More

    ಅಂದು ಜಿಂದಾಬಾದ್, ಇಂದು ಪಾಕಿಸ್ತಾನ್ ಸೆ ಜಿಂದಾ ಭಾಗ್!

    ಅಂದು ಜಿಂದಾಬಾದ್, ಇಂದು ಪಾಕಿಸ್ತಾನ್ ಸೆ ಜಿಂದಾ ಭಾಗ್!ಟರ್ಕಿ ಮತ್ತು ಸಿರಿಯಾ ಫೆಬ್ರವರಿ 6ರ ಮುಂಜಾವು ಎರಡು ಭೀಕರ ಭೂಕಂಪಗಳಿಗೆ ತುತ್ತಾದವು. 7.8 ಮತ್ತು 7.6 ಪ್ರಮಾಣದಲ್ಲಿದ್ದು ಸುಮಾರು 50 ಸಾವಿರ ಪ್ರಾಣಹಾನಿಗೆ ಕಾರಣವಾದ ಈ ಭೂಕಂಪಗಳು ಸಮಕಾಲೀನ ಇತಿಹಾಸದ ಅತಿ ದೊಡ್ಡ ಜಾಗತಿಕ ದುರಂತಗಳು. ಇಂತಹ ಸ್ಥಿತಿಯಲ್ಲಿ ಈ ದೇಶಗಳಿಗೆ ಸಹಾಯ ಒದಗಿಸುವುದು ನಾಗರಿಕ ಜಗತ್ತಿನ ಕರ್ತವ್ಯ. ಭಾರತ ಸರ್ಕಾರ ಭೂಕಂಪ ಸಂಭವಿಸಿದ 24 ಗಂಟೆಗಳೊಳಗೆ ಪರಿಹಾರ ಸಾಮಗ್ರಿಗಳನ್ನು, ಸಹಾಯ ತಂಡಗಳನ್ನು ರವಾನಿಸಿತು. ಭಾರತದ ಎನ್​ಡಿಆರ್​ಎಫ್ ತಂಡಗಳು ತುರ್ಕಿಯ ಭೂಕಂಪಪೀಡಿತ ಪ್ರದೇಶಗಳಲ್ಲಿ ವ್ಯಾಪಕ ಪತ್ತೆ ರಕ್ಷಣೆ ಮತ್ತು ನೆರವಿನ ಕ್ರಮಗಳನ್ನು ಯುದ್ಧಸ್ತರದಲ್ಲಿ ಕೈಗೊಂಡವು. ಭಾರತದ ಈ ನೆರವು ಟರ್ಕಿ ಜನರ ಮನವನ್ನು ಗೆದ್ದಿದೆ. ಇದು ವ್ಯಕ್ತವಾದದ್ದು ಫೆಬ್ರವರಿ 19ರಂದು ಅದಾನ ನಗರದ ವಿಮಾನನಿಲ್ದಾಣದಲ್ಲಿ. ಅಂದು ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಸ್ವದೇಶಕ್ಕೆ ಮರಳಲು ವಿಮಾನ ಏರುತ್ತಿದ್ದ ಭಾರತೀಯ ಯೋಧರಿಗೆ ಧನ್ಯವಾದ ಸಲ್ಲಿಸಲು ಸ್ಥಳೀಯ ಜನತೆ ಸಾಮೂಹಿಕವಾಗಿ ಬಾರಿಸಿದ ಚಪ್ಪಾಳೆಗಳ ಶಬ್ದದಿಂದ ವಿಮಾನನಿಲ್ದಾಣ ತುಂಬಿಹೋಯಿತು. ಭಾರತದ ಸಹಾಯವನ್ನು ಟರ್ಕಿ ಅಧ್ಯಕ್ಷ ಹಾಗೂ ನವದೆಹಲಿಯಲ್ಲಿರುವ ಟರ್ಕಿ ರಾಯಭಾರಿ ಮುಕ್ತಕಂಠದಿಂದ ಕೊಂಡಾಡಿ ಧನ್ಯವಾದ ಅರ್ಪಿಸಿದ್ದಾರೆ.

    ಈ ಪ್ರಕರಣಕ್ಕೆ ಒಂದು ವಿಶೇಷ ಆಯಾಮವಿದೆ. ಟರ್ಕಿ ಇದುವರೆಗೂ ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದ ನೀತಿ ನಿಲುವುಗಳನ್ನು ಅನುಸರಿಸಿಕೊಂಡು ಬಂದ ದೇಶ. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ವಿರುದ್ಧವಾಗಿ, ಪಾಕಿಸ್ತಾನಕ್ಕೆ ಸಹಾಯಕವಾಗಿ ವರ್ತಿಸುವುದು ಅಂಕಾರಾದ ವಿದೇಶನೀತಿಯ ಭಾಗವೇ ಆಗಿರುವುದನ್ನು ಜಗತ್ತು ಕಳೆದ ಮುಕ್ಕಾಲು ಶತಮಾನದಿಂದಲೂ ನೋಡುತ್ತಾ ಬಂದಿದೆ. ಇಷ್ಟೆ ಅಲ್ಲ, 1965 ಮತ್ತು 1971ರ ಯುದ್ಧಗಳಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಟರ್ಕಿಯೇ ಮಾಡಿದೆ. ಅದರ ಪಾಕಿಸ್ತಾನ-ಪರ ನೀತಿ ಕಳೆದ ಐದು ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಿದೆ. ಪ್ರಸಕ್ತ ಅಧ್ಯಕ್ಷ ರೆಚೆಪ್ ತಯ್ಯಿಪ್ ಎದೋಗೆನ್ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ವಿರುದ್ಧ ಹರಿಹಾಯುತ್ತಾರೆ. ಕಾಶ್ಮೀರದಲ್ಲಿ ಭಾರತ ಮುಸ್ಲಿಮರನ್ನು ದಮನಿಸುತ್ತಿದೆ, ಕಾಶ್ಮೀರಿಗಳ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎನ್ನುವುದು ಟರ್ಕಿ ಅಧ್ಯಕ್ಷರು, ರಾಜತಂತ್ರಜ್ಞರ ನಿರಂತರ ಅಪವಾದ.

    ಅಂಕಾರಾದ ಈ ನೀತಿಗೆ ಕೆಲವು ವರ್ಷಗಳಿಂದ ಭಾರತ ಸರ್ಕಾರ ಸಶಕ್ತವಾಗಿಯೇ ಪ್ರತಿಕ್ರಿಯಿಸುತ್ತಿದೆ. ಸೈಪ್ರೆಸ್ ದೇಶದ ಪ್ರಾದೇಶಿಕ ಸಮಗ್ರತೆಗೆ ಟರ್ಕಿ ಒಡ್ಡಿರುವ ಅಪಾಯವನ್ನು ಭಾರತ ಖಂಡಿಸಲು ಆರಂಭಿಸಿದೆ. ಜೊತೆಗೆ ಟರ್ಕಿ ವಿರೋಧಿಗಳಾದ ಸೈಪ್ರಸ್ ಮತ್ತು ಆಮೇನಿಯಾಗಳ ಜೊತೆ ಭಾರತ ಆರ್ಥಿಕ, ಸಾಮರಿಕ ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ವೃದ್ಧಿಸಿಕೊಳ್ಳುತ್ತಿದೆ. ಈ ಮೂಲಕ ಟರ್ಕಿ ಸರ್ಕಾರ ತನ್ನ ಮಿತ್ರನಲ್ಲ ಎನ್ನುವುದನ್ನು ಭಾರತ ಜಗತ್ತಿಗೆ ಮನಗಾಣಿಸುತ್ತಲೇ ಇದೆ. ಆದರೆ ‘ಆಪರೇಷನ್ ದೋಸ್ತ್’ ನೆರವು ಯೋಜನೆ ರೂಪಿಸಿ ಕಾರ್ಯರೂಪಕ್ಕೆ ಇಳಿಸುವ ಮೂಲಕ ಭಾರತ ತಾನು ವಿರೋಧಿಸುವುದು ಟರ್ಕಿ ಸರ್ಕಾರವನ್ನಷ್ಟೇ ಹೊರತು ಆ ದೇಶದ ಜನತೆಯನ್ನಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ. ಇದೇ ನೀತಿಯನ್ನು ಭಾರತ ಅಫ್ಘಾನಿಸ್ತಾನ ಕುರಿತಾಗಿಯೂ ಅನುಸರಿಸುತ್ತಿದೆ. ತಾಲಿಬಾನ್ ಸರ್ಕಾರಕ್ಕೆ ಭಾರತ ರಾಜತಾಂತ್ರಿಕ ಮಾನ್ಯತೆ ನೀಡಿಲ್ಲ. ಅದಾಗಿಯೂ ನಿರಂತರ ಯುದ್ಧ ಮತ್ತು ರಕ್ತಪಾತದಲ್ಲಿ ಬೆಂದಿರುವ ಅಫ್ಘಾನ್ ಜನತೆಯ ಸಹಾಯಕ್ಕೆ ಭಾರತ ಸದಾ ಸಿದ್ಧ. ಆಗಸ್ಟ್ 2021ಕ್ಕೆ ಮೊದಲು ಆ ದೇಶದಲ್ಲಿ ತಾನು ಪ್ರಾರಂಭಿಸಿದ್ದ ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸುತ್ತಲೇ ಇದೆ ಹಾಗೂ ಆಫ್ಘನ್ ಜನತೆಗೆ ಆಹಾರ ಧಾನ್ಯಗಳನ್ನು ಪೂರೈಸಿದೆ. ಈ ಕ್ರಮಗಳ ಮೂಲಕ ಭಾರತ ಜಗತ್ತಿಗೆ ಸಾರುತ್ತಿರುವುದು ಸರ್ಕಾರಗಳ ನಡುವೆ ಮನಸ್ತಾಪ, ದ್ವೇಷ ಇರಬಹುದು, ಆದರೆ ಜನತೆಗಳ ನಡುವೆ ಇವುಗಳಿಗೆ ಸ್ಥಾನವಿಲ್ಲ, ಜಗತ್ತಿನ ಮಾನವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು, ಎಲ್ಲರ ಕಷ್ಟಗಳಲ್ಲಿ ಎಲ್ಲರೂ ಭಾಗಿಯಾಗುವುದು ಮಾನವಧರ್ಮ ಎನ್ನುವ ಭಾರತೀಯ ಮೌಲ್ಯವನ್ನು. ಭಾರತದ ‘ವಸುಧೈವ ಕುಟುಂಬಕಂ’ ಎಂಬ ಉದಾತ್ತ ಮೌಲ್ಯವನ್ನು ಜಗತ್ತು ಗುರುತಿಸಿದೆ ಮತ್ತು ಗೌರವಿಸುತ್ತಿದೆ. ಸಹಜವಾಗಿಯೇ ಅದು ಟರ್ಕಿ ಸರ್ಕಾರದ ಗಮನಕ್ಕೂ ಬಂದಿದೆ, ಅದರ ಕಣ್ಣು ತೆರೆದಿದೆ.

    ಟರ್ಕಿಯ ಸಂಕಷ್ಟಗಳ ಬಗ್ಗೆ ಪಾಕಿಸ್ತಾನ ಯಾವ ನೀತಿಯನ್ನು ಅನುಸರಿಸುತ್ತಿದೆ ಎಂದು ಪರಿಶೀಲಿಸುವುದು ಮುಖ್ಯವಾಗುತ್ತದೆ. ಯಾಕೆಂದರೆ ಲಾಗಾಯ್ತಿನಿಂದಲೂ ಟರ್ಕಿಯೇ ಪಾಕಿಸ್ತಾನದ ಪರಮಮಿತ್ರ. ಕಾಶ್ಮೀರದ ಜೊತೆಗೆ ಪಾಕಿಸ್ತಾನಕ್ಕೆ ಸಂಬಂಧಿಸಿದ ವಿವಿಧ ಅಂತಾರಾಷ್ಟ್ರೀಯ ವಿಷಯಗಳಲ್ಲಿ ಅಂಕಾರ ನಿರಂತರವಾಗಿ ಪಾಕಿಸ್ತಾನದ ಪರವಹಿಸಿದೆ. ಪಾಕಿಸ್ತಾನೀಯರು ಟರ್ಕಿಯನ್ನು ತಮ್ಮ ‘ಭಾಯಿ’ ಎಂದೇ ಬಣ್ಣಿಸುತ್ತಾರೆ. ತಮ್ಮ ಭಾಯಿ ಭೀಕರ ಪ್ರಾಕೃತಿಕ ವಿಕೋಪವನ್ನು ಅನುಭವಿಸುತ್ತಿರುವಾಗ ಸಹಾಯಕ್ಕೆ ನಿಲ್ಲುವುದು ಪಾಕಿಸ್ತಾನದ ಆದ್ಯಕರ್ತವ್ಯ. ಆದರೆ ಮಾಡಿದ್ದೇನು?

    ಮೊದಲಿಗೆ ಅದು ಟರ್ಕಿಗೆ ಪರಿಹಾರ ಸಾಮಗ್ರಿಗಳನ್ನು, ನೆರವಿನ ತಂಡಗಳನ್ನು ಒಯ್ಯುತ್ತಿದ್ದ ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶದ ಮೂಲಕ ಹಾದುಹೋಗಲು ಅನುಮತಿ ನಿರಾಕರಿಸಿತು. ಇದರಿಂದಾಗಿ ಭಾರತೀಯ ವಿಮಾನಗಳು ನೇರ ಹಾದಿಯನ್ನು ತೊರೆದು ಅರಬ್ಬಿ ಸಮುದ್ರದ ಮೇಲೆ ಹಾದು ಇರಾನ್ ಪ್ರವೇಶಿಸಿ ಟರ್ಕಿ ತಲುಪಬೇಕಾದ್ದರಿಂದ ಮೂರೂವರೆ ಗಂಟೆ ಹೆಚ್ಚುವರಿ ಸಮಯ ವ್ಯಯವಾಯಿತು. ಕಾಂಕ್ರೀಟ್ ಕಟ್ಟಡಗಳನ್ನು, ಲೋಹಗಳನ್ನು ಕತ್ತರಿಸುವ ಯಂತ್ರಗಳು ತಡವಾಗಿ ಭೂಕಂಪಪೀಡಿತ ಪ್ರದೇಶಗಳಿಗೆ ತಲುಪಿದ್ದರಿಂದ ಹಲವಾರು ಜೀವಗಳು ಬದುಕಿ ಉಳಿಯುವ ಸನ್ನಿವೇಶ ದೂರವಾಯಿತು.

    ಟರ್ಕಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸುವ ಬದಲು ಪ್ರಧಾನಮಂತ್ರಿ ಶೆಹ್​ಬಾಜ್ ಶರೀಫ್ ಅವರು ಕೆಲವು ಮಂತ್ರಿಗಳನ್ನು, ಸೇನಾಧಿಕಾರಿಗಳನ್ನು ಕರೆದುಕೊಂಡು ಅಂಕಾರಾಕ್ಕೆ ಖುದ್ದು ಭೇಟಿ ನೀಡಿ ಸಂತಾಪ ವ್ಯಕ್ತಪಡಿಸುವ ಮನಸ್ಸು ಮಾಡಿದರು. ಟರ್ಕಿಗೆ ಅಂದು ಬೇಕಾಗಿದ್ದದ್ದು ತಮ್ಮ ನೆಲಕ್ಕೆ ಬಂದು ಅತಿಥಿಸತ್ಕಾರವನ್ನು ಸ್ವೀಕರಿಸಿ ತಮಗೆ ಸಂತಾಪ ಸೂಚಿಸುವ ಭಾಯಿ ಅಲ್ಲ; ಬೇಕಾದದ್ದು ಪರಿಹಾರ ಸಾಮಗ್ರಿಗಳು ಮತ್ತು ಸಹಾಯಹಸ್ತಗಳು. ಕೊನೆಗೂ ಟರ್ಕಿ ಸರ್ಕಾರ ಈ ವಾಸ್ತವವನ್ನು ನೇರಮಾತುಗಳ ಮೂಲಕವೇ ಹೇಳಿ ಪಾಕಿಸ್ತಾನೀಯರಿಗೆ ಸನ್ನಿವೇಶದ ಅರಿವನ್ನು ಮೂಡಿಸಬೇಕಾಯಿತು. ಕಥೆ ಇಷ್ಟಕ್ಕೆ ನಿಲ್ಲುವುದಿಲ್ಲ.

    ಆ ವಾರಾಂತ್ಯದಲ್ಲಿ ಖತಾರ್ ಅಧ್ಯಕ್ಷರು ಟರ್ಕಿಗೆ ಭೇಟಿ ನೀಡಿದ್ದನ್ನು, ಅವರಿಗೆ ಸರ್ಕಾರ ನೀಡಿದ ಸ್ವಾಗತವನ್ನು ನೋಡಿದ ಶರೀಫ್ ಸಾಹೇಬರಿಗೆ ತಾವು ಮತ್ತೊಮ್ಮೆ ಪ್ರಯತ್ನ ಮಾಡಬಾರದೇಕೆ ಅನಿಸಿತು. ಖತಾರ್ ಅಧ್ಯಕ್ಷರ ಹಾಗೆ ತಾವು ಸಹ ಟರ್ಕಿಗೆ ಸಹಾಯಹಸ್ತ ನೀಡುವ ಮನಸ್ಸು ಮಾಡಿದರು. ಹೊರಡುವ ಮೊದಲು ತಾವು ಕೊಂಡೊಯ್ಯಲಿದ್ದ ಪರಿಹಾರ ಸಾಮಗ್ರಿಗಳ ಜೊತೆ ಫೋಟೋಶೂಟ್ ಕಾರ್ಯಕ್ರಮ ಆಯೋಜಿಸಿಕೊಂಡರು. ಅದು ಎಲ್ಲೆಡೆ ಪ್ರಚಾರವೂ ಆಯಿತು. ಆದರೆ ಮುಂದೆ ನಡೆದದ್ದು ಮಾತ್ರ ಆಘಾತಕರವಾದದ್ದು.

    ಪಾಕಿಸ್ತಾನದಿಂದ ಬಂದ ಪರಿಹಾರ ಸಾಮಗ್ರಿಗಳ ಪೊಟ್ಟಣಗಳ ಮೇಲೆ ಪಾಕಿಸ್ತಾನ ಸರ್ಕಾರದ ಮತ್ತು ಸಿಂಧ್ ಪ್ರಾಂತೀಯ ಸರ್ಕಾರದ ಹೆಸರುಗಳು ಮತ್ತು ಮೊಹರುಗಳು ಇದ್ದವು. ಆದರೆ ಅವುಗಳನ್ನು ಬಿಡಿಸಿದ ಟರ್ಕಿಯರಿಗೆ ಒಳಗೆ ಕಂಡದ್ದು ಕಳೆದ ವರ್ಷ ಪಾಕಿಸ್ತಾನ ಪ್ರವಾಹಕ್ಕೊಳಗಾದಾಗ ತಾವೇ ಅಲ್ಲಿಗೆ ಪರಿಹಾರವಾಗಿ ಕಳುಹಿಸಿದ್ದ ಸಾಮಗ್ರಿಗಳು! ಅಂದರೆ ಪ್ರವಾಹ ಪೀಡಿತ ಪಾಕಿಸ್ತಾನಿಯರಿಗೆ ವಿತರಿಸಲೆಂದು ಟರ್ಕಿ ಜನತೆ ಕಾಳಜಿಯಿಂದ ಕಳುಹಿಸಿದ್ದ ಸಾಮಗ್ರಿಗಳನ್ನು ವಿತರಿಸಿರಲೇ ಇಲ್ಲ! ಬದಲಾಗಿ ಅವುಗಳನ್ನು ಜೋಪಾನವಾಗಿ ಕಾದಿಟ್ಟುಕೊಂಡು ಇಂದು ಟರ್ಕಿಗೆ ಹಿಂತಿರುಗಿಸಿತ್ತು. ಟರ್ಕಿ ಮಾಧ್ಯಮಗಳಲ್ಲಿ ಬಿತ್ತರವಾದ ಈ ಆಘಾತಕಾರಿ ವಿಷಯವನ್ನು ಪಾಕಿಸ್ತಾನಿಯರಿಗೆ ತಲುಪಿಸಿದ್ದು ಪತ್ರಕರ್ತ ಡಾ. ಶಾಹಿದ್ ಮಸೂದ್.

    ಇಂದು ಪಾಕಿಸ್ತಾನದ ಆರ್ಥಿಕ ದುಸ್ಥಿತಿ ಗಮನಿಸಿದರೆ ಟರ್ಕಿಗೆ ಸಹಾಯ ನೀಡುವ ಸಾಮರ್ಥ್ಯ ಅದಕ್ಕಿಲ್ಲ ಎನ್ನುವುದು ಸತ್ಯ. ಐಎಂಎಫ್​ನಿಂದ ಕೇವಲ 1.1 ಬಿಲಿಯನ್ ಡಾಲರ್ ಸಾಲ ಪಡೆಯಲು ಪಾಕಿಸ್ತಾನ ವಿಫಲವಾಗಿದೆ. ಐಎಂಎಫ್ ವಿಧಿಸಿರುವ ಷರತ್ತುಗಳನ್ನು ಪೂರೈಸಲು ಅದು ಪ್ರಯತ್ನ ಆರಂಭಿಸಿದ್ದರೂ ಅದು ಪೂರ್ಣವಾಗುವ ಸಾಧ್ಯತೆ ಕಾಣಬರುತ್ತಿಲ್ಲ. ಇದರರ್ಥ ಐಎಂಎಫ್ ನೆರವು ದೊರೆಯುವುದಿಲ್ಲ. ಅದು ದೊರೆಯದೆ ಸೌದಿ ಅರೇಬಿಯಾ ಮತ್ತು ಯುಎಇಗಳಿಂದಲೂ ಯಾವುದೇ ಸಹಾಯಧನ ದೊರೆಯುವ ಸಾಧ್ಯತೆ ಇಲ್ಲ. ಇಂತಹ ಸನ್ನಿವೇಶದಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ಪ್ರಾಮಾಣಿಕ ಹಾಗೂ ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸುವ ಬದಲು ಪಾಕ್ ಸರ್ಕಾರ ಎಲ್ಲವನ್ನು ಇಮ್ರಾನ್ ಖಾನ್ ತಲೆಗೆ ತಲೆಗೆ ಕಟ್ಟುವ ಪ್ರಯತ್ನದಲ್ಲಿ ತೊಡಗಿದೆ.

    ಕಳೆದ ಏಪ್ರಿಲ್​ನಲ್ಲಿ ಶರೀಫ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಪಾಕಿಸ್ತಾನದಲ್ಲಿದ್ದದ್ದು 11 ಬಿಲಿಯನ್ ಡಾಲರ್ ವಿದೇಶಿ ವಿನಿಮಯ. ಆ ಸಂಗ್ರಹ ವೇಗವಾಗಿ ಕುಸಿಯುತ್ತಿದೆ ಎನ್ನುವುದನ್ನು ಗಮನಿಸುತ್ತಿದ್ದರೂ ಸರ್ಕಾರ ಅನಗತ್ಯ ಆಮದುಗಳಿಗಾಗಿ ಅಮೂಲ್ಯ ಡಾಲರ್​ಗಳನ್ನು ವ್ಯರ್ಥಮಾಡತೊಡಗಿತು. ಚಹಾಪುಡಿ ಆಮದು ದುಸ್ತರವಾಗುತ್ತಿದೆ ಎಂದು ಹೇಳಿ ದಿನನಿತ್ಯ ಕಡಿಮೆ ಚಾಯ್ ಕುಡಿಯುವಂತೆ ಜನರಿಗೆ ಉಪದೇಶಿಸಿದ ಸರ್ಕಾರ ತನ್ನ ಮಂತ್ರಿಗಳ ಹಾಗೂ ಸೇನಾಧಿಕಾರಿಗಳ ಬಳಕೆಗಾಗಿ ಎರಡು ಸಾವಿರ ಐಷಾರಾಮಿ ವಾಹನಗಳನ್ನು ಆಮದು ಮಾಡಿಕೊಂಡಿತು. ಅವುಗಳಿಗಾಗಿ ಅದು ವ್ಯಯಿಸಿದ ಮೊತ್ತ 1.52 ಬಿಲಿಯನ್ ಡಾಲರ್! ಜೊತೆಗೆ ಪ್ರಧಾನಿ ಶರೀಫ್ ಅವರು ತಮ್ಮ ಸುರಕ್ಷೆಗಾಗಿ 11 ಮಿಲಿಯನ್ ಡಾಲರ್ ಬಳಸಿದ್ದಾರೆ. ರಫ್ತುಗಳನ್ನು ವೃದ್ಧಿಸಿ ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಳಗೊಳಿಸುವ ವ್ಯಾವಹಾರಿಕ ಯೋಜನೆಗಳನ್ನು ಸರ್ಕಾರ ಹಾಕಿಕೊಳ್ಳಲಿಲ್ಲ. ಪರಿಣಾಮವಾಗಿ ವಿದೇಶಿ ವಿನಿಮಯ ಭಂಡಾರ ಈಗ ಎರಡೂವರೆ ಬಿಲಿಯನ್ ಡಾಲರ್​ಗಳಿಗೆ ಇಳಿದಿದೆ. ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿ ಪಾಕಿಸ್ತಾನ ಇಲ್ಲ.

    ತೆರಿಗೆಗಳನ್ನು ಏರಿಸಿ ಆಂತರಿಕವಾಗಿ ವರಮಾನ ಹೆಚ್ಚಿಸಿಕೊಳ್ಳದಿದ್ದಲ್ಲಿ ಸಾಲ ನೀಡಲಾಗುವುದಿಲ್ಲ ಎಂಬ ಐಎಂಎಫ್ ಷರತ್ತಿಗನುಗುಣವಾಗಿ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ 170 ಬಿಲಿಯನ್ ಡಾಲರ್​ಗಳನ್ನು ಜನರಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸುವ ಯೋಜನೆ ಹಾಕಿಕೊಂಡಿದೆ. ಅದರ ಪರಿಣಾಮವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏಕಾಏಕಿ ಗಗನಕ್ಕೇರಿದೆ. ಲೀಟರ್​ಗೆ 250 ರೂಪಾಯಿ ಆಗಿರುವ ಹಾಲು ಮತ್ತು ಕಿಲೋಗ್ರಾಂಗೆ 800 ರೂಪಾಯಿ ಆಗಿರುವ ಕೋಳಿಮಾಂಸ ಬೆಲೆಯೇರಿಕೆಗೆ ಎರಡು ಉದಾಹರಣೆಗಳಷ್ಟೇ. ಪೆಟ್ರೋಲಿಯಂ ಮಂತ್ರಿ ಫೆಬ್ರವರಿ 8ರಂದು ಹೇಳಿದ ಪ್ರಕಾರ ಪೆಟ್ರೋಲ್ ಮತ್ತು ಡೀಸೆಲ್ ಆಮದು ಮಾಡಿಕೊಳ್ಳುವ ಸಾಮರ್ಥ್ಯ ಸರ್ಕಾರಕ್ಕೆ ಇಲ್ಲ; ಈಗಿರುವ ಪೆಟ್ರೋಲ್ ಸಂಗ್ರಹ 20 ದಿನಗಳಿಗೆ ಮತ್ತು ಡೀಸೆಲ್ ಸಂಗ್ರಹ 29 ದಿನಗಳಿಗೆ ಮಾತ್ರ ಸಾಕಾಗುತ್ತದೆ! ಆ ಎಚ್ಚರಿಕೆಯನ್ನು ಅವರು ನೀಡಿ ಎರಡು ವಾರಗಳಾಗುತ್ತಿವೆ, ಇನ್ನೊಂದು ವಾರದಲ್ಲಿ ಪಾಕಿಸ್ತಾನ ಯಾವ ಸ್ಥಿತಿ ತಲುಪಬಹುದು? ಇದಕ್ಕಿಂತಲೂ ಆಘಾತಕಾರ ಸುದ್ದಿಯನ್ನು ರಕ್ಷಾ ಮಂತ್ರಿ ವಾಜ ಆಸಿಫ್ ಫೆಬ್ರವರಿ 18ರಂದು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಪಾಕಿಸ್ತಾನ ವಿದೇಶಿ ಸಾಲದ ಕಂತುಗಳನ್ನು ಪಾವತಿಯಲ್ಲಿ ವಿಫಲವಾಗಿ ಡಿಫಾಲ್ಟರ್ ಆಗಿದೆ! ಇದರರ್ಥ ಇಷ್ಟೇ- ಪಾಕಿಸ್ತಾನಕ್ಕೆ ಇನ್ನು ಯಾವ ವಿದೇಶಿ ನೆರವೂ ದೊರೆಯುವುದಿಲ್ಲ.

    ಇದಕ್ಕೆ ಸಾಮಾನ್ಯ ಪಾಕಿಸ್ತಾನಿಯರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ? ‘ಸರ್ಕಾರ ತಯಾರಿಸಿದ ಅಣ್ವಸ್ತ್ರಗಳನ್ನು ನಮ್ಮ ಮೇಲೆ ಪ್ರಯೋಗಿಸಿ ನಮ್ಮೆಲ್ಲ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಿಬಿಡಬಾರದೇಕೆ’ ಎಂದು ಪ್ರಶ್ನಿಸುವ ಮೂಲಕ ಪಾಕ್ ನಾಗರಿಕನೊಬ್ಬ ದೇಶದಲ್ಲಿ ಮಡುಗಟ್ಟಿರುವ ಹತಾಶೆಗೆ ಮಾತುಕೊಟ್ಟಿದ್ದಾನೆ. ಬದುಕಲು ಅಸಾಧ್ಯವಾದ ಸ್ಥಿತಿ ನಿರ್ವಣವಾಗುತ್ತಿದೆ ಎಂದು ಹೇಳಿ ಪಾಕಿಸ್ತಾನವನ್ನು ತೊರೆದು ವಿದೇಶಗಳತ್ತ ಹಾರಿಹೋಗುತ್ತಿರುವವರ ಸಂಖ್ಯೆ ಗಣನೀಯವಾಗಿ ವೃದ್ಧಿಸುತ್ತಿದೆ. ಒಂದು ವರದಿಯ ಪ್ರಕಾರ ಕಳೆದ ವರ್ಷ ಪಾಕಿಸ್ತಾನವನ್ನು ತೊರೆದು ವಿದೇಶಗಳಲ್ಲಿ ಬದುಕನ್ನು ಅರಸಿ ವಲಸೆ ಹೋದವರ ಸಂಖ್ಯೆ 8,32,339! ಒಂದು ಕಾಲದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್ ’ಎಂದು ಹೇಳುತ್ತಿದ್ದ ಜನರು ಈಗ ‘ಪಾಕಿಸ್ತಾನ್ ಸೆ ಜಿಂದಾ ಭಾಗ್’ ಎಂದು ಹೇಳುವಂತಾಗಿದೆ ಎಂದು ಅಲ್ಲಿನ ಪತ್ರಕರ್ತರೇ ಹೇಳಿಕೊಂಡು ನಗುತ್ತಿದ್ದಾರೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts