More

    ಸನ್ನಿಡೇಸ್​ಗೆ ಸುವರ್ಣ ಸಂಭ್ರಮದ ಹೊತ್ತು

    ಸನ್ನಿಡೇಸ್​ಗೆ ಸುವರ್ಣ ಸಂಭ್ರಮದ ಹೊತ್ತು1971 ಫೆಬ್ರವರಿ 3ರಂದು ಭಾರತ ಕ್ರಿಕೆಟ್ ತಂಡ ವೆಸ್ಟ್​ಇಂಡೀಸಿನಲ್ಲಿ ಬಂದಿಳಿದಾಗ ನಿಗದಿತ ವೇಳಾಪಟ್ಟಿಗಿಂತ ಒಂದು ದಿನ ತಡವಾಗಿದ್ದಕ್ಕೆ ಹಿಂದಿನ ದಿನ ನ್ಯೂಯಾರ್ಕ್​ನಲ್ಲಿ ವಿಮಾನವನ್ನು ತಪ್ಪಿಸಿಕೊಂಡಿದ್ದೇ ಕಾರಣವಾಗಿತ್ತು. ಅಷ್ಟಕ್ಕೂ 1932ರಲ್ಲಿ ಟೆಸ್ಟ್ ಕ್ರಿಕೆಟಿಗೆ ಪದಾರ್ಪಣೆಗೊಂಡ ಬಳಿಕ ಭಾರತ ಆಡಿದ 116 ಟೆಸ್ಟ್ ಪಂದ್ಯಗಳಲ್ಲಿ ಹದಿನೈದರಲ್ಲಷ್ಟೇ ಗೆಲುವು ಸಾಧಿಸಿತ್ತು. ಹಿಂದಿನ ಬಾರಿ ವಿಂಡೀಸಿಗೆ ಬಂದು 0-5ರ ಹೀನಾಯ ಸೋಲನುಭವಿಸಿತ್ತು. ಗ್ಯಾರಿ ಸೋಬರ್ಸ್, ರೋಹನ್ ಕನ್ಹಾಯ್ ಮತ್ತು ಕ್ಲೈವ್ ಲಾಯ್್ಡಂಥ ಘಟಾನುಘಟಿಗಳನ್ನು ಹೊಂದಿದ್ದ ವಿಂಡಿಸ್ ಜೊತೆ ಭಾರತ ತಂಡವನ್ನು ಹೋಲಿಸಲು ಕ್ರಿಕೆಟ್ ಪಂಡಿತರು ತಯಾರಿರಲಿಲ್ಲ.

    ಕಿಂಗ್​ಸ್ಟನ್​ನಲ್ಲಿ ಸರಣಿಯ ಪ್ರಥಮ ಟೆಸ್ಟ್ ಆರಂಭ. ಮೊದಲು ಬ್ಯಾಟಿಂಗ್​ಗೆ ಇಳಿದ ಅಜಿತ್ ವಾಡೇಕರ್ ನೇತೃತ್ವದ ಭಾರತ ತಂಡ ವಿಂಡಿಸ್ ದಾಳಿಗೆ ತತ್ತರಿಸಿ 75 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್​ಗಳ ಪತನ ಕಂಡಿತು. ಆಗ ಒಂದಾದ ದಿಲೀಪ್ ಸರದೇಸಾಯಿ ಮತ್ತು ಏಕನಾಥ ಸೋಳ್ಕರ್ ಭರ್ಜರಿ ಬ್ಯಾಟಿಂಗ್ ನಂತರ ಪ್ರಸನ್ನರ ನೇತೃತ್ವದಲ್ಲಿ ತಿರುಗಿಬಿದ್ದ ಭಾರತೀಯ ಬೌಲರ್​ಗಳು ವಿಂಡಿಸ್ ದೈತ್ಯರನ್ನು ನಿಯಂತ್ರಿಸಿ ಫಾಲೋಆನ್ ಹೇರಿದ್ದರು. ಸೋಲಿನಿಂದ ತಪ್ಪಿಸಿಕೊಂಡ ವಿಂಡೀಸ್​ಗೆ ಅಂದು ಭಾರತದ ಯುವಪಡೆಯ ಝುಲಕ್ ಸಿಕ್ಕಿತ್ತು.

    ಭಾರತೀಯ ಆಟಗಾರರು ಪೋರ್ಟ್ ಆಫ್ ಸ್ಪೇನ್​ನ ಎರಡನೇ ಪಂದ್ಯದಲ್ಲೂ ಅದೇ ಕಿಚ್ಚನ್ನು ಮುಂದುವರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸನ್ನು ಪ್ರಸನ್ನ ಮತ್ತು ಬೇಡಿ 214ಕ್ಕೆ ಕಟ್ಟಿಹಾಕಿದ ನಂತರ ಭಾರತದ ಇನಿಂಗ್ಸ್ ಆರಂಭಿಸಲು ಅಶೋಕ ಮಂಕಡ್ ಜೊತೆ 21 ವರ್ಷದ ಯುವಕನೊಬ್ಬ ಕಣಕ್ಕಿಳಿದ. ತನ್ನ ಪ್ರಥಮ ಟೆಸ್ಟ್ ಆಡುತ್ತಿದ್ದ ಆತ ವಿಂಡಿಸ್ ವೇಗಿಗಳನ್ನೆದುರಿಸುತ್ತಿದ್ದ ಪರಿ ಆತನ ಪ್ರತಿಭೆಯ ಸುಳಿವನ್ನು ನೀಡುತ್ತಿತ್ತು. ಆ ಅಡಿಪಾಯದ ಮೇಲೆ ಉತ್ತಮ ಮೊತ್ತ ಪೇರಿಸಿದ ಭಾರತೀಯ ತಂಡ 352 ರನ್ ಗಳಿಸಿತು. ಎರಡನೇ ಇನಿಂಗ್ಸ್​ನಲ್ಲಿ ವಿಂಡಿಸ್ 261 ರನ್​ಗಳಿಗೆ ಆಲೌಟಾಯಿತು. 124 ರನ್​ಗಳ ಗುರಿ ಪಡೆದು ವಿಂಡಿಸ್ ವಿರುದ್ಧದ ಪ್ರಥಮ ಗೆಲುವನ್ನು ದಾಖಲಿಸಲು ಹವಣಿಸುತ್ತಿದ್ದ ಭಾರತದ ಆಟಗಾರರನ್ನು ವಿಂಡೀಸರ ಉರಿಚೆಂಡುಗಳು ಸ್ವಾಗತಿಸಿದವು. ತಂಡದ ಮೊತ್ತ ಹತ್ತಾಗುವಷ್ಟರಲ್ಲಿ ಮೂರು ಪ್ರಮುಖ ವಿಕೆಟ್​ಗಳು ಉರುಳಿದವು. ಆಗ ತಂಡದ ಕೈಹಿಡಿದಿದ್ದು ಮತ್ತದೇ ಮುಂಬೈನ ಪೋರ. ಸೋಲಿನ ದವಡೆಯಿಂದ ಪಾರುಮಾಡಿ, ಗೆಲುವಿನ ದಡಮುಟ್ಟಿಸಿ ದೇಶದ ಕ್ರಿಕೆಟ್ ಇತಿಹಾಸದಲ್ಲೇ ವಿಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಜಯದ ರೂವಾರಿಯಾದ ಆ ಯುವಕನೇ ಸುನೀಲ್ ಮನೋಹರ್ ಗಾವಸ್ಕರ್.

    ಜಾರ್ಜ್​ಟೌನ್​ನಲ್ಲಿ ಆರಂಭವಾದ ಮೂರನೇ ಟೆಸ್ಟಿನಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 363 ರನ್ ಗಳಿಸಿತು. ಹಿಂದಿನ ಪಂದ್ಯದ ಕಣ್ಮಣಿ ಗಾವಸ್ಕರ್ ತಮ್ಮ ಟೆಸ್ಟ್ ಜೀವನದ ಪ್ರಥಮ ಶತಕ ದಾಖಲಿಸಿದರು. ಅವರಿಗೆ ಸಮರ್ಥ ಸಾಥ್ ನೀಡಿ ಮೊತ್ತವನ್ನು 376ಕ್ಕೆ ತಲುಪಿಸಿದ್ದು ಗುಂಡಪ್ಪ ವಿಶ್ವನಾಥ್. ಡ್ರಾದಲ್ಲಿ ಕೊನೆಗೊಂಡ ಈ ಪಂದ್ಯದ ಎರಡನೇ ಇನಿಂಗ್ಸ್​ನಲ್ಲಿ ಗಾವಸ್ಕರ್ ಅರ್ಧಶತಕ ದಾಖಲಿಸಿದರು.

    ಸರಣಿ ಗೆಲ್ಲಲು ಉಳಿದೆರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಸಿಲುಕಿದ ವಿಂಡೀಸರು ನಾಲ್ಕನೇ ಪಂದ್ಯದಲ್ಲಿ ಭರ್ಜರಿ ಆರಂಭವನ್ನೇ ಪಡೆದು 501 ರನ್​ಗಳಿಗೆ ಡಿಕ್ಲೇರ್ ಮಾಡಿಕೊಂಡರು. ಭಾರತ ವಿಂಡೀಸ್​ನ ಕರಾರುವಾಕ್ಕಾದ ದಾಳಿಗೆ ನಲುಗಿ 70 ರನ್ ಆಗುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡಿತು. ಆಗ ದಿಲೀಪ್ ಸರದೇಸಾಯಿ ಮತ್ತು ಏಕನಾಥ ಸೋಳ್ಕರ್ ತಂಡವನ್ನು ಅಪಾಯದಿಂದ ಮೇಲೆತ್ತಿದರು. ಎರಡನೇ ಇನಿಂಗ್ಸ್​ನಲ್ಲಿ 180 ರನ್​ಗೆ ಡಿಕ್ಲೇರ್ ಮಾಡಿ ಭಾರತಕ್ಕೆ 334 ರನ್​ಗಳ ಗುರಿ ನೀಡಿದ ವಿಂಡೀಸ್ ಆರಂಭದಲ್ಲೇ ವಿಕೆಟ್ ಕಬಳಿಸಿ ಮೇಲುಗೈ ಸಾಧಿಸಿದರೂ, ಅವರ ಗೆಲುವಿನ ಕನಸಿಗೆ ಸುನೀಲ್ ಗಾವಸ್ಕರ್ ಮತ್ತೊಂದು ಶತಕ ದಾಖಲಿಸಿ ಅಡ್ಡಿಯಾದರು.

    ಪೋರ್ಟ್ ಆಫ್ ಸ್ಪೇನ್​ನಲ್ಲಿ ಕೊನೆಯ ಪಂದ್ಯ. ಆರಂಭಿಕರನ್ನು ಬೆಂಕಿಚೆಂಡುಗಳಿಂದ ಸ್ವಾಗತಿಸಿ ವಿಂಡೀಸ್ ವೇಗಿಗಳು ಮೊದಲಾರ್ಧದಲ್ಲೇ ಮೂರು ಮುಖ್ಯ ವಿಕೆಟ್ ತೆಗೆದು ಮೇಲುಗೈ ಸಾಧಿಸಿದರು. ಆದರೆ ಪಂದ್ಯದ ಮೊದಲ ದಿನವೇ ಶತಕ ಸಿಡಿಸಿದ ಗಾವಸ್ಕರ್ 124 ರನ್​ಗಳ ಕಾಣಿಕೆಯಿಂದ ತಂಡದ ಮೊತ್ತವನ್ನು 360ಕ್ಕೆ ತಲುಪಿಸಿದರು. ಪ್ರತಿಯಾಗಿ ವಿಂಡೀಸ್ ತಂಡ 526 ಸ್ಕೋರ್ ದಾಖಲಿಸಿತು. 166 ರನ್ ಖೋತಾದೊಡನೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡದ ಮುಂದಿದ್ದುದು ಎರಡೂವರೆ ದಿನದಾಟ. ತಂಡದ ಮೊತ್ತ ಹನ್ನೊಂದಾದಾಗ ಮೊದಲ ವಿಕೆಟ್ ಪತನ. ನಾಲ್ಕನೇ ದಿನಪೂರ್ತಿ ವಿಕೆಟ್ ನಡುವೆ ನಿಂತು ಮತ್ತೊಂದು ಶತಕದೊಡನೆ ಅಜೇಯನಾಗಿದ್ದು, ಭಾರತವನ್ನು ಸೋಲಿನ ಸುಳಿಯಿಂದ ಪಾರುಮಾಡಲು ಗಾವಸ್ಕರ್ ನಡೆಸುತ್ತಿದ್ದ ಹೋರಾಟದ ಬಗ್ಗೆ ಗೊತ್ತಾಗಿದ್ದೇ ತಡ ಬಂದ್ ಆಗಿದ್ದ ರೇಡಿಯೋಗಳೆಲ್ಲ ಮತ್ತೆ ಮೊಳಗತೊಡಗಿದವು.

    ಅಂದು 1971 ಏಪ್ರಿಲ್ 19. ಟೆಸ್ಟಿನ ಐದನೇ ದಿನ. ಹಿಂದಿನ ದಿನ ತಂಡದ ಮೊತ್ತವನ್ನು 324ಕ್ಕೆ ತಲುಪಿಸಿದ ಸುನೀಲ್ 180ರ ವೈಯಕ್ತಿಕ ಮೊತ್ತದಲ್ಲಿ ಆಟವನ್ನು ಮುಂದುವರಿಸಿದರು. ಕ್ರೀಸಿನಲ್ಲಿ ಆಗ ಜೊತೆಯಾಗಿದ್ದ ಎಂ.ಎಲ್.ಜೈಸಿಂಹಗೆ ಅದು ಕೊನೆಯ ಟೆಸ್ಟ್. ಸರಣಿ ಜಯಕ್ಕಿಂತ ಉತ್ತಮ ಬೀಳ್ಕೊಡುಗೆ ಇರಲಾರದೆಂಬ ವಿಷಯ ಗಾವಸ್ಕರ್ ತಲೆಯಲ್ಲಿ ಓಡುತ್ತಿತ್ತು. ಇಂಥ ಸನ್ನಿವೇಶದಲ್ಲಿ ನಿಧಾನವಾಗಿ ಒಂದೊಂದೇ ರನ್ ಮಾಡುತ್ತ, ಕವರ್ ಡ್ರೖೆವ್ ಹೊಡೆದು ಚೆಂಡನ್ನು ಬೌಂಡರಿ ಲೈನ್ ದಾಟಿಸಿದ್ದೇ ತಡ ಮೈದಾನದ ಗ್ಯಾಲರಿಯಲ್ಲಿ ಹಾರತುರಾಯಿ ಹಿಡಿದುಕೊಂಡು ಕಾಯುತ್ತಿದ್ದ ಭಾರತೀಯ ಪ್ರೇಕ್ಷಕರೆಲ್ಲ ಕ್ಷಣಮಾತ್ರದಲ್ಲಿ ಪಿಚ್ ಮೇಲೆ ನೆರೆದಿದ್ದರು. ಆ ಕ್ಷಣದಲ್ಲಿ ಇತಿಹಾಸ ಸೃಷ್ಟಿಯಾಗಿತ್ತು. ಸುನೀಲ್ ಆವತ್ತು ಒಂದೇ ಟೆಸ್ಟ್​ನಲ್ಲಿ ಶತಕ ಮತ್ತು ದ್ವಿಶತಕ ಬಾರಿಸಿದ ವಿಶ್ವದ ಎರಡನೇ ಬ್ಯಾಟ್ಸ್​ಮನ್ ಎಂಬ ಖ್ಯಾತಿಗೆ ಭಾಜನರಾದರು. ಅಲ್ಲಿಂದ ಇನಿಂಗ್ಸ್ ಮುಂದುವರಿಸಿ 220 ರನ್ ಗಳಿಸಿ ಔಟಾದಾಗ ತಂಡದ ಮೊತ್ತ 427 ರನ್. ಉಳಿದ ಅರ್ಧದಿನದಾಟದಲ್ಲಿ ಗೆಲ್ಲಲು 261 ರನ್ ಗಳಿಸುವ ಗುರಿಯಿಂದ ಮತ್ತೆ ಬ್ಯಾಟಿಂಗಿಗೆ ಇಳಿದ ವಿಂಡೀಸ್ ತಂಡಕ್ಕೆ ಎದುರಾಗಿದ್ದು ಗಾವಸ್ಕರರಿಂದ ಸ್ಪೂರ್ತಿಗೊಂಡ ಭಾರತೀಯ ಬೌಲರಗಳು. ಅರ್ಧದಿನದಲ್ಲೇ ಎಂಟು ವಿಕೆಟ್ ಕಿತ್ತು, ಪಂದ್ಯ ಡ್ರಾ ಆದಾಗ ಭಾರತೀಯ ಕ್ರಿಕೆಟ್ ಪಾಲಿಗೆ ಅವಿಸ್ಮರಣೀಯ ಕ್ಷಣ.

    1971ರ ವಿಂಡೀಸ್ ಸರಣಿ ‘ಗಾವಸ್ಕರ್ ಸರಣಿ’ಯೆಂದೇ ಖ್ಯಾತಿ ಪಡೆಯಿತು. ಇದೇ ಜೋಶನ್ನು ಮುಂದುವರಿಸಿದ ತಂಡ ಅದೇ ವರ್ಷ ಇಂಗ್ಲೆಂಡ್​ಗೆ ಭೇಟಿ ನೀಡಿ ಸರಣಿ ವಶಪಡಿಸಿಕೊಂಡಿತು. ಗಾವಸ್ಕರ್ ಆ ಸರಣಿಯಲ್ಲಿ ಪೇರಿಸಿದ 774 ರನ್​ಗಳು ಸರಣಿಯಲ್ಲಿ ಭಾರತೀಯ ದಾಂಡಿಗನೊಬ್ಬ ಕಲೆಹಾಕಿದ್ದ ಅತಿದೊಡ್ಡ ಮೊತ್ತವೆಂಬ ದಾಖಲೆ ನಿರ್ವಿುಸಿದ್ದು ಇಂದಿಗೂ ಹಾಗೆಯೇ ಉಳಿದುಕೊಂಡಿದೆ. ಗಾವಸ್ಕರ್ ಸಾಹಸ ಹಾಗೂ ಅಜಿತ್ ವಾಡೇಕರ್ ನಾಯಕತ್ವದಲ್ಲಿ ಭಾರತ ಸಾಧಿಸಿದ್ದ ಆ ಐತಿಹಾಸಿಕ ಸರಣಿ ಜಯದ ಅಮೃತ ಕ್ಷಣಕ್ಕೆ ಇಂದು (ಏ.19) ಸುವರ್ಣಸಂಭ್ರಮ.

    ಸುನೀಲ್ ಗಾವಸ್ಕರ್ ಎಂಬ ಶಕ್ತಿ: ಸುನೀಲ್ ಹುಟ್ಟಿದ ದಿನದಂದು ಆ ಆಸ್ಪತ್ರೆಯಲ್ಲಿ ಮತ್ತೊಂದು ಮಗುವಿನ ಜನನವಾಗಿತ್ತು. ನವಜಾತ ಶಿಶುವನ್ನು ವಾರ್ಡನಲ್ಲಿ ತಂದಿಡುವಾಗ ದಾದಿಯರ ಕಣ್ತಪ್ಪಿನಿಂದ ಶಿಶುಗಳು ಅದಲುಬದಲಾಗಿ ಸುನೀಲ್ ಅವರನ್ನು ಮೀನುಗಾರರ ಕುಟುಂಬದ ಮಗುವಿನ ತಾಯಿ ಬಳಿ ಇಡಲಾಯಿತು. ಮಗು ಹುಟ್ಟಿದ ತಕ್ಷಣ ಅದನ್ನು ಕೈಗೆತ್ತಿಕೊಂಡು ಅದರ ಕಿವಿ ಕೆಳಗಿದ್ದ ಮಚ್ಚೆ ಗಮನಿಸಿದ ಸುನೀಲ್ ಮಾವ, ಮಾಜಿ ಕ್ರಿಕೆಟಿಗ ಮಾಧವ ಮಂತ್ರಿ ವೈದ್ಯರ ಗಮನಕ್ಕೆ ತಂದರು. ಆವತ್ತು ಮಾಧವ್ ಅಲ್ಲಿರದಿದ್ದರೆ ಪ್ರಾಯಶಃ ಸುನೀಲ್ ಅರಬ್ಬಿ ಸಮುದ್ರದಲ್ಲಿ ಮೀನುಹಿಡಿಯುವ ದಾಖಲೆ ಮಾಡುತ್ತಿದ್ದರೇನೋ ಎಂದು ಅವರ ಮಿತ್ರರು ಛೇಡಿಸುತ್ತಿದ್ದರೆಂದು ಸುನೀಲ್ ಆತ್ಮಚರಿತ್ರೆ ‘ಸನ್ನಿ ಡೇಸ್’ನಲ್ಲಿ ಬರೆದುಕೊಂಡಿದ್ದಾರೆ. ವಿಂಡೀಸ್ ಸರಣಿಯ ಕೊನೆಯ ಟೆಸ್ಟ್ ಆಡುವಾಗ ಗಾವಸ್ಕರ್​ಗೆ ವಿಪರೀತ ಹಲ್ಲುನೋವು. ಎರಡೂ ಶತಕಗಳನ್ನು ಹಲ್ಲುನೋವಿನ ಜೊತೆಯಲ್ಲೇ ದಾಖಲಿಸಿದರು ಸುನೀಲ್.

    ಈ ಸರಣಿಯ ಕೊನೆಯ ಟೆಸ್ಟ್ ಸಂದರ್ಭದಲ್ಲಿ ತಂಡದ ಸದಸ್ಯ ಬಿಷನ್ ಬೇಡಿಯವರ ಮೊದಲ ಪುತ್ರನ ಜನನವಾಯಿತು. ಸುನೀಲ್ ಆಟಕ್ಕೆ ಫಿದಾ ಆದ ಬಿಷನ್ ಪುತ್ರನಿಗೆ ‘ಗವಾಸಿಂದರ್ ಸಿಂಗ್’ ಎಂದು ಹೆಸರಿಟ್ಟರು.

    (ಲೇಖಕರು ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts