More

    ಮರೆತುಹೋದ ಮಾತಿನ ಘನತೆ ಮತ್ತು ನಾಲಿಗೆಗಳ ಪ್ರಹಾರ…

    ಮರೆತುಹೋದ ಮಾತಿನ ಘನತೆ ಮತ್ತು ನಾಲಿಗೆಗಳ ಪ್ರಹಾರ...‘ಮನುಷ್ಯನ ದೇಹದ ಅಪಾಯಕಾರಿ ಅಂಗವೆಂದರೆ ನಾಲಿಗೆ’ ಎಂಬುದನ್ನು ನಮ್ಮ ಋಷಿಮುನಿಗಳು, ದಾಸವರೇಣ್ಯರು ಎಂದೋ ನಿರ್ಧರಿಸಿ ಆ ಕುರಿತ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಲೇ ಬಂದಿದ್ದಾರೆ. ಇವರೆಲ್ಲರ ವಿಚಾರಧಾರೆಯನ್ನು ಅರಗಿಸಿಕೊಂಡವ ಸರ್ವಜ್ಞ. ಸರ್ವರೊಳೊಂದೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆದರೂ ವಿನಯ, ವಿವೇಕವನ್ನು ಕಳೆದುಕೊಳ್ಳದೆ ಚಾಟಿಯೇಟಿನಂಥ ತನ್ನ ಚುರುಕು ನುಡಿಗಳಿಂದ ಕನ್ನಡಿಗರನ್ನು ಎಚ್ಚರಿಸುತ್ತಲೇ ಬಂದಿದ್ದಾನೆ.

    ನಮ್ಮ ನಾಲಿಗೆಯ ವೈಶಿಷ್ಟ್ಯವನ್ನು, ಒಳಿತು, ಕೆಡುಕು ಮಾಡುವ ಅದರ ಸಾಮರ್ಥ್ಯವನ್ನು ಸರ್ವಜ್ಞನಷ್ಟು ಸರಿಯಾಗಿ ಹೇಳಿದವರು ಬೇರಿಲ್ಲ. ದಾಸರು ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ಧಿಯ ಬಿಡು ನಾಲಿಗೆ’ ಎಂದು ಕೇಳಿಕೊಂಡಿದ್ದಾರಾದರೂ, ಗೊತ್ತಿದ್ದೂ ಗೊತ್ತಿದ್ದೂ ಕಂಡಿದ್ದೆಲ್ಲವನ್ನು ಉಲಿದುಬಿಡುವ ಅಪಾಯಕಾರಿ ಗುಣಗಳುಳ್ಳ ನಾಲಿಗೆಯನ್ನು ಸರ್ವಜ್ಞನಷ್ಟು ನಿಖರವಾಗಿ ಗುರುತಿಸಿ ಖಡಕ್ ಮಾತುಗಳಿಂದ ಟೀಕಿಸಿದವರು ತುಂಬ ವಿರಳ.

    ನಾನು ಕಾಲೇಜಿನಲ್ಲಿ ಓದುತ್ತಿರುವಾಗ ನನಗೆ ದೊರಕಿದ ಪ್ರಾಧ್ಯಾಪಕರೆಲ್ಲರೂ ಸಜ್ಜನರು, ವಾತ್ಸಲ್ಯಮಯಿಗಳು. ಬುದ್ಧಿವಂತ ಮತ್ತು ದಡ್ಡ ವಿದ್ಯಾರ್ಥಿಗಳೆಂದು ವಿಭಜನೆ ಮಾಡದೆ, ಬುದ್ಧಿವಂತರನ್ನು ಹಾಡಿಹೊಗಳದೆ ಎಲ್ಲರಿಗೂ ಪ್ರೋತ್ಸಾಹದ ಮಾತುಗಳನ್ನು ಆಡುತ್ತಿದ್ದರು. ದಡ್ಡರನ್ನು ಎಂದೂ ಅವಮಾನಿಸಿದವರಲ್ಲ. ಇಂಥ ವಾತಾವರಣದಲ್ಲಿ ಕಲಿಯುತ್ತಿದ್ದ ನನಗೆ ಸಹಪಾಠಿಗಳೊಂದಿಗೆ ಒಮ್ಮೆ ಯಕ್ಷಗಾನಕ್ಕೆ ಹೋಗಿದ್ದಾಗ ಒಂದು ವಿಚಿತ್ರ, ಸಂಕಟಕರ ಅನುಭವವಾಯಿತು.

    ಅಂದು ನಮ್ಮ ಜೊತೆಗೆ ನಮ್ಮ ನೆಚ್ಚಿನ ಕನ್ನಡ ಪ್ರೊಫೆಸರ್ ಸಹ ಕೂತಿದ್ದರು. ಹೆಸರು ಮಾಡಿದ ಜನಪ್ರಿಯ ಕಲಾವಿದರೊಬ್ಬರು ಮುಖ್ಯ ಪಾತ್ರದಲ್ಲಿ ವಿಜೃಂಭಿಸತೊಡಗಿದರು. ಅವರ ಪ್ರತಿ ಕುಣಿತಕ್ಕೆ, ಮಾತಿಗೆ ಸೀಟಿ, ಚಪ್ಪಾಳೆಗಳು ಬೀಳತೊಡಗಿದಾಗ ಒಮ್ಮೆಲೇ ಅವರಿಗೆ ಅಹಂಕಾರದ ಪಿತ್ತ ನೆತ್ತಿಗೇರತೊಡಗಿತು. ಅವರ ‘ಎಲುಬಿಲ್ಲದ ನಾಲಿಗೆ’ ತನ್ನೆದುರು ಎರಡನೇ ದರ್ಜೆಯ ಪಾತ್ರವನ್ನು ವಹಿಸಿ ವಿನಯದಿಂದ ನಿಂತಿದ್ದ ಕಿರಿಯ ಹಾಗೂ ಹೊಸಬನಾದ ನಮ್ಮೂರ ಕಲಾವಿದನ ಮೇಲೆ ಎಗ್ಗಿಲ್ಲದೆ ಮಾತನಾಡತೊಡಗಿ ಅವಮಾನ ಮಾಡತೊಡಗಿತು. ‘ಎಂಥದೋ ಮಾಣಿ ಯಾರ್ಯಾರೆಲ್ಲ ಎಂಥೆಂಥ ವೇಷ ಕಟ್ಟಿಕೊಂಡು ರಂಗ ಏರುವಂತಾಗಿದೆ ಮಾರಾಯಾ. ನಿನ್ನಂಥವರು ಸಹ ನನ್ನಂಥವರ ಎದುರು ನಿಲ್ಲತೊಡಗಿದ್ದಾರೆ’ ಎಂಬಿತ್ಯಾದಿ ಭರ್ತ್ಸೆಯ ಮಾತುಗಳು. ಪಾಪ ಆ ಕಿರಿಯ ಕಲಾವಿದನ ಮುಖ ಅವಮಾನದಿಂದ ಕಪ್ಪಿಟ್ಟಿತು. ಆದರೂ ಕರ್ತವ್ಯಪ್ರಜ್ಞೆಯಿಂದ ತನ್ನ ಪಾಲಿನ ಕುಣಿತ, ಮಾತುಗಳನ್ನು ಮುಗಿಸಿಯೇ ವೇಷ ಕಳಚಿದ್ದ. ಬಹುಶಃ ಅವನಲ್ಲಿ ಇನ್ನು ಯಕ್ಷಗಾನದ ವೇಷ ಮಾಡುವ ಉತ್ಸಾಹವೇ ಬತ್ತಿಹೋದಂತಿತ್ತು. ಅಷ್ಟರಲ್ಲಿ ನಮ್ಮ ಪ್ರಾಧ್ಯಾಪಕರು ಅವರ ಶಿಷ್ಯರಾದ ನಮ್ಮೆಲ್ಲರನ್ನು ಕರೆದುಕೊಂಡು ಚೌಕಿಯ ಒಳಗೆ ಹೋದರು. ಸೀದಾ ಆ ಅವಮಾನಿತ ಕಲಾವಿದನ ಬಳಿ ಹೋಗಿ ಆತನ ಭುಜ ಹಿಡಿದು- ‘ತಮ್ಮಾ ಇಂಥ ಅಹಂಕಾರಿಗಳನ್ನು ನೋಡಿಯೇ, ‘ಎಲುಬಿಲ್ಲ ನಾಲಿಗೆಗೆ ಬಲವಿಲ್ಲ ಬಡವರಿಗೆ’ ಎಂದು ಸರ್ವಜ್ಞ ಹೇಳಿದ್ದು. ನೀನು ಇನ್ನೂ ಹೊಸಬ. ಕಲಿಯುವುದು ತುಂಬ ಇದೆ. ಇವತ್ತಿನ ಘಟನೆಯನ್ನು ಯಾವುದೇ ಕಾರಣಕ್ಕೂ ಅವಮಾನ ಎಂದು ಭಾವಿಸದೆ ಸಾಧನೆಗೆ ಒಂದು ಪಾಠ ಎಂದು ಭಾವಿಸಿ ಕಲಿಯುತ್ತ ಹೋಗು. ಎಲ್ಲ ಕಲಾವಿದರೂ ಹೀಗೆ ಅಸೂಕ್ಷ್ಮ ಬುದ್ಧಿಯವರೇ ಆಗಿರುವುದಿಲ್ಲ. ಇಂತಿಂಥವರ ಬಳಿ ಹೋಗಿ ಕಲಿತುಕೋ’ ಎಂದು ಸಜ್ಜನ ಕಲಾವಿದರ ಒಂದು ಪಟ್ಟಿಯನ್ನೇ ಕೊಟ್ಟರು. ಆತನಿಗೆ ಅನಿರೀಕ್ಷಿತವಾಗಿ ತನ್ನನ್ನು ಮೈದಡವಿ ಮಾತನಾಡಿಸಿ ಧೈರ್ಯ ಹೇಳಿದ ಪ್ರಾಧ್ಯಾಪಕರನ್ನು ನೋಡಿ ಎಂತಹ ಸಮಾಧಾನ ದೊರಕಿತೆಂದರೆ ಅವನೀಗ ಯಕ್ಷಗಾನದಲ್ಲಿ ಯಶಸ್ವಿ ಕಲಾವಿದನಾಗಿ ಹೊರಹೊಮ್ಮಿದ್ದಾನೆ. ವ್ಯಕ್ತಿತ್ವದಲ್ಲಿ ವಿನಯವನ್ನು ತುಂಬಿಕೊಂಡಿದ್ದಾನೆ.

    ಅಂದಿನ ಆ ಘಟನೆ ನನ್ನ ಅಂತರಂಗದಲ್ಲಿ ಇಳಿದು ಭದ್ರವಾಗಿ ಕುಳಿತ ಪರಿಣಾಮ ನಾನು ಪ್ರಾಧ್ಯಾಪಕಿಯಾದ ಬಳಿಕ ನನ್ನ ವಿದ್ಯಾರ್ಥಿಗಳನ್ನು ಎಂದೂ ಕ್ಲಾಸಿನಲ್ಲಿ ಎಲ್ಲರೆದುರು ನಿಲ್ಲಿಸಿ ಅವಮಾನಿಸುವ ತಪು್ಪ ಮಾಡಲು ಬಿಟ್ಟಿಲ್ಲ. ವಿದ್ಯಾರ್ಥಿಯೊಬ್ಬ ತಪ್ಪು ಮಾಡಿದ್ದಾನೆಂಬುದು ತಿಳಿದರೆ ಅವನೊಬ್ಬನನ್ನೇ ನನ್ನ ಚೇಂಬರಿಗೆ ಕರೆದು ಬುದ್ಧಿ ಹೇಳಿದ್ದಿದೆ.

    ‘ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು’ ಎಂಬ ಗಾದೆಯನ್ನು ತಮ್ಮ ಮಾತುಗಾರಿಕೆಯಲ್ಲಿ ಅಳವಡಿಸಿಕೊಂಡವರು ಕಾಣಸಿಗುವುದು ಅತಿ ಕಡಿಮೆ. ಅವರು ಯಾರೇ ಆದರೂ ಸರಿ, ಸಾಹಿತಿಗಳಿರಲಿ, ಕಲಾವಿದರಿರಲಿ, ಭಾಷಣಕಾರರಿರಲಿ, ರಾಜಕಾರಣಿಗಳಾಗಿರಲಿ ನಾಲಿಗೆಯ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡುವವರನ್ನು ಕಂಡರೆ ನನಗೆ ಎಲ್ಲಿಲ್ಲದ ಗೌರವ. ಅದಿಲ್ಲದೆ ಬಾಯಿಗೆ ಬಂದಂತೆ ಮಾತನಾಡುವ, ನಾಲಿಗೆಯ ಮೇಲೆ ತಮಗೇ ಹತೋಟಿಯಿಲ್ಲದ ದುರಹಂಕಾರಿಗಳಿಂದ ಸಾಕಷ್ಟು ದೂರ ಇದ್ದು, ದೂರದಿಂದಲೇ ‘ನಮಸ್ಕಾರ’ ಎನ್ನುವುದು ಒಳ್ಳೆಯದು. ಆದರೆ ಇಂಥವರಿಗೂ ಕಾಲ ಬರುತ್ತದೆ ಎಂಬುದನ್ನು ಊಹಿಸಲಾರದ ಬದಲಾವಣೆಗಳಿಂದ ನಾವು ಕಾಣುತ್ತಿದ್ದೇವೆ.

    ದೃಶ್ಯಮಾಧ್ಯಮಗಳು ಬಂದ ಬಳಿಕ ಮಾತಾಡುವವರು ಜಾಸ್ತಿಯಾಗಿದ್ದಾರೆ. ‘ಮಾತೇ ಬಂಡವಾಳ’ ಎಂದುಕೊಂಡಿರುವ ‘ಬಡಾಯಿಶಾಹಿ’ಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇತ್ತೀಚಿನ ಬೆಳವಣಿಗೆಯಾದ ಕ್ಲಬ್ ಹೌಸ್ (ಇದನ್ನು ಅಣಕು ಕವಿಯೋರ್ವರು ‘ಗಬ್​ಹೌಸ್’ ಎಂದು ಕರೆದಿದ್ದಾರೆ. ಅದರೊಳಗಿನ ಅಗೋಚರ ವ್ಯಕ್ತಿಗಳು ಆಡುವ ಆಭಾಸದ ಮಾತುಗಳು, ರಭಸದ ಕಿರುಚಾಟಗಳು ಇವುಗಳನ್ನು ಕೇಳಿದಾಗ ಹೀಗೇಕೆ ಕರೆದರು ಎಂಬುದು ಅರ್ಥವಾಗುತ್ತದೆ. ) ಎಂಬ ಮಾತಿನ ಮನೆ ಗಾಬರಿ ಆಗುವಷ್ಟು ತರದ ಆಯಾಮಗಳಲ್ಲಿ ಬೆಳೆಯುತ್ತ ಹೊರಟಿದೆ. ಕನ್ನಡಿಗರಲ್ಲಿ ಯುವಜನತೆಗೆ ದಾರಿದೀಪವಾಗಬಲ್ಲ ಹೃದಯವಂತ ಪ್ರತಿಭಾವಂತರಿಗೆ ಕೊರತೆಯಿಲ್ಲ. ಶತಾವಧಾನಿ ಗಣೇಶ್, ಪಂಡಿತ್ ವಿದ್ಯಾಭೂಷಣರು, ಗುರುರಾಜ ಕರ್ಜಗಿ, ಅನಂತನಾಗ್, ರಮೇಶ್ ಅರವಿಂದ್, ಡಾ.ಸುಧಾಮೂರ್ತಿ… ಹೀಗೆ ಮೌಲ್ಯಯುತ ಜೀವನವನ್ನು ಬೋಧಿಸಿ, ಬಾಳುತ್ತಿರುವ ಅನೇಕರು ನಮ್ಮೆದುರೇ ಇರುವುದು ಸುದೈವ. ಅಂಥವರನ್ನು ಮಾತನಾಡಿಸುವುದು, ಅವರ ವಿಚಾರಧಾರೆಯನ್ನು ನಾಲ್ಕು ಜನರಿಗೆ ಕೇಳಿಸುವುದು ತನ್ಮೂಲಕ ಕ್ಲಬ್ ಹೌಸಿನ ಅಸ್ತಿತ್ವಕ್ಕೆ ಗೌರವ ತಂದುಕೊಡುವುದು. ಇಂಥ ಅಪರೂಪದ ಕಾರ್ಯಕ್ರಮಗಳು ಆಗುತ್ತಿರುವುದನ್ನು ನೋಡಿದಾಗ ಕ್ಷಮಿಸಿ, ಕೇಳಿದಾಗ ಸುಸಂಸ್ಕೃತ ಕನ್ನಡಿಗರು ಎಂತಹ ಬದಲಾವಣೆಗಳನ್ನು ಸಹ ಘನತೆಯಿಂದ ಸ್ವೀಕರಿಸಬಲ್ಲರು ಎಂಬುದು ವೇದ್ಯವಾಗುತ್ತದೆ.

    ಆದರೆ ಅದೇ ಕೆಲವು ಕಾರ್ಯಕ್ರಮಗಳ ಹೆಸರಿನಲ್ಲಿ ಕೆಲ ನಾಲಿಗೆಗಳು ಆಡುವ ಮಾತುಗಳನ್ನು ಕೇಳಿದಾಗ ಗಾಬರಿಯಾಗುತ್ತದೆ ಮತ್ತು ಅವರೆದುರು ಹಣಿದು ಹಿಪ್ಪೆ ಮಾಡಿ ಹಾಕಲು ಎಂಬಂತೆ ಕರೆಸಿ ಕೂಡಿಸಿದ ಭಿನ್ನ ವಿಚಾರಧಾರೆಯವರನ್ನು ಅವರ ಅಭಿಪ್ರಾಯಗಳನ್ನು ಕೇಳದೆ ನಾಲಿಗೆ ಹರಿಬಿಡುವುದು ಕಿರಿಕಿರಿಯಾಗುವ ಸಂಗತಿ. ಮನರಂಜನೆಯ ಮಾಧ್ಯಮವನ್ನು ಇಂಥ ಎಲುಬುಗೇಡಿ ನಾಲಿಗೆಗಳು ಕುಲಗೆಡಿಸಿದ್ದನ್ನು ನೋಡಿ ಪಶ್ಚಾತ್ತಾಪ ಪಡುವಂತಾಗಿದೆ. ಅಲ್ಲದೆ ಅವರ ನಾಲಿಗೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡುವವರನ್ನೇ ಅವರ ಎದುರಾಳಿಗಳಂತೆ ಭಾವಿಸುತ್ತಾರೆ. ಅವರಿಗೂ ಅವಕಾಶವೇ ಸಿಗದಂತೆ ಒಮ್ಮುಖವಾಗಿ ಗಳಹುವ ವಿಚಿತ್ರ ಅವಕಾಶವನ್ನು ಪ್ರಾಪ್ತ ಪಡಿಸಿಕೊಂಡಿರುತ್ತಾರೆ. ಮಾತಿನ ಮಹತ್ವವನ್ನರಿತು ಘನತೆಯಿಂದ ತಮ್ಮ ವಿಚಾರಧಾರೆಯನ್ನು ಮಂಡಿಸುವ ಸ್ವಯಂ ಸಂಹಿತೆಗಳು ಇಂದು ಇವರಿಗೆ ಬೇಕಾಗಿದೆ.

    ಸಾಮಾಜಿಕ ಜಾಲತಾಣಗಳ ಜನಪ್ರಿಯತೆಯನ್ನು ಮೀರಿದ ಒಂದು ಬಗೆಯ ಹುಚ್ಚು ಧಾವಂತ ಈ ಕ್ಲಬ್ ಹೌಸ್​ಗಳಿಗೆ ಜನರನ್ನು ಸೆಳೆಯುತ್ತಿದೆ. ಸಿದ್ಧಾಂತಗಳ ಕುರಿತು ಜಗಳಗಳಾಗುತ್ತವೆ. ಎದುರಾಳಿ ಮಾತನಾಡದೆ ಬಾಯಿ ಮುಚ್ಚಿ ಕುಳಿತಿರಬೇಕಾದ ಅನಿವಾರ್ಯತೆ. ಇಲ್ಲಿ ಆಡುವ ಮಾತುಗಳು ಯಾವವೂ ರೆಕಾರ್ಡ್ ಆಗುವುದಿಲ್ಲ. ಯಾರೂ ರೆಕಾರ್ಡ್ ಮಾಡುವ ಹಾಗಿಲ್ಲ ಎಂಬುದು ನಿಯಮ. ಒಳ್ಳೆಯ ಚಿಂತನಾ ಧಾರೆಗಳು ಹೇಗೆ ದಾಖಲಾಗುವುದಿಲ್ಲವೋ ಹಾಗೆಯೇ ಸಮಾಜದ್ರೋಹಿ, ದೇಶದ್ರೋಹಿ ಹೇಳಿಕೆಗಳು ಸಹ ರೆಕಾರ್ಡ್ ಆಗುವದಿಲ್ಲವೆಂಬ ಧೈರ್ಯದಲ್ಲಿ ನಿರಾಯಾಸವಾಗಿ ಹೇಳುತ್ತ ಹೋಗುವವರಿದ್ದಾರೆ. ತಮ್ಮದೇ ರಾಜಕೀಯ ಸಿದ್ಧಾಂತ ಹಿಡಿದುಕೊಂಡು ಅಥವಾ ಕೆಲಬಾರಿ ಕಪೋಲಕಲ್ಪಿತ ಸಿದ್ಧಾಂತಗಳನ್ನು ಹಿಡಿದುಕೊಂಡು ಬಂದು ಕೂತು ಮಾತಾಡಿ ಎದ್ದು ಹೋಗಬಹುದು. ಮಾತು ಮಿತಿ ಮೀರುತ್ತಿದೆ ಎಂಬುದು ಗೊತ್ತಾದಾಗ ನಿರೂಪಕನಿಂದ ಅದನ್ನು ನಿಯಂತ್ರಿಸುವ ಕಾರ್ಯ ಆಗಬೇಕೆ ಹೊರತು ಈಗ ಆಗುತ್ತಿರುವಂತೆ ಅನಿಯಂತ್ರಿತ ಗಳಹುವಿಕೆ ಅಪಾಯಕಾರಿಯಾಗಬಹುದು. ಉಳಿದ ಸಾಮಾಜಿಕ ಜಾಲತಾಣಗಳಲ್ಲಿಯೂ ಕಷ್ಟಸಾಧ್ಯವಾದ ನಿಯಂತ್ರಣ ಇಲ್ಲಿ ಸಾಧ್ಯವೇ? ಈ ಅನಿಯಂತ್ರಿತ ನಾಲಿಗೆಗಳ ಪ್ರಹಾರವನ್ನು ಸಹಿಸಲಿಕ್ಕಾಗದವರು ಅಸಹಾಯಕರಾಗಿ ಬಾಯಿಮುಚ್ಚಿಕೊಂಡು ಎದ್ದು ಹೋಗಬೇಕಷ್ಟೆ (leave quietly) ಅಲ್ಲಿಗೆ ‘ಎಲುಬಿಲ್ಲ ನಾಲಿಗೆಗೆ ಬಲವಿಲ್ಲ ಬಡವಂಗೆ’ ಎಂಬ ಮಾತನ್ನು ನೆನಪಿಸಲೆಂದೇ ಈ ಹೊಸ ಅವತಾರವಾಗಿದೆಯೆ ಎಂಬುದು ಥಟ್ಟನೆ ಕಾಡುವ ಅನುಮಾನ.

    (ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts