ನವದೆಹಲಿ: ಬಲಿಷ್ಠ ಭಾರತ ಕಟ್ಟುವ ಆಶಯ, ಸಂಕಲ್ಪದೊಂದಿಗೆ ಸತತ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಭಾರತ ಪ್ರಕಾಶಿಸಿದ್ದಕ್ಕಿಂತ ಕತ್ತಲಿಗೆ ಸರಿದಿದ್ದೇ ಹೆಚ್ಚು. ನೋಟು ಅಮಾನ್ಯೀಕರಣ ಪ್ರಯೋಗದ ಲಾಭ, ನಷ್ಟ ಏನೇ ಇದ್ದರೂ ಬಿಜೆಪಿಗೆ ಮತ್ತೊಂದು ಅವಕಾಶ ಕೊಟ್ಟ ದೇಶದ ಜನತೆ ಈಗ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿದ್ದಾರೆ. ಇಲಾಖೆ ಜವಾಬ್ದಾರಿ ಹೊತ್ತವರ ವೈಫಲ್ಯ, ಅನನುಭವಿಗಳಿಗೆ ಮಣೆ ಹಾಕಿದ ಅಧಿಕಾರಸ್ಥರ ತಪ್ಪಿದ ಲೆಕ್ಕಾಚಾರದಿಂದಾಗಿ ರೂಪಾಯಿ ಅಪಮೌಲ್ಯ, ಬೆಲೆ ಏರಿಕೆ, ಜಿಡಿಪಿ ಕುಸಿತದಂಥ ಸರಣಿ ಆಘಾತ ಜನರ ನಿತ್ಯ ಬದುಕಿಗೆ ಗ್ರಹಣ ಹಿಡಿಸಿದೆ. 2020ರಲ್ಲಾದರೂ ಈ ಕತ್ತಲು ಸರಿಯುವುದೇ ಎಂಬುದು ಹೊಸ ವರ್ಷಾರಂಭದಲ್ಲಿನ ಪ್ರಶ್ನೆ.
ಚಿತ್ತ ಇಲ್ಲದ ವಿತ್ತ: ದೇಶದ ಆರ್ಥಿಕ ಸ್ಥಿತಿ ಬಿಗಡಾಯಿಸುತ್ತಿರುವುದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವೈಫಲ್ಯ ಮುಖ್ಯ ಕಾರಣ ಎಂಬುದು ಸದ್ಯ ಕೇಳಿಬರುತ್ತಿರುವ ಆರೋಪ. ಆರ್ಥಿಕ ಸಂಕಷ್ಟದ ಸಮಯದಲ್ಲಿ ನಿರ್ಮಲಾ ತೋರಿದ ಕಾರ್ಯವೈಖರಿಯನ್ನು ಅವರ ಪತಿಯೇ ಪ್ರಶ್ನಿಸಿದ್ದು ಇದಕ್ಕೊಂದು ನಿದರ್ಶನ.
ಈರುಳ್ಳಿ ಬೆಲೆ ಏರಿಕೆ ಸೇರಿ ವಿವಿಧ ವಿಚಾರಗಳಲ್ಲಿ ಅವರ ನಿಲುವುಗಳು ಸ್ವಪಕ್ಷೀಯರಲ್ಲೇ ಕಸಿವಿಸಿ ಉಂಟುಮಾಡಿದೆ. ‘ನಾವು ನೀಡುವ ಸಲಹೆ/ಮನವಿಗಳನ್ನು ಸ್ವೀಕರಿಸುವುದು ಬಿಡುವುದು ಅವರಿಗೆ ಬಿಟ್ಟದ್ದು. ಆದರೆ ನಗುಮುಖದಿಂದ ಮಾತನಾಡಿಸುವುದೂ ಇಲ್ಲ’ ಎಂಬುದು ರಾಜ್ಯ ಬಿಜೆಪಿ ಸಂಸದರೊಬ್ಬರ ಅಳಲು. ಇದೇ ಕಾರಣಕ್ಕೆ ಅನೇಕ ಸಂಸದರು ನಿರ್ಮಲಾ ಸೀತಾರಾಮನ್ ಜತೆಗೆ ಮಾತನಾಡುವುದೇ ಇಲ್ಲ ಎಂಬ ವರದಿಗಳಿವೆ. ಹಣಕಾಸು ಸಚಿವರಾದ ಆರಂಭದಲ್ಲಿ ತಮ್ಮ ಸಚಿವಾಲಯ ದಿಂದ ರಾಷ್ಟ್ರೀಯ ಮಾಧ್ಯಮಗಳನ್ನೂ ಹತ್ತಿರ ಸೇರಿಸಿಕೊಳ್ಳದೆ ಅವರು ವಿವಾ ದಕ್ಕೆ ಗುರಿಯಾಗಿದ್ದರು.
ಅನುಭವಿಗಳ ಕೊರತೆ
ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಅನಂತ್ ಕುಮಾರ್, ಮನೋಹರ ಪರಿಕ್ಕರ್ ಮುಂತಾದ ಹಿರಿಯ ನಾಯಕರ ನಿಧನದ ಬಳಿಕವಂತೂ ಮೋದಿ ಸರ್ಕಾರದಲ್ಲಿ ಪ್ರತಿಭೆಗಳ ಕೊರತೆ ಎದ್ದು ಕಾಣುತ್ತಿದೆ. ಅಮಿತ್ ಷಾ, ನಿತಿನ್ ಗಡ್ಕರಿ, ಪಿಯೂಷ್ ಗೋಯೆಲ್, ರಾಜನಾಥ್ ಸಿಂಗ್ ಹೊರತುಪಡಿಸಿದರೆ ರಾಜಕೀಯ ಹಾಗೂ ಆಡಳಿತಾತ್ಮಕ ಅನುಭವ ಹಾಗೂ ಸಾಮರ್ಥ್ಯವುಳ್ಳ ಪ್ರತಿಭೆಗಳನ್ನು ಸರ್ಕಾರದಲ್ಲಿ ದುರ್ಬೀನು ಹಾಕಿ ಹುಡುಕಬೇಕಾದ ಸ್ಥಿತಿ ಇದೆ.
ಬಿಜೆಪಿ ವೈಫಲ್ಯದ ಹೆಜ್ಜೆಗಳು
1 ಜಿಎಸ್ಟಿ- ಪರಿಪೂರ್ಣ ಸಿದ್ಧತೆ ಇಲ್ಲದೆಯೇ ಧಾವಂತದಲ್ಲಿ ಸರಕು ಸೇವಾ ತೆರಿಗೆ(ಜಿಎಸ್ಟಿ)ಜಾರಿಗೊಳಿಸಿದ ಕೇಂದ್ರ ಸರ್ಕಾರ ಶೇ.100 ಅನುಷ್ಠಾನಕ್ಕೆ ತರುವಲ್ಲಿ ಎಡವಿದೆ. ನಿರೀಕ್ಷಿಸಿದಷ್ಟು ಆದಾಯ ಸಿಗದ ಪರಿಣಾಮ ಸಾಕಷ್ಟು ತೊಂದರೆ ಎದುರಾಗಿದ್ದು ರಾಜ್ಯಗಳ ಪಾಲೂ ಕೊಡಲಾಗದ ಸ್ಥಿತಿಯಲ್ಲಿದೆ.
2 ಜಿಡಿಪಿ- ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ಸ್ಥಿತಿಯೂ ಭಿನ್ನವೇನಲ್ಲ. ಪ್ರಸಕ್ತ ಆರ್ಥಿಕ ವರ್ಷದ ದ್ವಿತೀಯ ತ್ರೖೆಮಾಸಿಕದಲ್ಲಿ ಜಿಡಿಪಿ ದರ ಶೇ.4.5ಕ್ಕೆ ಕುಸಿತ ಕಂಡಿದೆ. ಇದು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕೆಳಮಟ್ಟದ್ದು.
3 ಹಣದ ಹರಿವು-ಬ್ಯಾಂಕೇತರ ಹಣಕಾಸು ಕಂಪನಿಗಳ ಸಾಲ ನೀಡುವಿಕೆ ಕಡಿಮೆ ಆಗಿರುವುದು ಜಿಡಿಪಿ ಮೇಲೂ ಪರಿಣಾಮ ಬೀರಿದೆ. ಹೂಡಿಕೆಗೆ ಹಣ ಇಲ್ಲದೆ ಉದ್ದಿಮೆಗಳು ನೆಲ ಕಚ್ಚುತ್ತಿವೆ
4 ಉದ್ಯಮಕ್ಕೆ ಆಘಾತ-ದೇಶದ ಆರ್ಥಿಕ ಸ್ಥಿತಿ, ಹಣಕಾಸು ಹರಿವಿಲ್ಲದ ಪರಿಣಾಮದಿಂದ ಪ್ರಮುಖವಾಗಿ ಆಟೋಮೊಬೈಲ್, ರಿಯಲ್ ಎಸ್ಟೇಟ್ ಸೇರಿ ಹಲವು ರಂಗಗಳು ನೆಲಕಚ್ಚಿದೆ. ಹಳ್ಳಿಗಳಲ್ಲೂ ಆದಾಯ ಕುಸಿತವಾಗಿದೆ.
5 ರೂಪಾಯಿ ಕುಸಿತ-ಜಿಡಿಪಿಗೆ ಪೂರಕವಾದ ರೂಪಾಯಿ ಮೌಲ್ಯದಲ್ಲೂ ಕುಸಿತ ಮುಂದುವರಿದಿದೆ. ಅಸ್ಥಿರತೆ ಮುಂದುವರಿಕೆ ಪರಿಣಾಮ 2020ಕ್ಕೆ 74 ರೂ.ತಲುಪುವ ನಿರೀಕ್ಷೆ ಇದೆ. ಯಾವ ಪ್ಯಾಕೇಜ್ ಘೋಷಿಸಿದರೂ ನಿಯಂತ್ರಣಕ್ಕೆ ಬಾರದ ಸ್ಥಿತಿ ಇದೆ.
6 ಬೆಲೆ ಏರಿಕೆ-ಇಂಧನ, ಅಗತ್ಯವಸ್ತುಗಳ ಬೆಲೆ ಜನರ ಬದುಕು ಸುಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರಿಳಿತ, ಆರ್ಥಿಕ ಹಿಂಜರಿತ ಗಾಯದ ಮೇಲೆ ಬರೆ ಎಳೆಯುತ್ತಿದೆ. ಪರಿಹಾರ ಕ್ರಮಗಳ ವೈಫಲ್ಯ ಇವಕ್ಕೆ ಕಾರಣ
7 ಡಿಜಿಟಲ್ ವೈಫಲ್ಯ-ನೋಟು ಅಮಾನ್ಯೀಕರಣ ಬಳಿಕ ಡಿಜಿಟಲ್ ವಹಿವಾಟಿಗೆ ಸಿಕ್ಕ ಉತ್ತೇಜನ ಮೂಲೆಗುಂಪಾಗಿದೆ. ಸೈಬರ್ ಸೆಕ್ಯುರಿಟಿ ಸಮಸ್ಯೆ, ಕಾಯ್ದೆ ಕೊರತೆಯಿಂದಾಗಿ ಇ-ವ್ಯವಹಾರದ ಹಾದಿ ಹಳಿತಪು್ಪತ್ತಿದೆ.
ದಿಗ್ಗಜರಿಗೆ ಮಣೆ ಬಡವರ ಕಡೆಗಣನೆ
ನವದೆಹಲಿ: ಜನಸಾಮಾನ್ಯನಿಗೆ ಅನುಕೂಲವಾಗುವ, ಗ್ರಾಮೀಣ ಭಾಗದ ಏಳಿಗೆಗೆ ನೆರವಾಗುವ ಯೋಜನೆಗಳ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ಮಾಡಿಲ್ಲ ಎನ್ನುವ ಕೂಗು ಇನ್ನೂ ಬಲ ಕಳೆದುಕೊಂಡಿಲ್ಲ ಎಂಬುದು ವಾಸ್ತವ. ಕಳೆದ ಮೇನಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ನಿಷ್ಕ್ರಿಯಗೊಳಿಸುವ ಕ್ರಾಂತಿಕಾರಿ ಕಾನೂನುಗಳನ್ನು ಜಾರಿ ಮಾಡಿರಬಹುದು.
ಆದರೆ, ದೇಶದ ಜನವರ್ಗದ ಮೇಲೆ ನೇರವಾಗಿ ಸತ್ಪರಿಣಾಮ ಬೀರಬಲ್ಲ ಯೋಜನೆಗಳು ಈ ಸರ್ಕಾರದಿಂದ ಇನ್ನೂ ಬಂದಿಲ್ಲ. ಕಾರ್ಪೆರೇಟ್ ತೆರಿಗೆ ಇಳಿಸುವಲ್ಲಿ ತೋರಿಸಿದ ಆಸಕ್ತಿ ಶ್ರೀಸಾಮಾನ್ಯನ ಮೇಲೆ ಇಲ್ಲ ಎಂಬ ಅಸಮಾಧಾನ ಹೆಚ್ಚಾಗುತ್ತಿದೆ. ಇಂಥ ಅಸಮಾಧಾನಗಳನ್ನು ತಣಿಸಲೆಂದೇ ಭಾವನಾತ್ಮಕ ವಿಷಯಗಳಾದ ರಾಮ ಮಂದಿರ ತೀರ್ಪ, ವಿಶೇಷ ಸ್ಥಾನಮಾನ ರದ್ದು, ರಾಷ್ಟ್ರೀಯ ಪೌರತ್ವ ನೋಂದಣಿ, ಪೌರತ್ವ ತಿದ್ದುಪಡಿ ಕಾನೂನಿನ ವಿಷಯಗಳನ್ನು ಪ್ರಸ್ತಾಪಿಸಿ ಜ್ವಲಂತ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಮರೆ ಮಾಚಲಾಗುತ್ತಿದೆ. ದೇಶದ ಸಮಸ್ಯೆಗಳ ಕೇಂದ್ರಬಿಂದುವಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಹಾರ ಕಂಡುಕೊಳ್ಳುವಲ್ಲಿ ಹಣಕಾಸು ಸಚಿವರು ಹಾಗೂ ಪ್ರಧಾನಿ ಕಾರ್ಯಾಲಯ ವಿಫಲವಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ ಎಂದು ಬಹುತೇಕ ಆರ್ಥಿಕ ತಜ್ಞರು ಕಳವಳ ಹೊರಹಾಕುತ್ತಿದ್ದಾರೆ.
ಹೊಣೆ ಯಾರು?: ನಿರ್ಮಲಾ ಸೀತಾರಾಮನ್ ವೈಫಲ್ಯ ಪುನರಾವರ್ತನೆ ಆಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಇನ್ನೂ ಅವರಿಗೆ ಅವಕಾಶ ನೀಡುತ್ತಿರುವುದೇಕೆಂಬುದೇ ಯಕ್ಷ ಪ್ರಶ್ನೆಯಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಭಾರತ ಮೇಲೇಳಲು ಸಾಧ್ಯವಾಗದ ಮಟ್ಟಕ್ಕೆ ಕುಸಿದರೂ ಅಚ್ಚರಿಯಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ವಿಷಯಾಂತರಕ್ಕೆ ಆಕ್ರೋಶ: ಆರ್ಥಿಕತೆ ಹಿನ್ನಡೆ, ಜಿಡಿಪಿ ಕುಸಿತ, ನಿರುದ್ಯೋಗ ಪ್ರಮಾಣ ಹೆಚ್ಚಳ, ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿನ ಹಿನ್ನಡೆ, ಮಿತ್ರಪಕ್ಷಗಳೊಂದಿಗಿನ ಸಂಘರ್ಷಗಳು 2020 ಮೋದಿ ಸರ್ಕಾರಕ್ಕೆ ಕಠಿಣ ಸವಾಲಿನ ವರ್ಷವಾಗುವ ಸುಳಿವನ್ನೇ ನೀಡಿವೆ. 2022ಕ್ಕೆ 5 ಟ್ರಿಲಿಯನ್ ಆರ್ಥಿಕತೆ ಹೊಂದುವ ದೇಶವನ್ನಾಗಿ ಪರಿವರ್ತಿಸುವ ಮಾತುಗಳನ್ನಾಡಿರುವುದರಿಂದ ಪ್ರಧಾನಿ ಮೇಲೂ ಬೆಟ್ಟದಷ್ಟು ನಿರೀಕ್ಷೆ, ಸವಾಲುಗಳಿರುವುದು ಸುಳ್ಳಲ್ಲ. ಈ ನಡುವೆ, ಆಡಳಿತಾತ್ಮಕ ಸಾಧನೆಗಿಂತ ದೇಶಪ್ರೇಮ, ಸೇನಾ ಪರಾಕ್ರಮ, ದೈವಭಕ್ತಿಗಳ ಭಾವನೆಗಳನ್ನೇ ಹೆಚ್ಚು ತೇಲಿಬಿಟ್ಟು ಆ ಮೂಲಕ ಜನರನ್ನು ತಮ್ಮೊಂದಿಗೆ ಹಿಡಿದಿಟ್ಟುಕೊಳ್ಳುವ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ತಂತ್ರಗಾರಿಕೆ ನಿಧಾನವಾಗಿ ಬಯಲಾಗುತ್ತಿದೆ. ಇದು ಸರ್ಕಾರದ ಮೇಲೆ ಜನಾಕ್ರೋಶ ಹೆಚ್ಚಾಗುವಂತೆ ಮಾಡುತ್ತಿದೆ.
ಇಬ್ಬರ ಸರ್ಕಾರವೇ?
ಈ ಸರ್ಕಾರವನ್ನು ಕೇವಲ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ನಡೆಸುತ್ತಿದ್ದಾರೆ ಎಂಬುದೀಗ ಸರ್ವೆ ಸಾಮಾನ್ಯವಾಗಿ ಕೇಳುತ್ತಿರುವ ಆರೋಪ. ಕೆಲ ಕೇಂದ್ರ ಸಚಿವರಂತೂ ಕಡತಗಳಿಗೆ ಸಹಿ ಹಾಕುವ ಸಲುವಾಗಿ ಕುರ್ಚಿಯಲ್ಲಿ ಕುಳಿತಿದ್ದಾರೆ ಎಂಬ ವಿಡಂಬನೆಯ ಮಾತುಗಳು ಮಂತ್ರಾಲಯಗಳಿರುವ ಶಾಸ್ತ್ರಿ ಭವನದಲ್ಲಿ ಕೇಳುತ್ತಲೇ ಇರುತ್ತದೆ. ಹಾಗಿದ್ದರೂ ಸಚಿವರಿಗೆ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ನೀಡಲಾಗಿಲ್ಲ. ಹಿರಿಯರ ಅನುಭವಗಳನ್ನು ಬಳಸಿಕೊಳ್ಳುವ ಮನಸ್ಥಿತಿ ಇಲ್ಲದಿರುವುದೇ ಸಮಸ್ಯೆಯ ಮೂಲ ಎಂಬ ಬೇಸರ ಬಿಜೆಪಿಯ ನಡುಮನೆಯಲ್ಲೇ ಇದೆ.
ಸಿಎಎ ವಿವಾದ
ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಬಿಜೆಪಿ ಬೆಂಬಲಿಸುವ ಮತವರ್ಗದಲ್ಲಿ ಸಮ್ಮತಿಯಿರಬಹುದು. ಆದರೆ, ವಿಪಕ್ಷಗಳು ಹಾಗೂ ಮುಸ್ಲಿಂ ಧರ್ಮದವರಿಂದ ಈ ಪರಿಯ ಹೋರಾಟ, ಪ್ರತಿಭಟನೆಗಳನ್ನು ಕೇಂದ್ರ ಗ್ರಹಿಸಲೇ ಇಲ್ಲ. ಹೀಗಾಗಿ, ಕಾನೂನು ಸುವ್ಯವಸ್ಥೆಯೂ ಹದಗೆಟ್ಟು ಹಿಂಸಾಚಾರ, ಸಾವುನೋವಿಗೆ ಸಾಕ್ಷಿಯಾಗಬೇಕಾಯಿತು. ಪ್ರತಿಭಟನೆ, ಪ್ರತಿರೋಧಗಳ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸುವಲ್ಲೂ ಸರ್ಕಾರ ವಿಫಲವಾಯಿತು ಎಂಬ ಟೀಕೆಗಳಿವೆ.
ರಾಜಕೀಯ ಹಿನ್ನಡೆ
ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದರೂ, ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ನಿರೀಕ್ಷೆಗಳೆಲ್ಲವೂ ಹುಸಿಯಾಗುತ್ತಿವೆ. ಹರಿಯಾಣದಲ್ಲಿ ಬಹುಮತ ಗಳಿಸಲು ಸಾಧ್ಯವಾಗದೆ ಜನನಾಯಕ ಜನತಾ ಪಾರ್ಟಿಯ ದುಷ್ಯಂತ್ ಚೌಟಾಲ ನೆರವು ಪಡೆದು ಮೈತ್ರಿ ಸರ್ಕಾರ ರಚಿಸಬೇಕಾಯಿತು. ಮಹಾರಾಷ್ಟ್ರದಲ್ಲಿ ಶಿವಸೇನೆ ಕೈ ಕೊಟ್ಟದ್ದರಿಂದ ಬಿಜೆಪಿ ವಿಪಕ್ಷದಲ್ಲಿ ಕೂರಬೇಕಾಗಿದೆ. 2014ರಿಂದಲೂ ಶಿವಸೇನೆ ನಾಯಕರನ್ನು ಮೋದಿ-ಷಾ ಆದ್ಯತೆಗೆ ತೆಗೆದುಕೊಂಡಿರಲಿಲ್ಲ. ಅವರ ಬೇಡಿಕೆಗೆ ಸಮ್ಮತಿಸಲಿಲ್ಲ.
ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದ ಶಿವಸೇನೆ ಮುಖಂಡರು, ಬಿಜೆಪಿ ಜತೆಗೆ ಸಂಬಂಧ ಕಡಿದುಕೊಂಡು ಎನ್ಸಿಪಿ, ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಿದರು. ಬೇರೆ ರಾಜ್ಯಗಳಲ್ಲಿ ಪಕ್ಷಗಳನ್ನು ಒಡೆದು ಸರ್ಕಾರ ರಚನೆ ಮಾಡುತ್ತಿದ್ದ ಮೋದಿ-ಷಾಗೆ, ಶಿವಸೇನೆ ರಾಜಕೀಯವಾಗಿ ಬಲವಾದ ಛಡಿಯೇಟನ್ನೇ ನೀಡಿತು. ಈ ಘಟನೆ ಬೇರೆ ರಾಜ್ಯಗಳಲ್ಲಿ ಮರುಕಳಿಸಬಾರದು ಎಂದು ಜಾರ್ಖಂಡ್ ಚುನಾವಣೆಯಲ್ಲಿ ಆಲ್ ಇಂಡಿಯಾ ಜಾರ್ಖಂಡ್ ಸ್ಟೂಡೆಂಟ್ ಯೂನಿಯನ್ ಪಕ್ಷದ ಜತೆಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಳ್ಳದ ಬಿಜೆಪಿ ವರಿಷ್ಠರು, ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಗಿ ಬಂತು. ಒಂದುವೇಳೆ ಮೈತ್ರಿ ಮಾಡಿಕೊಂಡಿದ್ದರೆ ಮತ್ತೆ ಅಧಿಕಾರಕ್ಕೇರುವ ಸಾಧ್ಯತೆಗಳಿದ್ದವು. 2020ರಲ್ಲಿ ದಿಲ್ಲಿ ಮತ್ತು ಬಿಹಾರದಲ್ಲಿ ಚುನಾವಣೆಗಳಿವೆ.
ಬದಲಾಗುವರೇ ಮೋದಿ?
ದೇಶವನ್ನು ಆರ್ಥಿಕ ಸಂಕಷ್ಟದಿಂದ ದೂರ ಮಾಡುವ ನಿರ್ಣಯಗಳು ಸರ್ಕಾರಕ್ಕೆ ನಿರೀಕ್ಷಿತ ಫಲ ತಂದುಕೊಟ್ಟಿಲ್ಲ. ಪರಿಣಾಮವಾಗಿ, ನಿರುದ್ಯೋಗಿ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ, ಖಾಸಗಿ ಕಂಪನಿಗಳ ಬಾಗಿಲು ಮುಚ್ಚಲಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಅನುಕೂಲವಾಗುವ ವಿಷಯಗಳ ಬಗ್ಗೆ ಮಾತ್ರ ಟ್ವಿಟ್ಟರ್, ಫೇಸ್ಬುಕ್ಗಳಲ್ಲಿ ಪ್ರಸ್ತಾಪಿಸುವ ಪ್ರಧಾನಿ ಜ್ವಲಂತ ಸಮಸ್ಯೆಗಳ ಬಗ್ಗೆ ಸುಮ್ಮನಿರುತ್ತಾರೆ. ಇದಕ್ಕೆ ಕರ್ನಾಟಕದಲ್ಲುಂಟಾಗಿದ್ದ ಪ್ರವಾಹ ಪರಿಸ್ಥಿತಿಯೇ ಉತ್ತಮ ಉದಾಹರಣೆ. ರಾಜ್ಯದ ಜನರ ನೋವಿಗೆ ಸ್ಪಂದಿಸು ವುದರಲ್ಲಿ ವಿಳಂಬ ಮಾಡಿದ್ದಲ್ಲದೆ, ಕನಿಷ್ಠ ಸಾಂತ್ವನದ ಮಾತನ್ನೂ ಪ್ರಕಟಪಡಿಸಲಿಲ್ಲ.
ಸಂಸದರ ಮೌನ
ವಾಸ್ತವದಲ್ಲಿ ಸರ್ಕಾರ ಏನು ಮಾಡುತ್ತಿದೆ, ಇಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಬಹುತೇಕ ಸಂಸದರಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಮೋದಿ-ಷಾ ಆಡಿದಂಗೆ ಆಟ ಎಂದು ಮಾತನಾಡುವ ಈ ಮಂದಿ ಸಂಸತ್ತಿಗೆ ಬರುತ್ತಾರೆ/ಹೋಗುತ್ತಾರೆ ಎಂಬುದು ಬಿಟ್ಟರೆ ಕಾಯ್ದೆ, ಕಾನೂನುಗಳ ಬಗ್ಗೆ ಯಾವುದೇ ಅರಿವು ಹೊಂದಿಲ್ಲ.