ್ಚು. ಆಗಸ್ಟ್ ಹದಿನೈದರಂಥ ರಾಷ್ಟ್ರೀಯ ಹಬ್ಬಗಳನ್ನು, ದೀಪಾವಳಿ, ಗಣೇಶಚತುರ್ಥಿಗಳಂಥ ಆಚರಣೆಗಳನ್ನು ಸಾಮೂಹಿಕವಾಗಿ, ಭರ್ಜರಿಯಾಗಿ ನಡೆಸುವ ಅಪಾರ್ಟ್​ವೆುಂಟುಗಳೂ ಇಲ್ಲದಿಲ್ಲ. ದೇಶದ ವಿವಿಧ ಭಾಗಗಳ, ವಿವಿಧ ಭಾಷೆಗಳ ಸಂಸ್ಕೃತಿಗಳನ್ನು ಒಂದೇ ಆವರಣದಲ್ಲಿ ಕೂಡಿ ಹಾಕಿ ಎಲ್ಲರಿಗೂ ಸಮನಾದ ಹೊಸದೇ ಆದ ನಗರ ಸಂಸ್ಕೃತಿಯೊಂದರ ವಾತಾವರಣವನ್ನು ನಿರ್ವಿುಸಿಬಿಡುತ್ತವೆ. ಅಪಾರ್ಟ್​ವೆುಂಟುಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮಕ್ಕಳು ಅದರ ಪ್ರಯುಕ್ತ ಏರ್ಪಾಡಾಗುವ ಮನರಂಜನಾ ಕಾರ್ಯಕ್ರಮಗಳಲ್ಲಿ ದೇಶದ ಬೇರೆ-ಬೇರೆ ಭಾಗಗಳ ಆಚರಣೆಗಳ ಸೊಗಸನ್ನು ಪ್ರದರ್ಶಿಸುತ್ತಾರೆ.

    ಚೆಲ್ಲಲು ಹಣ ಇರುವ ಆದಾಯದ ಮೂಲಗಳನ್ನು ಹೊಂದಿದವರು ಲಗ್ಸುರಿ ಅಪಾರ್ಟ್​ವೆುಂಟುಗಳನ್ನು ಖರೀದಿಸಿ ಅದಕ್ಕನುಗುಣವಾದ ಜೀವನಶೈಲಿಯನ್ನು ರೂಢಿಸಿಕೊಂಡು ಭೂಮ್ಯಾಕಾಶಗಳ ದರ್ಶನವೇ ಇಲ್ಲದೇ ಮಕ್ಕಳನ್ನು ಬೆಳೆಸುತ್ತಾರೆ ಎಂಬ ಆಪಾದನೆಯೂ ಅಪಾರ್ಟ್​ವೆುಂಟುಗಳ ಮೇಲಿದೆ. ಸಣ್ಣ ಹಾಗೂ ಮಧ್ಯಮ ಆದಾಯದ ಜನರಿಗೆ ಸೂಕ್ತವಾದ ಅಪಾರ್ಟ್​ವೆುಂಟುಗಳಲ್ಲಿ ವ್ಯವಸ್ಥೆಗಳು ಕಡಿಮೆ. ಲಿಫ್ಟ್ ಇದ್ದರೆ ಕರೆಂಟಿಲ್ಲ. ಕಾರ್ಪೇರೇಶನ್ ನೀರಿಗೆ ಮಾತ್ರ ವ್ಯವಸ್ಥೆ ಇರುವಲ್ಲಿ ನೀರಿನ ಕೊರತೆಯನ್ನು ಸದಾಕಾಲ ಎದುರಿಸಬೇಕಾದ ಪರಿಸ್ಥಿತಿ. ಬೋರ್​ವೆಲ್ ತೆಗೆದು ಅಪಾರ್ಟ್​ವೆುಂಟುಗಳಿಗೆ ನೀರೊದಗಿಸುವ ವ್ಯವಸ್ಥೆ ಇಲ್ಲದಿದ್ದರೆ ಟ್ಯಾಂಕು, ಟ್ರಕ್ಕು ಎಂದು ಅದೆಲ್ಲಿಯದೋ ನೀರನ್ನು ತಂದು ಸುರಿಯುವ ಅನಾರೋಗ್ಯಕರ ಪರಿಸ್ಥಿತಿ. ಬಾನೆತ್ತರಕ್ಕೆ ನಿರ್ವಿುಸಿದ ನೂರಾರು ಅಂತಸ್ತುಗಳ ಈ ಕಬಂಧಬಾಹುಗಳ ಕಟ್ಟಡಗಳಿಗೆ ನೀರನ್ನಾದರೂ ಎಲ್ಲಿಂದ ಒದಗಿಸಲು ಸಾಧ್ಯ? ಇವುಗಳಿಂದ ನಿರ್ವಣವಾಗುವ ಕಸಕೊಳಚೆಗಳು ಸಮೀಪದ ವಸತಿ ಪ್ರದೇಶಗಳಿಗೂ ತೊಂದರೆ ಕೊಡುತ್ತಿವೆ. ಕಂಪೌಂಡ್ ಮನೆಗಳ ಹಿಂದೆ-ಮುಂದೆ ದೊಡ್ಡ ಅಪಾರ್ಟ್​ವೆುಂಟುಗಳು ಬಂದರೆ ಆ ಮನೆಯ ಗಾಳಿ, ಬೆಳಕು ಮಾಯವಾದಂತೆಯೇ ಸರಿ. ಈ ಕುರಿತ ಅದೆಷ್ಟೋ ವ್ಯಾಜ್ಯಗಳು ಮಂಗಳೂರಿನಲ್ಲಿ ಕೋರ್ಟು ಮೆಟ್ಟಿಲು ಏರಿ ಕೂತಿವೆ. ನಗರಕ್ಕೆ ಬಂದು ಇಡೀ ಜೀವನವನ್ನು ಒತ್ತೆಯಿಟ್ಟು ದುಡಿದು ಗಳಿಸಿದ ಹಣವನ್ನು ಅಪಾರ್ಟ್​ವೆುಂಟುಗಳೆಂಬ ಮರೀಚಿಕೆಯ ಕನಸಿನಲ್ಲಿ ಕಳೆದುಕೊಂಡವರೂ ಇದ್ದಾರೆ. ಮೊದಲೇ ಬುಕ್ಕಿಂಗ್ ಅಮೌಂಟ್ ತೆಗೆದುಕೊಂಡು ಗ್ರಾಹಕರನ್ನು ವಂಚಿಸಿ ಹಣದೊಂದಿಗೆ ನಾಪತ್ತೆಯಾಗುವ ಬಿಲ್ಡರ್​ಗಳು, ಅರ್ಧ ಬಿಲ್ಡಿಂಗ್ ಕಟ್ಟಿ ಒಂದನ್ನು ಸಹ ಸುಸೂತ್ರ ಮಾಡಿ ಮುಗಿಸದೆ ಕಾಣೆಯಾಗುವ ಖದೀಮರು, ಒಂದಕ್ಕೆ ಮೂರು ದುಡ್ಡು ಪಡೆದು ಕಳಪೆ ಗುಣಮಟ್ಟದ ನಿರ್ವಣಕಾರ್ಯ ಮಾಡುವ ದುರುಳ ಧನದಾಹಿಗಳು… ಇವರೆಲ್ಲರ ಕೈಯಲ್ಲಿಯೂ ಸಿಗದೆ ಯಶಸ್ವಿಯಾಗಿ ಅಪಾರ್ಟ್​ವೆುಂಟ್ ಕೊಳ್ಳುವವನಿಗೆ ‘ಬುದ್ಧಿವಂತ ಶ್ರೇಷ್ಠ’ ಎಂಬ ಪ್ರಶಸ್ತಿ ನೀಡಲೇಬೇಕು.

    ಅಪಾರ್ಟ್​ವೆುಂಟುಗಳನ್ನೇ ಜೀವನಾಧಾರವಾಗಿ ಮಾಡಿಕೊಂಡ ದುಡಿಯುವ ವರ್ಗವೊಂದು ಕಟ್ಟಡ ನಿರ್ವಣವಾಗುತ್ತಲೇ ಹುಟ್ಟಿಕೊಂಡಿರುತ್ತದೆ. ಮನೆಗೆಲಸದವರು ಬೆಳಗ್ಗೆ ಕಟ್ಟಡದೊಳಗೆ ಪ್ರವೇಶಿಸಿದರೆ ಸಂಜೆಯತನಕ ಆಫೀಸ್ ಡ್ಯೂಟಿಯ ಹಾಗೆ ಅದೆಷ್ಟೋ ಮನೆಗಳ ಕೆಲಸ ಪೂರೈಸಿ ಹೊರ ಹೋಗುವುದು ಕಂಡುಬರುತ್ತದೆ. ಹೂವಿನವರು, ಇಸ್ತ್ರಿಯವರು ಮನೆಬಾಗಿಲಿಗೆ ಸೇವೆಯನ್ನು ತಂದು ನೀಡುತ್ತಾರೆ. ಆದ್ದರಿಂದ ಅಪಾರ್ಟ್​ವೆುಂಟ್ ವಾಸಿಗಳು ಹಾಗೂ ಈ ಬಗೆಯ ಜನರು ಪರಸ್ಪರ ಅವಲಂಬಿಗಳಾಗಿ ಬಿಟ್ಟಿರುತ್ತಾರೆ.

    ಎಲ್ಲ ಅಪಾರ್ಟ್​ವೆುಂಟ್ ವಾಸಿಗಳು ಅನ್ಯೋನ್ಯವಾಗಿರುತ್ತಾರೆ ಎಂಬಂತಿಲ್ಲ. ನಿರ್ವಹಣೆಗಾಗಿ ಪ್ರತಿ ಅಪಾರ್ಟ್​ವೆುಂಟ್​ನಲ್ಲೂ ಸೊಸೈಟಿಯೊಂದಿರುತ್ತದೆ. ಅದಕ್ಕೊಬ್ಬ ಅಧ್ಯಕ್ಷ, ಕಾರ್ಯದರ್ಶಿ ಖಜಾಂಚಿ ಎಲ್ಲವೂ ಇದ್ದು ಪ್ರತಿ ತಿಂಗಳೂ ಹೆಚ್ಚು-ಕಡಿಮೆ ಒಂದು ಮನೆ ಬಾಡಿಗೆಯಷ್ಟೇ ಮೊತ್ತವನ್ನು ಮೇಂಟೆನೆನ್ಸ್ ಚಾರ್ಜ್ ಎಂದು ಪಾವತಿಸಬೇಕಾಗುತ್ತದೆ. ಅಪಾರ್ಟ್​ವೆುಂಟಿನೊಳಗಡೆ ಸಕ್ರಿಯವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತ, ಕನ್ನಡೇತರರಿಗೆ ಕನ್ನಡವನ್ನು ಕಲಿಸುತ್ತ, ಮಕ್ಕಳಿಗೆ ಭಗವದ್ಗೀತೆ ಶ್ಲೋಕಗಳನ್ನು ಹೇಳಿ ಕೊಡುವ ಆಂಟಿಯರು ಇರುವ ಒಂದು ಅಪರೂಪದ ಅಪಾರ್ಟ್​ವೆುಂಟಿನವರು ಕನ್ನಡ ರಾಜ್ಯೋತ್ಸವಕ್ಕೆ ನನ್ನನ್ನು ಕರೆದು ಭಾಷಣ ಮಾಡಿಸಿದರು. ಸಂಘ ಜೀವನವನ್ನು ಸದೃಢಗೊಳಿಸಿಕೊಂಡು ಸುಂದರವಾಗಿಸಿಕೊಂಡರೆ ಈ ಬಗೆಯ ಅಪರೂಪದ ಸಹಬಾಳ್ವೆಯ ವಾತಾವರಣ ನಿರ್ವಿುಸಿಕೊಳ್ಳಲು ಸಾಧ್ಯ. ಅದನ್ನು ಸಾಕಾರಗೊಳಿಸಲು ಗೃಹಿಣಿಯರಲ್ಲಿರುವ ಜೀವನೋತ್ಸಾಹ ಮತ್ತು ಸೌಹಾರ್ದಯುತ ಸಂಘಟನಾ ಶಕ್ತಿ ಗಳು ಕಾರಣವಾಗುತ್ತವೆ.

    ಅಪಾರ್ಟ್​ವೆುಂಟುಗಳ ವಿಶಿಷ್ಟ ಆವರಣವನ್ನೇ ಹಿನ್ನೆಲೆಯಾಗಿಸಿಕೊಂಡ ಒಂದು ಕುತೂಹಲಕಾರಿ ಸಿನಿಮಾ ‘ಅಮೃತ್ ಅಪಾರ್ಟ್​ವೆುಂಟ್’ ಎಂಬ ಹೆಸರಿನಲ್ಲಿ ಬಂದಿದ್ದು, ಉತ್ತರ ಕರ್ನಾಟಕ ಭಾಗದಿಂದ ಬಂದು ಬೆಂಗಳೂರಿನಲ್ಲಿ ನೆಲೆಗೊಂಡಿರುವ ಸಂವೇದನಾಶೀಲ ನಿರ್ದೇಶಕ ಗುರುರಾಜ ಕುಲಕರ್ಣಿ ಇದನ್ನು ನಿರ್ದೇಶಿಸಿದ್ದಾರೆ. ಅಪಾರ್ಟ್​ವೆುಂಟಿನೊಳಗಿನ ಅಪರಿಚಿತರ ನಡುವೆ ಹೊಸ ಬದುಕು ಪ್ರಾರಂಭಿಸಿರುವ ಓರ್ವ ಯುವದಂಪತಿ ಅನುಭವಿಸುವ ಆರ್ಥಿಕ ಅಡಚಣೆಗಳು, ಅನಿರೀಕ್ಷಿತ ಸುಳಿಯಲ್ಲಿ ಸಿಲುಕಿಸುವ ಬ್ಲ್ಯಾಕ್​​ಮೇಲ್​​ ತಂತ್ರಕ್ಕೆ ಸಿಕ್ಕಿ ಒದ್ದಾಡುವ ಪರಿಸ್ಥಿತಿಯನ್ನು ತಂದುಕೊಂಡು ಡೈವರ್ಸ್ ಮಟ್ಟಕ್ಕೆ ಹೋಗುವ ಅಸಹಾಯಕತೆಯನ್ನು ಅನುಭವಿಸುತ್ತಾರೆ. ಪರಸ್ಪರ ಸಂಘರ್ಷಕ್ಕಿಳಿಯುವ, ತಮ್ಮ ಅಹಂಗಳನ್ನು ಸಂಭಾಳಿಸಿಕೊಳ್ಳಲಾಗದ ಯುವಕ-ಯುವತಿ ಇಬ್ಬರೂ ಕಂಗೆಟ್ಟಿರುತ್ತಾರೆ. ಕೊನೆಯಲ್ಲಿ ಡೈವೋರ್ಸ್ ಪೇಪರ್​ಗೆ ಸಹಿ ಮಾಡಲು ಹೋದ ಯುವದಂಪತಿ ಅಲ್ಲಿ ಮನಸ್ಸು ಬದಲಾಯಿಸಿ, ‘ನಾವು ಮತ್ತೊಮ್ಮೆ ಮದುವೆಯಾಗೋಣವೇ?’ ಎಂದು ಕೇಳಿ ಸಿನಿಮಾವನ್ನು ಸುಖಾಂತ್ಯ ಮಾಡುತ್ತಾರೆ. ಕಷ್ಟ- ಸುಖಗಳೆರಡರಲ್ಲೂ ಜತೆಯಾಗಿರುತ್ತೇವೆ ಎಂಬ ಮದುವೆಯಲ್ಲಿ ಕೊಡಿಸುವ ವಚನಕ್ಕೆ ಬದ್ಧವಾದ ಮಾತನ್ನು ನಿಜಗೊಳಿಸುತ್ತಾರೆ.

    ನಾವು ಬದುಕಿರುವಷ್ಟು ದಿನ ನೆಮ್ಮದಿಯಾಗಿ ಇರುವಂತೆ ಮಾಡಿಕೊಳ್ಳಲು, ನಮಗೆ ಬೇಕಾದ ಸೌಕರ್ಯಗಳನ್ನು ಒದಗಿಸಿಕೊಳ್ಳಲು ಹಣ ಬೇಕೇಬೇಕು. ಅದಿಲ್ಲದಾಗ ಅಥವಾ ನೌಕರಿಯನ್ನು ಕಳೆದುಕೊಳ್ಳುವುದು, ಬೇರೊಬ್ಬರಿಂದ ವಂಚನೆಗೊಳಗಾಗುವುದು ಮೊದಲಾದ ಅನಿರೀಕ್ಷಿತ ಸಂದರ್ಭಗಳು ಒದಗಿಬಂದರೆ ಕಂಗೆಟ್ಟು ಜೀವ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗದೆ ‘ಈಸಬೇಕು ಇದ್ದು ಜೈಸಬೇಕು’ ತತ್ತ್ವಕ್ಕೆ ಅಂಟಿಕೊಂಡು ಬದುಕನ್ನು ಸಾಗಿಸುವ ಜೀವನಪಾಠವನ್ನು ಕಲಿಸುವವರು ನಮಗಿಂದು ಬೇಕಾಗಿದ್ದಾರೆ.

    (ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts