More

    ಶತಮಾನದತ್ತ ಸಾಗುತ್ತಿರುವ ಕುವೆಂಪು ಕಿಂದರಿಜೋಗಿ…!

    ತುಂಗಾ ತೀರದ ಬಲಗಡೆಯಲ್ಲಿ

    ಹಿಂದಲ್ಲಿದ್ದುದು ಬೊಮ್ಮನಹಳ್ಳಿ

    ಅಲ್ಲೇನಿಲಿಗಳ ಕಾಟವೇ ಕಾಟ

    ಅಲ್ಲಿಯ ಜನಗಳಿಗತಿಗೋಳಾಟ…

    ಎಂದು ಶುರುವಾಗುತ್ತದೆ ರಾಷ್ಟ್ರಕವಿ ಕುವೆಂಪು ಅವರ ಮಕ್ಕಳ ಕವಿತೆ. ಬೊಮ್ಮನಹಳ್ಳಿಯ ಕಿಂದರಿಜೋಗಿ ಎಂಬ ಈ ಕವಿತೆ ಪ್ರಕಟವಾದದ್ದು 1928ರಲ್ಲಿ. ಕಿರಿಯ ಕಾಣಿಕೆ ಎಂಬ ಕವನ ಸಂಕಲನದಲ್ಲಿ ಪ್ರಕಟವಾದ ಈ ಕವಿತೆಗೀಗ 93ರ ಪ್ರಾಯ. ಇನ್ನೇಳು ವರ್ಷ ಕಳೆದರೆ ಶತಮಾನ. ಈಗಲೂ ಅದು ಮಕ್ಕಳಿಗೆ ಮುದ ನೀಡುವ ಪ್ರೀತಿಯ ಕವಿತೆ. ಅದು ಮತ್ತೆ ಮತ್ತೆ, ಅಲ್ಲಲ್ಲಿ-ಆಗಾಗ ಪ್ರಕಟವಾಗುತ್ತಿದೆ, ಪ್ರಸ್ತಾಪವಾಗುತ್ತಿದೆ. ಜನಮನ ದಲ್ಲಿ ತುಂಬ ಲವಲವಿಕೆ ಯಿಂದ ಹರಿದಾಡಿ ಕಚಗುಳಿ ಇಡುತ್ತಿದೆ. ಒಂದು ಮಕ್ಕಳ ಕವಿತೆಗೆ ಇಷ್ಟು ಆಯಸ್ಸು ಇದೆಯೇ ಎಂದು ಅಚ್ಚರಿ ಪಡಬೇಕು, ಹಾಗಿದೆ ಈ ಕವಿತೆ.

    ಕುವೆಂಪು ಈ ಕವಿತೆ ಬರೆಯಲು ಪ್ರೇರಣೆ ನೀಡಿದ್ದು ಜರ್ಮನಿ ದೇಶದ ಒಂದು ಪುಟ್ಟ ಕವಿತೆ. ಅದು ಅಲ್ಲಿ ಕವಿತೆಯಾಗುವ ಮುನ್ನ ಜನಮನದ ಕಥೆಯಾಗಿ ಹರಿದಾಡುತ್ತಿತ್ತಂತೆ. ಅದನ್ನು ಇಂಗ್ಲಿಷ್ ಕವಿ ರಾಬರ್ಟ್ ಬ್ರೌನಿಂಗ್ ಕವಿತೆಯಾಗಿಸಿದ. ಅದಕ್ಕೆ ಅವನು ಇಟ್ಟ ಹೆಸರು ‘ಪೈಡ್ ಪೈಪರ್ ಆಫ್ ಹ್ಯಾಮ್ಲಿನ್’ ಅಂತ.

    ಇದೊಂದು ಕಟ್ಟು ಕಥೆ ಎಂದು ಹೇಳಲಾಗುತ್ತಿದೆ. ಆದರೆ ಜರ್ಮನಿ ದೇಶದ ಹ್ಯಾಮ್ಲಿನ್ ಎಂಬ ಊರಲ್ಲಿ, ಇದೊಂದು ಐತಿಹಾಸಿಕ ಘಟನೆ ಎಂದು ಹೇಳುವ ಕೆಲವು ಪುರಾವೆಗಳು ಇಂದಿಗೂ ದೊರೆಯುತ್ತವೆ. 16ನೇ ಶತಮಾನದ ಅಲ್ಲಿನ ಒಂದು ಮನೆಯ ಮೇಲಿನ ಲಿಪಿ, ಈ ಕವಿತೆಯ ಹುಟ್ಟಿಗೆ ಕಾರಣವಾದ ಅಲ್ಲಿನ ಮಕ್ಕಳ ದುರಂತ ಸಾವಿಗೆ ಕಾರಣವಾದ ದಿನಾಂಕ ಕ್ರಿಸ್ತ ಶಕೆ 1284ರ ಜೂನ್ 24 ಎಂದು ಸೂಚಿಸುತ್ತದೆ. ಈಗಲೂ ಆ ಕಥೆ ಸಂಭವಿಸಿದ ರಸ್ತೆಯ ಮೇಲೆ, ಅದರ ಅಭಿನಯದ ರೂಪಕವನ್ನು ಅಲ್ಲಿನ ಜನ ಆಡುತ್ತಾರಂತೆ. ಆದರೆ ಅಲ್ಲಿ ಯಾವ ಸಂಗೀತವನ್ನೂ ನುಡಿಸಲಾಗುವುದಿಲ್ಲ. ಅದಕ್ಕೆ ಕಾರಣ, ಅದರಿಂದಾಗಿ ಮತ್ತೆ ಪೈಡ್ ಪೈಪರ್ ಎಚ್ಚರಗೊಂಡು, ಸನಾದಿಯನ್ನು ನುಡಿಸಿದರೆ… ಮತ್ತೆ ತಮ್ಮ ಮಕ್ಕಳು ಸಾವಿನ ದವಡೆಗೆ ಸಿಲುಕುವವೇನೋ ಎಂಬ ಭಯ ಅವರಿಗೆ. ಆಗ ಅಲ್ಲಿ ಆ ಮಕ್ಕಳನ್ನು ನುಂಗಿಹಾಕಿದ ಬೆಟ್ಟದ ಎರಡು ಸ್ಥಾನಗಳಿವೆ. ಅದರ ಗುರುತಿಗಾಗಿ ಅಲ್ಲಿ ಎರಡು ಶಿಲುಬೆಗಳ ಪ್ರತಿಕೃತಿಗಳನ್ನು ನಿಲ್ಲಿಸಲಾಗಿದೆ. ಅಂದು ಪೈಡ್ ಪೈಪರ್ ಜತೆಗೆ ಹೋದ ಮಕ್ಕಳು ಮತ್ತೆ ಅಲ್ಲಿಂದ ಮರಳಿ ಬರಲೇ ಇಲ್ಲವಂತೆ. ‘‘ಈ ಘಟನೆ ನಡೆದದ್ದು 1284ರಲ್ಲಿ ಅಲ್ಲ. ಅದು ನಡೆದದ್ದು 1450ರಲ್ಲಿ’’ ಎಂಬ ಅಭಿಪ್ರಾಯವೂ ಇದೆ. ಆಗ 130 ಮಕ್ಕಳನ್ನು ಆ ಬೆಟ್ಟ ನುಂಗಿ ಹಾಕಿತಂತೆ. ಮತ್ತೆ ಕೆಲವರು ಇದು ನಡೆದದ್ದು 1376 ಜುಲೈ 22 ಎನ್ನುತ್ತಾರೆ. ಈಗಲೂ ದಿನಾಂಕದ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ.

    14ನೆ ಶತಮಾನದಲ್ಲಿ ಹ್ಯಾಮ್ಲಿನ್ ಪಟ್ಟಣ ಪ್ಲೇಗ್ ರೋಗಕ್ಕೆ ತುತ್ತಾಯಿತು. ಪ್ಲೇಗ್ ಮೊದಲು ಇಲಿಗಳಿಗೆ ಬರುತ್ತದೆ. ಒಂದೊಂದಾಗಿ ಇಲಿಗಳು ಸತ್ತು ಬಿಡುತ್ತವೆ. ಅದೇ ರೋಗ ಮನುಷ್ಯರಿಗೆ ತಗುಲಿ ಮನುಷ್ಯರು ಸಾಯುತ್ತಾರೆ. ಪ್ಲೇಗ್ ಎಂಬ ಪೈಡ್ ಪೈಪರ್ ಇಲಿಗಳನ್ನು ಕೊಲ್ಲಲು ಮುಂದಾಗುತ್ತಾನೆ. ಅದಕ್ಕಾಗಿ ಆತ ಹಣವನ್ನು ಕೇಳುತ್ತಾನೆ. ‘‘ಇನ್ನೇನು ಇಲಿಗಳು ಸತ್ತು ಹೋದವು. ನಮಗ್ಯಾವ ಅಪಾಯವೂ ಇಲ್ಲ. ಇವನಿಗೆ ಹಣವನ್ನು ಏಕೆ ಕೊಡಬೇಕು’’ ಎಂದು ಅಲ್ಲಿನ ಜನ ಚಿಂತಿಸುತ್ತಾರೆ. ಕೊಟ್ಟ ಮಾತಿಗೆ ತಪ್ಪುತ್ತಾರೆ. ಆಗ ಪ್ಲೇಗ್ ಜನರನ್ನೂ ಆಹುತಿ ಪಡೆಯುತ್ತದೆ. ಆ ಕಥೆಯನ್ನು ಅಲ್ಲಿನ ಜನ ಜಾನಪದ ಕಾವ್ಯವಾಗಿ ಹಾಡುತ್ತಾರೆ. ಅದಕ್ಕೆ ಬ್ರೌನಿಂಗ್ ಅಕ್ಷರ ರೂಪ ಕೊಟ್ಟು ಕಾವ್ಯವಾಗಿಸುತ್ತಾನೆ.

    ಜರ್ಮನಿಯ ಆ ಕಾವ್ಯ ಕನ್ನಡದ ಕುವೆಂಪು ಅವರಿಗೆ ಪ್ರೇರಣೆ ನೀಡುತ್ತದೆ. ಹ್ಯಾಮ್ಲಿನ್​ನ ಪೈಡ್ ಪೈಪರ್ ಇಲ್ಲಿ ಬೊಮ್ಮನಹಳ್ಳಿಯ ಕಿಂದರಿಜೋಗಿಯಾಗುತ್ತಾನೆ. ಕನ್ನಡದ ಈ ಕವಿತೆಯಲ್ಲಿ ಎಲ್ಲೂ ಇದು ಬೇರೆ ದೇಶದ್ದು ಎನಿಸುವುದೇ ಇಲ್ಲ. ತುಂಗಾತೀರದ ಬೊಮ್ಮನಹಳ್ಳಿಯ ಅಪ್ಪಟ ಜಾನಪದ ಕವಿತೆಯಾಗಿ ಇದು ಮರುಹುಟ್ಟು ಪಡೆದಿದೆ. ಅದು ಮಕ್ಕಳಿಗಾಗಿ ಬರೆದ ನೀಳ್ಗವಿತೆ. ಓದುತ್ತ ಹೋದಾಗ ಅದು ಮುಗಿದದ್ದೇ ಗೊತ್ತಾಗುವುದಿಲ್ಲ. ಕುವೆಂಪು ಕಣ್ಣಿಗೆ ಅದೆಷ್ಟು ಬಗೆಯ ಇಲಿಗಳು ಕಾಣುತ್ತವೆ ನೋಡಿ:

    ಜೋಗಿಯು ಬಾರಿಸೆ ಕಿಂದರಿಯ

    ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸೊಂಡಿಲಿ,

    ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ,

    ಮಾವಿಲಿ, ಅಕ್ಕಿಲಿ, ತಂಗಿಲಿ, ಗಂಡಿಲಿ,

    ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ,

    ಎಲ್ಲಾ ಬಂದವು ಓಡೋಡಿ..

    ಇಡೀ ಕಾವ್ಯ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ರಸಾನುಭೂತಿಯನ್ನು ನೀಡುತ್ತದೆ. ಅದಕ್ಕೇ ಇರಬೇಕು, ಅದು ಹುಟ್ಟಿ 93 ವರ್ಷ ಕಳೆದರೂ ಹಳೆಯದಾಗಿಲ್ಲ.

    | ಸುಭಾಸ ಯಾದವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts