More

  ವಿರಾಟ ಯಶಸ್ಸಿನ ಹಿಂದಿನ ಹೋರಾಟ; ದೀಪಾ ಹಿರೇಗುತ್ತಿ ಅವರ ಅಂಕಣ

  ವಿರಾಟ ಯಶಸ್ಸಿನ ಹಿಂದಿನ ಹೋರಾಟ; ದೀಪಾ ಹಿರೇಗುತ್ತಿ ಅವರ ಅಂಕಣಅದು 2006ರ ಡಿಸೆಂಬರ್ ತಿಂಗಳ ಒಂದು ನಸುಕಿನ 3 ಗಂಟೆಯ ಸಮಯ. ಹದಿನೆಂಟರ ಹರಯದ ಕ್ರಿಕೆಟಿಗನೊಬ್ಬ ತನ್ನ ಕೋಚ್​ಗೆ ಕರೆ ಮಾಡಿ ಜೋರಾಗಿ ಅಳತೊಡಗಿದ. ಕಳೆದ ಒಂದು ತಿಂಗಳಿಂದ ಅನಾರೋಗ್ಯಪೀಡಿತರಾಗಿದ್ದ ತಂದೆೆ ತೀರಿಕೊಂಡಿದ್ದಾರೆ. ದೆಹಲಿ ಮತ್ತು ಕರ್ನಾಟಕ ತಂಡಗಳ ನಡುವೆ ರಣಜಿ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ದೆಹಲಿಯ ಪರ ಆಡುತ್ತಿದ್ದ ಈ ಹುಡುಗ 40 ರನ್ ಗಳಿಸಿದ್ದಾನೆ. ಮಾರನೇ ದಿನ ಮೈದಾನಕ್ಕಿಳಿಯುವುದೋ ಬೇಡವೋ ಎಂಬ ಗೊಂದಲ. ಮಗ ಕ್ರಿಕೆಟ್​ನಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದರು ತಂದೆ. ಅಪ್ಪನ ಆಸೆ ನೆರವೇರಿಸಲು ಈ ರಣಜಿ ಪಂದ್ಯ ಹುಡುಗನಿಗೆ ಬಹು ಮುಖ್ಯ. ಇನ್ನೊಂದೆಡೆ ಮನೆಯ ಆಧಾರವೇ ಕುಸಿದ ಸಂಕಟ. ಆ ಹುಡುಗನಲ್ಲಿ ನೋವನ್ನು ಮೆಟ್ಟಿ ನಿಲ್ಲುವ ಶಕ್ತಿಯೂ ಇದ್ದುದು ಜಗತ್ತಿನ ಗಮನಕ್ಕೆ ಬಂದುದು ಆತ ಮರುದಿನ ಬ್ಯಾಟೆತ್ತಿ ಮೈದಾನಕ್ಕೆ ಇಳಿದಾಗಲೇ. ಅಂತಹ ಸಂದರ್ಭದಲ್ಲಿ ಧೈರ್ಯ ತಂದುಕೊಂಡು, ಭಾವನೆಗಳನ್ನು ಹತ್ತಿಕ್ಕಿ ಆಟವಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಹಾಂ, ಅಂದು ಆಟ ಮುಂದುವರಿಸಿದ ಆತ ಗಳಿಸಿದ್ದು 90 ರನ್​ಗಳು! ಅಂದಹಾಗೆ ಆತ ಕೋಚ್​ಗೆ ಕರೆ ಮಾಡಿದಾಗ ಅಳುತ್ತ ಹೇಳಿದ್ದೇನು ಗೊತ್ತೇ? ತಾನು ಮಾರನೇ ದಿನ ಆಟ ಮುಂದುವರಿಸುತ್ತೇನೆ ಎಂದು!

  ಆ ಹುಡುಗನೇ ವಿರಾಟ್ ಕೊಹ್ಲಿ! ಇಂದು ಭಾರತದ ಕ್ರಿಕೆಟ್​ಪ್ರೇಮಿಗಳ ಎದೆಯನ್ನು ಬೆಚ್ಚಗಾಗಿಸುವ ಹೆಸರು. ಜಗತ್ತಿನ ಅತ್ಯುತ್ತಮ ಬ್ಯಾಟ್ಸ್​ಮನ್​ಗಳ ಸಾಲಿನಲ್ಲಿ ಈಗಾಗಲೇ ಸೇರಿರುವ ವಿರಾಟ್ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಲೇ ಯಶಸ್ಸಿನ ಮೆಟ್ಟಿಲುಗಳನ್ನು ಏರಿದವರು. ಯಶಸ್ಸು ಒಂದು ಗುರಿಯಲ್ಲ, ನಿರಂತರವಾಗಿ ನಡೆಯಬೇಕಾದ ಹಾದಿ ಎಂಬುದನ್ನು ಕಿರಿವಯಸ್ಸಿನಲ್ಲಿಯೇ ಅರ್ಥ ಮಾಡಿಕೊಂಡು ಜವಾಬ್ದಾರಿಯುತ ಹುದ್ದೆ, ಅದು ತರುವ ಒತ್ತಡ, ಸ್ಟಾರ್​ಗಿರಿ, ಜನಪ್ರಿಯತೆ, ಸಂಪತ್ತು ಎಲ್ಲವನ್ನೂ ಸಲೀಸಾಗಿ ನಿರ್ವಹಿಸುತ್ತ ಮಾದರಿಯಾದವರು. ಈಗಿನ್ನೂ 32ರ ವಯಸ್ಸಿನ ಕೊಹ್ಲಿ ಟೆಸ್ಟ್, ಏಕದಿನ ಪಂದ್ಯಗಳು, ಟ್ವೆಂಟಿ ಟ್ವೆಂಟಿ ಎಲ್ಲದರಲ್ಲೂ ಅತ್ಯುತ್ತಮ ಎನಿಸಿಕೊಂಡಿರುವುದು ಹೇಗೆ? ಯಶಸ್ಸನ್ನು ವಿರಾಟ್ ಅರ್ಥೈಸುವ ಬಗೆಯೇನು ಎಂಬುದನ್ನು ವಿಶ್ಲೇಷಿಸುವ ಪ್ರಯತ್ನ ಇಲ್ಲಿದೆ. ಹಗಲುಗನಸು ಕಾಣುತ್ತ, ಗಾಳಿಗೋಪುರಗಳನ್ನು ಕಟ್ಟುತ್ತ ಅದರಲ್ಲೇ ವಾಸ ಮಾಡುತ್ತ, ಸಾಮಾಜಿಕ ಜಾಲತಾಣಗಳ ಭ್ರಮಾಲೋಕದಲ್ಲಿ ಮುಳುಗೇಳುತ್ತ ವಾಸ್ತವದಿಂದ ಇಂಚಿಂಚೇ ದೂರ ಸರಿಯುತ್ತ, ತಮ್ಮ ಸೋಲಿಗೆ ಇಲ್ಲದ ನೆಪಗಳನ್ನು ಹೇಳುತ್ತ, ಯಶಸ್ವೀ ವ್ಯಕ್ತಿಗಳೆಲ್ಲ ಅದೃಷ್ಟವಂತರೆಂದು ಗೊಣಗುತ್ತ ಇಡೀ ಬದುಕನ್ನೇ ಕಳೆದುಬಿಡುವವರಿಗೆ ವಿರಾಟ್ ಕೊಹ್ಲಿಯ ಮಾತುಗಳು ಸ್ಪೂರ್ತಿ ತರಬಹುದೇನೋ.

  ಪ್ರತಿದಿನವೂ ತಮ್ಮ ಗುರಿಯಲ್ಲಿ ಉತ್ಕ್ರಷ್ಟತೆ ಸಾಧಿಸಲು ಪ್ರಯತ್ನಿಸುವುದು ವಿರಾಟ್​ಗೆ ಬಹು ಮುಖ್ಯ. ಅದಕ್ಕೆ ಒಂದು ಮಾನಸಿಕ ತಯಾರಿ ಬೇಕಾಗುತ್ತದೆ. ಏಕೆಂದರೆ ಯಶಸ್ಸು ಎಂಬುದು ನಮ್ಮ ದಿನನಿತ್ಯದ ಕೆಲಸಗಳ ಪರಿಣಾಮ. ಹಾಗಾಗಿ ಮೈದಾನದಲ್ಲಿ ಏನು ಮಾಡುತ್ತೇನೆ ಎಂಬುದಕ್ಕಿಂತ ಮೈದಾನದಲ್ಲಿ ಇಲ್ಲದಿದ್ದಾಗ ಏನು ಮಾಡುತ್ತಿರುತ್ತೇನೆ ಎಂಬುದು ಮುಖ್ಯವಾಗುತ್ತದೆ ಎನ್ನುವ ವಿರಾಟ್ ಬಹುದೊಡ್ಡ ಹಾರ್ಡ್​ವರ್ಕರ್. ಬೆಳಗ್ಗೆ 4 ಗಂಟೆಗೇ ಏಳುವ ವಿರಾಟ್ ಪ್ರತೀ ದಿನವೂ ತಮ್ಮ ಪ್ರದರ್ಶನ ಉತ್ತಮವಾಗಿರಬೇಕೆಂದು ಪ್ರಯತ್ನಪಡುತ್ತಾರೆ. ಯಾವುದಾದರೂ ಪಂದ್ಯದಲ್ಲಿ ಕಡಿಮೆ ರನ್ ಗಳಿಸಿದ ದಿನ ಎರಡು ಮೂರು ಗಂಟೆ ಹೆಚ್ಚಿಗೆ ಪ್ರಾಕ್ಟೀಸ್ ಮಾಡುವ ಮೂಲಕ ತಮಗೆ ತಾವೇ ಶಿಕ್ಷೆ ಕೊಟ್ಟುಕೊಳ್ಳುತ್ತಾರೆ! ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆ ಒಂದೆರಡು ಗಂಟೆ ಹೆಚ್ಚಿಗೆ ಓದುವುದನ್ನು ಪ್ರಾರಂಭಿಸುವಂತಹ ಧನಾತ್ಮಕ ಬದಲಾವಣೆಯನ್ನು ವಿದ್ಯಾರ್ಥಿಗಳು, ಇತರ ಪರೀಕ್ಷಾರ್ಥಿಗಳು ತಮ್ಮದಾಗಿಸಿಕೊಂಡರೆ ಬಹುಶಃ ಅರ್ಧ ಸಮಸ್ಯೆ ಪರಿಹಾರವಾಗಬಹುದೇನೋ!

  ‘ಯಾವತ್ತೂ ಯಾರಿಗೂ ಏನನ್ನೂ ನಾನು ಸಾಬೀತುಪಡಿಸಲು ಹೋಗಿಲ್ಲ, ಹೋಗುವುದೂ ಇಲ್ಲ. ಈ ಗೆಲುವು ಅಥವಾ ಸಾಧನೆ ಎನ್ನುವುದು ಒಂದು ಹವ್ಯಾಸದ ಹಾಗೆ. ಒಂದಾದ ಮೇಲೊಂದರಂತೆ ಸಾಧನೆ ಮಾಡುತ್ತ ಹೋದಂತೆ ಸಿಗುವ ಸಂತಸ ಸಮಾಧಾನ ನಿಮ್ಮನ್ನು ಸುಮ್ಮನಿರಲು ಬಿಡುವುದಿಲ್ಲ, ನಿರಂತರವಾಗಿ ಪ್ರಯತ್ನ ಜಾರಿಯಲ್ಲಿರುವಂತೆ ಮಾಡುತ್ತದೆ. ಆ ಗೆಲುವಿನ ಕ್ಷಣವನ್ನು ಅನುಭವಿಸಿದವರಿಗೆ ಮಾತ್ರ ಅದು ಕೊಡುವ ರೋಮಾಂಚನ ಗೊತ್ತಿರುತ್ತದೆ. ನಾನು ಕಣಕ್ಕಿಳಿಯುವುದು ಸ್ಪರ್ಧಿಸಲು ಮತ್ತು ಗೆಲ್ಲಲು. ಕ್ರೀಸಿನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ನಾನು ನಾನಾಗಿರುವ ಸಮಯ. ಆಗ ಬೇರೆ ಯಾರ ಬಗ್ಗೆಯೂ ಯೋಚಿಸುವುದಿಲ್ಲ. ಸೋಲುವುದನ್ನು ನಾನು ದ್ವೇಷಿಸುತ್ತೇನೆ. ಇಷ್ಟೆಲ್ಲ ಶತಕಗಳು, ದಾಖಲೆಗಳನ್ನು ನೋಡಿದಾಗ ಇದನ್ನೆಲ್ಲ ನಾನೇ ಮಾಡಿದ್ದಾ ಎಂದು ಅನ್ನಿಸುತ್ತಿರುತ್ತದೆ. ಆದರೆ ಆ ವಿಚಾರ ಇಂದಿನ ಆಟದ ಮೇಲೆ ಒತ್ತಡ ಹಾಕಬಹುದು. ಹಾಗಾಗಿ ಪ್ರತಿದಿನವೂ ಹೊಸದಾಗಿ ಪ್ರಾಕ್ಟೀಸ್, ಹೊಸಬನೆಂಬಂತೆ ಶ್ರದ್ಧೆಯಿಂದ ಆಟ! ಒಂದು ಸಂಗತಿಗಾಗಿ ಇಷ್ಟೆಲ್ಲ ಪ್ರಯತ್ನಪಟ್ಟು ಶ್ರಮ ಹಾಕಿ, ಅದರಲ್ಲಿ ಅತ್ಯುತ್ತಮವಾಗಬೇಕೆಂದು ಬಯಸದಿದ್ದರೆ ಏನು ಪ್ರಯೋಜನ?’ ಎನ್ನುತ್ತಾರೆ ವಿರಾಟ್! ಹಗಲಿರುಳು ಕ್ರಿಕೆಟನ್ನೇ ಉಸಿರಾಡುವ ವಿರಾಟ್ ಮೈದಾನದಲ್ಲಿ ಅಜೇಯರಾಗಿರಬೇಕೆಂದು ಬಯಸುವುದು ಮತ್ತು ಅದನ್ನು ಸಾಧಿಸುವುದರ ಹಿಂದಿನ ಗುಟ್ಟು ಇದು!

  ವಿರಾಟ ಯಶಸ್ಸಿನ ಹಿಂದಿನ ಹೋರಾಟ; ದೀಪಾ ಹಿರೇಗುತ್ತಿ ಅವರ ಅಂಕಣ

  ಜಗತ್ತಿಗೆ ಅದರಲ್ಲೂ ಯುವಜನತೆಗೆ ಕಾಣುವುದು ವಿರಾಟ್ ಗಳಿಸುವ ಹಣ, ಗ್ಲಾಮರ್ ಲೋಕ, ಜನಪ್ರಿಯತೆ ಮಾತ್ರ. ‘ಅಯ್ಯೋ ಆತ ಅದೃಷ್ಟವಂತ’ ಎಂದು ನಿಡುಸುಯ್ಯುವ ಹುಡುಗರೇ, ನೀವು ಬೆಳಗ್ಗೆ ಏಳುವ ಹೊತ್ತಿಗಾಗಲೇ ವಿರಾಟ್ ಮೂರು ಗಂಟೆಗಳ ತರಬೇತಿ ಮುಗಿಸಿರುತ್ತಾರೆ! ಇದು ವಿರಾಟ್ ವಿಚಾರದಲ್ಲಿ ಮಾತ್ರವಲ್ಲ, ಎಲ್ಲ ಕ್ಷೇತ್ರಗಳ ಎಲ್ಲ ಸಾಧಕರ ಯಶಸ್ಸಿನ ಗುಟ್ಟು. ಇವತ್ತು ನಾವು ನೋಡುತ್ತಿರುವ ಕೊಹ್ಲಿ ರೂಪುಗೊಂಡಿರುವುದರ ಹಿಂದೆ ಇಪ್ಪತ್ತು ವರ್ಷಗಳ ಪರಿಶ್ರಮವಿದೆ. ಯಶಸ್ಸು ಎನ್ನುವುದು ನೀರ್ಗಲ್ಲಿನ ತುದಿ, ಜಗತ್ತಿಗೆ ಗೋಚರಿಸುವುದು ಅದು ಮಾತ್ರ. ಆದರೆ ಅದರ ಹಿಂದಿನ ಅಗಾಧ ಪ್ರಯತ್ನ, ಅಪಾರ ತ್ಯಾಗ ಇವೆಲ್ಲ ನೀರಿನಡಿಯಲ್ಲಿರುವ ಐಸ್​ಬರ್ಗ್​ನ ಶೇಕಡ 90 ಭಾಗ! ಮತ್ತದು ಜಗತ್ತಿಗೆ ಕಾಣುವುದೇ ಇಲ್ಲ!

  ಎಂಟರ ಎಳೆಯ ಪ್ರಾಯದಿಂದಲೇ ಕ್ರಿಕೆಟ್ ಎಂದರೆ ವಿರಾಟ್​ಗೆ ಅಚ್ಚುಮೆಚ್ಚು. ಒಂಬತ್ತು ವರ್ಷ ದೊಡ್ಡವಳಾದ ಅಕ್ಕ, ಏಳು ವರ್ಷ ದೊಡ್ಡವನಾದ ಅಣ್ಣನ ನಂತರ ಮೂರನೆಯವರಾದ ವಿರಾಟ್ ಕ್ರಿಕೆಟ್​ನಲ್ಲಿ ಆಸಕ್ತಿ ತೋರಿದಾಗ ಮನೆಯಲ್ಲಿ ವಿರೋಧವೇನೂ ಉಂಟಾಗಲಿಲ್ಲ. ಬೆಳಗ್ಗೆ ಬೆಳಗ್ಗೆಯೇ ಆಟದ ಮೈದಾನಕ್ಕೆ ಬಂದುಬಿಡುತ್ತಿದ್ದ ಹುಡುಗನನ್ನು ಕೋಚ್ ಒತ್ತಾಯಪೂರ್ವಕವಾಗಿ ರಾತ್ರಿ ಮನೆಗೆ ಕಳುಹಿಸಬೇಕಾಗುತ್ತಿತ್ತು! ತರಬೇತುದಾರರ ಹತ್ತಿರ ಆಟದ ತಂತ್ರಗಳ ಬಗ್ಗೆ ಪ್ರಶ್ನೆ ಕೇಳುತ್ತಲೇ ಇರುತ್ತಿದ್ದ ಬಾಲಕ ವಿರಾಟ್ ಅಷ್ಟರ ಮಟ್ಟಿಗೆ ಕ್ರಿಕೆಟ್​ನಲ್ಲಿ ಮುಳುಗಿ ಹೋಗಿದ್ದ! ಎಷ್ಟೋ ಪ್ರಶ್ನೆಗಳಿಗೆ ಕೋಚ್ ಹತ್ತಿರ ಉತ್ತರವೇ ಇರುತ್ತಿರಲಿಲ್ಲ! ನ್ಯೂಜಿಲ್ಯಾಂಡ್​ನ ಡೇನಿಯಲ್ ವಿಟ್ಟೋರಿ ಹೇಳುವಂತೆ ಇವತ್ತಿಗೂ ವಿರಾಟ್ ಐಪಿಎಲ್​ನ ಹೊಸ ಆಟಗಾರರ ಹತ್ತಿರವೂ ರ್ಚಚಿಸಿ ಕಲಿಯುವ ವಿನಯ ಇಟ್ಟುಕೊಂಡಿದ್ದಾರೆ.

  ವಿರಾಟ್​ರ ಸಾಮರ್ಥ್ಯದ ಮೂಲವಿರುವುದು ಏಕಾಗ್ರತೆಯಲ್ಲಿ. ತಂದೆಯ ನಿಧನದ ನಂತರ ಆಡಿದ ಆಟ ಮತ್ತು ಗಳಿಸಿದ ರನ್​ಗಳು ವಿರಾಟ್​ಗೆ ತಮ್ಮ ಇಚ್ಛಾಶಕ್ತಿಯ ಮೇಲೆ ನಂಬಿಕೆ ಬರುವಂತೆ ಮಾಡಿದವು. ಯಾವ ಸವಾಲನ್ನಾದರೂ ಎದುರಿಸುವ ಈ ಅಭೂತಪೂರ್ವ ಆತ್ಮವಿಶ್ವಾಸವೇ ಅವರನ್ನು ಇತರ ಆಟಗಾರರಿಗಿಂತ ಭಿನ್ನವಾಗಿಸುತ್ತದೆ!

  ಮಾಡುವ ಪ್ರತೀ ಕೆಲಸದಲ್ಲೂ ಶಿಸ್ತು ವಿರಾಟ್ ವಿಶೇಷತೆ! ಒಮ್ಮೆ ಹನ್ನೆರಡು ಕಿಲೋ ತೂಕ ಇಳಿಸಬೇಕಾದಾಗ ಕಠಿಣ ಡಯಟ್ ಅನುಸರಿಸಿದ್ದರು. ರಾತ್ರಿ ಎಷ್ಟು ಹಸಿವಾಗುತ್ತಿತ್ತೆಂದರೆ ಹೊದಿಕೆಯನ್ನೇ ತಿನ್ನಬೇಕು ಎನಿಸುತ್ತಿತ್ತಂತೆ! ಅಂತಹ ಶಿಸ್ತಿನಿಂದಲೇ ಫಿಟ್ ಆಗಿರುವ ಕೊಹ್ಲಿ ಒಳ್ಳೆಯ ಫೀಲ್ಡರ್ ಕೂಡ. ಯಶಸ್ಸು ಪಡೆಯಬೇಕೆಂದರೆ ಶಿಸ್ತಿನಿಂದ ಕೂಡಿದ, ಬೇಸರ ಬರುವಂಥ ಜೀವನಶೈಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಇಡೀ ದಿನ ನಿರಂತರವಾಗಿ ಪ್ರಾಕ್ಟೀಸ್ ಮಾಡುವುದು, ಮರುದಿನ ಅದನ್ನೇ ಪುನರಾವರ್ತಿಸುವುದು, ಎಂಥವರಿಗಾದರೂ ಬೇಸರವೇ! ಅದರ ಬದಲು ಸಿನಿಮಾ ನೋಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗುವುದು, ಸ್ನೇಹಿತರ ಜತೆ ಸುತ್ತುವುದು ಬಹು ಸುಲಭ ಮತ್ತು ಎಲ್ಲರಿಗೂ ಇಷ್ಟ. ಸಾಧಕರಿಗೂ ಇಂಥವು ಇಷ್ಟವೇ. ಆದರೆ ಯಾವುದಕ್ಕೆ ಮಹತ್ವ ಕೊಡುವುದು ಎಂದು ಅವರಿಗೆ ಗೊತ್ತಿರುತ್ತದೆ. ಹಾಗಾಗಿ ಪ್ರಜ್ಞಾಪೂರ್ವಕವಾಗಿ ತರಬೇತಿ, ಡಯೆಟ್, ವ್ಯಾಯಾಮಗಳನ್ನು ಮುಂದುವರಿಸುತ್ತಾರೆ. ದಿನನಿತ್ಯ ಮಾಡಲೇಬೇಕಾದ ಈ ಕೆಲಸಗಳು ಮುಗಿದ ಮೇಲೆಯೇ ಬೇರೆಯದರ ಕಡೆಗೆ ಗಮನ ಹರಿಸುವವರು ಮಾತ್ರವೇ ಯಶಸ್ವೀ ವ್ಯಕ್ತಿಗಳಾಗುತ್ತಾರೆ.

  ‘ಆರಂಭದ ದಿನಗಳಿಂದಲೂ ನನ್ನ ಆಟದ ಬಗ್ಗೆ ಟೀಕೆ ಮಾಡುವವರಿದ್ದರು, ಈಗಲೂ ಇದ್ದಾರೆ, ದ್ವೇಷಿಸುವವರೂ ಇದ್ದಾರೆ. ಆದರೆ ದಿನಕ್ಕೆ ನೂರಿಪ್ಪತ್ತು ಶೇಕಡಾ ಕೆಲಸ ಮಾಡುವ ನಾನು ಯಾರಿಗೂ ಉತ್ತರ ಕೊಡಬೇಕಿಲ’ ಎಂದು ಬಿಸಿಸಿಐನ ವರ್ಷದ ಅಂತಾರಾಷ್ಟ್ರೀಯ ಆಟಗಾರ ಪ್ರಶಸ್ತಿ ಪಡೆದ ಸಮಾರಂಭದಲ್ಲಿ ಹೇಳಿದ್ದು ಅಹಂಕಾರದಿಂದಲ್ಲ, ಪುಟಿವ ಆತ್ಮವಿಶ್ವಾಸದಿಂದ! ದ್ವೇಷಿಸುವವರಿಗೆ ಟೀಕಿಸಲು ಅವಕಾಶ ಕೊಡದ ನಿರಂತರ ಅತ್ಯುತ್ತಮ ಪ್ರದರ್ಶನ ವಿರಾಟ್​ರದ್ದು.

  ಶ್ರಮಪಡಲು ಎಂದಿಗೂ ಅಳುಕದಿರುವುದೇ ಅವರ ಯಶಸ್ಸಿನ ಗುಟ್ಟು. ಹಾಗಾಗಿಯೇ ಹೊಸ ಹೊಸ ಸವಾಲುಗಳು ಅವರನ್ನು ರೋಮಾಂಚಿತಗೊಳಿಸುತ್ತವೆ. ಅದಕ್ಕಾಗಿಯೇ ವಿರಾಟ್ ನಿರಂತರವಾಗಿ ದಾಖಲೆಗಳನ್ನು ನಿರ್ವಿುಸುತ್ತಿದ್ದಾರೆ. ಭಾರತ ತಂಡದ ನಾಯಕನಾಗಿ ಪಂದ್ಯಗಳ ಗೆಲ್ಲುವಿಕೆಯ ದರ ಉತ್ತಮವಾಗಿದೆ. ಆದರೆ ಅವರ ನಾಯಕತ್ವದಲ್ಲಿ ಭಾರತ ದೊಡ್ಡ ಪಂದ್ಯಾವಳಿಗಳನ್ನು ಇನ್ನೂ ಗೆಲ್ಲಬೇಕಿದೆ. ಬೆರಳೆಣಿಕೆಯಷ್ಟು ಜನರು ಮಾತ್ರ ತಲುಪಬಲ್ಲ ಎತ್ತರ ತಲುಪಿದ ಮೇಲೂ ತಮ್ಮ ಭುಜದ ಮೇಲೇ ತಲೆಯನ್ನು ಇಟ್ಟುಕೊಂಡಿರುವ ವಿರಾಟ್ ಕೊಹ್ಲಿಗೆ ಶುಭವಾಗಲಿ. ಕ್ರಿಕೆಟ್​ನ ಮತ್ತಷ್ಟು ರೋಮಾಂಚಕ ಕ್ಷಣಗಳು ಅವರಿಂದ ಲಭಿಸುವಂತಾಗಲಿ.

  (ಲೇಖಕರು ಉಪನ್ಯಾಸಕರು, ಕವಯಿತ್ರಿ)

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts