More

    ನೋಡಿ ಕಲಿ, ಮಾಡಿ ಕಲಿ; ಬುಡಕಟ್ಟು ಶಿಕ್ಷಣದ ವಿಶೇಷ

    Dr T V Kattimaniಶಿಕ್ಷಣವು ಮನುಷ್ಯನ ನಿರ್ವಿುತಿ ಶಕ್ತಿಯನ್ನು ಸುಂದರಗೊಳಿಸುವ ಒಂದು ಕಲೆ. ಅದು ಬದುಕುವ ದಾರಿ, ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ನೀಡುತ್ತದೆ. ಜಗತ್ತು ಶೇ. 87ರಷ್ಟು ಶಿಕ್ಷಿತವಾಗಿದೆಯೆಂದು 2021ರ ಜಾಗತಿಕ ಬ್ಯಾಂಕಿನ ವರದಿ ಹೇಳುತ್ತದೆ. ಮುಂದುವರಿದ ದೇಶಗಳಲ್ಲಿನ ಜನರು ಶೇ. 99ರಷ್ಟು, ಪ್ರಗತಿಶೀಲ ದೇಶಗಳಲ್ಲಿ ಅಂದಾಜು ಶೇ. 70ರಷ್ಟು ಮಂದಿ ಶಿಕ್ಷಿತರಾಗಿದ್ದಾರೆ. 2011ರ ಜನಗಣತಿ ಆಧಾರದ ಮೇಲೆ ಭಾರತ ಶೇ. 74.4ರಷ್ಟು ಶಿಕ್ಷಿತರನ್ನು ಹೊಂದಿದೆ. 2022ರ ಭಾರತೀಯ ಸಮೀಕ್ಷೆಯ ಪ್ರಕಾರ ಭಾರತ ಶೇ. 77ರಷ್ಟು ಸಾಕ್ಷರತೆ ಹೊಂದಿದೆ. ಆದರೆ, ಬುಡಕಟ್ಟು ಜನರ ಸಾಕ್ಷರತೆ ಶೇ. 59 ಮಾತ್ರ. ಇದರಲ್ಲಿ ಶೇ. 68.40ರಷ್ಟು ಪುರುಷರು ಹಾಗೂ ಶೇ. 49.40ರಷ್ಟು ಮಹಿಳೆಯರು ಸಾಕ್ಷರರಾಗಿದ್ದಾರೆ ಎಂದು ಜನಗಣತಿ (2011) ವರದಿ ಹೇಳುತ್ತದೆ. 2015ರ ಅಂಕಿಸಂಖ್ಯೆ ಪ್ರಕಾರ ಪ್ರಾಥಮಿಕ ಹಂತದಲ್ಲಿ, ಅಂದರೆ ಒಂದರಿಂದ ನಾಲ್ಕರವರೆಗೆ ಒಟ್ಟು ಶೇ. 31.3ರಷ್ಟು ಬುಡಕಟ್ಟು ಮಕ್ಕಳು ಮಧ್ಯದಲ್ಲೇ ಶಾಲೆ ಬಿಟ್ಟರೆ, ಶೇ. 48.2ರಷ್ಟು ವಿದ್ಯಾರ್ಥಿಗಳು ಒಂದರಿಂದ ಎಂಟನೇ ತರಗತಿ ಬರುವುದರೊಳಗೆ ಶಾಲೆ ಬಿಡುತ್ತಾರೆ. ಶೇ. 62.4ರಷ್ಟು ಮಕ್ಕಳು ಒಂದರಿಂದ ಹತ್ತನೇ ತರಗತಿಯೊಳಗೆ ಶಾಲೆಯಿಂದ ಹೊರಗುಳಿವರು. ಉಚ್ಚ ಶಿಕ್ಷಣದಲ್ಲಿ ಶಾಲೆಯಿಂದ ಹೊರ ಉಳಿಯುವ ಬುಡಕಟ್ಟು ಮಕ್ಕಳ ಸಂಖ್ಯೆ ಏರುತ್ತಾ ಹೋಗುತ್ತದೆ. ಈ ಶಾಲಾ ಬಿಡುವಿಕೆ ಹಿಂದಿನ ಕಾರಣಗಳೇನು? ಶಿಕ್ಷಣ ಪ್ರಕ್ರಿಯೆಯಲ್ಲಿ ಬುಡಕಟ್ಟು ಮಕ್ಕಳು ಅನುಭವಿಸುವ ಸಮಸ್ಯೆಗಳೇನು ಎಂಬುದರ ಅಧ್ಯಯನ ಅವಶ್ಯ. ದೇಶದಲ್ಲಿ 10.5 ಕೋಟಿ ಆದಿವಾಸಿಗಳಿದ್ದಾರೆ. 2011ರ ಜನಗಣತಿ ಪ್ರಕಾರ 45.3 ಪ್ರತಿಶತ ಹಳ್ಳಿಗಾಡಿನ ಹಾಗೂ 24.1 ಪ್ರತಿಶತ ನಗರೀಯ ಬುಡಕಟ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ.

    ಈ ಆದಿವಾಸಿಗಳು ಕಾಡಂಚಿನಲ್ಲಿ ವಾಸವಾಗಿದ್ದಾರೆ. ಪಟ್ಟಣ ಹಾಗೂ ನಗರಗಳಂತೆ ಈ ಬುಡಕಟ್ಟು ಹಾಡಿಗಳಿಗೆ ರಸ್ತೆ, ವಿದ್ಯುತ್, ನೀರು, ಶಿಕ್ಷಣ, ಆರೋಗ್ಯದಂತಹ ಮೂಲಸೌಕರ್ಯಗಳನ್ನು ವಿಸ್ತರಿಸಲು ಸರ್ಕಾರಗಳಿಂದ ಅನೇಕ ಸಲ ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಬುಡಕಟ್ಟು ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುವಲ್ಲಿ ವಿಫಲರಾಗುತ್ತಾರೆ. ಭೌಗೋಳಿಕ ಮಿತಿಗಳೊಂದಿಗೆ ಇನ್ನಿತರ ಕಾರಣಗಳು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

    ಪ್ರತಿ ಬುಡಕಟ್ಟು ಸಮಾಜಕ್ಕೂ ತನ್ನದೇ ಆದ ಭಾಷೆ ಹಾಗೂ ಸಂಸ್ಕೃತಿ ಇದೆ. ಇವರ ಈ ಭಾಷಾಶಕ್ತಿಯು ಇವರ ಶೈಕ್ಷಣಿಕ ದೌರ್ಬಲ್ಯವೂ ಹೌದು. ಹಕ್ಕಿಪಿಕ್ಕಿ ಮತ್ತು ಹಸಲರು ಪಶ್ಚಿಮ ಘಟ್ಟದ ಹಾಡಿಗಳಲ್ಲಿ ಜೊತೆಜೊತೆಗೆ ಇದ್ದರೂ ಅವರಿಬ್ಬರ ಭಾಷೆ ಬೇರೆ. ಜೇನು ಕುರುಬ, ಕಾಡು ಕುರುಬರು ಹೆಗ್ಗಡದೇವನ ಕೋಟೆಯ ಕಾಡಲ್ಲಿ ತಮ್ಮ ಸ್ವಂತ ಭಾಷೆಗಳೊಂದಿಗೆ ಬದುಕುತ್ತಿದ್ದಾರೆ. ಸೋಲಿಗರು ಮತ್ತು ತೋಡ ಬುಡಕಟ್ಟುಗಳ ಭಾಷೆಗಳು ಬೇರೆ ಬೇರೆ. ಸಿದ್ದಿಗಳು ಕನ್ನಡ ಕಲಿತರೂ ಮನೆಯಲ್ಲಿ ತಮ್ಮ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಈ ಬುಡಕಟ್ಟು ಮಕ್ಕಳಿಗೆಲ್ಲಾ ಅವರವರ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕೊಡಬೇಕೆಂಬುದು ಸಹಜ ನ್ಯಾಯವಾದರೂ ಇಲ್ಲಿ ಶಿಕ್ಷಕರಿಗೆ ಬಹುದೊಡ್ಡ ತೊಡಕು ಆಗಿರುವುದು ಅವರ ಭಾಷಾ ನಿರ್ವಹಣಾ ಶಕ್ತಿ ಮತ್ತು ತರಬೇತಿ. ಕನಿಷ್ಠ ಆರನೇ ತರಗತಿಯವರೆಗೆ ಬುಡಕಟ್ಟು ಮಕ್ಕಳಿಗೆ ಅವರವರ ಭಾಷೆಯಲ್ಲಿ ಪಠ್ಯಪುಸ್ತಕಗಳಿದ್ದು ಮತ್ತು ಅಲ್ಲಿ ಬೋಧಿಸುವ ಶಿಕ್ಷಕರಿಗೆ ಸುತ್ತಲಿನ ಮಕ್ಕಳ ಮಾತೃಭಾಷೆಯ ತಿಳಿವಳಿಕೆ ಇರಬೇಕು. ಆದರೆ, ನಮ್ಮ ಈಗಿನ ವ್ಯವಸ್ಥೆಯಲ್ಲಿ ಇದು ಸಾಧ್ಯವೇ?

    ಇದನ್ನೂ ಓದಿ: ಬಿಎಂಆರ್‌ಸಿಎಲ್​ ಅವ್ಯವಹಾರ-ದುರಾಡಳಿತ ತನಿಖೆಗೆ ಆಗ್ರಹ; ಸಂಸ್ಥೆಯ ಮಾಜಿ ಅಧಿಕಾರಿಯಿಂದಲೇ ಮುಖ್ಯಮಂತ್ರಿಗೆ ಪತ್ರ

    ಬುಡಕಟ್ಟಿಗರ ಆರ್ಥಿಕ ಸ್ಥಿತಿ ಕೂಡ ಇವರನ್ನು ಶಿಕ್ಷಣದಿಂದ ದೂರ ಇರುವಂತೆ ಮಾಡಿದೆ. ಬಹುತೇಕ ಆದಿವಾಸಿಗಳು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅವರು ತುಂಡುಭೂಮಿಯ ಒಡೆಯರು. ಬಹುತೇಕ ಕೃಷಿ ಕೂಲಿಗರು. ಒಂದು ಕಾಲಕ್ಕೆ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರುವ ಅಧಿಕಾರ ಇವರಿಗೆ ಇತ್ತು. ಆದರೆ, ಕಾಡು ಕಡಿಮೆ ಆದಂತೆಲ್ಲ ಅರಣ್ಯ ಉತ್ಪನ್ನಗಳ ಅಭಾವ ಇವರನ್ನು ಇನ್ನಷ್ಟು ಆರ್ಥಿಕ ದುಸ್ಥಿತಿಗೆ ತಳ್ಳಿದೆ. ಈ ಕಾರಣದಿಂದಾಗಿಯೇ ಮಕ್ಕಳನ್ನು ಕೂಲಿ ಕೆಲಸಕ್ಕೆ ತೊಡಗಿಸಿಕೊಳ್ಳುತ್ತಾರೆ. ಬುಡಕಟ್ಟು ಜನರ ಪ್ರಕಾರ ವಿದ್ಯೆ ಅಂದರೆ ಬೇಟೆ ಆಡುವುದು, ಜೇನು ಬಿಡಿಸುವುದು, ಮೀನು ಹಿಡಿಯುವುದು, ಮರ ಹತ್ತುವುದು, ಹಣ್ಣು ಕೀಳುವುದು, ಈಜುವುದು, ಹಾಡುವುದು, ಕುಣಿಯುವುದು, ಚಿತ್ರ ಬರೆಯುವುದು, ಮಹುವಾ ಹಣ್ಣು ಹಾಗೂ ತಾಳೆ ಮರದಿಂದ ಹೆಂಡ ಸಂಗ್ರಹಿಸುವುದು ಮುಂತಾದ ಜೀವನೋಪಯೋಗಿ ಕಾರ್ಯಗಳನ್ನು ಕಲಿಯುವುದು. ಇವರು ತಮ್ಮದೇ ಆದ ಕಾವ್ಯ, ಮಹಾಕಾವ್ಯ, ಕಥೆ, ಒಗಟು ಮುಂತಾದ ಸಾಹಿತ್ಯ ಹೊಂದಿದ್ದು, ತೋಂಡಿ ಸಾಹಿತ್ಯವನ್ನು ಇವರು ಗುರುವಿನಿಂದ ತಾನೇ ತಾನಾಗಿ ಕಲಿಯುವರು. ಹೀಗೆ ಅವರ ಶಿಕ್ಷಣ ಪರಂಪರೆ ತನ್ನಷ್ಟಕ್ಕೆ ತಾನು ಪೀಳಿಗೆಯೊಂದಿಗೆ ಮುಂದುವರಿಯುವುದು. ಗಿಡ, ಮರ, ಬಳ್ಳಿಗಳ ಮಧ್ಯೆ ಹುಟ್ಟಿ ಬೆಳೆಯುವ ಕಾಡು ಜನ ಇವುಗಳ ಔಷಧೀಯ ಮಹತ್ವವನ್ನು ಬಳಕೆಯ ಮೂಲಕ ಚಿಕ್ಕಂದಿನಿಂದಲೂ ಬಲ್ಲರು. ಆದರೆ, ಶಾಲೆ- ಕಾಲೇಜುಗಳ ಶಿಕ್ಷಣ ವಿಜ್ಞಾನ, ಕಲೆ, ಸಮಾಜ ವಿಜ್ಞಾನಗಳ ಅನೇಕ ಶಾಖೆಗಳಲ್ಲಿ ಹರಿದು ಹೋಗಿರುವಂತಹದ್ದು. ಬುಡಕಟ್ಟು ಜನರ ಶಿಕ್ಷಣ ಕಲಿಸದೆ ಕಲಿಯುವಂತಹದು. ನೋಡಿ-ಮಾಡಿ ಕಲಿಯುವಂತಹುದು. ಸಮಗ್ರ ಜೀವನಕಲೆ ಇದರ ಜೀವಾಳ. ಹೀಗಾಗಿ, ಬುಡಕಟ್ಟು ಜನರಿಗೆ ಬಹು-ಶಿಸ್ತೀಯ ವಿಧಾನದ ಮೂಲಕ ಶಿಕ್ಷಣ ಕೊಡಬೇಕಾದ ನಾವು ಏಕರೂಪಿ ಶಿಕ್ಷಣ ಕೊಡಲು ಹೋದಾಗ ಎಡವಟ್ಟಾಗುತ್ತದೆ. ಆದಿವಾಸಿಗಳ ಶಿಕ್ಷಣವು ಪಠ್ಯಪುಸ್ತಕ ಮೀರಿದ ತಿಳಿವಳಿಕೆಯುಳ್ಳದ್ದು. ಬದುಕಿನ ಪ್ರತಿಯೊಂದು ಮಜಲಿನ ಸಮಸ್ಯೆಯನ್ನು ಬಗೆಹರಿಸುವ, ಹತಾಶೆಗೊಳ್ಳದ ನೈಪುಣ್ಯತೆಯನ್ನು ಇವರು ತಮ್ಮ ಮಕ್ಕಳಿಗೆ ನೀಡುತ್ತಾರೆ. ಇಲ್ಲಿ ಮುಖ್ಯಧಾರೆಯ ಶಿಕ್ಷಣ ತಜ್ಞರು ಬುಡಕಟ್ಟು ಜನರ ಜ್ಞಾನಶಾಖೆಯಿಂದ ಕಲಿಯುವ ಅವಶ್ಯಕತೆ ಇದೆ.

    ಇದನ್ನೂ ಓದಿ: ಎರಡನೇ ಪತಿಯೂ ಸಾವಿಗೀಡಾದ್ದರಿಂದ ನೊಂದು ಹೆಣ್ಣುಮಕ್ಕಳಿಬ್ಬರ ಜತೆ ಒಂದೇ ಕುಣಿಕೆಗೆ ಕೊರಳೊಡ್ಡಿದ ತಾಯಿ!

    ರಾಷ್ಟ್ರೀಯ ಶಿಕ್ಷಣ ನೀತಿಯ ಹೊಸ ಮಾದರಿಯಲ್ಲಿ ಬುಡಕಟ್ಟು ಹಾಡಿಗಳಲ್ಲಿ ಶಿಕ್ಷಣ ನೀಡುವ ಶಿಕ್ಷಕರಿಗೆ ಬುಡಕಟ್ಟು ಭಾಷೆಯ ತರಬೇತಿ ನೀಡುವುದು, ಪಠ್ಯಗಳನ್ನು ಬುಡಕಟ್ಟು ಭಾಷೆಯಲ್ಲಿ ತಯಾರಿಸುವುದು ಹಾಗೂ ಹಾಡು ನೃತ್ಯಗಳ ಮೂಲಕ ಮಕ್ಕಳನ್ನು ಶಿಕ್ಷಣದ ಕಡೆ ಆಕರ್ಷಿಸುವುದು ಪ್ರಮುಖ ಗುರಿಗಳಾಗಿವೆ. ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡಿನ ಸುತ್ತಮುತ್ತ ಇರುವ ಕೊರಗ ಬುಡಕಟ್ಟಿನ ಮಕ್ಕಳು ಬುಟ್ಟಿ ಹೆಣೆಯುವುದರಲ್ಲಿ, ಬಿದಿರಿನ ಉಪಯೋಗಕರ ಸಾಮಾನುಗಳನ್ನು ತಯಾರಿಸುವುದರಲ್ಲಿ, ದೈಹಿಕ ಶ್ರಮದಲ್ಲಿ ತುಂಬಾ ಗಟ್ಟಿಗರು. ಅವರೆಂದೂ ಹಾಸ್ಟೆಲ್​ನಲ್ಲಿ ನಾಲ್ಕು ಗೋಡೆಯ ಮಧ್ಯೆ ಇರಬಯಸುವುದಿಲ್ಲ. ವಿವಿಧ ತರಹದ ಆಟ, ಮರ ಏರುವುದು, ಬೆಟ್ಟ ಏರುವುದು, ಮೀನು ಹಿಡಿಯುವುದು ಈ ಮಕ್ಕಳಿಗೆ ತುಂಬಾ ಇಷ್ಟವಾದ ಕಲೆಗಳು. ಹೀಗಾಗಿ, ಕೊರಗ ಮಕ್ಕಳು ಹೊಟ್ಟೆ ತುಂಬಾ ಊಟ-ತಿಂಡಿ ಸಿಗುವ ಹಾಸ್ಟೆಲನ್ನು ಧಿಕ್ಕರಿಸಿ ತಮ್ಮ ಗುಡಿಸಲುಗಳಿಗೆ ಓಡಿ ಹೋಗುತ್ತಾರೆ. ತಮ್ಮ ವಾತಾವರಣ, ಬಡತನ, ಹಸಿವು ಅವರಿಗೆ ನೋವು ನೀಡುವುದಿಲ್ಲ. ಈ ಸೂಕ್ಷ್ಮಗಳನ್ನು ಗಮನಿಸುವ, ಅಧ್ಯಯನ ಮಾಡುವ, ಪಠ್ಯದಲ್ಲಿ ತರುವ ಜಾಣ್ಮೆ ನಮ್ಮ ಶಿಕ್ಷಣ ಕ್ಷೇತ್ರದ ವಿಶೇಷಜ್ಞರಿಗೆ ಇಲ್ಲ. ನಮಗೆ ಬೇಕಾದ ಪಠ್ಯ ಸಾಮಗ್ರಿಯನ್ನು ನಾವು ನಿರ್ವಿುಸುತ್ತಿದ್ದೇವೆ. ಈ ಪಠ್ಯ ಬುಡಕಟ್ಟು ಮಕ್ಕಳಿಗೆ ಹೊರಗಿನ ಜಗತ್ತಾಗಿ ತೋರುತ್ತದೆ. ತಮ್ಮದಲ್ಲದ ವಾತಾವರಣ, ತಮ್ಮದಲ್ಲದ ಆಹಾರದ ವರ್ಣನೆ, ತಮ್ಮದಲ್ಲದ ಭಾಷಾ ನಯವಂತಿಕೆ ಬುಡಕಟ್ಟು ಮಕ್ಕಳ ನಯವಾದ ತಿರಸ್ಕಾರಕ್ಕೆ ಒಳಗಾಗುತ್ತದೆ.

    ಬಿಲ್ಲು-ವಿದ್ಯೆ ಇವರಿಗೆ ಅಪ್ಪಟ ಜೀವನಕಲೆ. ನಮ್ಮ ಕ್ರೀಡೆಗಳು ಯಾವುದೋ ದೇಶದ ಕ್ರಿಕೆಟ್, ಬೇಸ್ ಬಾಲ್, ಫುಟ್​ಬಾಲ್​ಗಳಂತಹ ಆಟಗಳನ್ನು ಒಳಗೊಂಡಾಗ ಅಸಲಿ ದೇಶೀ ಮಕ್ಕಳು ಆಟದ ಮೈದಾನ, ಆಟದ ಬಗ್ಗೆ ನಿರಾಸಕ್ತಿ ಬೆಳೆಸಿಕೊಳ್ಳುತ್ತಾರೆ. ಬುಡಕಟ್ಟು ಜನರ ಶ್ರಮ ಸಂಸ್ಕೃತಿ, ಅಲ್ಪ ಖರ್ಚು, ಪ್ರಕೃತಿಯಿಂದ ನಿತ್ಯದ ಉಪಯೋಗಕ್ಕೆ ಬೇಕಾಗಿರುವಷ್ಟನ್ನೇ ಮಾತ್ರ ತೆಗೆದುಕೊಳ್ಳುವ ಸಂಯಮ. ಗಿಡ, ಮರ, ಖನಿಜ, ನೀರು, ಮೀನು, ಹಣ್ಣು- ಹಂಪಲು ಇವೆಲ್ಲಾ ದೇವರ ಕೊಡುಗೆ; ಮುಂದಿನ ಪೀಳಿಗೆಗೆ ಇದನ್ನು ನಾವು ಕಾಯ್ದುಕೊಂಡು, ರಕ್ಷಿಸಿಕೊಂಡು ಹೋಗಬೇಕೆಂಬ ದೇಶಿ ಜ್ಞಾನ ಪರಂಪರೆ ಬುಡಕಟ್ಟು ಜನರದ್ದು.

    ಬುಡಕಟ್ಟು ಜನರಿಗೆ ಬೇಕಾದ ಶಿಕ್ಷಣವೆಂದರೆ, ಅವರ ಜೀವ ಸಂಪತ್ತನ್ನು ವೈಜ್ಞಾನಿಕ ರೀತಿಯಲ್ಲಿ ಪರಿಚಯಿಸುವುದು. ಅವರ ಔಷಧ ಜ್ಞಾನವನ್ನು ಆಧುನಿಕ ವಿಜ್ಞಾನದ ಪ್ರಯೋಗಾಲಯಗಳಲ್ಲಿ ಪರಿಶೀಲಿಸಿ ಒರೆಗೆ ಹಚ್ಚಿ ವೈಜ್ಞಾನಿಕತೆಯನ್ನು ದೃಢಪಡಿಸುವುದು. ಅವರ ಸಂಗೀತ, ನೃತ್ಯ, ನಾಟಕ ಮತ್ತು ಚಿತ್ರಕಲೆಗಳ ಮಹತ್ವ ತಿಳಿಸಿ, ಅವುಗಳ ಮಾರುಕಟ್ಟೆ ಬೆಲೆಯನ್ನು ದೃಢಪಡಿಸುವುದು. ಆಧುನಿಕ ಭಾಷೆ ಕಲಿಸುವುದರ ಮೂಲಕ ಅವರ ಸಂವಹನ ಕಲೆಯನ್ನೂ, ಆತ್ಮವಿಶ್ವಾಸವನ್ನೂ ಹೆಚ್ಚಿಸುವ ಶಿಕ್ಷಣವನ್ನು ನೀಡುವಂತಾದರೆ ಬುಡಕಟ್ಟು ಜನ ಬಹು ದೊಡ್ಡ ಪ್ರಮಾಣದಲ್ಲಿ ದೇಶದ ಕಟ್ಟುವಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದು.

    (ಲೇಖಕರು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ)

    ಗೃಹ ಸಚಿವರ ಬೆಂಗಾವಲು​ ವಾಹನ ಡಿಕ್ಕಿ, ಬೈಕ್ ಸವಾರ ಸಾವು; ಅಪಘಾತದ ಬಗ್ಗೆ ತಿಳಿದೂ ಹಾಗೇ ಹೋದ್ರಾ ಹೋಂ​ ಮಿನಿಸ್ಟರ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts