More

    ರಾ ರಾ ರಕ್ಕಮ್ಮ ಇವರ ಬಗ್ಗೆ ಗೊತ್ತೇನಮ್ಮ!

    ರಾ ರಾ ರಕ್ಕಮ್ಮ ಇವರ ಬಗ್ಗೆ ಗೊತ್ತೇನಮ್ಮ!ಎದುರಾಳಿಗಳನ್ನು ಗೊಂದಲಕ್ಕೆ ಕೆಡಹುವ ಕಾರ್ಯತಂತ್ರ, ಅವರ ದಿಕ್ಕುತಪ್ಪಿಸುವ ಉಪಾಯ, ತಮಗೆ ಬೇಕಾದ ಮಾಹಿತಿ ಕಲೆಹಾಕುವ ಕಲೆಗಾರಿಕೆ, ಎಂಥದೇ ಅಪಾಯ ಎದುರಿಸುವ ಧೈರ್ಯ… ಇವೆಲ್ಲ ಇದ್ದರೆ ಮಾತ್ರ ಗೂಢಚಾರರು ಯಶಸ್ವಿಯಾಗಲು ಸಾಧ್ಯ. ಗೂಢಚಾರರ ಯಶಸ್ಸು ಅಥವಾ ಅಪಯಶಸ್ಸು ದೇಶವೊಂದರ ಸುರಕ್ಷತೆ, ಭದ್ರತೆ ದೃಷ್ಟಿಯಿಂದಲೂ ಮುಖ್ಯವಾದುದು.

    ಅದು 1974ರ ಮೇ 18. ಸಮಯ ಬೆಳಗಿನ 8 ಗಂಟೆ. ರಾಜಸ್ಥಾನದ ಪೋಖ್ರಾನ್​ನಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಿತು. ಅಮೆರಿಕದ ಉಪಗ್ರಹಗಳು ಭಾರತದ ಮೇಲೆ ಸುತ್ತುತ್ತ, ಇಲ್ಲಿನ ವಿದ್ಯಮಾನಗಳನ್ನು ದೇಶಕ್ಕೆ ರವಾನಿಸುತ್ತಿರುತ್ತವೆ. ಹಾಗಿದ್ದರೂ ಪೋಖ್ರಾನ್​ನಲ್ಲಿ ಏನು ನಡೆಯುತ್ತಿದೆ ಎಂಬುದರ ಸಣ್ಣ ಸುಳಿವೂ ಅಮೆರಿಕಕ್ಕೆ ಸಿಗಲಿಲ್ಲ. ಒಂದೊಮ್ಮೆ ಪರಮಾಣು ಪರೀಕ್ಷೆಯ ವಿಷಯ ಬಹಿರಂಗವಾಗಿದ್ದಿದ್ದರೆ ಅಂತಾರಾಷ್ಟ್ರೀಯ ವಲಯದಲ್ಲಿ ಕೋಲಾಹಲವೇ ಉಂಟಾಗಿ, ಭಾರತ ತೀವ್ರ ಮುಜುಗರ ಎದುರಿಸಬೇಕಾಗಿ ಬರುತ್ತಿತ್ತು. ಅಲ್ಲದೆ ಅದರ ಪರಿಣಾಮವೂ ವ್ಯತಿರಿಕ್ತವಾಗಬಹುದಿತ್ತು. ಇಂಥ ಮಹತ್ವದ ಪರೀಕ್ಷೆ ಅಷ್ಟು ರಹಸ್ಯವಾಗಿ ನಡೆಯುವಂತಾಗುವಲ್ಲಿ ಭಾರತದ ಗೂಢಚರ ಸಂಸ್ಥೆ ‘ರಾ’ ಪಾತ್ರವೂ ಮುಖ್ಯವಾಗಿತ್ತು; ಆ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ವಿಜ್ಞಾನಿಗಳು ಸಹ ಇತರರಿಗೆ ಕಿಂಚಿತ್ತೂ ಮಾಹಿತಿ ದೊರೆಯದಂತೆ ಎಚ್ಚರ ವಹಿಸಿದ್ದರು. ಪೋಖ್ರಾನ್ ಕೇಂದ್ರದಲ್ಲಿ ಎಲ್ಲ ಚಟುವಟಿಕೆಗಳು ರಾತ್ರಿಯಲ್ಲೇ ನಡೆದವು. ವಿಜ್ಞಾನಿಗಳಿಗೆ ಬೇರೆ ಹೆಸರು ನೀಡಿ, ಪರಸ್ಪರ ಸಂವಹನ ಮಾಡುವಾಗ ಈ ಹೆಸರುಗಳನ್ನೇ ಬಳಸಬೇಕೆಂದು ಸೂಚಿಸಲಾಗಿತ್ತು. ಏಕೆಂದರೆ, ಅಮೆರಿಕ ಗೂಢಚರ ಸಂಸ್ಥೆ ಸಿಐಎ ಇವರ ದೂರವಾಣಿ ಕದ್ದಾಲಿಕೆ ನಡೆಸುವುದು ‘ರಾ’ಗೆ ತಿಳಿದಿತ್ತು. ಇನ್ನೊಂದೆಡೆ, ಭಾರತೀಯ ಸೇನೆಯ ಭಾರಿ ಗಾತ್ರದ ಉಪಕರಣಗಳನ್ನು ಒಡಿಶಾದ ಚಂಡೀಪುರಕ್ಕೆ ರವಾನಿಸಲಾಯಿತು. ಇದನ್ನು ಕಂಡು, ಚಂಡೀಪುರದಲ್ಲಿ ಭಾರತ ಕ್ಷಿಪಣಿ ಪರೀಕ್ಷೆ ನಡೆಸುತ್ತಿರಬಹುದೆಂದು ವಿದೇಶಿ ಗೂಢಚಾರರು ಎಣಿಸಿದರು. ಹೀಗಾಗಿ ಎಲ್ಲರ ಗಮನ ಅತ್ತ ಇತ್ತು. ಇತ್ತ ಪೋಖ್ರಾನಿನಲ್ಲಿ ಅಣುಪರೀಕ್ಷೆ ಸಾಂಗವಾಗಿ ನೆರವೇರಿದಾಗ, ತಾವು ಬೇಸುಬಿದ್ದೆವೆಂದು ಉಳಿದ ದೇಶಗಳವರು ಕೈಕೈ ಹಿಸುಕಿಕೊಂಡರು.

    ದೇಶದ ಹಿತಾಸಕ್ತಿ, ರಹಸ್ಯದ ವಿಷಯ ಬಂದಾಗ ಗೂಢಚರ ಸಂಸ್ಥೆಗಳು ಯಾವ ರೀತಿ ಕೆಲಸ ಮಾಡುತ್ತವೆ ಅಥವಾ ಮಾಡಬೇಕಾಗುತ್ತದೆ ಎಂಬುದಕ್ಕೆ ಇದೊಂದು ಸಮರ್ಥ ನಿದರ್ಶನ. ಎದುರಾಳಿಗಳನ್ನು ಗೊಂದಲಕ್ಕೆ ಕೆಡಹುವ ಕಾರ್ಯತಂತ್ರ, ಅವರ ದಿಕ್ಕುತಪ್ಪಿಸುವ ಉಪಾಯ, ತಮಗೆ ಬೇಕಾದ ಮಾಹಿತಿ ಕಲೆಹಾಕುವ ಕಲೆಗಾರಿಕೆ, ಎಂಥದೇ ಅಪಾಯ ಎದುರಿಸುವ ಧೈರ್ಯ… ಇವೆಲ್ಲ ಇದ್ದರೆ ಮಾತ್ರ ಗೂಢಚಾರರು ಯಶಸ್ವಿಯಾಗಲು ಸಾಧ್ಯ. ಗೂಢಚಾರರ ಯಶಸ್ಸು ಅಥವಾ ಅಪಯಶಸ್ಸು ದೇಶವೊಂದರ ಸುರಕ್ಷತೆ, ಭದ್ರತೆ ದೃಷ್ಟಿಯಿಂದಲೂ ಮುಖ್ಯವಾದುದು.

    ವಿಜಯ ದಿವಸ: ಭಾರತವು 1971ರಲ್ಲಿ ಪಾಕಿಸ್ತಾನದ ಮೇಲೆ ಜಯ ಸಾಧಿಸಿದ ಕುರುಹಾಗಿ ಪ್ರತಿ ವರ್ಷ ಡಿಸೆಂಬರ್ 16ನ್ನು ‘ವಿಜಯ ದಿವಸ’ ಎಂದು ಆಚರಿಸಲಾಗುತ್ತದೆ. ಹಾಗೆನೋಡಿದರೆ, ಈ ಯುದ್ಧಕ್ಕೆ ತ್ರಿಕೋನ ಆಯಾಮವಿದೆ. ಅದಾದದ್ದು ಹೀಗೆ: ಭಾರತದ ವಿಭಜನೆ ಮಾಡಿದ ಬ್ರಿಟಿಷರು ಪಾಕಿಸ್ತಾನವನ್ನು ಸೃಜಿಸಿದ್ದು ಸಹ ಎರಡಾಗಿ. ಅಂದರೆ, ಭೌಗೋಳಿಕವಾಗಿ ಎರಡು ಭಾಗ ಅದಕ್ಕೆ ದಕ್ಕಿತು. ಭಾರತದ ಪಶ್ಚಿಮ ಭಾಗ ಮತ್ತು ಪೂರ್ವ ಭಾಗ. ಆದರೆ ಇವೆರಡರ ಅಂತರ 2500 ಕಿಲೋಮೀಟರ್. ಇದು ಬರೀ ಭೌಗೋಳಿಕ ಅಂತರವಲ್ಲ, ಮಾನಸಿಕವಾಗಿ, ಸಾಂಸ್ಕೃತಿಕವಾಗಿ, ಭಾಷಿಕವಾಗಿ ಸಹ ಪಶ್ಚಿಮ ಹಾಗೂ ಪೂರ್ವದ ನಡುವೆ ಅಗಾಧ ಭಿನ್ನತೆಯಿತ್ತು. ಅದಲ್ಲದೆ, ಪಶ್ಚಿಮದ ಆಡಳಿತಗಾರರು ಪೂರ್ವಭಾಗವನ್ನು ಕಡೆಗಣಿಸಿದ್ದರು. ಅಲ್ಲಿಂದ ಆದಾಯವನ್ನು ಹೇರಳವಾಗಿ ಪಡೆದರೂ, ಅಭಿವೃದ್ಧಿಗಾಗಿ ಕೊಡಲು ಜಿಪುಣತನ ತೋರುತ್ತಿದ್ದರು. ಇದೆಲ್ಲದರ ಅತಿರೇಕ ಎಂಬಂತೆ, 1948ರ ಫೆಬ್ರವರಿಯಲ್ಲಿ ಪಾಕಿಸ್ತಾನವು ಉರ್ದು ರಾಷ್ಟ್ರಭಾಷೆಯೆಂದು ಘೋಷಿಸಿತು. ಬಂಗಾಲಿ ಮಾತಾಡುವ ಪೂರ್ವಭಾಗದವರಿಗೆ ಇದು ದೊಡ್ಡ ಆಘಾತವಾಗಿತ್ತು. ಉರ್ದು ಹೇರಿಕೆ ವಿರುದ್ಧ ಹೋರಾಟ ಆರಂಭವಾಯಿತು. ಕ್ರಮೇಣ ಇದು ಸ್ವಾಯತ್ತತೆಯ ಕೂಗಿಗೆ ದಾರಿಯಾಯಿತು. ಆದರೂ, ಪಶ್ಚಿಮದವರ ದಬ್ಬಾಳಿಕೆ ಮುಂದುವರಿದಾಗ ಪ್ರತ್ಯೇಕ ದೇಶದ ಬೇಡಿಕೆ ಕೇಳಿಬಂದು, ಆಂದೋಲನ ಶುರುವಾಯಿತು. ಅತ್ತ ಪಾಕ್ ದಬ್ಬಾಳಿಕೆ ಮುಂದುವರಿದಂತೆ, ಇತ್ತ, ಗಡಿ ದಾಟಿ ಭಾರತದತ್ತ ಪೂರ್ವ ಪಾಕಿಗಳ ವಲಸೆಯೂ ಅಬಾಧಿತವಾಗಿ ನಡೆಯತೊಡಗಿತ್ತು. ಅವರಿಗೆ ಆಶ್ರಯ ಕೊಡಬೇಕಾದ ಸನ್ನಿವೇಶಕ್ಕೆ ಭಾರತ ಸಿಲುಕಿತ್ತು. ಇನ್ನೊಂದೆಡೆ, ಪೂರ್ವ ಪಾಕಿಸ್ತಾನಿಯರ ಹೋರಾಟಕ್ಕೆ ಭಾರತ ಬೆಂಬಲ ನೀಡಿತ್ತು. ಅಂತಿಮವಾಗಿ ಇದು ಯುದ್ಧಕ್ಕೆ ತಿರುಗಿತು. ಈ ಸಮರದ ನೇಪಥ್ಯದಲ್ಲಿ ರಂಗಸಜ್ಜಿಕೆಯನ್ನು ನಿರ್ವಿುಸುವಲ್ಲಿ ‘ರಾ’ ವಹಿಸಿದ ಪಾತ್ರ ಕುತೂಹಲಕಾರಿ ಮತ್ತು ರೋಮಾಂಚನಕಾರಿಯಾಗಿತ್ತು. ಪಶ್ಚಿಮ ಮತ್ತು ಪೂರ್ವ ಪಾಕ್ ಆಂತರಿಕ ಬೆಳವಣಿಗೆಗಳ ಮಾಹಿತಿ ಸಂಗ್ರಹ, ‘ವಿಮಾನ ಅಪಹರಣ’ ಪ್ರಕರಣದ ಮೂಲಕ ಯುದ್ಧಕ್ಕೆ ಅಗತ್ಯವಾದ ವೇದಿಕೆಗೆ ಮುನ್ನುಡಿ ಬರೆದದ್ದು, ಕಾರ್ಯತಂತ್ರ ರೂಪಿಸುವಲ್ಲಿ ಚಾಣಾಕ್ಷತನ, ಮುಕ್ತಿವಾಹಿನಿ ಹೋರಾಟಗಾರರಿಗೆ ತರಬೇತಿ… ಹೀಗೆ ಬಾಂಗ್ಲಾ ವಿಮೋಚನೆಯಲ್ಲಿ ‘ರಾ’ ಮಹತ್ವದ ಭೂಮಿಕೆ ನಿಭಾಯಿಸಿತು.

    ಇತಿಹಾಸದ ಇಂಥ ಅನೇಕ ಘಟನೆಗಳನ್ನು, ಸಮರ್ಥವಾಗಿ ಕಟ್ಟುಕೊಡುವ ಕೃತಿ ‘ಏಟಿಗೆ ಎದುರೇಟು’(ರಹಸ್ಯ ಗೂಢಚರದಳ ‘ರಾ’ದ ರೋಚಕ ಕಾರ್ಯಾಚರಣೆಗಳು). ಬಾಹ್ಯ ಗೂಢಚರ ಸಂಸ್ಥೆ ‘ರಾ’ ಉಗಮಕ್ಕೆ ಕಾರಣದಿಂದ ಹಿಡಿದು ಅದು ಜಗತ್ತಿನ ಮುಖ್ಯ ಗೂಢಚರದಳಗಳಲ್ಲೊಂದಾದ ಪರಿಯನ್ನು ಈ ಕೃತಿ ಹಿಡಿದಿಟ್ಟಿದೆ. ಅದರ ಪ್ರಮುಖ ಕಾರ್ಯಾಚರಣೆಗಳ ವಿವರವನ್ನು ಹೊಂದಿದೆ. ಖಲಿಸ್ತಾನ ಬೇಡಿಕೆ ಹಿನ್ನೆಲೆ ಮತ್ತು ಅದರ ಪರಿಣಾಮಗಳು, ಶ್ರೀಲಂಕಾದಲ್ಲಿ ನಡೆದ ತಮಿಳರ ಹೋರಾಟ, ಎಲ್​ಟಿಟಿಇ ಚಟುವಟಿಕೆ, ಈ ವಿವಾದದಲ್ಲಿ ಭಾರತದ ನಿಲುವು-ಒಲವು, ಕಾಶ್ಮೀರದಲ್ಲಿನ ಭಯೋತ್ಪಾದನೆ, ನೇಪಾಳದಲ್ಲಿ ‘ರಾ’ ಕಾರ್ಯಾಚರಣೆ, ಸಿಕ್ಕಿಂ ಅನ್ನು ಭಾರತಕ್ಕೆ ಸೇರಿಸುವಲ್ಲಿ ಈ ಸಂಸ್ಥೆ ವಹಿಸಿದ ಪಾತ್ರ- ಹೀಗೆ ಅನೇಕ ಮುಖ್ಯ ಪ್ರಸಂಗಗಳನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಇವು ಕೇವಲ ಮಾಹಿತಿಗೆ ಸೀಮಿತವಾಗದೆ, ಇಡೀ ವಿಷಯದ ಒಳನೋಟವನ್ನು ಕಟ್ಟಿಕೊಡುವುದು ಹೆಚ್ಚುಗಾರಿಕೆ. ಹೀಗಾಗಿ ಅನೇಕ ಘಟನೆಗಳ ಸಂಪೂರ್ಣ ಚಿತ್ರಣ ಸಹ ಇಲ್ಲಿ ದೊರೆಯುತ್ತದೆ.

    ಹಾಗಂತ ‘ರಾ’ ಯಶಸ್ಸಿನ ಕಥೆಗಳನ್ನು ಮಾತ್ರ ಲೇಖಕರು ಬಿಂಬಿಸುವುದಿಲ್ಲ. ಕೆಲ ಸಂದರ್ಭದಲ್ಲಿ ಅದು ಎಡವಿದ್ದನ್ನೂ ದಾಖಲಿಸುತ್ತಾರೆ. ಹೀಗಾಗಿ ಕೃತಿಗೆ ವಸ್ತುನಿಷ್ಠತೆ ಪ್ರಾಪ್ತವಾಗಿದೆ. ಹಾಗಿಲ್ಲವಾದಲ್ಲಿ ಹೊಗಳಿಕೆಯ ಏಕಮುಖ ಸಂಚಾರವಾಗುವ ಅಪಾಯವಿತ್ತು. ‘ರಾ’ ಅಧಿಕಾರಿಯೊಬ್ಬರು ಕೊಲಂಬೊದಲ್ಲಿದ್ದಾಗ ಅಮೆರಿಕ ದೂತಾವಾಸದ ಅಧಿಕಾರಿ ಮೂಲಕ ಅಮೆರಿಕ ಗಗನಸಖಿಯ ಸ್ನೇಹ ಬೆಳೆಸಿ, ಅದು ಪ್ರಣಯಕ್ಕೆ ತಿರುಗಿ ಫಜೀತಿಯಾಗಿತ್ತು. ಈ ವಿಷಯ ತಿಳಿದ ಅಮೆರಿಕನ್ನರು ಆ ಅಧಿಕಾರಿಯನ್ನು ಬ್ಲಾ್ಯಕ್​ವೆುೕಲ್ ಮಾಡಿ ಡಬಲ್ ಏಜೆಂಟ್ ಆಗಿಸಿಕೊಂಡು ಭಾರತ -ಶ್ರೀಲಂಕಾ ಸರ್ಕಾರಗಳ ಒಪ್ಪಂದ, ಎಲ್​ಟಿಟಿಇ ಜತೆ ಭಾರತದ ವ್ಯವಹಾರ ಇತ್ಯಾದಿ ರಹಸ್ಯಗಳನ್ನು ಕಲೆಹಾಕಿ ಸಿಐಎಗೆ ರವಾನಿಸುತ್ತಿದ್ದರು. ಮುಂದೆ, ‘ರಾ’ ಉನ್ನತಾಧಿಕಾರಿಗಳಿಗೆ ಈ ವಿಚಾರ ಗೊತ್ತಾಗಿ ಆ ಅಧಿಕಾರಿಯನ್ನು ವಜಾಮಾಡಲಾಯಿತು.

    ಇನ್ನೊಬ್ಬ ಅಧಿಕಾರಿ ಇದೇ ರೀತಿ ಅಮೆರಿಕ ಚೆಲುವೆಯ ಮೋಹಪಾಶಕ್ಕೆ ಒಳಗಾಗಿ ಡಬಲ್ ಏಜೆಂಟ್ ಆಗಿರುವ ಗುಮಾನಿ ಬಂದು ‘ರಾ’ ನಿಗಾ ಇರಿಸಿತ್ತು. ಆದರೆ, ಒಮ್ಮೆ ದೆಹಲಿಯ ಮನೆಯಿಂದ ಕುಟುಂಬದ ಜತೆ ಅಂಗಡಿಗೆ ಹೋದ ಆ ಅಧಿಕಾರಿ ಅಲ್ಲಿ ಹಿಂಬಾಗಿಲಿಂದ ಹೊರಗೆ ತೆರಳಿ, ನಂತರ ನೇಪಾಳಕ್ಕೆ ಹಾರಿದರು. ತರುವಾಯ ಅಮೆರಿಕಕ್ಕೆ ಹೋಗಿ ಅಲ್ಲಿ ವಾಸಿಸತೊಡಗಿದರು. ಈ ಘಟನೆ ‘ರಾ’ಗೆ ಮುಜುಗರ ಉಂಟುಮಾಡಿತ್ತು. (ನಂತರದಲ್ಲಿ ಆ ಅಧಿಕಾರಿ ಅಮೆರಿಕದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು). 1999ರ ಮೇ ತಿಂಗಳಲ್ಲಿ ಪಾಕ್ ಸೈನಿಕರು ಮಾರುವೇಷದಲ್ಲಿ ಕಾಶ್ಮೀರದ ಕಾರ್ಗಿಲ್ ಪ್ರದೇಶದಲ್ಲಿ ನುಸುಳಿದ್ದನ್ನು ಪತ್ತೆಹಚ್ಚಲಾಗದ್ದು, 1999ರ ಡಿಸೆಂಬರ್​ನಲ್ಲಿ ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಬರುತ್ತಿದ್ದ ಇಂಡಿಯನ್ ಏರ್​ಲೈನ್ಸ್ ವಿಮಾನ ಅಪಹರಣ ತಪ್ಪಿಸಲು ಆಗದ್ದು ಮುಂತಾದ ಕೆಲ ಪ್ರಕರಣಗಳನ್ನು ಲೇಖಕರು ಉಲ್ಲೇಖಿಸಿದ್ದಾರೆ.

    ದೇಶದ ಆಂತರಿಕ ಮತ್ತು ಬಾಹ್ಯ ರಕ್ಷಣೆಯಲ್ಲಿ ‘ರಾ’ ಕೂಡ ಮುಖ್ಯ ಪಾತ್ರ ನಿರ್ವಹಿಸುತ್ತದೆ. ನೆರೆದೇಶಗಳಿಂದ ಭಯೋತ್ಪಾದಕರು ಭಾರತದ ಒಳಕ್ಕೆ ನುಸುಳುವ ಕುರಿತು ಮಾಹಿತಿ ಸಂಗ್ರಹಿಸಿ ಅದನ್ನು ಪೊಲೀಸರಿಗೆ ರವಾನಿಸುವುದು, ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿ ಭಾರತದಿಂದ ಪರಾರಿಯಾಗಿ ಅನ್ಯದೇಶಗಳಲ್ಲಿ ನೆಲೆಸಿರುವವರ ಬಗ್ಗೆ ಮಾಹಿತಿ ಸಂಗ್ರಹ ಇತ್ಯಾದಿ ಕಾರ್ಯದ ಮೂಲಕ ದೇಶದ ಭದ್ರತೆ ಹಾಗೂ ಸುರಕ್ಷತೆಯಲ್ಲಿ ತನ್ನ ಕೊಡುಗೆ ನೀಡುತ್ತಿದೆ. ವಿದೇಶಗಳ ಆಡಳಿತ, ರಾಜತಾಂತ್ರಿಕ, ಸೇನಾ ವಲಯಗಳಲ್ಲಿ ಆಗುವ ಕದಲಿಕೆಗಳು ಅಥವಾ ಭಯೋತ್ಪಾದನಾ ಸಂಘಟನೆಗಳಲ್ಲಿನ ಚಟುವಟಿಕೆಗಳನ್ನು ಆರಂಭದಲ್ಲೇ ಕಂಡುಕೊಂಡು, ಅದರ ಪರಿಣಾಮವನ್ನು ಗ್ರಹಿಸಿ, ವರದಿ ಮಾಡುವ ಬಹುಮುಖ್ಯ ಕೆಲಸ ಇವರದು. ಈ ಮೂಲಕ ಭಾರತ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಕಾರ್ಯತಂತ್ರ ಹೆಣೆಯಲು ನೆರವಾಗುತ್ತಾರೆ.

    ಗೂಢಚಾರರು ಎಷ್ಟೇ ಸಾಹಸ ಮಾಡಲಿ, ಬಹಿರಂಗವಾಗಿ ಸಾರ್ವಜನಿಕರಿಗೆ ತಿಳಿಯುವ ಅವಕಾಶ ಕಡಿಮೆ. ಏಕೆಂದರೆ ಇವರ ಕೆಲಸಗಳೆಲ್ಲ ನಡೆಯುವುದು ರಹಸ್ಯವಾಗಿ, ಅಷ್ಟೇಕೆ, ಇವರು ಸಹ ಬೇರೆ ಹೆಸರಿನಲ್ಲಿ ರಹಸ್ಯವಾಗಿಯೇ ಬದುಕುತ್ತಿರಬೇಕಾಗುತ್ತದೆ. ಆ ಲೆಕ್ಕದಲ್ಲಿ ಇದು ಥ್ಯಾಂಕ್​ಲೆಸ್ ಜಾಬ್. ಆದರೆ ಬಹುತೇಕ ಜನರ ಮನಸ್ಸಿನಲ್ಲಿ ಗೂಢಚಾರರೆಂದರೆ ಒಂದು ಬಗೆಯ ಫ್ಯಾಂಟಸಿ ಇಮೇಜ್ ಇದೆ. ಅದೆಂದರೆ- ಇವರು ಜೇಮ್ಸ್​ಬಾಂಡ್ ರೀತಿ ಸೂಪರ್​ಫಾಸ್ಟ್ ಕಾರುಗಳಲ್ಲಿ ಓಡಾಟ ನಡೆಸುತ್ತಾರೆ, ದೇಶವಿದೇಶಗಳಿಗೆ ಸಲೀಸಾಗಿ ಹೋಗಿಬರುತ್ತಿರುತ್ತಾರೆ ಎಂದೆಲ್ಲ. ಆದರೆ ಈ ಚಿತ್ರಣ ವಾಸ್ತವವಲ್ಲ. ಜನರು ಅಂದುಕೊಂಡಷ್ಟು ಇವರು ಆರಾಮದಾಯಕ ಲೈಫ್ ಎಂಜಾಯ್ ಮಾಡುವುದಿಲ್ಲ. ಕುಟುಂಬವನ್ನು ಇಲ್ಲಿ ಬಿಟ್ಟು ಬೇರೆ ದೇಶಕ್ಕೆ ಹೋಗಿ ಅಲ್ಲಿ ಗುರುತುಪರಿಚಯ ಇಲ್ಲದವರ ಹಾಗೆ ಬದುಕುವುದು, ಗೂಢಚಾರಿಕೆ ನಡೆಸುವುದು ಸುಲಭವಲ್ಲ. ‘ಕೆಲವೊಂದು ದೇಶಗಳಲ್ಲಿ ಗೂಢಚಾರರನ್ನು ಮುಲಾಜಿಲ್ಲದೆ ಹತ್ಯೆ ಮಾಡುವ ಸಂದರ್ಭವೂ ಇರುವುದರಿಂದ ಇಂತಹ ದೇಶಗಳಿಗೆ ಪೋಸ್ಟಿಂಗ್ ಆದಾಗ ಜೀವವನ್ನು ಕೈಲಿ ಹಿಡಿದುಕೊಂಡು ಕೆಲಸ ಮಾಡಬೇಕಾದ ಪ್ರಮೇಯ ಬರುತ್ತದೆ’ಎನ್ನುವ ಮೂಲಕ ಈ ಉದ್ಯೋಗದ ಆಳಗಲವನ್ನು ಲೇಖಕರು ಪರಿಚಯಿಸುತ್ತಾರೆ.

    ಲೇಖಕ ಡಾ.ಡಿ.ವಿ.ಗುರುಪ್ರಸಾದ್ ಐಪಿಎಸ್ ಅಧಿಕಾರಿಯಾಗಿದ್ದು, ಪೊಲೀಸ್ ಇಲಾಖೆಯಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿ. ಗುಪ್ತಚರ ದಳದ ಮುಖ್ಯಸ್ಥರೂ ಆಗಿದ್ದರು. ಅವರ ಕೃತಿಗಳಲ್ಲಿ ಪೊಲೀಸ್ ಅನುಭವ ಇಣುಕಿ, ವಿಷಯಕ್ಕೆ ಅಧಿಕೃತತೆ ನೀಡುತ್ತಾರೆ. ವ್ಯಾಪಕ ಅಧ್ಯಯನದಿಂದ ಖಚಿತ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ನೀಡುತ್ತಾರೆ. ಹೀಗಾಗಿ ಬೇರೆಡೆ ಸಿಗದ ಅಪರೂಪದ ವಿವರಗಳನ್ನು ಅವರು ಹೆಕ್ಕಿಕೊಡುತ್ತಾರೆ. ಬರವಣಿಗೆಯ ವಸ್ತುವಿಗಾಗಿ ವ್ಯಾಪಕ ಪ್ರವಾಸ ಮಾಡುತ್ತಾರೆ; ಸಂಶೋಧನೆ ಮಾಡುತ್ತಾರೆ. ಹೀಗಾಗಿ ಅವರ ಕೃತಿಗಳು ಬಹುಮುಖಿ ಆಯಾಮಗಳನ್ನು ಒಳಗೊಂಡಿರುತ್ತವೆ. ಗೂಢಚರ ಸಂಸ್ಥೆಯೊಂದು ದೇಶದ ರಾಜತಾಂತ್ರಿಕ, ರಾಜಕೀಯ, ಗಡಿ ಇತ್ಯಾದಿ ವ್ಯವಹಾರಗಳಲ್ಲಿ ಯಾವೆಲ್ಲ ಬಗೆಯ ಪಾತ್ರ ವಹಿಸುತ್ತದೆ ಎಂಬುದನ್ನು ಅರಿಯಲು ಇಂಥ ಕೃತಿ ಸಹಾಯಕ.

    ಕೊನೇ ಮಾತು: ಸುದೀಪ್ ಅಭಿನಯದ ‘ವಿಕ್ರಾಂತ ರೋಣ’ ಚಲನಚಿತ್ರ ಕೆಲ ತಿಂಗಳ ಹಿಂದೆ ಕನ್ನಡದಲ್ಲಿ ತೆರೆಕಂಡಿತ್ತು. ಆ ಚಿತ್ರದಲ್ಲಿ ಬರುವ ‘ರಾ ರಾ ರಕ್ಕಮ್ಮ…’ ಎಂಬ ಹಾಡು ಸಕತ್ ಹಿಟ್ ಆಗಿತ್ತು. ಜಾಕ್ವೆಲಿನ್ ಫರ್ನಾಂಡಿಸ್ ಸುದೀಪ್ ಜತೆ ಹೆಜ್ಜೆಹಾಕಿದ್ದರು. ಅಂದಹಾಗೆ, ಆ ಚಿತ್ರದಲ್ಲಿ ಸುದೀಪ್​ದು ಕೊಲೆ ರಹಸ್ಯ ಭೇದಿಸುವ ಪಾತ್ರವಾಗಿತ್ತು. ಆ ಹಾಡಿನಲ್ಲಿ ‘ರಾ’ ಪದ ಬರುವುದು ಪ್ರಾಸಕ್ಕೆ. ಆದರೆ ‘ರಾ’ ಗೂಢಚರರ ಬದುಕು ಬೇರೆ ತರಹದ್ದು. ಸಿನಿಮಾದಂತೆ ಇವರೂ ಬೇರೆ ಬೇರೆ ಬಗೆಯ ಪಾತ್ರ ನಿರ್ವಹಿಸುತ್ತಾರೆ. ಆದರೆ, ಉದ್ದೇಶ, ಆಯಾಮ, ಸನ್ನಿವೇಶ ಬೇರೆ….

    (ಕೃತಿ: ಏಟಿಗೆ ಎದುರೇಟು, ಪ್ರ: ಸಪ್ನ ಬುಕ್ ಹೌಸ್, ಪುಟ: 204, ಬೆಲೆ: 200 ರೂ.)

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಈ ಪ್ರದೇಶದಲ್ಲಿ ಪದೇಪದೆ ಅಪಘಾತ; 3 ದಿನಗಳಲ್ಲಿ ನಾಲ್ಕೈದು ಆ್ಯಕ್ಸಿಡೆಂಟ್: ಇಂದು ಮತ್ತೊಂದು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts