More

    ಗ್ರಹಣ ಪರಿಣಾಮ ಪರಿಹಾರ: ಇಂದು ಸೂರ್ಯಗ್ರಹಣ

    ಪ್ರಕೃತಿಯ ಒಂದು ಘಟನೆಯಾದ ಸೂರ್ಯಗ್ರಹಣದಿಂದ ಭೂಮಿ ಹಾಗೂ ಮಾನವರ ಮೇಲೆ ಆಗುವ ಪರಿಣಾಮಗಳೂ ಅನೇಕ. ಜಾಗತಿಕವಾಗಿ ಅನೇಕ ದೇಶಗಳ ಮೇಲೂ ಬೇರೆ ಬೇರೆ ಬಗೆಯ ಪರಿಣಾಮ ಕಂಡುಬರಬಹುದು.

    ಗ್ರಹಣ ಪರಿಣಾಮ ಪರಿಹಾರ: ಇಂದು ಸೂರ್ಯಗ್ರಹಣ| ರಾಜಗುರು ಬಿ.ಎಸ್.ದ್ವಾರಕಾನಾಥ

    ಗ್ರಹಣ ಎಂದರೇನು? ಕತ್ತಲೆ. ಸೂರ್ಯನ ಬೆಳಕಲ್ಲೇ ಕಷ್ಟ. ಇನ್ನು ಕತ್ತಲಲ್ಲಿ ಏನು ಮಾಡುವುದಕ್ಕೆ ಸಾಧ್ಯ? ನಮ್ಮ ಈ ಭರತದೇಶ ಪುಣ್ಯಭೂಮಿ. ಪರಮಾತ್ಮ ರಾಮನಾಗಿ ಹುಟ್ಟಿ ಭರತಖಂಡವನ್ನು ಕಟ್ಟಿದ್ದಾನೆ. ಈ ಭರತಖಂಡವು ಹಲವು ಋಷಿಮನಿಗಳು, ಜ್ಞಾನಿಗಳ ಪುಣ್ಯದಿಂದ ನಡೆದುಕೊಂಡು ಹೋಗುತ್ತಿದೆ. ಹಾಗಾಗಿ, ಇಷ್ಟೆಲ್ಲ ಆದರೂ ಈ ಪುಣ್ಯಭೂಮಿ ಉಳಿದುಕೊಂಡಿದೆ. ಬೇರೆ ಹಲವು ದೇಶಗಳಿಗೆ ಮುಂದೆ ಗಂಡಾಂತರವಿದೆ. ಶ್ರೀಲಂಕಾ, ಇಂಗ್ಲೆಂಡ್, ರಷ್ಯಾದಲ್ಲಿ ಈಗಾಗಲೇ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ನಮ್ಮ ಪ್ರಧಾನಿಗಳು ಪಕ್ಷವನ್ನು ಮರೆತು ಪ್ರಜಾಪಕ್ಷಕ್ಕೆ ಒಳ್ಳೆಯದು ಮಾಡಬೇಕು. ಮುಂದಿನ ದಿನಗಳಲ್ಲಿ ದೇಶ ಬದಲಾವಣೆಗೆ ಒಳಗಾಗುತ್ತದೆ. ಇಡೀ ವಿಶ್ವ ನಮ್ಮನ್ನು ನೋಡುವ ಸಮಯ ಬಂದಿದೆ. ದೋಷಗಳನ್ನು ತಿದ್ದಿಕೊಳ್ಳಬೇಕಿದೆ.

    ಅಲ್ಪಾವಧಿಯಲ್ಲಿ ಎರಡು ಗ್ರಹಣ: ಸೂರ್ಯಗ್ರಹಣ ಕ್ರೂರವಾದದ್ದು. ಇಂದು ಕೇತು ಗ್ರಹಣವಾಗಲಿದೆ. ಭರತಖಂಡಕ್ಕೆ ಇದು ಅಪಾಯಕಾರಿ. ಇದಾದ ಮೇಲೆ ರಾಹುಗ್ರಸ್ತ ಗ್ರಹಣ 8ನೇ ತಾರೀಖಿನಿಂದು ಆಗಲಿದೆ. ಅದು ಸಹ ಅಪಾಯಕಾರಿ. ಮರಣಭೀತಿಯಲ್ಲದಿದ್ದರೂ ಸಾಕಷ್ಟು ನೋವು ಸಂಭವಿಸುವ ಸಾಧ್ಯತೆಗಳಿವೆ. ಪರಿಹಾರ ಮಾಡಿಕೊಂಡರೆ ಅಶುಭ ಕಡಿಮೆಯಾಗುತ್ತದೆ.

    ಈ ಎರಡೂ ಗ್ರಹಣಗಳಿಂದ ಜಗತ್ತು ತತ್ತರಿಸುತ್ತದೆ. ಅಕಾಲಿಕ ಮಳೆ, ಚಂಡಮಾರುತ, ಸುನಾಮಿ ಹೀಗೆ ಹಲವು ಸಮಸ್ಯೆಗಳು ಉದ್ಭವಿಸುತ್ತವೆ. ಉತ್ತರ ಪ್ರದೇಶದಲ್ಲಿ ದೊಡ್ಡ ಮಟ್ಟದ ವಿಪತ್ತುಗಳಿವೆ. ಈ ಗ್ರಹಣ ಪ್ರತೀ ರಾಜ್ಯಕ್ಕೂ ಬೇರೆಬೇರೆ ರೀತಿಯ ಸಮಸ್ಯೆಗಳನ್ನು ತಂದೊಡ್ಡಲಿದೆ. ಬೆಳೆ ಕಡಿಮೆಯಾಗುವ ಸಾಧ್ಯತೆ ಇದೆ. ಭೀಕರ ಅಪಘಾತವಾಗಲಿದೆ. ಕರ್ನಾಟಕವನ್ನೇ ತೆಗೆದುಕೊಂಡರೆ, ಈಗಾಗಲೇ ಇಲ್ಲಿ ಜನಸ್ಪೋಟವಾಗುತ್ತಿದೆ. ಏಕೆಂದರೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಇಲ್ಲಿ ಯಾವುದೇ ಭೀತಿ ಇಲ್ಲ. ಸುಖ, ಶಾಂತಿ, ನೆಮ್ಮದಿ ಇದೆ. ಈ ಮಣ್ಣು ಮತ್ತು ಜನ ಬಂಗಾರದಂತಹವರು. ಇನ್ನೊಂದು ವೈಶಿಷ್ಟ್ಯವೆಂದರೆ ಬ್ರಹ್ಮ, ವಿಷ್ಣು, ಮಹೇಶ್ವರ ಮೂವರೂ ಇರುವ ನಾಡಿದು. ಮೂರೂ ಶಕ್ತಿಗಳು ಇರುವ ಏಕೈಕ ಸ್ಥಳವೆಂದರೆ ಅದು ಕರ್ನಾಟಕದ ಗಾಣಗಾಪುರ. ದತ್ತಾತ್ರೇಯನ ಅವತಾರದಲ್ಲಿ ಸೃಷ್ಟಿಕರ್ತ, ಭೋಗಕರ್ತ ಮತ್ತು ಲಯಕರ್ತ ಒಂದೇ ಕಡೆ ನೆಲೆಸಿದ್ದಾರೆ. ಗ್ರಹಣದ ಸಮಯದಲ್ಲಿ ಮನೆಯಲ್ಲೇ ಕುಳಿತು ದತ್ತಾತ್ರೇಯರನ್ನು ಪಾರಾಯಣ ಮಾಡಿದರೆ ಅಶುಭ ಕಡಿಮೆಯಾಗುತ್ತದೆ.

    ಹಲವು ದೇಶಗಳಿಗೆ ತೊಂದರೆ: ಎಲ್ಲೋ ಒಂದು ಕಡೆ ಕಲಿಯುಗದ ಅಂತ್ಯವಾಗುತ್ತಿದೆ. ಈ ದೇಶವನ್ನು ಯಾರೂ ಏನೂ ಮಾಡುವುದಕ್ಕೆ ಆಗುವುದಿಲ್ಲ. ರಾಮನು ಆಳಿದ ಭೂಮಿ. ನಮ್ಮನ್ನು ತುಳಿದರು, ದೇಶವನ್ನು ಭಾಗ ಮಾಡಿದರು. ನಮ್ಮನ್ನು ಯಾರು ಆಳಿದರೋ, ಅವರನ್ನು ನಮ್ಮವರು ಆಳುವ ಕಾಲ ಬಂದಿದೆ. ಅಲ್ಲೂ ವಿತ್ತೀಯ ವ್ಯವಸ್ಥೆ ಕುಸಿಯಲಿದೆ. ಅಮೆರಿಕಾದಲ್ಲಿ ದೊಡ್ಡ ಸಂಕಷ್ಟ ಎದುರಾಗಲಿದೆ. ಅಲ್ಲೂ ಕೆಲಸ ಮಾಡುತ್ತಿರುವ ಬಹಳಷ್ಟು ಭಾರತೀಯರು ವಾಪಸ್ಸು ಬರುತ್ತಾರೆ. ರಷ್ಯಾಗೂ ಸಮಸ್ಯೆ ಇದೆ. ಚೀನಾದಲ್ಲೂ ಆಳ್ವಿಕೆ ಬದಲಾಗುತ್ತದೆ. ದೇವರು ಉದ್ಧಟತನವನ್ನು ಸಹಿಸುವುದಿಲ್ಲ.

    ಪ್ರಾಕೃತಿಕ ಸಮಸ್ಯೆ: ಮುಂದಿನ ದಿನಗಳಲ್ಲಿ ಪ್ರಾಕೃತಿಕವಾಗಿ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ದೆಹಲಿಯಲ್ಲಿ ಮಳೆ ಹೆಚ್ಚಾಗುತ್ತದೆ. ಮುಂಬೈ, ಮಂಗಳೂರು ಮುಂತಾದ ಕಡೆ ಚಂಡಮಾರುತದ ಸಾಧ್ಯತೆ ಇದೆ. ಭೀಕರ ಅಪಘಾತಗಳಾಗಲಿವೆ.

    ರಾಷ್ಟ್ರಮಟ್ಟದ ಮಂತ್ರಿಮಂಡಲಕ್ಕೆ ಹೊಸ ಸ್ವರೂಪ ಸಿಗುತ್ತದೆ. ಸುಭದ್ರವಾದ ಭಾರತವನ್ನು ಕಟ್ಟುವುದಕ್ಕೆ, ದೃಢವಾದ ಆರ್ಥಿಕ ವ್ಯವಸ್ಥೆ, ಜನರ ಸೌಖ್ಯಕ್ಕಾಗಿ ರಾಷ್ಟ್ರಪಾಲಕರು ಅನ್ನ ಕೊಡುವ ರೈತನನ್ನು ಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಬೇಕು. ಈಗ ಏನೇನು ಘೋಷಣೆಯಾಗಿದೆಯೋ, ಅದರ ಹಣ ಇನ್ನೂ ತಲುಪಿಲ್ಲ. ಅದನ್ನು ಆಮೂಲಾಗ್ರವಾಗಿ ಪರೀಕ್ಷೆ ಮಾಡಿ, ಆಗಿರುವಂತಹ ಖರ್ಚು ವೆಚ್ಚುಗಳನ್ನು ನೋಡಬೇಕು.

    ಪರಿಹಾರಕ್ಕೆ ಹಲವು ಹಾದಿ: ಗ್ರಹಣದೋಷ ಇರುವವರು, ಅವರು ಯಾವುದೇ ರಾಶಿಯವರಾಗಲಿ ಅವರು ಗ್ರಹಣವನ್ನು ನೋಡಬಾರದು. ಗರ್ಭಿಣಿಯರು ನೋಡಬಾರದು. ಮಕ್ಕಳು ಓಂಕಾರವನ್ನು ಹೇಳಿಕೊಂಡರೆ ಶಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಜನೆಗೆ ಅನುಕೂಲವಾಗುತ್ತದೆ. ಯಾರ್ಯಾರಿಗೆ ವೇದವಿದ್ಯೆ ಇದೆಯೋ ಜಪ ಮಾಡಿ, ರಾಷ್ಟ್ರಕ್ಕೆ ಒಳ್ಳೆಯದಾಗುತ್ತದೆ. ರಾಷ್ಟ್ರಕ್ಕೆ ಒಳ್ಳೆಯದಾದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ತಂದೆ-ತಾಯಿ ಇಲ್ಲದವರು ಈ ಸಮಯದಲ್ಲಿ ತರ್ಪಣ ಬಿಡಬೇಕು. ಪಿತೃಗಳು ಖುಷಿಯಾದರೆ ಯಾವ ಗ್ರಹಣವೂ ಏನೂ ಮಾಡದು.

    ಜನರು-ಆಳುವವರ ಜವಾಬ್ದಾರಿ: ರಾಷ್ಟ್ರದಲ್ಲಿ ಕಳಂಕ ಇಲ್ಲದವರು ಎಂದರೆ ಪ್ರಧಾನಿ ನರೇಂದ್ರ ಮೋದಿ. ಅದರಲ್ಲಿ ಅನುಮಾನವಿಲ್ಲ. ಆದರೆ, ತಮ್ಮ ಮೇಲೆ ಜನ ಇಟ್ಟಿರುವ ಪ್ರೀತಿ ಮತ್ತು ಭಕ್ತಿಗೆ ಅವರು ನ್ಯಾಯ ಸಲ್ಲಿಸಬೇಕು. ಆರ್ಥಿಕ ಹಿಂಜರಿತ ಇದೆ. ಮಳೆ ಹೆಚ್ಚಾಗಿದೆ. ಅನ್ನಕ್ಕೆ ಹಾಹಾಕಾರ ಎದುರಾಗಬಹುದು. 15 ದಿನಗಳ ಅಂತರದಲ್ಲಿ 2 ಗ್ರಹಣಗಳು ಬರುವುದರಿಂದ ಎಷ್ಟೇ ಬಲಿಷ್ಠವಾದ ರಾಷ್ಟ್ರವಾದರೂ ಇದನ್ನು ತಡೆದು ಕೊಳ್ಳುವುದು ಕಷ್ಟ. ಇನ್ನೊಂದು ಪಕ್ಷದವರ ಸರ್ಕಾರ ಇದ್ದಾಗ ಸಮಸ್ಯೆ ಇತ್ತು. ಈಗ ಬೇರೆ ಪಕ್ಷದ ಸರ್ಕಾರ ಬಂದಿದೆ. ರಾಷ್ಟ್ರ ಆಳುವವರು ಜನಪರವಾಗಿ ಕೆಲಸ ಮಾಡಬೇಕು. ಇಷ್ಟ ಬಂದದ್ದು ಮಾಡಬಾರದು. ಜನರ ಅಭಿಪ್ರಾಯ ಕೇಳಬೇಕು. ಕೇಳದಿದ್ದರೆ ಜನ ಸಹಿಸುವುದಿಲ್ಲ; ಪಾಠ ಕಲಿಸುತ್ತಾರೆ. ಜನ ಸಹ ಪಾಠ ಕಲಿಯಬೇಕಿದೆ. ಪಕ್ಷವನ್ನು ನೋಡದೆ ವ್ಯಕ್ತಿಯನ್ನು ನೋಡಬೇಕು. ಅವರ ಯೋಗ್ಯತೆ ಅರ್ಥಮಾಡಿಕೊಂಡು ಮತ ಹಾಕಬೇಕು.

    ಗ್ರಹಣ ಪರಿಣಾಮ ಪರಿಹಾರ: ಇಂದು ಸೂರ್ಯಗ್ರಹಣರಾಶಿಗಳ ಮೇಲೆ ಪರಿಣಾಮ: ಈ ಗ್ರಹಣ ಕಾಲವು ಒಂದೊಂದು ರಾಶಿಯವರಿಗೆ ಒಂದೊಂದು ರೀತಿ ಪರಿಣಾಮ ಬೀರುತ್ತದೆ. ಈ ಬಾರಿಯ ಗ್ರಹಣದಲ್ಲಿ ವೃಷಭ, ಸಿಂಹ, ಧನಸ್ಸು, ಮಕರ ರಾಶಿಯವರಿಗೆ ಒಳ್ಳೆಯ ಫಲವಿದೆ. ಹೆಚ್ಚಿನ ಕೀರ್ತಿ ಸಿಗುತ್ತದೆ. ಏನೇ ಸಮಸ್ಯೆಗಳಿದ್ದರೂ ಬಗೆಹರಿಯುತ್ತದೆ. ಮಿಶ್ರ ಫಲ ಇರುವ ಮೇಷ, ಮಿಥುನ, ಕನ್ಯಾ, ಕುಂಭ ರಾಶಿಯವರಿಗೆ ಒಳ್ಳೆಯದಾಗದಿದ್ದರೂ ಕೆಟ್ಟದಾಗುವುದಿಲ್ಲ. ಯಥಾಸ್ಥಿತಿ ಮುಂದುವರಿಯುತ್ತದೆ. ದೇವರ ಪೂಜೆ ಮಾಡಿದರೆ, ಮಿಶ್ರಫಲವನ್ನು ಶುಭಫಲವನ್ನಾಗಿ ಮಾಡಿಕೊಳ್ಳಬಹುದು. ದೇವರಲ್ಲಿ ಪ್ರಾರ್ಥಿಸಿಕೊಳ್ಳಬೇಕು. ಕಟಕ, ತುಲಾ, ವೃಶ್ಚಿಕ, ಮೀನ ರಾಶಿಯವರಿಗೆ ಅಶುಭ ಫಲವಿದ್ದು, ಪಿತೃ, ಗುರು ಸೇರಿದಂತೆ ವಿವಿಧ ಶಾಪಗಳಿದ್ದರೆ ಸಮಸ್ಯೆ ಎದುರಾಗುತ್ತದೆ. ಕಟಕ ರಾಶಿಯವರು ತೀರ್ಥಸ್ನಾನ ಮಾಡಿದರೆ ಗ್ರಹದೋಷ ಹೋಗಿ ಒಳ್ಳೆಯದಾಗುತ್ತದೆ. ಚಿತ್ತ, ಸ್ವಾತಿ ನಕ್ಷತ್ರದವರು, ಕನ್ಯಾ, ತುಲಾ ರಾಶಿಯವರು ಈ ಕೆಳಗೆ ಕೊಟ್ಟಿರುವ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು ಗ್ರಹಣ ಮುಗಿಯುವವರೆಗೂ ತಮ್ಮ ಬಳಿ ಇಟ್ಟುಕೊಂಡಿದ್ದು ಗ್ರಹಣ ಮೋಕ್ಷ ನಂತರ, ಮರುದಿನ ದಕ್ಷಿಣೆ ಸಮೇತ ದಾನ ಮಾಡಬೇಕು.

    ಯೋ ಸೌ ವಜ್ರಧರೋದೇವಃ ಆದಿತ್ಯಾನಾಂ ಪ್ರಭುರ್ಮತಃ

    ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು

    ಯೋ ಸೌ ದಂಡಧರೋದೇವಃ ಯಮೋ ಮಹಿಷವಾಹನಃ

    ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು

    ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ

    ಸೂರ್ಯಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು

    ಇನ್ನು, ಗ್ರಹಣವಾದ್ದರಿಂದ ಈ ದಿನ ಭೋಜನ ನಿಷಿದ್ಧ. ಬಾಲಕರು, ವೃದ್ಧರು, ರೋಗಿಗಳು ಮತ್ತು ಅಶಕ್ತರು ಹಗಲು 12 ಗಂಟೆಯವರೆಗೆ ಆಹಾರ ಸೇವಿಸಬಹುದು. ಗ್ರಹಣ ಶುರುವಾದ ಮೇಲೆ ಸ್ನಾನ ಮಾಡಿ ಸಾಧ್ಯವಾದಷ್ಟು ಮನೆಯಲ್ಲೇ ಇದ್ದು ಜಪ, ತಪ, ಪಾರಾಯಣ ಮಾಡಿದರೆ ಒಳ್ಳೆಯದು. ಗ್ರಹಣ ಬಿಟ್ಟ ನಂತರ ಮತ್ತೊಮ್ಮೆ ಸ್ನಾನ ಮಾಡಿ, ವ್ರತವಿರುವವರು ಮುಂದುವರಿಸಬಹುದು.

    ನೆರಳು ಬೆಳಕಿನ ಆಟ

    | ಡಾ.ಎ.ಪಿ.ಭಟ್ ಭೌತಶಾಸ್ತ್ರಜ್ಞ

    ಕಡಲ ತಡಿಯ ವಿಶಾಲ ಸಮುದ್ರ. ಸೂರ್ಯಾಸ್ತದ ಸಮಯ ಭೂ ವಾತಾವರಣ ಸೂರ್ಯನ ಎಲ್ಲ ಬಣ್ಣಗಳನ್ನು ಚದುರಿಸಿ ಬರೀ ಕೆಂಬಣ್ಣದ ರಂಗಿನಿಂದ ದಿನಪನ ನಿತ್ಯಕೆಲಸ ಮುಗಿಸಿ ನಾಳೆ ಮತ್ತೆ ಬರುವೆನೆಂದು ಸಾರುವ ಪರ್ವಕಾಲ. ಈ ಸಮಯದಲ್ಲೊಂದು ವಿಶೇಷ ಪಾರ್ಶ್ವಗ್ರಹಣ.

    ಪ್ರತಿ ಆರು ತಿಂಗಳಿಗೊಮ್ಮೆ ಆಕಾಶದಲ್ಲಿ ನಡೆಯುವ ಬೆಳಕಿನ ಪ್ರಯೋಗ ಗ್ರಹಣ. ಸೂರ್ಯನ ಸುತ್ತ ಭೂಮಿ, ಭೂಮಿಯ ಸುತ್ತ ಚಂದ್ರ ದೀರ್ಘ ವೃತ್ತಾಕಾರವಾಗಿ ಸುತ್ತುತ್ತಿರುತ್ತವೆ. ಇವುಗಳ ಸಮತಲಗಳು ಸಂಧಿಸುವ ಎರಡು ಬಿಂದುಗಳಲ್ಲಿ ಸೂರ್ಯ ಭೂಮಿ ಹಾಗೂ ಚಂದ್ರ ನೇರ ಬರುವ ಸಾಧ್ಯತೆ ಇರುತ್ತದೆ. ಆಗ ಸೂರ್ಯ ಚಂದ್ರರ ನಡುವೆ ಭೂಮಿ ಬಂದರೆ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳದಂತೆ ಭೂಮಿ ತಡೆಯುತ್ತದೆ. ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದೇ ಚಂದ್ರ ಗ್ರಹಣ. ಅದೇ ಸೂರ್ಯ ಭೂಮಿಗಳ ನಡುವೆ ಚಂದ್ರ ಬಂದರೆ ಸೂರ್ಯನ ಬೆಳಕನ್ನು ಚಂದ್ರ ತಡೆಯುತ್ತದೆ. ಅದೇ ಸೂರ್ಯಗ್ರಹಣ. ಕ್ರಿ.ಶ.500ರಲ್ಲಿ ಭಾರತದ ಪ್ರಖ್ಯಾತ ಖಗೋಳ ಶಾಸ್ತ್ರಜ್ಞ ಆರ್ಯಭಟ ಈ ಗ್ರಹಣ ನೆರಳು ಬೆಳಕಿನ ಆಟವೆಂದು ಸ್ಪಷ್ಟ ವಿವರಣೆ ಕೊಟ್ಟಿದ್ದಾನೆ.

    ನಮ್ಮಿಂದ ಸುಮಾರು 15 ಕೋಟಿ ಕಿ.ಮೀ. ದೂರದಲ್ಲಿರುವ ಸೂರ್ಯ ಹಾಗೂ 3 ಕೋಟಿ 84 ಲಕ್ಷ ಕಿ.ಮೀ. ದೂರದಲ್ಲಿ ಚಂದ್ರ ಭೂಮಿಯ ನೇರಕ್ಕೆ ಬಂದು ಆಡುವ ಆಟ ನೋಡಿ ಆನಂದಿಸಬೇಕು. ಆಶ್ಚರ್ಯವೆಂದರೆ ಸೂರ್ಯಾಸ್ತವಾಗುವಾಗ ಸುಮಾರು 20 ಅಂಶ ಪಾರ್ಶ್ವಗ್ರಹಣದ ಸೂರ್ಯ ಮುಳುಗುವುದು. ನ.8ರಂದು ಹುಣ್ಣಿಮೆ ದಿನ ಚಂದ್ರ ಅಷ್ಟೇ ಅಂಶ ಚಂದ್ರಗ್ರಹಣದೊಂದಿಗೆ ಉದಯಿಸುವುದು ಕಾಕತಾಳೀಯ.

    ಬರಿಗಣ್ಣಿನಿಂದ ನೋಡಬಾರದು..: ಉಡುಪಿಯಲ್ಲಿ ಈ ಗ್ರಹಣವು ಮುಗಿಯುವ ಸಮಯ 06:28. ಆದರೆ, ಸೂರ್ಯಾಸ್ತವು 6:06ಕ್ಕೆ ಆಗುವುದು. ಹಾಗಾಗಿ, ಅಕ್ಟೋಬರ್ 25 ರಂದು ಅಸ್ತವಾಗುವ ಸೂರ್ಯನು ಗ್ರಹಣ ಹಿಡಿದ ಸೂರ್ಯನಾಗಿರುತ್ತಾನೆ. ಇದು ಒಂದು ಅಪರೂಪದ ದೃಶ್ಯ. ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ದೂರದರ್ಶಕ ಅಥವಾ ಕೂಲಿಂಗ್ ಗ್ಲಾಸ್ ಮೂಲಕ ವೀಕ್ಷಿಸಬೇಕು.

    ಕರ್ನಾಟಕದಲ್ಲಿ ಗ್ರಹಣ ಗೋಚರ
    • ಕರ್ನಾಟಕದ ಎಲ್ಲ ಭಾಗಗಳಿಂದ ಸೂರ್ಯ ಗ್ರಹಣವನ್ನು ನೋಡಬಹುದು. ರಾಜ್ಯದ ನಾನಾ ಸ್ಥಳಗಳಲ್ಲಿ ಈ ಗ್ರಹಣವು ಸಂಜೆ 5 ರಿಂದ 6 ಗಂಟೆಯವರೆಗೆ ಸೂರ್ಯಾಸ್ತದವರೆಗೆ ಗೋಚರಿಸುತ್ತದೆ. ಪಶ್ಚಿಮ ಮತ್ತು ನೈಋತ್ಯದ ಕಡೆಗಿನ ಕ್ಷಿತಿಜವು ಗ್ರಹಣ ವೀಕ್ಷಿಸಲು ಉತ್ತಮ ಸ್ಥಳವಾಗಿರುತ್ತದೆ.
    • ಬೆಂಗಳೂರಿನಲ್ಲಿ ಈ ಗ್ರಹಣವು ಶೇ. 10ರಷ್ಟು ಗೋಚರಿಸುತ್ತದೆ. ಸುಂದರ ಪ್ರಾಕೃತಿಕ ದೃಶ್ಯದೊಂದಿಗೆ ಕಡಲ ತೀರಕ್ಕೆ ಸಮೀಪವಾಗಿರುವ ಉಡುಪಿಯು ಈ ಗ್ರಹಣ ವೀಕ್ಷಿಸಲು ಉತ್ತಮ ಪ್ರದೇಶ. ಉಡುಪಿಯಲ್ಲಿ ಈ ಗ್ರಹಣವು ಸಂಜೆ 5ಗಂಟೆ 8 ನಿಮಿಷಕ್ಕೆ ಪ್ರಾರಂಭಗೊಂಡು ಸುಮಾರು 5 ಗಂಟೆ 50 ನಿಮಿಷಕ್ಕೆ ಗರಿಷ್ಠ ಗ್ರಹಣ ಗೋಚರಿಸುತ್ತದೆ.
    https://www.vijayavani.net/heart-attack-at-theatre-after-watching-movie-kantara/
    https://www.vijayavani.net/twist-in-rape-case-against-circle-police-inspector/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts