More

    ನಾಟು ನಾಟು ನಾಟು ನಾಟು…. ಹಳ್ಳಿ ನಾಟು!

    ನಾಟು ನಾಟು ನಾಟು ನಾಟು…. ಹಳ್ಳಿ ನಾಟು!ಗಟ್ಟಿ ತಳಹದಿ ಹೊಂದಿರುವ ಯಾವುದೇ ಸಂಸ್ಕೃತಿ ಬಾಹ್ಯ ಹೇರಿಕೆಯನ್ನು ಸುಲಭದಲ್ಲಿ ಒಪು್ಪವುದಿಲ್ಲ. ಬೇರೆ ಬೇರೆ ಕಾರಣಗಳಿಗಾಗಿ ರಾಜಕೀಯ ಆಡಳಿತ ಬಾಹ್ಯ ಜನರದಾದರೂ, ಸ್ಥಳೀಯರು ತಮ್ಮದೇ ಆದ ರೀತಿಯಲ್ಲಿ ಇದಕ್ಕೆ ಪ್ರತಿರೋಧ ತೋರುತ್ತಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮ ಇದಕ್ಕೊಂದು ನಿದರ್ಶನ.

    ತರ್ಕವನ್ನು ಬದಿಗಿಟ್ಟು ನೋಡುವುದಾದರೆ, ಎಸ್.ಎಸ್.ರಾಜಮೌಳಿ ಸಿನಿಮಾಗಳೆಂದರೆ ಕಣ್ಣಿಗೆ ಹಬ್ಬ. ಚಿತ್ರವಿಚಿತ್ರ ತಿರುವುಗಳಿಂದ ಕೂಡಿದ ಕಥೆ (ಅಂದಹಾಗೆ ರಾಜಮೌಳಿ ಚಲನಚಿತ್ರಗಳಿಗೆ ಚಿತ್ರಕಥೆ ಬರೆಯುವುದು ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರೇ); ದೃಶ್ಯ ವೈಭವ; ಅದ್ದೂರಿತನ; ಗ್ರಾಫಿಕ್ಸ್ ಚಮತ್ಕಾರ; ಆಕರ್ಷಕ ಹಾಡುಗಳು- ಇವೆಲ್ಲ ರಾಜಮೌಳಿ ಹೆಗ್ಗುರುತುಗಳು. ಹೀಗೆ ಅಪಾರ ಪರಿಶ್ರಮ ಮತ್ತು ಸಮಯ ಬೇಡುವುದರಿಂದಾಗಿಯೇ ಅವರು ಎರಡು ಮೂರು ವರ್ಷಗಳಿಗೆ ಒಂದು ಸಿನಿಮಾ ಮಾತ್ರ ಮಾಡಲು ಸಾಧ್ಯವಾಗುತ್ತದೆ. ಹೀಗಿದ್ದರೂ ಜನರು ಅವರ ಚಿತ್ರಗಳಿಗೆ ಕಾಯುತ್ತಾರೆ. ಇರಲಿ, ಇಲ್ಲಿ ಹೇಳಹೊರಟಿರುವ ವಿಷಯ ಬೇರೆಯದು. ಕೆಲ ತಿಂಗಳ ಹಿಂದೆ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದ ಆರ್​ಆರ್​ಆರ್ ಚಿತ್ರದಲ್ಲಿನ ‘ನಾಟು ನಾಟು…’ ಹಾಡು ಯಾರಿಗೆ ಗೊತ್ತಿಲ್ಲ? ಆ ಹಾಡು ಕೇಳಿದೊಡನೆ ಎಂಥವರಿಗೂ ಕುಣಿಯಬೇಕೆನಿಸುತ್ತದೆ. ಅದರಲ್ಲೂ ಜ್ಯೂನಿಯರ್ ಎನ್​ಟಿಆರ್ ಮತ್ತು ರಾಮಚರಣ ತೇಜ ಅವರು ಈ ಹಾಡಿನಲ್ಲಿ ಅಕ್ಷರಶಃ ಧೂಳೆಬ್ಬಿಸಿದ್ದಾರೆ. ಆಸ್ಕರ್ ಪುರಸ್ಕಾರ ಸಹ ಒಲಿದುಬಂದಿದ್ದು ಈ ಹಾಡಿನ ಮತ್ತೊಂದು ಹೆಗ್ಗಳಿಕೆ.

    ಇಲ್ಲಿ ಒಂದು ಸೂಕ್ಷ್ಮವಿದೆ. ಅದು ಪಾಶ್ಚಾತ್ಯ ಸಂಸ್ಕೃತಿಯೆದುರು ಸ್ಥಳೀಯ ಪರಂಪರೆಯ ಅನಾವರಣ ಮತ್ತು ಪರಕೀಯ ಆಳ್ವಿಕೆಗೆ ಸ್ಥಳೀಯರು ತಮ್ಮದೇ ಆದ ರೀತಿಯಲ್ಲಿ ಸೆಡ್ಡುಹೊಡೆಯುವ ಬಗೆ ಇಲ್ಲಿ ಅಡಗಿದೆ. ಬ್ರಿಟಿಷರ ಪಾರ್ಟಿಯಲ್ಲಿ ಬ್ರಿಟಿಷ್ ನರ್ತಕನೊಬ್ಬ ಇವರನ್ನು ಅವಮಾನಿಸುತ್ತಾನೆ. ನಿಮಗೆ ಫ್ಲೆಮಿಂಗೋ ಡಾನ್ಸ್ ಬರುತ್ತದೆಯೇ ಎಂದೆಲ್ಲ ಕೇಳಿ ಕೆಣಕುತ್ತಾನೆ. ಇದು ಬರೀ ನೃತ್ಯಕ್ಕೆ ಸಂಬಂಧಿಸದೆ ಭಾರತೀಯತೆಯ ಸ್ವಾಭಿಮಾನಕ್ಕೇ ಎಸೆದ ಸವಾಲಾಗಿರುತ್ತದೆ. ಅದಕ್ಕೆ ಚಿತ್ರದ ಇಬ್ಬರು ನಾಯಕರು ವಿಶಿಷ್ಟ ರೀತಿಯಲ್ಲಿ ಉತ್ತರ ಕೊಡುತ್ತಾರೆ ಮತ್ತು ಈ ಸವಾಲಿನಲ್ಲಿ ಗೆಲ್ಲುತ್ತಾರೆ. ಸ್ಥಳೀಯ ಸಂಸ್ಕೃತಿಯ ಶಕ್ತಿ-ಸತ್ವದೆದುರು ಆಮದು ಸಂಸ್ಕೃತಿಯ ಥಳಕುಬಳುಕಿನ ಆಟ ನಡೆಯುವುದಿಲ್ಲ. ಅಂತಿಮವಾಗಿ ಬ್ರಿಟಿಷ್ ನರ್ತಕ ಸೋಲುವ ಮೂಲಕ ನೆಲದ ಕಲೆ ಗೆಲ್ಲುತ್ತದೆ. ಆ ಹಾಡಿನ ಸಾಹಿತ್ಯ ಕೂಡ ಮಜವಾಗಿದೆ. ಅಪ್ಪಟ ಗ್ರಾಮೀಣ ಸೊಗಡಿನಿಂದ ಕೂಡಿದೆ. ‘ಹೊಲದ ಒಡ್ಡು ಭೂಮಿಯಲ್ಲಿ ಹೋರಿಯೊಂದು ಹಾರಿದಂತೆ/ಮಾರಮ್ಮನ ಜಾತ್ರೆಯಲ್ಲಿ ಪೋತರಾಜ ಊಗಿದಂತೆ/ ಕಚ್ಚೆಪಂಚೆ ಉಟ್ಟುಕೊಂಡು ದೊಣ್ಣೆವರಸೆ ಮಾಡಿದಂತೆ/ಮರದ ನೆರಳ ಮರಳಿನಲ್ಲಿ ಪಡ್ಡೆ ಗುಂಪು ಕೂಡಿದಂತೆ/ ಮೆಕ್ಕೆಜೋಳ ರೊಟ್ಟಿಯಲ್ಲಿ ಕೆಂಪು ಗೊಜ್ಜು ಬೆರೆಸಿದಂತೆ/ ನಮ್ಮಾಟ ನೋಡು ನಮ್ಮಾಟ ನೋಟು ನಮ್ಮಾಟ ನೋಡು/ ನಾಟು ನಾಟು ನಾಟು ನಾಟು/ ನಾಟು ನಾಟು ಹಳ್ಳಿ ನಾಟು/ನಾಟು ನಾಟು ನಾಟು ನಾಟು/ ನಾಟು ನಾಟು ಊರ ನಾಟು/ ನಾಟು ನಾಟು ನಾಟು/ ಖಾರಮೆಣಸಿನಂತೆ ಭಾರಿ ಘಾಟು/ನಾಟು ನಾಟು ನಾಟು/ ಬಿಚ್ಚುಗತ್ತಿಯಂತೆ ವೀರನಾಟು…’ ಹೀಗೆ ಸಾಗುತ್ತದೆ ಹಾಡು. ಇಂಥ ಏಟು ಬಿದ್ದರೆ ಬ್ರಿಟಿಷರು ಹೆದರದೆ ಇನ್ನೇನು! ಭೀಮನು ತನ್ನ ಸಮುದಾಯದ ಬಾಲಕಿ ಮಲ್ಲಿಯನ್ನು ಬ್ರಿಟಿಷ್ ಬಂಧನದಿಂದ ಬಿಡಿಸಿಕೊಂಡು ಬರುವುದು ಸಹ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸಂಕೇತವೇ ಆಗಿದೆ.

    ‘ಲಗಾನ್’ ಚಿತ್ರದಲ್ಲಿ ಬ್ರಿಟಿಷ್ ಆಳರಸರ ವಿರುದ್ಧ ಸ್ಥಳೀಯರಿಗೆ ಪ್ರತಿರೋಧದ ಸಾಧನವಾಗಿದ್ದು ಕ್ರಿಕೆಟ್ ಆಟ. ಆಗ ಬ್ರಿಟಿಷರು ಭಾರಿ ತೆರಿಗೆ ಹೇರುತ್ತಿದ್ದರು. ಇದರ ಜತೆಗೆ, ಬರದ ಕಾರಣದಿಂದಾಗಿ ಬೆಳೆ ಬಾರದೆ ಜನ ಕಂಗಾಲಾಗಿರುತ್ತಾರೆ. ಆಗ ಬ್ರಿಟಿಷ್ ಸೇನಾಧಿಕಾರಿಯೊಬ್ಬ ಒಂದು ಆಫರ್ ಮುಂದಿಡುತ್ತಾನೆ. ಕ್ರಿಕೆಟ್ ಪಂದ್ಯದಲ್ಲಿ ಹಳ್ಳಿಗರು ಬ್ರಿಟಿಷ್ ತಂಡವನ್ನು ಸೋಲಿಸಿದರೆ ಎರಡು ವರ್ಷದ ತೆರಿಗೆ ಮನ್ನಾ ಮಾಡುವ ಆಫರ್ ಅದು. ಆ ಗ್ರಾಮಸ್ಥರು ಪರಕೀಯವಾದ, ತಲೆಬುಡ ಗೊತ್ತಿಲ್ಲದ ಕ್ರಿಕೆಟ್ ಕಲಿತು ಬ್ರಿಟಿಷ್ ತಂಡವನ್ನು ಸೋಲಿಸುವ ಮೂಲಕ ಪಾಠ ಕಲಿಸುತ್ತಾರೆ.

    ಸಾಮಾನ್ಯವಾಗಿ, ಗಟ್ಟಿ ತಳಹದಿ ಹೊಂದಿರುವ ಯಾವುದೇ ಸಂಸ್ಕೃತಿ ಬಾಹ್ಯ ಹೇರಿಕೆಯನ್ನು ಸುಲಭದಲ್ಲಿ ಒಪು್ಪವುದಿಲ್ಲ. ಬೇರೆ ಬೇರೆ ಕಾರಣಗಳಿಗಾಗಿ ರಾಜಕೀಯ ಆಡಳಿತ ಬಾಹ್ಯ ಜನರದಾದರೂ, ಸ್ಥಳೀಯರು ತಮ್ಮದೇ ಆದ ರೀತಿಯಲ್ಲಿ ಇದಕ್ಕೆ ಪ್ರತಿರೋಧ ತೋರುತ್ತಾರೆ. ಭಾರತದ ಸ್ವಾತಂತ್ರ್ಯ ಹೋರಾಟವೂ ಹಾಗೇ ತಾನೆ. ಹೋರಾಟದ ಮುಂಚೂಣಿಯಲ್ಲಿ ಒಂದಷ್ಟು ಜನರಿದ್ದರೂ ತೆರೆಯ ಹಿಂದಿದ್ದುಕೊಂಡು, ಅನಾಮಧೇಯರಾಗಿದ್ದುಕೊಂಡು ಹೋರಾಟದ ನದಿಗೆ ಸೇರುತ್ತ ಸೇರುತ್ತ ಅದನ್ನು ಮಹಾಸಾಗರವಾಗಿ ಪರಿವರ್ತಿಸುವವರು, ಅದಕ್ಕೊಂದು ಅಬ್ಬರ ಉಬ್ಬರ ತಂದುಕೊಡುವವರು ಜನಸಾಮಾನ್ಯರೇ. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಜನಸಾಮಾನ್ಯರ ಸಕ್ರಿಯ ಪಾತ್ರ ಅನನ್ಯ. ಅದಕ್ಕಾಗಿ ಅವರು ಅನುಭವಿಸಿದ ಕಷ್ಟಕೋಟಲೆಗಳು ಒಂದೆರಡಲ್ಲ. ಎಷ್ಟೋ ಮಂದಿ ಕುಟುಂಬವನ್ನೇ ತ್ಯಜಿಸಿ ಹೋರಾಟದ ಸಮಿತ್ತುಗಳಾದರು. ತಮ್ಮನ್ನು ಅಪಾಯಕ್ಕೆ ಒಡ್ಡಿಕೊಂಡು ಹೋರಾಟಗಾರರಿಗೆ ಆಶ್ರಯ- ಅನ್ನ ನೀಡಿ ಕಾಪಾಡಿದ ಮಾತೆಯರ ಲೆಕ್ಕವಿಟ್ಟವರಾರು? ಬ್ರಿಟಿಷ್​ವಿರೋಧಿ ಬರಹಗಳಿರುತ್ತಿದ್ದ ಭೂಗತ ಪತ್ರಿಕೆಗಳನ್ನು ಊರೂರಿಗೆ ತಲುಪಿಸುವಲ್ಲಿಯೂ ಜನರ ಪಾತ್ರವಿತ್ತು. ಸ್ವಾತಂತ್ರ್ಯದ ಬಯಕೆ ಎಂಬುದು ಮಾನವನ ಮೂಲ ಗುಣ. ‘ಒಂದು ಆದರ್ಶಕ್ಕಾಗಿ ಒಬ್ಬ ವ್ಯಕ್ತಿ ಸಾಯಬಹುದು. ಆದರೆ ಆತನ ಸಾವಿನ ನಂತರ ಆ ಆದರ್ಶವು ಸಹಸ್ರಾರು ಜನರನ್ನು ಉದ್ದೀಪಿಸುವ ಮೂಲಕ ಮರುಹುಟ್ಟು ಪಡೆಯುತ್ತದೆ’ ಎನ್ನುವ ಮೂಲಕ, ಹೋರಾಟದ ಸಾರ್ಥಕತೆಯನ್ನು ತೆರೆದಿಟ್ಟಿದ್ದಾರೆ ಸುಭಾಷಚಂದ್ರ ಬೋಸ್. ‘ಕೇವಲ ಬಾಂಬು ಮತ್ತು ಪಿಸ್ತೂಲುಗಳಿಂದ ಕ್ರಾಂತಿ ಸಂಭವಿಸುವುದಿಲ್ಲ. ಆದರ್ಶದ ಮೊಣಚುಕಲ್ಲಿನ ಮೇಲೆ ಕ್ರಾಂತಿಯ ಕತ್ತಿ ಹರಿತವಾಗಬೇಕು’ ಎಂಬ ಭಗತ್ ಸಿಂಗ್ ಮಾತು ಸಹ ಇದನ್ನೇ ಧ್ವನಿಸುತ್ತದೆ.

    ಯಾವುದೇ ದೇಶದ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ನೆಲಮೂಲ ಸಂಸ್ಕೃತಿಯನ್ನು ಜತನ ಮಾಡಿಕೊಂಡು, ಆ ಸಂಸ್ಕೃತಿಯ ವಕ್ತಾರರನ್ನು ಗೌರವಿಸುವುದು ಸಹ ಮುಖ್ಯವಾದುದು. ಸಮಾಜದಲ್ಲಿ ಹೆಚ್ಚು ಪ್ರಚಾರಪ್ರಸಿದ್ಧಿ ಪಡೆಯದ ನೇಪಥ್ಯದ ನಕ್ಷತ್ರಗಳಿಗೂ ಪದ್ಮ ಪುರಸ್ಕಾರಗಳು ಒಲಿಯುವುದನ್ನು ಈಚಿನ ವರ್ಷಗಳಲ್ಲಿ ಕಾಣುತ್ತಿದ್ದೇವೆ. ಇದು ಸಹ ಮೂಲವನ್ನು ಗೌರವಿಸುವ- ಗುರುತಿಸುವ ಪ್ರಕ್ರಿಯೆಯೇ ಆಗಿದೆ. ಹಾಗಿಲ್ಲವಾದಲ್ಲಿ, ಗುಡ್ಡಕ್ಕೆ ಏಳು ಸುರಂಗ ಕೊರೆದು, ಎರಡು ಎಕರೆ ಕೃಷಿ ಜಮೀನಿಗೆ ನೀರಾವರಿ ಮಾಡಿಕೊಂಡ ಸಾಹಸಿ, ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸನಿಹದ ಮಹಾಲಿಂಗ ನಾಯ್ಕ ಅವರ ಬಗ್ಗೆ ಸ್ಥಳೀಯರನ್ನು ಹೊರತುಪಡಿಸಿ, ಹೊರಗಿನವರಿಗೆ ತಿಳಿಯುತ್ತಿರಲಿಲ್ಲವೇನೋ? ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ ಅವರಿಗೂ ಈ ಮಾತು ಅನ್ವಯ. ಇಲ್ಲವಾದಲ್ಲಿ ಈ ‘ತಮಟೆ ಮಾಂತ್ರಿಕ’ನ ತಮಟೆ ಸದ್ದು ಹೊರಗಿನವರ ಕಿವಿಗೆ ಬೀಳುವ ಸಾಧ್ಯತೆ ಕಡಿಮೆ ಇತ್ತು. ಈ ಜಾನಪದ ಕಲೆಯನ್ನು ಮುಂದುವರಿಸುವ ಉದ್ದೇಶದಿಂದ ಅವರು ಯುವಕರಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ಇವರಿಗೆ ಈ ಸಾಲಿನಲ್ಲಿ ಪದ್ಮಶ್ರೀ ಪುರಸ್ಕಾರ ಸಂದಿದೆ. ಬವಾನ್ ಬುಟಿ ಎಂಬುದು ಬಿಹಾರದ ಪಾರಂಪರಿಕ ಕಲಾಕೌಶಲಗಳಲ್ಲಿ ಒಂದು. ವಿಶೇಷವಾಗಿ ಸೀರೆಯ ಮೇಲೆ ಈ ಕಲಾಕೈಚಳಕವನ್ನು ಕಾಣಬಹುದು. ನಳಂದಾ ಜಿಲ್ಲೆಯ ಕಪಿಲ್ ದೇವ್ ಪ್ರಸಾದ್ ಈ ಕಲೆಯಲ್ಲಿ ಸಿದ್ಧಹಸ್ತ. ಈಗ 68 ವರ್ಷದ ಅವರು 15ನೇ ವಯಸ್ಸಿನಿಂದಲೇ ಈ ಕಲೆಯಲ್ಲಿ ತೊಡಗಿರುವವರು. ಇದು ಅವರಿಗೆ ಕುಟುಂಬದಿಂದ ಬಂದ ಬಳುವಳಿ. 125 ಜನರ ತಂಡವನ್ನು ಕಟ್ಟಿಕೊಂಡು ಕಲೆಯ ಉಳಿವಿಗೆ ಶ್ರಮಿಸುತ್ತಿರುವ ಅವರಿಗೆ ಈ ಬಾರಿ ಪದ್ಮ ಪ್ರಶಸ್ತಿ ಬಂದಿದೆ. ಕಲೆಯಲ್ಲಿ ಕೌಶಲ ಸಾಧಿಸುವುದು ಒಂದು ಸಾಧನೆಯಾದರೆ, ಆ ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನ ಸಹ ಮುಖ್ಯವಾಗುತ್ತದೆ. ಅಸ್ಸಾಂನ ಕಲಾ ಸಿರಿವಂತಿಕೆಯನ್ನು ಬಿಂಬಿಸುವ ‘ಮುಖ’ ಸಂಪ್ರದಾಯ ವಿಶಿಷ್ಟವಾದುದು. ಈ ಕಲೆಯಲ್ಲಿ ಪ್ರಾಣಿಪಕ್ಷಿಗಳು, ದೇವತೆಗಳು-ರಾಕ್ಷಸರು, ಮಾನವರು ಇತ್ಯಾದಿ ಮುಖವಾಡಗಳನ್ನು ಸಿದ್ಧಪಡಿಸುವಲ್ಲಿ ಹೇಮಚಂದ್ರ ಗೋಸ್ವಾಮಿ ಪರಿಣತರು. ಇವರು ತರಬೇತಿ ಕೇಂದ್ರ ಸ್ಥಾಪಿಸುವ ಮೂಲಕ ಕಲೆಯನ್ನು ಮುಂದುವರಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಪದ್ಮಶ್ರೀ ಪುರಸ್ಕಾರ ಸಂದಿದೆ.

    ‘ಆತ್ಮನಿರ್ಭರ’ ಪರಿಕಲ್ಪನೆ ಈಗ ಹೆಚ್ಚು ಚರ್ಚೆಯಲ್ಲಿರುವ ಪದಪುಂಜ. ಬೇರೆ ಬೇರೆ ರಂಗಗಳಲ್ಲಿ ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಭಾರತವನ್ನು ಸ್ವಾವಲಂಬಿಯಾಗಿಸುವ ಉದ್ದೇಶವನ್ನು ಇದು ಹೊಂದಿದೆ. ಭಾರತವೂ ಜಾಗತೀಕರಣ ಮತ್ತು ಉದಾರೀಕರಣಕ್ಕೆ ತೆರೆದುಕೊಂಡು ಅನೇಕ ವರ್ಷಗಳಾಗಿದ್ದು ಇಂದಿನ ಜಗತ್ತಿನಲ್ಲಿ ಪರಸ್ಪರ ವ್ಯಾಪಾರವಹಿವಾಟು ಸಂಬಂಧ ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಈ ಪರಿಕಲ್ಪನೆಯ ನೂರಕ್ಕೆ ನೂರು ಅನುಷ್ಠಾನ ಹೇಗೆಂಬ ಪ್ರಶ್ನೆಗಳಿದ್ದರೂ, ಒಟ್ಟಾರೆಯಾಗಿ ಈ ಇಂಗಿತವನ್ನು ಅಲ್ಲಗಳೆಯಲಾಗದು. ದೇಶೀಯವಾಗಿಯೇ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವುದು ಈ ಪರಿಕಲ್ಪನೆಯ ಕಾರ್ಯಸಾಧ್ಯತೆಗೆ ಒಂದು ಉತ್ತಮ ನಿದರ್ಶನ. ‘ಆತ್ಮನಿರ್ಭರ’ ಪದವು ಭೌತಿಕ ಅರ್ಥ ಮಾತ್ರವಲ್ಲದೆ, ಗೂಢಾರ್ಥವನ್ನೂ ತನ್ನಲ್ಲಿ ಗರ್ಭೀಕರಿಸಿಕೊಂಡಿದೆ. ಅದುವೇ ಭಾರತದ ಆತ್ಮ ವ್ಯಾಖ್ಯಾನ. ‘ಜಗತ್ತಿನ ಸರ್ವರಿಗೂ ಒಳ್ಳೆಯದಾಗಲಿ’ ಎಂದು ಪ್ರಾರ್ಥಿಸುವ ವಿಶಾಲಹೃದಯ ನಮ್ಮದು. ‘ಜಗತ್ತೇ ಒಂದು ಕುಟುಂಬ’ ಎಂಬ ಆದರ್ಶವೂ ಈ ಪುಣ್ಯನೆಲದಲ್ಲಿ ಒಡಮೂಡಿದ್ದೇ ಆಗಿದೆ. ಹೀಗೆಂದೇ ನಮ್ಮವರು ಅದೆಷ್ಟೇ ಶಕ್ತಿವಂತರಾದರೂ ಅನ್ಯರ ಮೇಲೆ ದಬ್ಬಾಳಿಕೆ ಮಾಡಲು ಹೋಗಲಿಲ್ಲ; ಬಲವಂತವಾಗಿ ನಮ್ಮ ಸಂಸ್ಕೃತಿ ರೀತಿರಿವಾಜುಗಳನ್ನು ಒಪ್ಪಿಕೊಳ್ಳಿ ಎಂದು ಹೇಳಲು ಹೋಗಲಿಲ್ಲ. ಅವರಾಗೇ ಬಂದರೆ ತಾನು ಕಂಡುಕೊಂಡ ಸತ್ಯವನ್ನು, ಜೀವನದ ರಹಸ್ಯವನ್ನು ಅರುಹಿದ ನೆಲ ಇದು. ಆರ್ಥಿಕ ದುಸ್ಥಿತಿಗೆ ಸಿಲುಕಿದ ಶ್ರೀಲಂಕಾಕ್ಕೆ ಹಣಕಾಸು ಮತ್ತು ಇತರ ಸವಲತ್ತುಗಳನ್ನು ನೀಡಿದ್ದು, ಭೂಕಂಪದಿಂದ ಬಸವಳಿದ ನೇಪಾಳಕ್ಕೆ ಸಹಾಯಹಸ್ತ ಚಾಚಿದ್ದು… ಇದೆಲ್ಲದರ ಮೂಲದಲ್ಲಿರುವುದು ‘ನಾವೆಲ್ಲ ಒಂದು’ ಎಂಬ ಈ ನೆಲದ ಆದರ್ಶವೇ.

    ಕೊನೇ ಮಾತು: ಆಧುನಿಕ ಶಿಕ್ಷಣ ನಮ್ಮ ಯುವಪೀಳಿಗೆಯನ್ನು ಆವರಿಸುವ ಭರದಲ್ಲಿ, ಇಂಟರ್ನೆಟ್ ಎಂಬ ಮಾಯಾಂಗನೆ ನಮ್ಮ ಮಕ್ಕಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ಮೊಬೈಲ್ ಎಂಬುದು ಆಬಾಲವೃದ್ಧರಾದಿಯಾಗಿ ಎಲ್ಲರ ಕೈಲೂ ನರ್ತಿಸುತ್ತಿರುವ ವೇಳೆಯಲ್ಲಿ, ಕೊಳ್ಳುಬಾಕ ರೂಢಿ ಹೆಚ್ಚುತ್ತಿರುವ ದಿನಮಾನದಲ್ಲಿ, ಭಾರತದ ‘ಆತ್ಮ’ದ ಬಗ್ಗೆ ವಿಸ್ಮೃತಿಯಾಗದಿರಲಿ ಎಂಬುದು ಆಶಯ. ಧರ್ಮ-ಅಧ್ಯಾತ್ಮಗಳು ಮೂಲಬೇರಾಗುಳ್ಳ ಪರಂಪರೆಯನ್ನು ಮರೆತರೆ ಭಾರಿ ಬೆಲೆ ತೆರಬೇಕಾಗುತ್ತದೆ. ‘ಭಾರತ ನಮ್ಮ ಜನಾಂಗದ ತಾಯಿನಾಡು; ಸಂಸ್ಕೃತವು ಯೂರೋಪ್ ಭಾಷೆಗಳ ತಾಯಿ; ತತ್ತ್ವಶಾಸ್ತ್ರದ ತಾಯಿ; ಗ್ರಾಮಾಡಳಿತದ ಮೂಲಕ ಸ್ವಸರ್ಕಾರ ಮತ್ತು ಪ್ರಜಾಪ್ರಭುತ್ವ… ಹೀಗೆ ಅನೇಕ ರೀತಿಗಳಲ್ಲಿ ಭಾರತಮಾತೆ ನಮ್ಮೆಲ್ಲರ ತಾಯಿ’ಎಂಬ ಖ್ಯಾತ ಇತಿಹಾಸಕಾರ ವಿಲ್ ಡ್ಯುರಾಂಟ್ ಮಾತನ್ನು ಮರೆಯಲಾಗದು.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಿಕ್ತು ವಿಶೇಷ ಆಶೀರ್ವಾದ!

    ನೂರಕ್ಕೂ ಅಧಿಕ ಹೆಂಡಿರ ಗಂಡ; ಈತನಿಗೆ ಜಗತ್ತಿನಾದ್ಯಂತ ಹೆಂಡತಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts