More

    ಸಪ್ತ ಸಿನಿಮಾಗಳ ಸಪ್ತಾ ಪಾವೂರು; ನೈಜ ಘಟನೆ ಆಧಾರಿತ ತನುಜಾ ಚಿತ್ರದಲ್ಲಿ ನಟನೆ

    | ಹರ್ಷವರ್ಧನ್ ಬ್ಯಾಡನೂರು

    ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದಲ್ಲಿ ಪಲ್ಲವಿ ಪಾತ್ರದಲ್ಲಿ ಮಿಂಚಿ ಮನೆಮಾತಾದವರು ಬಾಲನಟಿ ಸಪ್ತಾ ಪಾವೂರು. ವಿಜಯ ರಾಘವೇಂದ್ರ ನಾಯಕನಾಗಿದ್ದ ‘ಚೆಲ್ಲಾಪಿಲ್ಲಿ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ ಸಪ್ತಾ, ಆ ಬಳಿಕ ಎರಡು ತುಳು, ಕನ್ನಡದ ‘ದ್ವೈತ’ ಸೇರಿದಂತೆ ಏಳು ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ನಟಿಸಿರುವ ಕರೊನಾ ಸಮಯದಲ್ಲಿ ನಡೆದ ನೈಜ ಘಟನೆಯಾಧಾರಿತ ‘ತನುಜಾ’ ಚಿತ್ರ ಬಿಡುಗಡೆಗೆ ರೆಡಿ ಇದೆ. ಚಿತ್ರ ಹಾಗೂ ಪಾತ್ರದ ಬಗ್ಗೆ ಸಪ್ತಾ, ‘ನಿರ್ದೇಶಕ ಹರೀಶ್ ಸರ್, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ನೋಡಿದ್ದರು. ಅದರಲ್ಲಿ ಪಲ್ಲವಿ ಪಾತ್ರದಲ್ಲಿ ನಟಿಸಿದ್ದೆ. ಆ ಚಿತ್ರದ ನಟನೆ ನೋಡಿ ‘ತನುಜಾ’ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು. ನಿಜ ಜೀವನದಲ್ಲಿ ತನುಜಾ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಅವರೀಗ ಬೆಳಗಾವಿಯಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಆದರೆ, ಫೋನಿನಲ್ಲಿ ಅವರ ತಾಯಿಯ ಜತೆ ತನುಜಾ ಬಗ್ಗೆ ಮಾತನಾಡಿ ಸಾಕಷ್ಟು ವಿಷಯ ತಿಳಿದುಕೊಂಡೆ. ತನುಜಾ ಅವರನ್ನು ಕಾಪಿ ಮಾಡುವುದು ಬೇಡ. ನನ್ನದೇ ರೀತಿಯಲ್ಲಿ ತನುಜಾ ಕಥೆಯನ್ನು ಹೇಳಿದರೆ ಚೆಂದ ಅಂತ, ಪಾತ್ರಕ್ಕೆ ಸಿದ್ಧತೆ ಮಾಡಿಕೊಂಡೆ’ ಎಂದು ಹೇಳಿಕೊಳ್ಳುತ್ತಾರೆ ಸಪ್ತಾ.

    ಸದ್ಯ ಸಪ್ತಾ, ಮಂಗಳೂರಿನಲ್ಲಿ ಪಿಯು ಓದುತ್ತಿದ್ದಾರೆ. ಪಿಸಿಎಂಬಿ ಕೋರ್ಸ್ ತೆಗೆದುಕೊಂಡಿರುವ ಅವರಿಗೆ ಸೈಂಟಿಸ್ಟ್ ಆಗುವ ಆಸೆಯಿದೆಯಂತೆ. ತನುಜಾ ನಿಜ ಜೀವನದಿಂದ ಸಾಕಷ್ಟು ಕಲಿತೆ ಎನ್ನುವ ಸಪ್ತಾ, ‘ತನುಜಾಗೆ ಒಂದು ಗುರಿ ಇತ್ತು. ಡಾಕ್ಟರ್ ಆಗಲೇಬೇಕು ಅಂತ ಗುರಿ ಇಟ್ಟುಕೊಂಡಿದ್ದರು. ಕಷ್ಟದಲ್ಲಿದ್ದರೂ ಶ್ರಮ ಹಾಕಿದರು. ಈಗ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ನನಗೂ ಹಾಗೇ ಕೆಲವು ಗುರಿಗಳಿವೆ. ಆ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದೇನೆ. ಒಳ್ಳೆಯ ಪಾತ್ರಗಳು, ಕಥೆ ಸಿಕ್ಕರೆ ಮಾತ್ರ ಸಿನಿಮಾಗಳಲ್ಲಿ ನಟಿಸುತ್ತೇನೆ. ಇಲ್ಲದಿದ್ದರೆ ಶಿಕ್ಷಣ ಮುಂದುವರಿಸುತ್ತೇನೆ. ಆದರೆ, ಶಿಕ್ಷಣಕ್ಕೆ ಮೊದಲ ಪ್ರಾಮುಖ್ಯತೆ ನೀಡುತ್ತೇನೆ’ ಎಂದು ತನುಜಾ ಕಥೆಯಿಂದ ತಾವು ಪ್ರೇರೇಪಿತರಾದ ಬಗ್ಗೆ ಹೇಳಿಕೊಳ್ಳುತ್ತಾರೆ ಸಪ್ತಾ ಪಾವೂರು.

    ಹರೀಶ್ ಎಂ.ಡಿ. ಹಳ್ಳಿ ನಿರ್ದೇಶನದ ‘ತನುಜಾ’ ಚಿತ್ರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದು, ರಾಜೇಶ್ ನಟರಂಗ, ಸಂಧ್ಯಾ ಅರಕೆರೆ, ಚಿತ್ಕಲಾ ಬಿರಾದಾರ್, ಕೈಲಾಶ್ ಷಡಕ್ಷರಿ, ಕೈಲಾಶ್, ಚಂದ್ರಶೇಖರ್, ರಘುನಂದನ್ ಪ್ರಮುಖ ತಾರಾಗಣದಲ್ಲಿದ್ದಾರೆ.

    ನಮ್ಮಲ್ಲೇ ಮೊದಲು: ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ-ತಂತ್ರಜ್ಞಾನ ಬಳಸಿ ಬರೆದ ಸುದ್ದಿ; ಇದು ಸಮಸ್ತ ಹಿರಿಯ ನಾಗರಿಕರಿಗೆ ಅರ್ಪಣೆ

    ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವಂಥ ದಾಳ ಉರುಳಿಸಿದ ಅಮಿತ್ ಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts