More

    ಹಳೇ ಗಂಡನ ಪಾದವೇ ಗತಿಯೆಂಬ ಸ್ಥಿತಿ ತಲುಪಿರುವ ಪಾಕ್

    ಹಳೇ ಗಂಡನ ಪಾದವೇ ಗತಿಯೆಂಬ ಸ್ಥಿತಿ ತಲುಪಿರುವ ಪಾಕ್ಪಾಕಿಸ್ತಾನದಲ್ಲಿ ಮತ್ತು ಆ ದೇಶಕ್ಕೆ ಸಂಬಂಧಿಸಿದಂತೆ ಹೊರ ಜಗತ್ತಿನಲ್ಲಿ ಅದೆಂತಹ ಬೆಳವಣಿಗೆಗಳು ಅದೆಷ್ಟು ವೇಗದಲ್ಲಿ ಘಟಿಸುತ್ತಿವೆಯೆಂದರೆ ಪ್ರಪಂಚದ ಇತರೆಡೆಗಳ ಆಗುಹೋಗುಗಳನ್ನು ಅತ್ತ ಸರಿಸಿ ಈ ನಮ್ಮ ನೆರೆಯ ಇಸ್ಲಾಮಿಕ್ ರಿಪಬ್ಲಿಕ್​ನತ್ತಲೇ ಗಮನ ಕೇಂದ್ರೀಕರಿಸುವಂತಾಗಿದೆ. ಪ್ರಸಕ್ತ ಮಾಸದಲ್ಲೇ ಪಾಕ್ ತಾಲಿಬಾನಿಗಳು ಪಂಜಾಬ್ ಪ್ರಾಂತ್ಯದ ದಕ್ಷಿಣದ ಮುಲ್ತಾನ್ ನಗರದಲ್ಲಿ ಇಬ್ಬರು ಐಎಸ್​ಐ ಅಧಿಕಾರಿಗಳನ್ನು ರೆಸ್ಟೋರೆಂಟ್ ಒಂದರಲ್ಲಿ ಕೊಂದು ಇಸ್ಲಾಮಿಕ್ ಉಗ್ರವಾದವನ್ನು ಇದುವರೆಗೆ ‘ಸೇಫ್’ ಎನಿಸಿದ್ದ ಪಂಜಾಬ್​ಗೆ ತಂದದ್ದರಿಂದ ಆರಂಭವಾಗಿ ಇದೇ ಸೋಮವಾರದಿಂದ ರಾಜಧಾನಿ ಇಸ್ಲಾಮಾಬಾದ್, ಬಂದರು ನಗರ ಕರಾಚಿ, ಅತಿ ದೊಡ್ಡ ನಗರ ಲಾಹೋರ್ ಸೇರಿದಂತೆ ದೇಶದ ಬಹುಭಾಗ ವಿದ್ಯುತ್ ಕೊರತೆಯಿಂದಾಗಿ ಕತ್ತಲಲ್ಲಿ ಮುಳುಗತೊಡಗಿರುವುದರವರೆಗೆ ಸಿಂಧೂ ನದಿಯಲ್ಲಿ ಅದೆಷ್ಟು ನೀರು ಹರಿದುಹೋಯಿತು!ಆ ಅವಧಿಯಲ್ಲಿ ಅಫ್ಘನ್ ಗಡಿಯಲ್ಲದೆ, ಇರಾನ್ ಗಡಿಯಲ್ಲೂ ಪಾಕಿಸ್ತಾನ ಭಯೋತ್ಪಾದಕ ಕೃತ್ಯಗಳನ್ನು ಎದುರಿಸುವುದರ ಜತೆಗೆ ಭಾರತದೊಂದಿಗೆ, ‘ಮೂರು ಯುದ್ಧಗಳನ್ನು ನಡೆಸಿದ್ದರಿಂದ ನಮಗೆ ನಷ್ಟವೇ ಆಯಿತು, ನಾವೀಗ ಪಾಠ ಕಲಿತಿದ್ದೇವೆ’ ಎಂದು ಪ್ರಧಾನಮಂತ್ರಿ ಶೆಹ್​ಬಾಜ್ ಶರೀಫ್ ಸಾರ್ವಜನಿಕವಾಗಿ ಒಪ್ಪಿಕೊಂಡದ್ದೂ ಆಯಿತು. ಈ ಎಲ್ಲಾ ಚುಕ್ಕೆಗಳನ್ನು ಸೇರಿಸಿ ಮುಂದೆ ಪಾಕಿಸ್ತಾನ ಏನಾಗಬಹುದೆಂಬ ಚಿತ್ರವನ್ನು ಪಡೆದುಕೊಂಡು ಅದನ್ನು ನಾವು ಹೇಗೆ ಅರ್ಥೈಸಿಕೊಳ್ಳಬೇಕೆಂದು ಒಂದಿಷ್ಟು ಚಿಂತನೆಯನ್ನಿಲ್ಲಿ ಮಾಡೋಣ.

    ಇಂದು ಪಾಕಿಸ್ತಾನದ ಆರ್ಥಿಕ, ರಾಜತಾಂತ್ರಿಕ, ರಕ್ಷಣಾ ಸ್ಥಿತಿಗತಿಗಳು ಕುಸಿದಿರುವ ಕೆಳಮಟ್ಟವಂತೂ ಜಗಜ್ಜಾಹೀರು. ಇದೇನೂ ಯಾವಾಗಲೂ ಹೀಗೇ ಇದ್ದದ್ದಲ್ಲ. ಒಂದು ಕಾಲದಲ್ಲಿ ಸಾಮಾನ್ಯ ಪಾಕಿಸ್ತಾನೀಯ ಸಾಮಾನ್ಯ ಭಾರತೀಯನಿಗಿಂತ ಒಳ್ಳೆಯ ಊಟ ಮಾಡುತ್ತಿದ್ದ, ಬಟ್ಟೆ ತೊಡುತ್ತಿದ್ದ, ಒಟ್ಟಿನಲ್ಲಿ ನಾವು ಅಸೂಯೆ ಪಡುವಂತೆ ಬದುಕುತ್ತಿದ್ದ. 1963ರಲ್ಲಿ ಪಾಕಿಸ್ತಾನದ ವಾರ್ಷಿಕ ಅಭಿವೃದ್ಧಿ ದರ ಶೇ. 5.2 ಇದ್ದರೆ, ಭಾರತದ್ದು ಕೇವಲ ಶೇ. 2.5! ಇಲ್ಲಿ ಕಣ್ಣಿಗೆ ರಾಚುವುದು ಪರಸ್ಪರ ಸ್ಥಾನ ಬದಲಿಸಿರುವ ಅಂಕಿಗಳಷ್ಟೇ ಅಲ್ಲ, ವ್ಯಾವಹಾರಿಕ ಕಾರ್ಯಯೋಜನೆಗಳನ್ನು ಕೈಗೊಂಡ ಅಯೂಬ್ ಖಾನ್ ಸರ್ಕಾರದ ಜನಪರತೆ ಮತ್ತು ಸೋವಿಯೆತ್ ಯೂನಿಯನ್ ಹಾಗೂ ಚೀನಾಗಳಂತಹ ಸಮಾಜವಾದಿ ದೇಶಗಳಲ್ಲೇ ದಾರುಣವಾಗಿ ವಿಫಲಗೊಂಡಿದ್ದ ಸಮಾಜವಾದಿ ನೀತಿಗಳನ್ನು ದೇಶದ ಮೇಲೆ ಹೇರಿದ ನೆಹರೂ ಸರ್ಕಾರದ ಜನವಿರೋಧಿ ಅವ್ಯವಹಾರಿಕತೆ ಸಹಾ. ಇದೇ ಸ್ಥಿತಿ ಮುಂದಿನ ಕಾಲು ಶತಮಾನದವರೆಗೂ ಮುಂದುವರಿಯಿತು. 1980ರ ದಶಕದ ಮಧ್ಯಭಾಗದಲ್ಲೂ ಪಾಕಿಸ್ತಾನಿಯರ ವಾರ್ಷಿಕ ವರಮಾನ ಭಾರತೀಯರಿಗಿಂತ ಶೇ. 65ರಷ್ಟು ಹೆಚ್ಚಿಗೆ ಇತ್ತು!

    ಇಂದು ಅದೇ ಪಾಕಿಸ್ತಾನಿಯರ ವಾರ್ಷಿಕ ವರಮಾನ ಭಾರತೀಯರಿಗಿಂತ ಶೇ. 33 ಕಡಿಮೆಯಿದೆ ಮತ್ತು ಕುಸಿಯುತ್ತಲೇ ಇದೆ. ಇದೇಕೆ ಹೀಗಾಯಿತೆಂದರೆ ಬೆನಜೀರ್ ಭುಟ್ಟೋ ಸರ್ಕಾರದಿಂದ ಆರಂಭಿಸಿ ಪಾಕಿಸ್ತಾನದ ಎಲ್ಲ ಸರ್ಕಾರಗಳೂ ಜನರ ಹಿತವನ್ನು ಕಡೆಗಣಿಸಿ, ಭಾರತ ಸಾವಿರ ಗಾಯಗಳಿಂದ ರಕ್ತ ಹರಿಸಿಕೊಂಡು ಒದ್ದಾಡುವಂತೆ ಮಾಡಲು ವಾರ್ಷಿಕ ಬಜೆಟ್ ಮತ್ತು ವಿದೇಶೀ ನೆರವಿನ ಬಹುದೊಡ್ಡ ಭಾಗವನ್ನು ವ್ಯಯಿಸತೊಡಗಿದರೆ, ಇತ್ತ ನರಸಿಂಹರಾವ್ ಸರ್ಕಾರದಿಂದ ಆರಂಭಿಸಿ ಭಾರತದ ಎಲ್ಲ ಸರ್ಕಾರಗಳೂ ಪಾಕ್ ಪ್ರಾಯೋಜಿತ ಆತಂಕವಾದವನ್ನು ನಿಭಾಯಿಸುತ್ತಲೇ ಜನಪರ, ಅಭಿವೃದ್ಧಿಮುಖಿ ಆರ್ಥಿಕ ನೀತಿಗಳನ್ನು ರೂಪಿಸಿ ಅನುಷ್ಠಾನಗೊಳಿಸತೊಡಗಿದ್ದು. ಇದರಿಂದಾಗಿ ಎರಡೂ ದೇಶಗಳು ಈಗ ಯಾವ ಸ್ಥಾನದಲ್ಲಿ ನಿಂತಿವೆ ಎನ್ನುವುದನ್ನು ತಿಳಿಯಲು ಈ ಕೆಳಗಿನ ಮಾತುಗಳನ್ನು ನೋಡೋಣ.

    ‘ಜಾಗತಿಕವಾಗಿ ಭಾರತವನ್ನು ಸರಿಯಾದ ಸ್ಥಾನದಲ್ಲಿರಿಸುವ ಅದ್ಭುತ ಕಾರ್ಯವನ್ನು ನರೇಂದ್ರ ಮೋದಿ ಮಾಡಿದ್ದಾರೆ… ಭಾರತ ತನಗೆ ಬೇಕಾದ್ದನ್ನು ಮಾಡುತ್ತದೆ ಮತ್ತು ಇತರರ ಖರ್ಚಿನಲ್ಲಿ ಆರಾಮವಾಗಿರುತ್ತದೆ. ಉದಾಹರಣೆಗೆ ರಷ್ಯಾ ಜಾಗತಿಕವಾಗಿ ಆರ್ಥಿಕ ಬಹಿಷ್ಕಾರಕ್ಕೊಳಗಾಗಿದೆ. ಆದರೆ, ಅದರೊಂದಿಗೆ ಭಾರತ ಮುಕ್ತವಾಗಿ ವ್ಯಾಪಾರ ವಹಿವಾಟು ನಡೆಸುತ್ತದೆ. ಅದು ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ತೈಲ ಖರೀದಿಸುತ್ತದೆ. ಅದನ್ನು ತನ್ನ ಬೃಹತ್ ತೈಲ ಸಂಸ್ಕರಣಾಗಾರಗಳಲ್ಲಿ ಸಿದ್ಧ ವಸ್ತುಗಳಾಗಿ ಮಾರ್ಪಡಿಸುತ್ತದೆ ಮತ್ತು ಅವುಗಳನ್ನು ಪಶ್ಚಿಮದ ದೇಶಗಳಿಗೆ ಮಾರುತ್ತದೆ. ಈ ವ್ಯವಹಾರದಲ್ಲಿ ಭಾರತ ತಾನೂ ಹಣ ಮಾಡಿಕೊಳ್ಳುತ್ತದೆ, ರಷ್ಯಾ ಸಹ ಹಣ ಮಾಡಿಕೊಳ್ಳುತ್ತದೆ… ಭಾರತ ಹೀಗೆ ತನ್ನ ಹಳೆಯ ಮಿತ್ರನಿಗೆ ಅನುಕೂಲ ಮಾಡಿಕೊಡುತ್ತದೆ. ಭಾರತ ಹೀಗೆ ಮಾಡಬಲ್ಲುದು… ಪ್ರಪಂಚದಲ್ಲಿ ಎರಡು ಸೇನಾ ಮಹಾಶಕ್ತಿಗಳಾದ ಅಮೆರಿಕಾ ಮತ್ತು ರಷ್ಯಾಗಳು ಭಾರತವನ್ನು ತಮ್ಮ ಸಹಯೋಗಿ, ಮಿತ್ರ ಎಂದೇ ಪರಿಗಣಿಸುತ್ತವೆ… ಭಾರತದ ವಿದೇಶೀ ವಿನಿಮಯ ಭಂಡಾರ 1992ರಲ್ಲಿ 9.2 ಬಿಲಿಯನ್ ಡಾಲರ್​ಗಳಿತ್ತು. 2004ರಲ್ಲಿ ವಾಜಪೇಯಿ ಸರ್ಕಾರ ಮನಮೋಹನ್ ಸಿಂಗರ ಯುಪಿಎ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವ ಹೊತ್ತಿಗೆ ಅದು 100 ಬಿಲಿಯನ್ ಡಾಲರ್​ಗಳಾಯಿತು. ಅದನ್ನು ಯುಪಿಎ ಸರ್ಕಾರ 2014ರಲ್ಲಿ 252 ಬಿಲಿಯನ್ ಡಾಲರ್​ಗಳಿಗೆ ಕೊಂಡೊಯ್ದಿತು. ಈಗ ಅದು 600 ಬಿಲಿಯನ್ ಡಾಲರ್​ಗಳು. ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ 4.5 ಬಿಲಿಯನ್ ಡಾಲರ್​ಗಳು ಮಾತ್ರ… ನೀವು ಭಾರತವನ್ನು ಇಷ್ಟಪಡಬಹುದು ಅಥವಾ ಇಷ್ಟಪಡದಿರಬಹುದು. ಆದರೆ, ಪ್ರಸಕ್ತ ಶತಮಾನ ರೂಪಿಸಲ್ಪಡುವುದು ಏಷ್ಯಾದ ಎರಡು ಶಕ್ತಿಗಳಾದ ಚೀನಾ ಮತ್ತು ಭಾರತಗಳಿಂದ ಎನ್ನುವ ವಾಸ್ತವವನ್ನು ನೀವು ಒಪ್ಪಿಕೊಳ್ಳಲೇಬೇಕು… ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಅಂತರವನ್ನು ಈಗ ಸರಿದೂಗಿಸಲಾಗುವುದಿಲ್ಲ. ಪಾಕಿಸ್ತಾನವನ್ನು ಭಾರತ ಹಿಂದೆ ಬಿಟ್ಟು ಬಹಳ ಮುಂದೆ ಹೋಗಿಬಿಟ್ಟಿದೆ… ಭಾರತದ ಚಿತ್ರಕಥೆಯಲ್ಲಿ ಪಾಕಿಸ್ತಾನ ಒಂದು ಅಡಿಟಿಪ್ಪಣಿಯಷ್ಟೇ… ಭಾರತ ಕಾಶ್ಮೀರದಲ್ಲಿ ತನಗೇನು ಬೇಕಾದರೂ ಮಾಡುತ್ತದೆ ಮತ್ತು ಅದನ್ನು ವಿರೋಧಿಸಿ ಏನು ಮಾಡಲೂ ಪಾಕಿಸ್ತಾನಕ್ಕೆ ಆಗುತ್ತಿಲ್ಲ…’

    ಈ ಮಾತುಗಳನ್ನು ಬರೆದದ್ದು ಪಾಕಿಸ್ತಾನಿ ವಾಯುಸೇನೆಯ ನಿವೃತ್ತ ಏರ್​ವೈಸ್ ಮಾರ್ಷಲ್ ಶಹಜಾದ್ ಚೌಧರಿ, ಪಾಕಿಸ್ತಾನಿ ಪತ್ರಿಕೆ ದ ಎಕ್ಸ್​ಪ್ರೆಸ್ ಟ್ರಿಬ್ಯೂನ್​ನಲ್ಲಿನ ಅಂಕಣ ಬರಹದಲ್ಲಿ. ಚೌಧರಿಯವರೇನೂ ಸಾಮಾನ್ಯ ವೈಮಾನಿಕರಲ್ಲ. ಭಾರತದ ವಿರುದ್ಧ ಸಮರ್ಥವಾಗಿ ಕಾದಾಡಿದ್ದ ಅಪ್ಪಟ ಪಾಕಿಸ್ತಾನಿ ದೇಶಪ್ರೇಮಿ. ಜನವರಿ 13ರ ಲೇಖನದಲ್ಲಿ ಅವರು ಮಾಡಿರುವುದು ದೇಶದ ವಿರುದ್ಧ ದ್ರೋಹದ ಕೆಲಸವಲ್ಲ, ಬದಲಾಗಿ ಪಾಕಿಸ್ತಾನಿಯರಿಗೆ ತಮ್ಮ ತಪುಗಳನ್ನು ಎತ್ತಿತೋರಿಸಿ, ಮುಂದೇನು ಮಾಡಬೇಕೆಂದು ಬುದ್ಧಿ ಹೇಳುವ ದೇಶಹಿತಕಾರಕ ಕೃತ್ಯವನ್ನು. ಅವರು ಹೇಳುವ ಒಂದು ಮಾತು ನೋಡಿ-‘ ಸೌದಿ ಅರೇಬಿಯಾ ಭಾರತದಲ್ಲಿ 72 ಬಿಲಿಯನ್ ಡಾಲರ್​ಗಳನ್ನು ಹೂಡಿದೆ. ಆದರೆ, ಮುಸ್ಲಿಂ ದೇಶವಾದ ನಾವು ಕನಿಷ್ಠ ಏಳು ಬಿಲಿಯನ್ ಡಾಲರ್​ಗಳನ್ನಾದರೂ ಹೂಡಿ ಎಂದು ಗೋಗರೆಯುತ್ತಿದ್ದೇನೆ!’

    ಹೀಗೆ ಭಾರತ ಹೇಗೆ ಮುಂದುವರಿಯುತ್ತಿದೆ, ಪಾಕಿಸ್ತಾನ ಹೇಗೆ ಹಿಂದೆ ಹಿಂದೆ ಸಾಗುತ್ತಿದೆ, ಪರಿಣಾಮವಾಗಿ ಇಂದಿನ ಜಗತ್ತಿನಲ್ಲಿ ಹೇಗೆ ಅಪ್ರಸ್ತುತವಾಗುತ್ತಿದೆ ಎನ್ನುವುದನ್ನು ವಿಶ್ಲೇಷಿಸಿ, ಪ್ರಸಕ್ತ ಸಂಕಷ್ಟದಿಂದ ಹೊರಬರಲು ದೇಶದ ನಾಯಕರಿಗೆ ಕಿವಿಮಾತು ಹೇಳುತ್ತಾರೆ ಶಹಜಾದ್ ಚೌಧರಿ.

    ಈಗ ಪಾಕಿಸ್ತಾನದಲ್ಲಿರುವ ವಿದೇಶಿ ವಿನಿಮಯ ಸಂಗ್ರಹ ಕೇವಲ 4.5 ಬಿಲಿಯನ್ ಡಾಲರ್​ಗಳು. ಇದು ಏನೇನಕ್ಕೂ ಸಾಲದು. ಆಹಾರ ಪದಾರ್ಥಗಳು ತುಂಬಿದ ವಿದೇಶೀ ಹಡಗುಗಳು ಕರಾಚಿ ಬಂದರಿನಲ್ಲಿ ತಿಂಗಳಿಂದಲೂ ನಿಂತಿದ್ದು, ಹಣ ಕೊಟ್ಟು ಇಳಿಸಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಗೋದಿಹಿಟ್ಟಿಗಾಗಿ ದೇಶದ ಹಲವೆಡೆ ಜನಸಾಮಾನ್ಯರಲ್ಲಿ ಮಾರಾಮಾರಿಯಾಗುತ್ತಿದೆ. ಕಚ್ಚಾವಸ್ತುಗಳ ಆಮದು ನಿಂತು ಹಲವು ಕೈಗಾರಿಕೆಗಳು ಮುಚ್ಚಿವೆ, ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಬಲೂಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜನ ದಂಗೆಯೆದ್ದಿದ್ದಾರೆ. ಇದೇ ಪರಿಸ್ಥಿತಿ ಪಂಜಾಬ್​ನಲ್ಲಿ ಕಾಣತೊಡಗಿದರೆ ಅದು ಪಾಕಿಸ್ತಾನದ ಅಸ್ತಿತ್ವಕ್ಕೇ ಕೊಡಲಿಯೇಟಾಗುತ್ತದೆ. ಸದ್ಯದ ಸ್ಥಿತಿ ನೋಡಿದರೆ ಆ ದಿನ ದೂರವಿಲ್ಲ ಎನಿಸುತ್ತದೆ.

    ಕಳೆದ ಐದಾರು ತಿಂಗಳಿಂದಲೂ ಟೈಂ ಬಾಂಬ್​ನಂತೆ ಹೆದರಿಸುತ್ತಿದ್ದ ವಿದ್ಯುತ್ ಸಮಸ್ಯೆ ಈ ತಿಂಗಳು ಸ್ಪೋಟಿಸಿಯೇಬಿಟ್ಟಿದೆ. ಚೈನಾ-ಪಾಕಿಸ್ತಾನ್ ಇಕನಾಮಿಕ್ ಕಾರಿಡಾರ್ (ಸಿ-ಪೆಕ್) ಯೋಜನೆಯ ಮೂಲಕ ಪಾಕಿಸ್ತಾನದ ವಿದ್ಯುತ್ ಉತ್ಪಾದನೆಯನ್ನು ಚೀನೀ ಕಂಪನಿಗಳು ಹಿಡಿತಕ್ಕೆ ತೆಗೆದುಕೊಂಡಿವೆ. ಅವು ವಿಧಿಸುವ ಹೆಚ್ಚಿನ ದರವನ್ನು ಪಾವತಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗದ ಕಾರಣ ಬಾಕಿ ತೀರಿಸುವವರೆಗೆ ವಿದ್ಯುತ್ ಒದಗಿಸಲಾಗುವುದಿಲ್ಲ ಎಂಬ ಎಚ್ಚರಿಕೆಯನ್ನು ಚೀನೀ ಕಂಪನಿಗಳು ನೀಡುತ್ತಲೇ ಬಂದಿದ್ದವು. ಆ ಎಚ್ಚರಿಕೆ ಕೊನೆಗೂ ನಿಜವಾಗಿ ಲಭ್ಯವಿರುವ ಸೀಮಿತ ವಿದ್ಯುತ್ ಅನ್ನು ಮಿತವಾಗಿ ಬಳಸುವ ಉದ್ದೇಶದಿಂದ ಅಂಗಡಿಮುಂಗಟ್ಟುಗಳು ರಾತ್ರಿ ಎಂಟೂವರೆಗೆ, ಮದುವೆ ಮಂಟಪಗಳು ಹತ್ತು ಗಂಟೆಗೆ ಮುಚ್ಚಬೇಕೆಂಬ ಆದೇಶವನ್ನು ಸರ್ಕಾರ ಜನವರಿ 4ರಂದು ಹೊರಡಿಸಿತು. ದೈನಂದಿನ ವಹಿವಾಟಿನಲ್ಲಿ ಅತಿ ಮುಖ್ಯವೆನಿಸುವ ಆ ಸಮಯದಲ್ಲಿ ಬಾಗಿಲು ಮುಚ್ಚಲಾಗುವುದಿಲ್ಲವೆಂದು ಹೇಳಿ ಆ ಆದೇಶ ಪಾಲಿಸಲು ಬಹುತೇಕ ವಹಿವಾಟುದಾರರು ನಿರಾಕರಿಸಿದರು. ಅಂತಿಮವಾಗಿ ಜನವರಿ 23ರಂದು ಇಡೀ ದೇಶ ಕತ್ತಲಲ್ಲಿ ಮುಳುಗಿತು.

    ಇದರಿಂದ ಹೊರಬರುವ ಮಾರ್ಗವಾಗಿ ಭಾರತದೊಂದಿಗೆ ಸಂಬಂಧಗಳನ್ನು ಸುಧಾರಿಸಿಕೊಳ್ಳಲು, ವ್ಯಾಪಾರ ವಹಿವಾಟು ಆರಂಭಿಸಲು ಶಹಜಾದ್ ಚೌಧರಿ ಸಲಹೆ ನೀಡುತ್ತಾರೆ. ಇದು ಸೂಕ್ತ ಸಹ. ಭಾರತದಿಂದ ಸುಲಭವಾಗಿ, ಶೀಘ್ರವಾಗಿ, ಕಡಿಮೆ ಸಾಗಾಣಿಕೆ ವೆಚ್ಚದಲ್ಲಿ ಆಮದು ಮಾಡಿಕೊಳ್ಳಬಹುದಾದ ಅದೆಷ್ಟೋ ಅಗತ್ಯವಸ್ತುಗಳನ್ನು ದೂರದೂರದ ದೇಶಗಳಿಂದ ತರಿಸಿಕೊಳ್ಳುವುದನ್ನು ಪಾಕಿಸ್ತಾನ ರೂಢಿ ಮಾಡಿಕೊಂಡಿತ್ತು. ಆ ಸ್ವಹಿತಘಾತಕ ನೀತಿಯ ಬಿಸಿ ಕಳೆದ ಜುಲೈನಲ್ಲೇ ತಟ್ಟತೊಡಗಿ, ಚಹಾಪುಡಿಯನ್ನು ದೂರದ ದೇಶಗಳಿಂದ ಆಮದು ಮಾಡಿಕೊಳ್ಳಲಾಗದೆ, ಭಾರತವನ್ನೂ ಕೇಳಲಾಗದೆ, ಚಹಾ ಕುಡಿಯುವುದನ್ನೇ ಕಡಿಮೆಗೊಳಿಸಿ ಎಂದು ಪಾಕಿಸ್ತಾನಿಯರಿಗೆ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಬೇಡಿಕೊಳ್ಳುವಂತಾಯಿತು. ಅದೀಗ ಇತರ ವಸ್ತುಗಳಿಗೂ ವಿಸ್ತರಿಸಿ, ಭಾರತದ ಜತೆಗಿನ ವ್ಯಾಪಾರಮಾರ್ಗಗಳನ್ನು ತೆರೆಯಿರಿ, ಅಲ್ಲಿಗಾದರೂ ಹೋಗಿ ನಾವು ಗೋದಿ ಹಿಟ್ಟು ಕೊಂಡುತರುತ್ತೇವೆ ಎಂದು ಜನಸಾಮಾನ್ಯರು ಕೂಗುತ್ತಿದ್ದಾರೆ.

    ಇಂತಹ ಸ್ಥಿತಿಯಲ್ಲಿ ಪಾಕಿಸ್ತಾನದ ಸಹಕಾರಕ್ಕೆ ಯಾರೂ ಬರುತ್ತಿಲ್ಲ. ಸಿ-ಪೆಕ್​ಗೆ ಹೂಡಿದ ಹಣದಲ್ಲಿ 26 ಬಿಲಿಯನ್​ಗಳಷ್ಟು ಭಾರಿ ಮೊತ್ತವನ್ನು ಭ್ರಷ್ಟ ಪಾಕ್ ನಾಯಕರು ನುಂಗಿದ್ದಾರೆ ಎಂದು ಹೇಳಿ ಚೀನಾ ಒಂದು ದಮ್ಮಡಿಯನ್ನೂ ಕೊಡುವುದಿಲ್ಲ ಎಂದು ಹೇಳುತ್ತಿದೆ. 1.2 ಬಿಲಿಯನ್ ಡಾಲರ್ ಸಾಲ ನೀಡುತ್ತೇನೆ ಎಂದಿದ್ದ ವರ್ಲ್ಡ್ ಬ್ಯಾಂಕ್ ಕೈ ಎತ್ತಿಬಿಟ್ಟಿದೆ. ಐಎಂಎಫ್ ತಿಂಗಳುಗಳಿಂದಲೂ ಲೆಕ್ಕಾಚಾರ ಹಾಕುತ್ತಲೇ ಇದೆ. ಪಾಕಿಸ್ತಾನ ಎಷ್ಟು ಸಾಲ ತೆಗೆದುಕೊಂಡರೂ ಅದು ದೇಶದ ಅಂತಿಮ ಪತನವನ್ನು ತುಸು ಮುಂದಕ್ಕೆ ದೂಡಬಹುದಷ್ಟೇ, ವಿನಃ ಪೂರ್ಣವಾಗಿ ತಡೆಯಲಾಗುವುದಿಲ್ಲ ಎನ್ನುವುದು ಅರ್ಥಶಾಸ್ತ್ರಜ್ಞರ ಅಭಿಮತ. ಅವರ ಪ್ರಕಾರ ಪಾಕಿಸ್ತಾನ ಈಗ ತಲುಪಿರುವುದು ಅರ್ಥಶಾಸ್ತ್ರೀಯ ಪರಿಭಾಷೆಯಲ್ಲಿ ಈಛಿಚಿಠಿ ಖಟಜ್ಟಿಚ್ಝ ಎಂಬ ಸ್ಥಿತಿಯನ್ನು. ಅಂದರೆ ದಿನ ದೂಡಲು, ಸಾಲದ ಮೇಲೆ ಸಾಲ, ಒಂದು ಸಾಲ ತೀರಿಸಲು ಇನ್ನೊಂದು ಸಾಲ… ಇನ್ನೊಂದು ಸಾಲ… ಮಾಡುತ್ತಲೇ ಇರಬೇಕಾದ ದಯನೀಯ ಸ್ಥಿತಿ.

    ಆಂತರಿಕವಾಗಿ ಈ ದುಃಸ್ಥಿತಿಯಿದ್ದರೆ ಉತ್ತರದ ಗಡಿಯಲ್ಲಿ ಅಫ್ಘನ್ ತಾಲಿಬಾನಿಗಳು ‘ಕಳೆದುಹೋದ’ ಪಠಾಣ (ಪಖ್ತೂನ್) ಪ್ರದೇಶಗಳನ್ನು ಮರುಗಳಿಸಿಕೊಳ್ಳಲು ಯುದ್ಧಕ್ಕೇ ತಯಾರಾಗಿ ನಿಂತಿದ್ದಾರೆ. ಅವರಿಗೆ ಸಹಕಾರಿಯಾಗಿ ಪಾಕ್ ತಾಲಿಬಾನಿಗಳೂ ಪಾಕಿಸ್ತಾನದೊಳಗೇ ತಮ್ಮದೇ ಪ್ರತಿಸರ್ಕಾರವನ್ನು ಘೊಷಿಸಿದ್ದಾರೆ! ಇದು ಸಾಲದು ಎಂಬಂತೆ ಪಶ್ಚಿಮದ ಇರಾನ್​ನಲ್ಲಿ ಆಶ್ರಯ ಪಡೆದ ಭಯೋತ್ಪಾದಕರು ಪಾಕ್ ಗಡಿಯೊಳಗೆ ನುಗ್ಗಿ ಸೈನಿಕರನ್ನು ಕೊಲ್ಲಲಾರಂಭಿಸಿದ್ದಾರೆ.

    ಇದೆಲ್ಲವನ್ನೂ ನೋಡಿ ಪ್ರಧಾನಿ ಶರೀಫ್ ಭಾರತದೊಂದಿಗೆ ಸಂಬಂಧಗಳನ್ನು ಸರಿಪಡಿಸಿಕೊಳ್ಳಲು ತಾವು ತಯಾರಾಗಿರುವುದಾಗಿಯೂ, ಭಾರತ ಸ್ಪಂದಿಸಬೇಕೆಂದೂ ಮನವಿ ಮಾಡಿಕೊಂಡಿದ್ದಾರೆ. ‘ಹುಲ್ಲು ತಿಂದಾದರೂ ಸರಿ, ಅಣ್ವಸ್ತ್ರ ಪಡೆದುಕೊಳ್ಳುತ್ತೇವೆ’ ಎಂದು ಝುುಲ್ಪಿಕಾರ್ ಅಲಿ ಭುಟ್ಟೋ ಹಿಂದೆ ಕೂಗಿದ್ದುಂಟು. ಈಗ ಅದೇ ಆಗಿದೆ. ಪಾಕಿಸ್ತಾನದಲ್ಲಿ ಅಣ್ವಸ್ತ್ರವಿದೆ, ತಿನ್ನಲು ಹುಲ್ಲಾದರೂ ಇದೆಯೇ ಎನ್ನುವುದು ಅನುಮಾನ. ಹಾಗೇ ಅದೇ ‘ಮಹಾನಾಯಕ’ ಭಾರತದೊಂದಿಗೆ ಸಾವಿರ ವರ್ಷಗಳವರೆಗೆ ಯುದ್ಧ ಮಾಡುತ್ತೇವೆ ಎಂದೂ ಅಬ್ಬರಿಸಿದ್ದುಂಟು. ಐವತ್ತು ವರ್ಷಗಳ ನಂತರ ಅವರ ಉತ್ತರಾಧಿಕಾರಿ ಈಗ ಶಾಂತಿಗಾಗಿ, ಸಹಕಾರಕ್ಕಾಗಿ ಬೇಡುತ್ತಿದ್ದಾರೆ. ಈ ಬೇಡಿಕೆಯನ್ನು ಪುರಸ್ಕರಿಸಬಹುದೇ? ಪಾಕ್ ನಾಯಕರ ಮಾತಿನಲ್ಲಿ ವಿಶ್ವಾಸವಿಡಬಹುದೇ? ಮುಂದಿನ ವಾರ ಪರಿಶೀಲಿಸೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಬಿಟ್ಟಿ ಪ್ರಚಾರಕ್ಕಾಗಿ ಚಿಲ್ರೆ ಕೆಲಸ: ತನ್ನ ಸಂಸ್ಥೆಯ ಮಾರ್ಕೆಟಿಂಗ್​ಗಾಗಿ ಫ್ಲೈಓವರ್​ ಮೇಲಿಂದ ಹಣ ಎಸೆದೆ ಎಂದು ತಪ್ಪೊಪ್ಪಿಕೊಂಡ

    2023ರ ಆಸ್ಕರ್​ ನಾಮಿನೇಷನ್ ಪಟ್ಟಿ ಪ್ರಕಟ; ಆರ್​ಆರ್​ಆರ್​ ಸೇರಿ ಆಸ್ಕರ್​ಗೆ ಮೂರು ಭಾರತೀಯ ಸಿನಿಮಾಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts