ತಂತ್ರಜ್ಞಾನ ಎಂಬುದು ಎರಡು ಅಲಗಿನ ಕತ್ತಿ. ಅದು ಅನೇಕ ಪ್ರಯೋಜನಗಳನ್ನು ತರುತ್ತದೆ. ಜತೆಗೆ, ಹಲವು ವಿಪತ್ತುಗಳನ್ನು ಕೂಡ… ಇದು ಇಂಗ್ಲಿಷ್ ಕಾದಂಬರಿಕಾರ, ಕಥೆಗಾರ ಅಲನ್ ಮೂರ್ ಹಲವು ದಶಕಗಳ ಹಿಂದೆಯೇ ಹೇಳಿದ್ದ ಮಾತು. ಇದಕ್ಕೊಂದು ಜ್ವಲಂತ ಉದಾಹರಣೆ- ಸೋಷಿಯಲ್ ಮೀಡಿಯಾ. ‘ಅರಿತು ನಡೆದರೆ ಸ್ವರ್ಗ, ಮರೆತು ನಡೆದರೆ ನರಕ’ ಎಂಬಂತೆ, ಅದನ್ನು ಅರಿತು ಬಳಸಿದರೆ ಸಾಕಷ್ಟು ಲಾಭಗಳಿವೆ. ಉದ್ಯಮದ ಬೆಳವಣಿಗೆೆ, ವರ್ಚಸ್ಸು ವೃದ್ಧಿ, ಪ್ರತಿಭೆಯ ಅನಾವರಣ ಹೀಗೆ ನೂರೆಂಟು ರೀತಿಯಲ್ಲಿ ಅದು ಪ್ರಯೋಜನಕ್ಕೆ ಬರಬಲ್ಲದು. ಅದೇ ವೇಳೆ, ‘ಮರೆತು’ ಬಳಸಿದರೆ ಅದರಿಂದಾಗುವ ಅನಾಹುತಗಳು ಅಷ್ಟಿಷ್ಟಲ್ಲ. ಆರೋಗ್ಯ ಸಮಸ್ಯೆ, ಅಪರಾಧ ಕೃತ್ಯ, ಅಡಿಕ್ಷನ್, ಡಿಪ್ರೆಷನ್ ಮುಂತಾದವುಗಳಿಗೂ ಅದು ದಾರಿ ಮಾಡಿಕೊಡಬಲ್ಲದು.
ಹಲವು ಕಾರಣ… ಹಲವೆಡೆ ನಿಷೇಧ
ಬ್ರೆಜಿಲ್: ಸಾಮಾಜಿಕ ಮಾಧ್ಯಮದಲ್ಲಿ ನಡೆಯುವ ಅಪಪ್ರಚಾರ, ನೀಡುವ ತಪ್ಪುಮಾಹಿತಿ ಬಗ್ಗೆ ಬ್ರೆಜಿಲ್ ಸರ್ಕಾರ ಕಠಿಣ ನಿಲುವು ತಳೆದಿದೆ. ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಪ್ರತಿ ಸಂದೇಶವನ್ನೂ ಮಾಡರೇಟ್ ಮಾಡಬೇಕು. ಅಂದರೆ ಅದು ಜನರನ್ನು ತಲುಪುವ ಮೊದಲೇ ಸರಿಯಿದೆಯೋ ತಪ್ಪಿದೆಯೋ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಆಯಾ ತಾಣಗಳ ಒಡೆತನ ಹೊಂದಿರುವ ಕಂಪನಿಗಳದೇ ಹೊಣೆ. ತಪ್ಪಿದಲ್ಲಿ, ದಂಡ, ಕಾನೂನು ಪ್ರಕ್ರಿಯೆ, ಶಿಕ್ಷೆ ಎದುರಿಸಲು ಸಿದ್ಧವಾಗಿರಬೇಕು.
ಚೀನಾ: ಸಾಮಾಜಿಕ ಮಾಧ್ಯಮದ ಬಗ್ಗೆ ಅತ್ಯಂತ ಕಠಿಣ ಕಾನೂನು ಇರುವುದು ಚೀನಾದಲ್ಲಿ. ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂನಂತಹ ವೇದಿಕೆಗಳನ್ನು ಈಗಾಗಲೇ ಬ್ಲಾಕ್ ಮಾಡಿರುವ ಚೀನಾ, ವೀಚಾಟ್, ವೈಬೋನಂತಹ ಸ್ಥಳೀಯ ಸಾಮಾಜಿಕ ಮಾಧ್ಯಮ ತಾಣಗಳ ಮೇಲೂ ಸದಾ ನಿಗಾ ಇಟ್ಟಿರುತ್ತದೆ. ಕಂಟೆಂಟ್ ಫಿಲ್ಟರ್ ಮಾಡುವುದಕ್ಕಾಗಿ ಅಲ್ಲಿ ‘ಗ್ರೇಟ್ ಫೈರ್ವಾಲ್’ ಅಸ್ತಿತ್ವದಲ್ಲಿದೆ. ಯಾವುದಾದರೂ ಮಾಹಿತಿ ಸರ್ಕಾರದ ದೃಷ್ಟಿಯಲ್ಲಿ ತಪ್ಪು ಎಂದು ಕಂಡುಬಂದರೆ ಅದನ್ನು ಪೋಸ್ಟ್ ಮಾಡಿದವರಿಗೆ ರಾಜದ್ರೋಹದ ಕೇಸು, ಶಿಕ್ಷೆ ಖಚಿತ. ಹಾಗಾಗಿ ಚೀನಾದ ಬಳಕೆದಾರರು ಬ್ಲಾಕ್ ಆದ ವೇದಿಕೆಗಳ ಆಕ್ಸೆಸ್ ಪಡೆಯಲು ಬಹಳಷ್ಟು ಸಲ ವಿಪಿಎನ್ (ವರ್ಚುವಲ್ ಪ್ರೖೆವೇಟ್ ನೆಟ್ವರ್ಕ್) ಬಳಸುತ್ತಾರೆ. ಆದರೆ, ಅನುಮತಿ ಇಲ್ಲದೆ ವಿಪಿಎನ್ ಬಳಸಿದರೆ ಅಲ್ಲಿ ದಂಡ ಮತ್ತು ಜೈಲು ಶಿಕ್ಷೆ ಕಾದಿರುತ್ತದೆ!
ಉತ್ತರ ಕೊರಿಯಾ: ಇಂಟರ್ನೆಟ್ ಆಕ್ಸೆಸ್ ಮತ್ತು ಸಾಮಾಜಿಕ ಮಾಧ್ಯಮದ ಬಳಕೆ ಮೇಲೆ ಉತ್ತರ ಕೊರಿಯಾ ಬಹುತೇಕ ಪೂರ್ಣ ಪ್ರಮಾಣದ ನಿರ್ಬಂಧ ವಿಧಿಸಿದೆ. ಉನ್ನತ ಸ್ಥಾನಗಳಲ್ಲಿರುವ ಕೆಲವೇ ಕೆಲವರು ಇಂಟರ್ನೆಟ್ ಬಳಸಬಹುದಾಗಿದೆ. ಸಾಮಾಜಿಕ ಮಾಧ್ಯಮ ನಿಷೇಧಿಸಲಾಗಿದೆ. ಯಾರಾದರೂ ಕದ್ದು ಉಪಯೋಗಿಸಿದ್ದು ಕಂಡುಬಂದರೆ ಕಠಿಣ ಶಿಕ್ಷೆ ಕಾದಿರುತ್ತದೆ. ದೇಶದ ಇಂಟ್ರಾನೆಟ್ (ಆಂತರಿಕ ಜಾಲ) ಕ್ವಾಂಗ್ವೆುೖಯಾಂಗ್ ಮೂಲಕ ಜನ ಸಂವಹನ ನಡೆಸಬಹುದಾದರೂ ಅದರಲ್ಲಿ ಹರಿದಾಡುವ ಸಂದೇಶಗಳ ಮೇಲೆ ಸರ್ಕಾರ ಕಣ್ಣಿಟ್ಟಿರುತ್ತದೆ.
ಇರಾನ್: ರಾಷ್ಟ್ರೀಯ ಸುರಕ್ಷೆ ಮತ್ತು ನೈತಿಕ ಅಧಃಪತನದ ಕಾರಣ ನೀಡಿ ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ನಂತಹ ಹಲವು ಸಾಮಾಜಿಕ ತಾಣಗಳ ಮೇಲೆ ಇರಾನ್ ಹಲವು ನಿರ್ಬಂಧಗಳನ್ನು ಹೇರಿದೆ. ಅವುಗಳಲ್ಲಿ ಸ್ಥಳೀಯರು ಪೋಸ್ಟ್ ಮಾಡುವ ಸಂದೇಶಗಳನ್ನು ಸರ್ಕಾರ ಪರಿಶೀಲಿಸುತ್ತದೆ. ಸರ್ಕಾರದ ವಿರುದ್ಧದ ಮಾಹಿತಿ ಅಥವಾ ಅನೈತಿಕ ಕಂಟೆಂಟ್ ಕಂಡುಬಂದರೆ ಅದನ್ನು ಪೋಸ್ಟ್ ಮಾಡಿದವರನ್ನು ಬಂಧಿಸಲಾಗುತ್ತದೆ. ಇಷ್ಟೆಲ್ಲ ನಿರ್ಬಂಧ ಇದ್ದರೂ ಇರಾನಿಗಳು ವಿಪಿಎನ್ಗಳನ್ನು ಬಳಸಿ, ಬ್ಲಾಕ್ ಆದ ತಾಣಗಳನ್ನು ಬಳಸುತ್ತಾರೆ. ಆದರೆ ಅಂತಹ ಅಪಾಯಕಾರಿ ಕೆಲಸಕ್ಕೆ ಕೈಹಾಕುವವರ ಸಂಖ್ಯೆ ಕಡಿಮೆ.
ಸೌದಿ ಅರೇಬಿಯಾ: ಸಾಮಾಜಿಕ ಮಾಧ್ಯಮದಲ್ಲಿ ಇಲ್ಲಿಯ ರಾಜಮನೆತನವನ್ನು, ಸರ್ಕಾರದ ನೀತಿ-ನಿರ್ಧಾರಗಳನ್ನು ಟೀಕಿಸಿದವರಿಗೆ, ಇಸ್ಲಾಮಿಕ್ ಮೌಲ್ಯಗಳ ಬಗ್ಗೆ ತಪ್ಪು ಮಾಹಿತಿ ಹರಡಿದವರಿಗೆ ಸೈಬರ್ ಅಪರಾಧ ಕಾನೂನಿನ ಅನ್ವಯ ಭಾರಿ ದಂಡ, ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಟರ್ಕಿ: ಇತ್ತೀಚಿನ ವರ್ಷಗಳಲ್ಲಿ ಸೋಷಿಯಲ್ ಮೀಡಿಯಾ ಸೆನ್ಸಾರ್ಶಿಪ್ ಟರ್ಕಿಯಲ್ಲಿ ಹೆಚ್ಚಾಗಿದೆ. ರಾಜಕೀಯ ಪ್ರಕ್ಷುಬ್ಧತೆ ತಲೆದೋರಿದ ಸಂದರ್ಭಗಳಲ್ಲಿ ಟ್ವಿಟರ್, ಫೇಸ್ಬುಕ್, ಯೂಟ್ಯೂಬ್ ಮುಂತಾದ ಸಾಮಾಜಿಕ ತಾಣಗಳನ್ನು ಮುಲಾಜಿಲ್ಲದೆ ನಿಷೇಧಿಸಲಾಗುತ್ತದೆ. ಸೋಷಿಯಲ್ ಮೀಡಿಯಾ ಕಂಪನಿಗಳು ಇಲ್ಲಿ ಸ್ಥಳೀಯರನ್ನೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ಬಳಕೆದಾರರ ಮಾಹಿತಿಯನ್ನು ಈ ದೇಶದಲ್ಲೇ ಸಂಗ್ರಹಿಸಿಟ್ಟುಕೊಳ್ಳಬೇಕು. ಒಪ್ಪದ ವೇದಿಕೆಗಳು ಇಲ್ಲಿ ತಕ್ಷಣವೇ ಬ್ಯಾನ್. ಹಾಗಂತ ಕಾನೂನೇ ಮಾಡಿಬಿಟ್ಟಿದ್ದಾರೆ. ತನಗೆ ಸರಿ ಎನಿಸದ ಕಂಟೆಂಟ್ ಕಂಡರೆ ಕೂಡಲೇ ತೆಗೆದುಹಾಕುವಂತೆ ಕಂಪನಿಗಳಿಗೆ ಸರ್ಕಾರ ಸೂಚಿಸುತ್ತದೆ. ಟೀಕಾಕಾರರ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತದೆ. ಪೋಸ್ಟ್ ಮಾಡಿದವರನ್ನು ಪತ್ತೆ ಹಚ್ಚಿ ಬಂಧಿಸಿ, ಶಿಕ್ಷೆಗೊಳಪಡಿಸುತ್ತದೆ.
ರಷ್ಯಾ: ಸಾಮಾಜಿಕ ಮಾಧ್ಯಮ ಬಳಕೆದಾರರ ಮಾಹಿತಿಯನ್ನು ರಷ್ಯಾದಲ್ಲೇ ಸಂಗ್ರಹಿಸಿ ಇಟ್ಟುಕೊಳ್ಳಬೇಕೆಂಬುದು ಇಲ್ಲಿನ ಕಾನೂನು. ಸರ್ಕಾರ ಯಾವುದಾದರೂ ಪ್ರತಿಭಟನೆಯನ್ನು, ವಾಗ್ದಾಳಿಯನ್ನು ಕಾನೂನುಬಾಹಿರ ಎಂದು ಪರಿಗಣಿಸುತ್ತದೆಯೋ ಅದನ್ನು ಕಂಪನಿಗಳು ತಕ್ಷಣವೇ ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಬೇಕು. ಇಂಟರ್ನೆಟ್ ಟ್ರಾಫಿಕ್ ಮೇಲೆ ಸರ್ಕಾರದ ನಿಯಂತ್ರಣ ಸಿಕ್ಕಾಪಟ್ಟೆ ಇದೆ. ರಾಷ್ಟ್ರದ ಭದ್ರತೆಗೆ ಅಪಾಯ ಎಂದು ಕಂಡುಬಂದರೆ ಗ್ಲೋಬಲ್ ನೆಟ್ವರ್ಕ್ಗಳಿಗೆ ಕೂಡಲೇ ಸರ್ಕಾರ ಕತ್ತರಿ ಹಾಕುತ್ತದೆ.
ಯುಎಇ: ಸುಳ್ಳು ಸುದ್ದಿ ಹರಡುವ, ಇಸ್ಲಾಮಿಕ್ ಮೌಲ್ಯಗಳ ಅವಹೇಳನ ಮಾಡುವ, ಸರ್ಕಾರದ ವಿರುದ್ಧ ಟೀಕಿಸುವ ಪೋಸ್ಟ್ಗಳನ್ನು ಇಲ್ಲಿ ಅಪರಾಧ ಎಂದು ಪರಿಗಣಿಸಲಾಗುತ್ತದೆ. ವಾಟ್ಸ್ಆಪ್, ಸ್ಕೈಪ್, ಫೇಸ್ಟೈಮ್ಂತಹ ವೇದಿಕೆಗಳ ಮೇಲೆ ಭಾಗಶಃ ನಿರ್ಬಂಧವಿದೆ. ನಿಯಮ ಉಲ್ಲಂಘಿಸುವ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ದಂಡ, ಜೈಲುಶಿಕ್ಷೆ ವಿಧಿಸುವುದಕ್ಕೆ ಮಾತ್ರವಲ್ಲದೇ ದೇಶದಿಂದಲೇ ಹೊರಗೆ ಕಳಿಸುವುದಕ್ಕೂ ಕಾನೂನಿನಲ್ಲಿ ಅವಕಾಶವಿದೆ.
ಈಜಿಪ್ತ್: ರಾಜಕೀಯ ಅಸ್ಥಿರತೆ ಅನುಭವಿಸಿದ ಈ ದೇಶ ಸಾಮಾಜಿಕ ಮಾಧ್ಯಮದಲ್ಲಿ ಬರುವ ಕಂಟೆಂಟ್ ಮೇಲೆ ಸಾಕಷ್ಟು ನಿಗಾ ಇಟ್ಟಿದೆ. ಸುಳ್ಳು ಸುದ್ದಿ ಅಥವಾ ತಪ್ಪು ಮಾಹಿತಿ ಹಾಕಿ ಪ್ರತಿಭಟನೆಗೆ ಕಾರಣವಾದರೆ, ದೇಶದ ಅಧ್ಯಕ್ಷರನ್ನು ನಿಂದಿಸಿದರೆ ಅಂಥವರನ್ನು ಬಂಧಿಸಲಾಗುತ್ತದೆ. 5 ಸಾವಿರಕ್ಕಿಂತ ಹೆಚ್ಚು ಫಾಲೋವರ್ಗಳಿದ್ದರೆ ಸರ್ಕಾರದ ಮಾಧ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ.
ವಿಯೆಟ್ನಾಂ: ವಿಪರೀತ ಸೆನ್ಸಾರ್ಶಿಪ್ ಹೊಂದಿರುವ ದೇಶಗಳಲ್ಲಿ ಇದೂ ಒಂದು. ಕಂಪನಿಗಳ ಬಳಿ ಇರುವ ಸಾಮಾಜಿಕ ಮಾಧ್ಯಮ ಖಾತೆದಾರರ ಸಂಪೂರ್ಣ ಮಾಹಿತಿಯನ್ನು ಸರ್ಕಾರ ಕೇಳಿದೊಡನೆ ಕೊಡಬೇಕೆಂಬ ನಿಯಮ ರೂಪಿಸಲಾಗಿದೆ. ಸರ್ಕಾರದ ವಿರುದ್ಧ ಮಾಹಿತಿ ಪೋಸ್ಟ್ ಮಾಡುವವರ ಮೇಲೆ ಸದಾ ಕಣ್ಣಿಡುವ ಅಧಿಕಾರಿಗಳು, ಕೇಸು ಹಾಕಿ ಜೈಲಿಗೆ ಕಳಿಸುತ್ತಾರೆ.
ಆಸ್ಟ್ರೇಲಿಯಾದಲ್ಲಿ ನಿರ್ಬಂಧ: ಪಾಲಕರಿಗೆ ಸಂತಸ ತರಬಹುದಾದ ಬೆಳವಣಿಗೆಯೊಂದರಲ್ಲಿ, ಆಸ್ಟ್ರೇಲಿಯಾ ಸರ್ಕಾರ ಅಲ್ಲಿನ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವುದನ್ನು ನಿಷೇಧಿಸಲು ಮುಂದಾಗಿದೆ. ಮುಂದಿನ ಸಂಸತ್ ಅಧಿವೇಶನದಲ್ಲಿ ಈ ಕುರಿತು ವಿಧೇಯಕ ಮಂಡನೆಯಾಗಲಿದ್ದು, ಜಗತ್ತಿನಲ್ಲೇ ಇಂಥ ಕಾನೂನು ಇದೇ ಪ್ರಥಮ. ‘ಮಕ್ಕಳು ಸೋಷಿಯಲ್ ಮೀಡಿಯಾಕ್ಕೆ ಅಡಿಕ್ಟ್ ಆಗುತ್ತಿರುವ ಬಗ್ಗೆ ನನ್ನಂತೆ ಎಲ್ಲ ಪಾಲಕರು ಆತಂಕ ಅನುಭವಿಸುತ್ತಿದ್ದಾರೆ’ ಎಂದು ಪ್ರಧಾನಿ ಆಂಥನಿ ಆಲ್ಬನೀಸ್ ಹೇಳಿದ್ದಾರೆ. ಈಗಾಗಲೇ ಸೋಷಿಯಲ್ ಮೀಡಿಯಾ ಬಳಸುತ್ತಿರುವವರಿಗೆ ಈ ನಿಷೇಧ ಅನ್ವಯಿಸದು ಎನ್ನಲಾಗಿದೆ. ಹೊಸ ವಿಧೇಯಕದಲ್ಲಿ ಏನಿದೆ ಎಂಬ ವಿವರ ಇನ್ನಷ್ಟೇ ಹೊರಬರಬೇಕಿದೆ.
ಭಾರತದಲ್ಲಿ ಏನಿದೆ ಸ್ಥಿತಿ?: ಡಿಜಿಟಲ್ ವೇದಿಕೆಗಳು ಮತ್ತು ಇಂಟರ್ನೆಟ್ ಆಡಳಿತವನ್ನು ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ನೋಡಿಕೊಳ್ಳುತ್ತದೆ. ಕಾಲಕಾಲಕ್ಕೆ ಅಗತ್ಯವಿರುವ ಕಾನೂನು-ನಿಯಮಗಳನ್ನು ರೂಪಿಸುತ್ತದೆ. ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ಪ್ರಮಾಣದ ನಿರ್ಬಂಧಗಳೇನೂ ಇಲ್ಲದಿದ್ದರೂ, ಅವುಗಳಲ್ಲಿ ತಪ್ಪು ಮಾಹಿತಿ ಕಂಡುಬಂದಾಗ ಅದಕ್ಕೆ ಪ್ರತಿಯಾಗಿ ಸರಿಯಾದ ಮಾಹಿತಿ ನೀಡಲು ಪ್ರೆಸ್ ಇನ್ಫಾಮೇಶನ್ ಬ್ಯೂರೋದಲ್ಲಿ ಫ್ಯಾಕ್ಟ್ಚೆಕ್ ಘಟಕಗಳನ್ನು ಸ್ಥಾಪಿಸಲಾಗಿದೆ. ಜೀವ, ಆಸ್ತಿಪಾಸ್ತಿ, ಮಾನಹಾನಿಗೆ ಕಾರಣವಾದ ಪ್ರಕರಣಗಳಲ್ಲಿ ಸಂಬಂಧಪಟ್ಟ ಸಾಮಾಜಿಕ ತಾಣಗಳನ್ನು ಮತ್ತು ಖಾತೆದಾರರನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ.
ಆರೋಗ್ಯದ ಮೇಲೇನು ಪರಿಣಾಮ?
- ಎಲ್ಲರಲ್ಲಿ, ವಿಶೇಷವಾಗಿ ಮಕ್ಕಳು ಮತ್ತು ಯುವಜನರಲ್ಲಿ ಖಿನ್ನತೆ
- ಫೀಲ್ಗುಡ್ ಕೆಮಿಕಲ್/ ಡೋಪಮೈನ್ ಸ್ರಾವದಿಂದ ಅಡಿಕ್ಷನ್ಗೆ ದಾರಿ
- ನಿರೀಕ್ಷಿಸಿದಷ್ಟು ಲೈಕ್ ಬರದಿದ್ದಾಗ ಆತ್ಮವಿಶ್ವಾಸ, ಆತ್ಮಗೌರವಕ್ಕೆ ಧಕ್ಕೆ
- ನಿದ್ರೆಯ ಅವಧಿ ಕುಂಠಿತ; ಉತ್ಪಾದಕತೆ, ಸೃಜನಶೀಲತೆ ನಷ್ಟ
ಎಷ್ಟು ಜನ ಬಳಸುತ್ತಾರೆ?
- ಜಗತ್ತಿನ ಜನಸಂಖ್ಯೆಯಲ್ಲಿ ಶೇಕಡ 62.3ರಷ್ಟು ಜನ ಆಕ್ಟಿವ್
- ಭಾರತದಲ್ಲಿ ಸಕ್ರಿಯ ಬಳಕೆದಾರರು 8 ಕೋಟಿಗಿಂತ ಹೆಚ್ಚು
- ಪ್ರತಿದಿನದ ಸರಾಸರಿ ಬಳಕೆಯ ಅವಧಿ 2 ಗಂಟೆ 23 ನಿಮಿಷ
ಆರೋಗ್ಯಕರ ಬಳಕೆ ಹೇಗೆ?
- ದಿನಕ್ಕೆ ಇಂತಿಷ್ಟೇ ಸಮಯ ಬಳಸುವ ಗುರಿ
- ಉತ್ತಮ ವಿಷಯ-ಚಿಂತನೆ ಫಾಲೋ ಮಾಡಿ
- ಕೆಟ್ಟ ಪರಿಣಾಮ ಬೀರುವುದನ್ನು ತಿರಸ್ಕರಿಸಿ
- ಲೈಕ್, ಕಮೆಂಟ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ
- ವರ್ಚುವಲ್ ಸಂಬಂಧ ನೈಜ ಸಂಬಂಧ ಅಲ್ಲ
- ವಾಸ್ತವದ ಸಂಬಂಧಗಳನ್ನು ಬೆಳೆಸಿಕೊಳ್ಳಿ
- ಸಂಬಂಧಿಕರು, ಸ್ನೇಹಿತರ ಜತೆ ಒಡನಾಡಿ
- ಆಹಾರ, ವ್ಯಾಯಾಮ, ನಿದ್ದೆಗೆ ಆದ್ಯತೆ ಕೊಡಿ
ಅಪರಾಧಕ್ಕೂ ದಾರಿ
- ಸೈಬರ್ ಅಪರಾಧಕ್ಕೆ ವೇದಿಕೆ ಆಗುತ್ತಿರುವ ಸೋಷಿಯಲ್ ಮೀಡಿಯಾ
- ಸುಳ್ಳು ಮಾಹಿತಿ ನೀಡಿ ಹಣ ವಸೂಲಿ ಮಾಡುತ್ತಿರುವ ಕೇಸ್ ಹೆಚ್ಚಳ
- ನೈಜ ಮಾಹಿತಿ ಮರೆಮಾಚಿ ಮದುವೆ ಆಮಿಷವೊಡ್ಡಿ ವಂಚನೆ
ಪಾಕ್ಗೆ ತೆರಳಲು ಅನುಮತಿ ನೀಡದ ಕೇಂದ್ರ ಸರ್ಕಾರ; ಹೈಬ್ರಿಡ್ ಮಾದರಿಯಲ್ಲಿ Champions Trophy?
ಉಸಿರಿರುವವರೆಗೂ Darshan ನನ್ನ ಮಗ, ಅದು ಎಂದಿಗೂ ಬದಲಾಗಲ್ಲ: ಸುಮಲತಾ ಅಂಬರೀಷ್