More

    ಹರಿಪಾದೋದಕಳು ಭಾಗೀರಥಿ; ಭಾಗೀರಥಿ ಜಯಂತಿ ಇಂದು

    | ಮೇಧಾ ಪ್ರಹ್ಲಾದಾಚಾರ್ಯ ಜೋಷಿ

    ಬಲಿ ಚಕ್ರವರ್ತಿಯಿಂದ ಮೂರು ಪಾದ ಭೂಮಿ ದಾನ ಪಡೆಯಲೆಂದು ಸಾಕ್ಷಾತ್ ನಾರಾಯಣನೇ ವಾಮನ ರೂಪಿಯಾಗಿ ಬಂದನು. ಒಂದು ಪಾದದಿಂದ ಸಮಗ್ರ ಭೂಮಂಡಲವನ್ನೇ ಆವರಿಸಿದ. ಎರಡನೆಯ ಪಾದಕ್ಕೆ ಸಮಸ್ತ ಆಕಾಶವನ್ನು ವ್ಯಾಪಿಸಲು ವಾಮನ, ತ್ರಿವಿಕ್ರಮನಾದ. ತ್ರಿವಿಕ್ರಮನಾದಾಗ ಎಡಗಾಲಿನ ಕಿರುಬೆರಳಿನ ಉಗುರಿನ ತುದಿಯ ಸ್ಪರ್ಶದಿಂದ ಬ್ರಹ್ಮಾಂಡದ ಹೊರಗಿನ ಕಟಾಹದ ಪದರು ಒಡೆಯಿತು. ಆಗ ಅಲ್ಲಿಂದ ಪರಿಶುದ್ಧವಾದ ಜಲ ಹೊರಬಂದಿತು. ಅದನ್ನು ಚತುಮುಖ ಬ್ರಹ್ಮ ದೇವರು ತಮ್ಮ ಕಮಂಡಲುವಿನಲ್ಲಿ ಹಿಡಿದು ಅದರಿಂದ ಶ್ರೀಹರಿಯ ಪಾದವನ್ನು ತೊಳೆದು, ಪಾದ ಪೂಜೆ ಮಾಡಿದರು. ಆಗ ಆ ನೀರು ಹರಿಪಾದೋದಕಳೆನಿಸಿದ ಸಾಕ್ಷಾತ್ ಗಂಗೆಯಾದಳು. ಅವಿಚ್ಛಿನ್ನವಾಗಿ ಹರಿಯ ತೊಡಗಿದಳು.

    ಪಾಪಂ ಗಮಯತಿ ನಿರ್ಗಮಯತಿ ಇತಿ ಗಂಗಾ. ಎಲ್ಲರ ಪಾಪಗಳನ್ನು ನಾಶ ಮಾಡುವವಳೇ ಗಂಗೆ.

    ಹೀಗೆ ಹರಿಪಾದೋದಕಳಾಗಿ ಹರಿಯತೊಡಗಿದ ಗಂಗೆ ಧ್ರುವ ಲೋಕ, ಸಪ್ತ ಋಷಿಗಳ ಲೋಕ, ಚಂದ್ರಮಂಡಲ, ಸೂರ್ಯಮಂಡಲದ ಮಾರ್ಗವಾಗಿ ಹರಿದು ಬರುತ್ತಾ ಮೇರು ಶಿಖರಕ್ಕೆ ಬಂದಳು. ಮೇರು ಶಿಖರದ ಮೇಲಿಂದ ನಾಲ್ಕು ದಿಕ್ಕುಗಳಲ್ಲಿ ಸೀತಾ, ಅಲಕನಂದಾ, ಚಕ್ಷು, ಭದ್ರಾ ಎಂಬ ನಾಲ್ಕು ಹೆಸರುಗಳಿಂದ ಹರಿದುಬಂದು ನಾಲ್ಕೂ ದಿಕ್ಕುಗಳಲ್ಲಿರುವ ಸಾಗರವನ್ನು ಸೇರಿದಳು. ದಕ್ಷಿಣ ದಿಕ್ಕಿನಲ್ಲಿ ಹರಿದುಬಂದಾಗ ಅಲಕನಂದೆಯಾಗಿ ಮಾನಸ ಸರೋವರವನ್ನು ಸೇರಿದಳು. ಅಲ್ಲಿಂದ ಹಿಮಾಲಯ ಪರ್ವತವನ್ನು ಸೇರಿ ಹಿಮಾದ್ರಿ ಪುತ್ರಿ ಎಂದೆನಿಸಿದಳು. ಆಗ ದೇವತೆಗಳೆಲ್ಲ ಗಂಗೆಯನ್ನು ಪ್ರಾರ್ಥಿಸಿ ದೇವಲೋಕಕ್ಕೆ ಕರೆದೊಯ್ದರು ಎಂದು ಗಂಗೆಯ ಮಹಿಮೆಯನ್ನು ವರ್ಣಿಸುವ ಅನೇಕ ಶಾಸ್ತ್ರ ಗ್ರಂಥಗಳಲ್ಲಿ ಹೀಗೆ ಉಲ್ಲೇಖಿಸಿದ್ದಾರೆ.

    ಮುಂದೊಂದು ಸಂದರ್ಭದಲ್ಲಿ ಕಪಿಲ ಮುನಿಯ ಕೋಪಕ್ಕೆ ಭಗೀರಥನ ಪೂರ್ವಜರು ಬಲಿಯಾಗಿ ಅವರ ನೇತ್ರಾಗ್ನಿಯಿಂದ ಉರಿದು ಬೂದಿಯಾದರು. ಮುಂದೆ ಇವರ ವಂಶದಲ್ಲಿ ಬಂದ ಭಗೀರಥ ತನ್ನ ಪೂರ್ವಜರಿಗೆ ಸದ್ಗತಿಯಾಗಬೇಕೆಂದು ಮಹಾ ತಪಸ್ಸು ಮಾಡಿ ಗಂಗೆಯನ್ನು ಒಲಿಸಿಕೊಂಡ. ಆದರೆ, ಗಂಗೆ ಭೂಲೋಕಕ್ಕೆ ತಾನು ಬಂದರೆ ಆ ಪ್ರವಾಹಕ್ಕೆ ಪ್ರಳಯವೇ ಆಗುವುದು. ನನ್ನ ರಭಸವನ್ನು ಶಾಂತಗೊಳಿಸುವವರಾರೆಂದು ಕೇಳಿದಾಗ ಭಗೀರಥ ರುದ್ರದೇವರನ್ನು ಪ್ರಾರ್ಥಿಸಿದ. ಆಗ ರುದ್ರದೇವರು ದೇವಲೋಕದಿಂದ ಹರಿದುಬಂದ ಗಂಗೆಯನ್ನು ತಮ್ಮ ಜಟೆಯಲ್ಲಿ ಧರಿಸಿದರು. ಗಂಗೆಯನ್ನು ಶಾಂತವಾಗಿ ಭೂಲೋಕಕ್ಕೆ ಹರಿಸಿದರು. ಆಗ ರುದ್ರದೇವರು ಗಂಗಾಧರರಾದರು. ಹೀಗೆ ಗಂಗೆ ಭುವಿಗೆ ಆಗಮಿಸಿ ಭೂಲೋಕದಿಂದ ಮತ್ತೆ ಪಾತಾಳ ಲೋಕದಲ್ಲಿ ಹರಿದು ಅಲ್ಲಿದ್ದ ಭಗೀರಥನ ಅರವತ್ತು ಸಾವಿರ ಪೂರ್ವಜರ ಬೂದಿಯ ಮೇಲೆ ಹರಿದು ಅವರನ್ನೆಲ್ಲ ಉದ್ಧರಿಸಿ, ಸದ್ಗತಿ ದೊರೆಯುವಂತೆ ಅನುಗ್ರಹಿಸಿದಳು. ಹೀಗೆ ದೇವಲೋಕದಿಂದ ಭೂಲೋಕ, ಭೂಲೋಕದಿಂದ ಪಾತಾಳ ಲೋಕಕ್ಕೆ ಹರಿದ ಗಂಗೆ ತ್ರಿಪಥಗಾಮಿನಿ ಎಂದೆನಿಸಿದಳು. ದೇವಲೋಕದಲ್ಲಿ ಮಂದಾಕಿನಿಯಾದಳು. ಭೂಲೋಕದಲ್ಲಿ ಭಗೀರಥನಿಗೊಲಿದ ಭಾಗೀರಥಿಯಾದಳು. ಪಾತಾಳದಲ್ಲಿ ಭೋಗವತಿ ಎಂದೆನಿಸಿದಳು. ಹೀಗೆ ಮೂರು ಲೋಕಗಳನ್ನು ಪಾವನಗೊಳಿಸಿದ ತ್ರಿಪಥಗಾಮಿನಿ ಗಂಗೆ ತ್ರಿಲೋಕ ಪಾವನಿ ಆದಳು. ಅಂದಿನಿಂದಲೇ ಮೃತರ ಅಸ್ಥಿ, ಬೂದಿಯನ್ನು ಗಂಗೆಯಲ್ಲಿ ವಿಸರ್ಜಿಸುವ ಸಂಪ್ರದಾಯ ಬಂದಿತು.

    ಗಂಗೆ ತವದರ್ಶನಾತ್ ಮುಕ್ತಿಃ ನ ಜಾನೇ ಸ್ನಾನಜಂ ಫಲಂ (ನರಸಿಂಹ ಪುರಾಣ) -ಗಂಗೆಯ ದರ್ಶನ ಮಾತ್ರದಿಂದಲೇ ಮುಕ್ತಿ ದೊರೆಯುವುದು. ಸ್ನಾನದ ಫಲ ಇನ್ನೇನು ಹೇಳಲು ಸಾಧ್ಯ.

    ಜೇಷ್ಠ ಶುದ್ಧ ದಶಮಿಯಂದು (ದಶಹರಾ) ಗಂಗೆ ಭಗೀರಥನಿಗೊಲಿದು ಭಾಗೀರಥಿಯಾಗಿ ಭೂಮಿಗೆ ಆಗಮಿಸಿದ ದಿನ. ಅದೇ ಭಾಗೀರಥಿ ಜಯಂತಿ. ನಮ್ಮ ಸನಾತನ ಸಂಸ್ಕೃತಿಯಲ್ಲಿ ಭಾಗೀರಥಿ ಜಯಂತಿಯ ಆಚರಣೆಯು ಒಂದು ವಿಶೇಷ ಮಹತ್ವ ಹೊಂದಿದೆ.

    ರಾಜ್ಯಕ್ಕೆ ಮಾನ್ಸೂನ್ ಆಗಮನ ಯಾವಾಗ?; ಇಲ್ಲಿದೆ ಹವಾಮಾನ ಇಲಾಖೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts